ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ
Team Udayavani, Feb 20, 2021, 7:21 AM IST
ನಾನು ಜನಿಸಿದ್ದು 1959ರಲ್ಲಿ. ನಾನು ಹುಟ್ಟುವ ಆರು ತಿಂಗಳು ಮೊದಲೇ ನನ್ನ ತಂದೆ ತೀರಿಕೊಂಡಿದ್ದರು. ನನ್ನ ಸುತ್ತಲೂ ತಾಯಿ, ಅಜ್ಜಿ, ಚಿಕ್ಕಮ್ಮ, ಸೋದರಿಯರು ಹೀಗೆ ಮನೆ ತುಂಬಾ ಸ್ತ್ರೀಯರಿದ್ದ ಕಾರಣ ಬಾಲ್ಯದಲ್ಲಿ ಪುರುಷರನ್ನು ನೋಡಿದರೆ ಹೆಚ್ಚು ಹೆದರುತ್ತಿದ್ದೆ. ಜತೆಗೆ ಮಾತಾಡಲು ತೊದಲುತ್ತಿದ್ದ ಕಾರಣ ಹೆಚ್ಚು ಮಾತನಾಡುತ್ತಿರಲಿಲ್ಲ. ಬಹಳಷ್ಟು ಪ್ರಶ್ನೆಗಳಿಗೆ ತಲೆಯಾಡಿಸುವುದೇ ನನ್ನ ಉತ್ತರವಾಗಿರುತ್ತಿತ್ತು.
ಒಮ್ಮೆ ಹೀಗಾಯಿತು; ಬಾಂಬೆಯ ಮೇರಿಸ್ ಶಾಲೆಯಲ್ಲಿ ಸೀಟು ಪಡೆಯಲು ಎಂಟ್ರೆನ್ಸ್ ಟೆಸ್ಟ್ ಮಾಡಿದಾಗ ಕುದುರೆ ಸವಾರಿ ಮಾಡಿದ್ದೀಯಾ? ಎಂದು ಶಿಕ್ಷಕರು ಕೇಳಿದರು. ಇಲ್ಲ ಎಂದು ತಲೆಯಾಡಿಸಿದೆ. ಕುದುರೆ ಯನ್ನಾದರೂ ನೋಡಿದ್ದೀಯಾ? ಎಂದರು. ಮತ್ತೆ ಇಲ್ಲ ಎಂದು ತಲೆಯಾಡಿಸಿದೆ. ಅವರು ಸುಮ್ಮನಾದರು. ಆದರೆ ಆ ಸಮಯದಲ್ಲಿ ನನಗೆ ಕುದುರೆ ಗೊತ್ತಿತ್ತು. ಪೋಷಕರು ಉತ್ತರ ಹೇಳಲು ಕಷ್ಟವಾದರೆ ಸುಮ್ಮನಿದ್ದು ಬಿಡು ಎಂದು ಸಿದ್ಧಗೊಳಿಸಿದ್ದರು. ಪ್ರೌಢಾವಸ್ಥೆಯಲ್ಲಿ ತ್ರೀ ಈಡಿಯಟ್ ಚಿತ್ರದ ವೈರಸ್‌ನಂತೆಯೇ ನನ್ನ ಉಚ್ಚಾರಣೆಗಳಿದ್ದವು.
