ಅಹಂ ಬ್ರಹ್ಮಾಸ್ಮಿ …’ಅದ್ವೈತ’ ವೆಂಬ ಸರಳ ಸಿದ್ಧಾಂತದ ಮೂಲ ಪುರುಷ ಶ್ರೀಶಂಕರಾಚಾರ್ಯ
ವೇದಗಳು ಜನಸಾಮಾನ್ಯರಿಂದ ದೂರವಾಗಿಯೇ ಉಳಿದುಬಿಟ್ಟಿತು.
Team Udayavani, May 6, 2022, 9:00 AM IST
ಅದ್ವೈತ ಅನುಸಂಧಾನಂ’ ಭಾರತೀಯ ಸಂಸ್ಕೃತಿ ಪುರಾತನ ಮಾತ್ರವಲ್ಲ ಅದು ಸನಾತನ-ಶಾಶ್ವತವಾದದ್ದು. ಅನ್ಯಧರ್ಮಗಳ ದಾಳಿಯ ನಡುವೆಯೂ, ಪ್ರಭಾವದ ನಡುವೆಯೂ, ವಿಚಲಿತವಾಗದೆ ಅವ್ಯಾಹತವಾಗಿ ಮುಂದುವರೆದಿದೆ. ಕಾರಣ ಇದರ ಬೇರುಗಳು ಭದ್ರವಾಗಿದೆ, ಆಳವಾಗಿದೆ. ಬಿರುಗಾಳಿಗೆ ತತ್ತರಿಸಿರಬಹುದು – ಅದು ಸಹಜ ..! ಆದರೆ ಎಂದಿಗೂ ಬುಡಮೇಲಾಗಿಲ್ಲ. ಇದುವೆ ಈ ಸಂಸ್ಕೃತಿಯ ತತ್ವ-ಸತ್ವ ಮತ್ತು ಮಹತ್ವ. ಭಾರತದ ಸಂಸ್ಕೃತಿ ‘ಧರ್ಮ’ದಿಂದ ಪ್ರೇರೇಪಿತವಾದದ್ದು. ಧರ್ಮದ ಬೇರುಗಳು ‘ವೇದ’ಗಳನ್ನು ಆಶ್ರಯಿಸಿವೆ.
ವೇದ ಎಂದರೆ ಜ್ಞಾನ-ಬೆಳಕು. ವೇದ-ಉಪನಿಷತ್ತುಗಳು ಭಾರತದ ಭದ್ರ ಬುನಾದಿ, ಇದನ್ನು ಆಧರಿಸಿ ಎದ್ದು ನಿಂತಿರುವ ಭಾರತವೆಂಬ ವಿಕಾಸಸೌಧ – ಅಚಲ. ವೇದಗಳು ಭಾರತದ ಉಸಿರೇ ಆದರೂ, ಅದು ಎಲ್ಲರನ್ನೂ ತಲುಪಿಲ್ಲ. ಆದರೆ ವೇದದ ಬೇರೆ-ಬೇರೆ ಸ್ವರೂಪಗಳು ಜನಮಾನಸವನ್ನು ತಲುಪಿ ಅವರ ಬದುಕನ್ನು ಹಸನು ಮಾಡಿದೆ. ವೇದಗಳನ್ನು ಓದಿ ತಿಳಿದವರು, ಅದರ ಸಾರವನ್ನು ಜನಮಾನಸಕ್ಕೆ ತಲುಪಿಸಲು ಸೋತರೊ! ಉದ್ದೇಶಪೂರಕವಾಗಿ ಮುಚ್ಚಿಟ್ಟರೊ! ಸ್ವಾರ್ಥಿಗಳಾಗಿ ವರ್ತಿಸಿದರೊ! ಪ್ರಪಂಚದ ಉಸಾಬರಿ ತಮಗೇಕೆ? ಎಂದು ಮೌನವಾದರೊ! ವೇದಗಳು ಜನಸಾಮಾನ್ಯರಿಂದ ದೂರವಾಗಿಯೇ ಉಳಿದುಬಿಟ್ಟಿತು.