ಗಲ್ಲಿಯ ಅತ್ಯುತ್ತಮ ಚಮ್ಮಾರನಾಗು: 19ನೇ ವಯಸ್ಸಿನಲ್ಲಿ ತಾಜ್‌ಮಹಲ್ ಹೊಟೇಲ್‌ನಲ್ಲಿ ಕೆಲಸಕ್ಕೆ ಹೋದೆ, ಅಲ್ಲಿಯ ಮುಖ್ಯಸ್ಥರು ನನ್ನನ್ನು ಕರೆದು ಯಾವ ಡಿಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವೆ ಎಂದು ಕೇಳಿದರು. ರಂಡೆಲೂ ಪ್ರಂಚ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವೆ ಎಂದೆ. ಟಾಪ್ ಆಫ್ ದಿ ಡಿಪಾರ್ಟ್ ಮೆಂಟ್‌ನಲ್ಲಿ ಈಗ ಬೇಡ. ಬಾಟಮ್ ಆಫ್ ದಿ ಡಿಪಾರ್ಟ್ ಮೆಂಟ್‌ನಿಂದ ಕೆಲಸ ಪ್ರಾರಂಭಿಸು ಎಂದು ರೂಮ್ ಸರ್ವಿಸ್ ಸೆಕ್ಷನ್ನಿಗೆ ಹಾಕಿದರು. ಎರಡು ವರ್ಷದ ಅವಧಿಯಲ್ಲಿ ನಾನು ಟಾಪ್ ಆಫ್ ದಿ ಡಿಪಾರ್ಟ್‌ಮೆಂಟ್‌ನಲ್ಲಿ ವೇಟರ್ ಆಗಿಯೂ ಕೆಲಸ ಮಾಡಿ ತೋರಿಸಿದೆ. ನನ್ನ ಅಜ್ಜಿ ಹೇಳುತ್ತಿದ್ದರು; “ಗಲ್ಲೀಕ ಮೋಚಿ ಬನ್‌ನ ತೋ ಗಲ್ಲೀಕ ಬೆಸ್ಟ್ ಮೋಚಿ ಬನ್‌ನ’ (ಗಲ್ಲಿಯ ಚಮ್ಮಾರನಾಗು ಆದರೆ ಗಲ್ಲಿಯ ಅತ್ಯುತ್ತಮ ಚಮ್ಮಾರನಾಗು).
ಬದುಕು ಬದಲಿಸಿದ ಜೀರೋ ನಂಬರ್ ಬಲ್ಬ್: ವಿವಾಹವಾಗಿ 7 ವರ್ಷದ ಸಮಯದಲ್ಲಿ ಮಡದಿ ಮಕ್ಕಳೊಂದಿಗೆ ಟೂರಿಗೆ ಹೋಗಿದ್ದೆ. ಆಗ ಈಗಿನ ರೀತಿ ಇಂಟರ್‌ನೆಟ್, ಮೊಬೈಲ್ ಯಾವುದೂ ಇರಲಿಲ್ಲ. ಕ್ಲಾಸಿಫೈಡ್ ಆ್ಯಡಿನಲ್ಲಿ ಊಟಿ ಪ್ರವಾಸ, ಶೋ ಹ್ಯಾನ್ ಪ್ಯಾಲೇಸ್ ಹೊಟೇಲ್‌ನಲ್ಲಿ ತಂಗುವ ಅವಕಾಶ ಎಂದಿತ್ತು. ಪರಿವಾರದೊಂದಿಗೆ ಊಟಿಗೆ ತಲುಪಿ ನಿರೀಕ್ಷಿಸಿದ್ದ ಪ್ಯಾಲೇಸ್‌ಗೆ ಸೇರಿದೆವು. ರಾಜರ ಅರಮನೆ ಎಂದು ಭಾವಿಸಿದ್ದ ನಮಗೆ ಭೂತ ಬಂಗಲೆಯ ದರ್ಶನವಾಯಿತು. ಸಿಬಂದಿ ನಾವು ತಂಗುವ ರೂಮು ತೆರೆದಾಗ ಎದೆಯೊಮ್ಮೆ ನಡುಗಿತು. ಇಡೀ ರೂಮಿಗೆ ಒಂದೇ ಜೀರೋ ಕ್ಯಾಂಡಲ್ ಬಲ್ಬಿತ್ತು. ಅಂದೇ ನಿರ್ಧರಿ ಸಿದೆ, ಜೀವನದಲ್ಲಿ ಇಂಥ ಸ್ಥಿತಿಯನ್ನು ಎಂದೂ ತಮ್ಮ ಪರಿವಾರಕ್ಕೆ ಮತ್ತೆ ನೀಡಬಾರದು ಎಂದು. ಸ್ಥಳ ಬದಲಾಯಿಸಿ ಟೂರು ಮುಗಿಸಿದೆ. ಆದರೆ. ಆ ಜೀರೋ ನಂಬರ್ ಬಲ್ಬ್ ಮತ್ತೆ ಮತ್ತೆ ಎಚ್ಚರಿಸುತ್ತದೆ.
ಅಂತಾರಾಷ್ಟ್ರೀಯ ಛಾಯಾಗ್ರಾಹಕ: ವೇಟರ್ ಆಗಿದ್ದಾಗ ನೀಡುತ್ತಿದ್ದ ಟಿಪ್ಸ್ ಸಂಗ್ರಹಿಸಿ ಉತ್ತಮ ಕೆಮರಾ ಖರೀದಿಸಿದ್ದೆ. ಸತತ ಅಭ್ಯಾಸ ಮಾಡಿ ಫೋಟೋಗ್ರಾಫರ್ ಆದೆ. ನನಗೆ ವಯಸ್ಸು 30-32 ಇರಬೇಕು ಭಾರತದಲ್ಲಿ ವೆಸ್ಟ್ರನ್ ಇಂಡಿಯಾ ಬಾಕ್ಸಿಂಗ್ ಟೂರ್ನಮೆಂಟ್‌ಗಳು ಪ್ರಾರಂಭವಾಗಿತ್ತು. ಒಲಿಂಪಿಕ್ಸ್ ಮಾದರಿಯ ಪ್ರಾಮುಖ್ಯತೆ ಆ ಪಂದ್ಯಗಳಿಗಿದ್ದವು. ವೆಸ್ಟ್ರನ್ ಇಂಡಿಯಾ ಬಾಕ್ಸಿಂಗ್ ಆಸೋಸಿಯೇಶನ್ ಭಾರತದ ಮುಖ್ಯಸ್ಥರನ್ನು ಸಂಪರ್ಕಿಸಿದೆ. ಬಾಕ್ಸಿಂಗ್ ಸಂಬಂಧಿತ ಚಿತ್ರಗಳನ್ನು ತೆಗೆದುಕೊಡುವ ಪ್ರಸ್ತಾವ ಮುಂದಿಟ್ಟೆ. ಈಗಾಗಲೇ ಬಾಕ್ಸಿಂಗ್ ಕುರಿತ ಚಿತ್ರಗಳಿದ್ದರೆ ಕೊಡಿ ಎಂದರು. ನನ್ನ ಬಳಿ ಇಲ್ಲ ಎಂದೆ, ಹೀಗಾದರೆ ಹೇಗೆ ಎಂದರು.
ಹೊರಡುವ ಮುನ್ನ ನನಗೆ ರಿಂಗ್ ಬಳಿ ಫೋಟೋ ತೆಗೆಯಲು ಅವಕಾಶ ಕೊಡಿ, ನಾನು ಒಂದಷ್ಟು ಚಿತ್ರ ಕ್ಲಿಕ್ಕಿಸಿ ಕೊಡುತ್ತೇನೆ ಎಂದೆ. ನೋಡೋಣ ಬನ್ನಿ ಎಂದರು. ಬಾಕ್ಸಿಂಗ್ ಪಂದ್ಯದ ದಿನ ಹಲವು ವಿವಿಧ ಬಗೆಯ ಫೋಟೋ ತೆಗೆದು ಮಾರನೇ ದಿನ ಪ್ರಿಂಟ್ ಹಾಕಿಸಿ ಅವರ ಮುಂದಿಟ್ಟೆ. ಚಿತ್ರಗಳನ್ನು ನೋಡಿ ನನ್ನ ಜೀವನದಲ್ಲಿ ಇಂಥ ಅದ್ಭುತವಾದ ಚಿತ್ರಗಳನ್ನು ನೋಡಿರಲಿಲ್ಲ ಎಂದರು. ಅವರು ನನ್ನನ್ನು ಛಾಯಾಗ್ರಾಹಕ ನಾಗಿ ನೇಮಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದರು.
ಪದೇ ಪದೆ ಹಣ ಗಳಿಸಿಕೊಟ್ಟ ಮೂರು ಚಿತ್ರಗಳು: ಒಮ್ಮೆ ನನ್ನನ್ನು ಕರೆದು ಬಾಕ್ಸಿಂಗ್ ಪಟು ಒಲೆಟ್‌ಕ್ಲೆಮಿಟ್ಸ್‌ನ್ ಅವರ ಮೂರು ಚಿತ್ರಗಳನ್ನು ತೆಗೆದುಕೊಡಬೇಕು. 1. ಪಂಚ್ ನೀಡುವಾಗ ಎದು ರಾಳಿಯ ಮುಖದಲ್ಲಿ ಬೆವರು ಹನಿ ಹಾರಿಬೀಳುವಂಥದ್ದು, 2. ಎದುರಾಳಿ ಕೆಳಗೆ ಬಿದ್ದಾಗ ಚಾಂಪಿಯನ್ ಕೈ ಮೇಲೆ ಮಾಡಿ ಆವೇಶ ಭರಿತವಾಗುವುದು. 3. ಅಂತ್ಯದಲ್ಲಿ ಚಾಂಪಿಯನ್ ಎರಡೂ ಕೈಗಳನ್ನು ಎತ್ತಿ ವಿಜಯದ ನಗೆ ಬೀರುವುದು. ನಾನು ಅದಕ್ಕೆ ಒಪ್ಪಿದೆ. ಪೇಮೆಂಟ್ ಏನು ಕೊಡುತ್ತೀರಾ? ಎಂದೆ. ಅದಕ್ಕೆ ಅವು ಏನು ನೀಡಬೇಕೆಂದರು. ಭಾರತೀಯನೆಂದು ತಾರತಮ್ಯ ಮಾಡದೆ ಅಂತಾರಾಷ್ಟ್ರೀಯ ಫೋಟೋ ಗ್ರಾಫರ್‌ಗೆ ಹೇಗೆ ಪೇಮೆಂಟ್ ಮಾಡುತ್ತೀರೋ ಹಾಗೆ ನೀಡಬೇಕು ಎಂದೆ. ಅದಕ್ಕವರು ಒಪ್ಪಿದರು.
ಆದರೆ ನನಗೊಂದು ಭಯವಿತ್ತು. ಎದುರಾಳಿಯೇ ಪಂದ್ಯ ಗೆದ್ದರೆ ಏನು ಮಾಡುವುದು ಎಂದು. ಪಂದ್ಯದಲ್ಲಿ ಒಲೆಟ್ ಎದುರಾಳಿಗೆ ಪಂಚ್ ನೀಡಿದ ತತ್‌ಕ್ಷಣ ಒಂದು ಕ್ಲಿಕ್ ಮಾಡಿದೆ. ಅದೇ ಪಂಚ್‌ನಲ್ಲಿ ಎದುರಾಳಿ ತೂರಾಡಿ ಕೆಳಗೆ ಬಿದ್ದ ಆಗ ಚಾಂಪಿಯನ್ ಕೈ ಮೇಲೆ ಮಾಡಿದಾಗ ಮತ್ತೂಂದು ಕ್ಲಿಕ್, ಕೆಲವೇ ಕ್ಷಣದಲ್ಲಿ ವಿಜಯದ ನಗೆ ಬೀರಿ ಎರಡೂ ಕೈಗಳನ್ನು ಮೇಲೆತ್ತಿದಾಗ ಇನ್ನೊಂದು ಕ್ಲಿಕ್ ಕೆಲವೇ ನಿಮಿಷದಲ್ಲಿ ಮೂರೂ ಚಿತ್ರಗಳನ್ನು ಕ್ಲಿಕ್ಕಿಸಿ ಆಗಿತ್ತು. ಅದರ ನೆಗೆಟಿವ್ ಮಾರನೇ ದಿನ ಸ್ಕ್ಯಾನಿಂಗ್‌ಗೆ ನೀಡಿ. ಚಿತ್ರ ತಲುಪಿಸಲು ಹೇಳಿದೆ. ಆಗ ಇಡೀ ಮುಂಬಯಿಯಲ್ಲಿ ಒಂದೇ ಸ್ಕಾನಿಂಗ್ ಸೆಂಟರ್ ಇತ್ತು. ಅಲ್ಲಿಯೇ ಎಲ್ಲ ನಡೆಯುತ್ತಿತ್ತು. ಸಂಜೆ ವೇಳೆಗೆ ಚಿತ್ರ ತಲುಪಿಲ್ಲ ಎಂದು ಐಎಸ್‌ಡಿ ಕರೆ ಬಂತು. ನಾನು ಸಂಜೆ ಸ್ಕಾನರ್ ಅಂಗಡಿ ಬಳಿಗೆ ಹೋಗಿ ಜಗಳ ಮಾಡಿ, ಸ್ಕ್ಯಾನ್ ಮಾಡಿಸಿ ಚಿತ್ರ ಪೋಸ್ಟ್ ಮಾಡಿದಾಗ ಮುಂಜಾನೆ 5 ಗಂಟೆಯಾ ಗಿತ್ತು. ಅಂದು ಸಂಜೆ ಚಿತ್ರಗಳನ್ನು ನೋಡಿದ ಮುಖ್ಯಸ್ಥರು ಮತ್ತೂಂದು ಕರೆ ಮಾಡಿ ಸಂತೋಷ ವ್ಯಕ್ತ ಪಡಿಸಿದರು. ಒಂದು ಚಿತ್ರಕ್ಕೆ 300 ಡಾಲರ್ ನೀಡುವುದಾಗಿಯೂ ಹಣವನ್ನು ಹೊಟೇಲ್‌ನ ಮ್ಯಾನೇಜರ್ ಬಳಿ ಪಡೆಯಲು ಸೂಚಿಸಿದರು. ಒಂದು ಚಿತ್ರಕ್ಕೆ 60 ಅಥವಾ 100 ಡಾಲರ್ ಸಿಗಬಹುದೆಂದು ನಿರೀಕ್ಷಿಸಿದ್ದ ನನಗೆ ಸ್ವರ್ಗವೇ ಸಿಕ್ಕಿದಂತಾಗಿತ್ತು. ಅದಾದ ಮುಂದಿನ ತಿಂಗಳು ನನ್ನ ಮನೆಗೆ 900 ಡಾಲರ್‌ನ ಚೆಕ್ ಬಂದಿದೆ ಎಂದು ಪತ್ನಿ ಟ್ರಂಕ್ ಕಾಲ್ ಮಾಡಿದಳು. ಈಗಾಗಲೇ ಹಣ ನೀಡಿದ್ದಾರೆ. ಚೆಕ್ ವಾಪಸ್ ಕಳಿಸೋಣ ಎಂದೆ. ನಾನು ಅದನ್ನು ತೆರೆದು ನೋಡಿದಾಗ. ಆ ಚಿತ್ರ ಮತ್ತೂಮ್ಮೆ ಅಂತಾರಾಷ್ಟ್ರೀಯ ಮ್ಯಾಗಝಿನ್‌ನಲ್ಲಿ ಪಬ್ಲಿಷ್ ಆಗಿದೆ ಹೀಗಾಗಿ ಇನ್ನೊಂದು ಚೆಕ್ ನೀಡಿರುವುದಾಗಿ ತಿಳಿಸಿತ್ತು. ಹೀಗೆ ತಿಂಗಳಿ ಗೊಂದಾವರ್ತಿಯಂತೆ 8-10 ಚೆಕ್ ಕೈಸೇರಿತು. ಬಳಿಕ ಅನೇಕ ಫೋಟೋ ಶೂಟ್‌ಗಳ ಅವಕಾಶ ಸಿಕ್ಕಿತು.
ಚಿತ್ರರಂಗಕ್ಕೆ ಸೇರಿದ ಕೌತುಕ: ಶ್ಯಾಮಕ್ ದವರ್ ನನ್ನನ್ನು ಗಮನಿಸಿ, ನೀವು ಕಲಾವಿದರಾಗಬೇಕೆಂದು ಒತ್ತಾಯಿಸಿ ಒಂದು ಪಿಂಪ್ ಪಾತ್ರ ಮಾಡಿಸಿದರು. ಅದು ಮೂರು ಶೋ ನಡೆಯಿತು. ಬಳಿಕ ಫಿರೋಜ್ ಖಾನ್ ಗಾಂಧೀಜಿ ಕಥೆಯಲ್ಲಿ ಮುಖ್ಯ ಪಾತ್ರವನ್ನು ಮಾಡಿಸಿದರು. ನನ್ನ ಪಾತ್ರವನ್ನು ನೋಡಿದ ವಿನೋದ್ ಛೋಪ್ರಾ ಮುನ್ನಾಬಾಯಿ ಎಂಬಿಬಿಎಸ್ ಚಿತ್ರದಲ್ಲಿ ನಟಿಸುವಂತೆ ಒತ್ತಾಯಿಸಿದರು. ಮೊದಲು ಅವರು ಕಥೆ ಹೇಳುವ ರೀತಿ ನೋಡಿ ಪಾತ್ರ ಒಪ್ಪಿಕೊಳ್ಳಲಿಲ್ಲ. ಬಳಿಕ ರಾಜು ಇರಾನಿ ಅವರ ಮೂಲಕ ಕಥೆ ಹೇಳಿಸಿದಾಗ ಒಪ್ಪಿಕೊಂಡೆ. ಮುನ್ನಾಬಾಯಿ ಎಂಬಿಬಿಎಸ್ ಚಿತ್ರೀಕರಣದ ವೇಳೆ ನನ್ನನ್ನು ಮಾತನಾಡಿಸಿದ ವಿಕ್ರಮ್ ಚಾಚಾ ಈ ಚಿತ್ರದಲ್ಲಿ ನಿಮಗೆ ಅವಾರ್ಡ್ ಸಿಗುತ್ತದೆ ಎಂದರು. ಅದೇಗೆ ಎಂದೆ. ನಿಮ್ಮ ಚಟುವಟಿಕೆಯಿಂದಲೇ ತಿಳಿ ಯುತ್ತದೆ, ಈ ಕ್ಷೇತ್ರದಲ್ಲಿ ಹಣಕ್ಕೆ ಮರುಳಾಗಬೇಡ ನಿನ್ನನ್ನು ನೀನು ಕಾಪಾಡಿಕೋ. ನಿನ್ನಿಂದ ನಿನ್ನನ್ನು ಕಾಪಾಡಿಕೋ ಎಂದರು. ನನಗೆ ಅವಾರ್ಡ್ ಸಿಕ್ಕಿತು. ಜನರು ನನ್ನನ್ನು ಆಗ ಮಾಮೂ, ವೈರಸ್ ಎಂದು ಗುರುತಿಸಿ ಆಟೋಗ್ರಾಫ್ ಕೇಳುವಂಥ ಮಟ್ಟ ತಲುಪಿದೆ. ಆದರೆ ಅವರ ಮಾತು ಇಂದಿಗೂ ನನ್ನ ಮನಸ್ಸಿನಲ್ಲಿದೆ. ಹೀಗೆ ತೊದಲು ನುಡಿಯ ಭಯದಿಂದ ಹೊರಬಂದು 32 ವರ್ಷದಲ್ಲಿ ವೈಟರ್ ಆಗಿದ್ದ ನಾನು- 45 ವರ್ಷಕ್ಕೆ ವೇಳೆಗೆ ಬಾಲಿವುಡ್ ನಟನಾದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.