ಜರ್ಮನ್ನರಿಗೆ ಇರುವ ಆಸಕ್ತಿ ನಮಗಿಲ್ಲದಂತಾಯಿತು. ಅವರು ಭಾರತದ ಜ್ಞಾನಕ್ಕೆ ಕಿವಿಯಾದರೂ, ನಾವು ಭಾರತದಲ್ಲೇ ಇದ್ದು ಕಿವುಡರಾದೆವು..! ಯಾವುದು ನಮಗೆ ಸಿಗುವುದಿಲ್ಲವೋ! ಅದರ ಬಗ್ಗೆ ಅನವಶ್ಯಕ ಧೋರಣೆಯನ್ನು ತಾಳುವುದು ನಮ್ಮ ಸ್ವಭಾವ. ಹೀಗೆ ವೇದಗಳನ್ನು ತಿಳಿಯಲಾಗದ ಅಪಕ್ವತೆ-ಅಸಹಾಯಕತೆಗಳು ಪ್ರತಿರೋಧದ ವರ್ಗವನ್ನು ಸೃಷ್ಠಿಸಿತು, ಅದುವೇ ಪ್ರಬಲವಾಗಿ ಪಂಥವಾಯಿತು, ಎಡಪಂಥವಾಯಿತು. ಎಡಪಂಥಿಯರ ಮುಖ್ಯ ದೋಷವೆಂದರೆ ‘ಮೂಲವನ್ನು’ ತಿಳಿಯದೆ ವೃಥಾ ವಾದಿಸುವುದು, ಪ್ರತಿರೋಧವನ್ನೇ ಪ್ರಜ್ಞಾಪೂರ್ವಕ ನಡವಳಿಕೆ ಎಂದು ಭಾವಿಸುವುದು. ಮನುಷ್ಯ ಸೃಷ್ಠಿಯ ಲೋಪಗಳನ್ನೇ ಪ್ರಧಾನವಾಗಿಸಿ – ಧರ್ಮ – ಸಂಸ್ಕೃತಿಯಲ್ಲಿ ಹುಳುಕುಗಳನ್ನು ಹುಡುಕುವುದು ಈ ಪಂಥದ ಜಾಯಮಾನ.
ವಾದ-ವಿವಾದಗಳು ತೀವ್ರವಾದಾಗಲೇ ಸಂಘರ್ಷಗಳು ಏರ್ಪಡುವುದು. ಸಂಘರ್ಷಗಳು ಭುಗಿಲೆದ್ದಾಗಲೇ ಅವತಾರಗಳು ಸಂಭವಿಸುವುದು. ಎರಡು ವರ್ಗಗಳ ನಡುವೆ ಸಮನ್ವಯವನ್ನು ಸಾಧಿಸಿ, ತಮ್ಮ ನಿಲುವನ್ನು ಪ್ರಕಟಿಸಿ, ಪ್ರಕರಣವನ್ನು ಸುಖಾಂತಗೊಳಿಸುವುದು ಅವತಾರ ಪುರುಷರು ಮಾಡಿರುವ ಸತ್ಕಾರ್ಯ. ‘ಅವತಾರಗಳು’ ಸುಖಾ ಸುಮ್ಮನೆ ಘಟಿಸುವುದಿಲ್ಲ. ತುರ್ತು ಪರಿಸ್ಥಿತಿ ನಿರ್ಮಾಣವಾಗದ ಹೊರತು, ಘನ-ಗಂಭೀರ ವಾತಾವರಣ ಘನೀಭೂತವಾಗದ ಹೊರತು, ಅವತಾರ ಅನಿವಾರ್ಯವಾಗುವುದಿಲ್ಲ. ಧರ್ಮ ಗ್ಲಾನಿ ಉಂಟಾದಾಗ ‘ನಾನು’ ಮತ್ತೆ ಮತ್ತೆ ಅವತರಿಸುವೆ ಎಂದು ಪರಮಾತ್ಮನು ಹೇಳಿದ್ದಾನೆ.
ಹಿನ್ನೆಲೆ:- ಶ್ರೀ ಶ್ರೀ ಶಂಕರರ ಅವತಾರದ ಹಿನ್ನೆಲೆಯಲ್ಲಿ ಇಂತಹುದೇ ವಾತಾವರಣ ನಿರ್ಮಾಣವಾಗಿತ್ತು! ಎಲ್ಲೆಲ್ಲೂ ಡಾಂಭಿಕತೆ ತುಂಬಿತ್ತು, ನಾಸ್ತಿಕತೆ ನಗ್ನ ತಾಂಡವವಾಡುತ್ತಿತ್ತು. ದೈವ ಪ್ರೀತಿ ಕ್ಷೀಣವಾಗಿ ಶೂನ್ಯದ ಸ್ಥಿತಿ ತಲುಪಿತ್ತು. ವೇದ ವಿರೋಧಿ ಚಿಂತನೆ ಪ್ರಬಲವಾಗಿತ್ತು, ವೇದವನ್ನು ಖಂಡಿಸುವ ಅನವಶ್ಯಕ ಪ್ರಯತ್ನ ಅವ್ಯಾಹತವಾಗಿತ್ತು. ಚಾರುವಾಕರು, ನಾಸ್ತಿಕರು ಎಲ್ಲೆಲ್ಲೂ ಸಂಚರಿಸುತ್ತಾ ತುಚ್ಛ ಚಿಂತನೆಗಳನ್ನು ಬಿತ್ತುತ್ತಿದ್ದರು. ಎಲ್ಲರು ಭೋಗಿಗಳಾಗಬೇಕು, ಭೋಗಲಾಲಸೆ ನಮ್ಮ ಪ್ರಧಾನ ಗುರಿ ಎಂದು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಿದ್ದರು. ಪರಿಣಾಮವಾಗಿ ಗೊಂದಲ-ತಲ್ಲಣಗಳು ಸೃಷ್ಠಿಯಾಯಿತು. ಶ್ರಾದ್ಧ ಕರ್ಮಗಳನ್ನು, ಧರ್ಮ ಪ್ರಜ್ಞೆಯನ್ನು, ಯಜ್ಞ-ಯಾಗಾದಿಗಳನ್ನು, ಆಚರಣೆಗಳನ್ನು, ಸ್ವರ್ಗ ನರಕದ ಕಲ್ಪನೆಯನ್ನು, ಮೋಕ್ಷ ಸಾಧನೆಯನ್ನು, ಆತ್ಮದ ಅಮರತ್ವವನ್ನು, ಮರುಹುಟ್ಟನ್ನು ಹೀಯ್ಯಾಳಿಸಿ – ದಾರಿ ತಪ್ಪಿದರು. ಅಂತರಂಗದ ಅರಿವು ಪ್ರಶ್ನಾತೀತವಾಯಿತು. ಧರ್ಮ ದಾರಿ ತಪ್ಪಿತು, ವೈದಿಕ ಧರ್ಮ ಅತಂತ್ರ ಸ್ಥಿತಿಯನ್ನು ತಲುಪಿತು.
ಈ ಸಂದರ್ಭದಲ್ಲಿ ಅನ್ಯಧರ್ಮಗಳು ಪ್ರಹಾರ ಮಾಡಿದವು. ಬೌದ್ಧ ಧರ್ಮ ಸಾರ್ವಭೌಮತ್ವಕ್ಕಾಗಿ ಸರಳ ಸೂತ್ರಗಳನ್ನು ಪ್ರಕಟಿಸಿತು. ವೇದಗಳನ್ನು, ದೈವಗಳನ್ನು ತಿರಸ್ಕರಿಸಿ ಎಂದು ಬೊಬ್ಟಿಟ್ಟಿತು. ಜೈನರೂ ದಾಳಿ ಮಾಡಿದರು, ಪಂಪನು ‘ವೇದ ಜಡರ್’ ಎಂದು ಹೇಳಿಬಿಟ್ಟ. ಆದಿಪುರಾಣ ಸೃಷ್ಠಿಯಾಗಿ ವೈದಿಕ ಧರ್ಮವನ್ನು ಹಿಗ್ಗಾಮುಗ್ಗಾ ಪ್ರಶ್ನಿಸಿತು. ಪ್ರಮುಖ ನಾಲ್ಕು ಜಿಜ್ಞಾಸೆಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತು. ಕಪಿಲರ ಸಾಂಖ್ಯಶಾಸ್ತ್ರ, ಕಣಾದರರ ವೈಶೇಷಿಕ ಧರ್ಮ, ಗೌತಮರ ನ್ಯಾಯ ಸೂತ್ರ, ಪತಂಜಲಿಗಳ ಯೋಗಶಾಸ್ತ್ರಗಳ ನಡುವೆ-ನೈತಿಕ ಮೌಲ್ಯಗಳ ಮಹಾ ಸಂಘರ್ಷ ಏರ್ಪಟ್ಟಿತು. ಪೂರ್ವಮೀಮಾಂಸಕರಾದ ಜೈಮಿನಿಗಳು ಈಶ್ವರನನ್ನೇ ತಿರಸ್ಕರಿಸಿದರು. ಯಜ್ಞ-ಯಾಗಗಳಿಗೆ, ಕರ್ಮ ಮರ್ಮಗಳಿಗೆ ಪ್ರಾಧಾನ್ಯತೆಯನ್ನು ನೀಡಿದರು. ಕಾಳಾಮುಖರು, ಕಾಪಾಲಿಕರು, ಗಾಣಪತ್ಯರು, ಶಾಕ್ತೇಯರು ಪ್ರತ್ಯೇಕ ಪ್ರತ್ಯೇಕ ಶಾಖೆಗಳಾಗಿ ಶುದ್ಧ ಸತ್ಯವನ್ನು ಮರೆಮಾಚಿದರು. ಮದ್ಯ – ಮಾಂಸ – ಮೋಹಿನಿ – ಮೈಥುನ – ಮೋಜು ಈ ಪಂಚಮಗಳೇ ಪರಮ ಸೋಪಾನದ, ಪರಮ ಪದದ ಪಂಚಸೂತ್ರಗಳೆಂದು ಗೊಂದಲವನ್ನು ಸೃಷ್ಠಿಸಿದರು. ಎಲ್ಲೆಲ್ಲೂ ಹೆದರಿಕೆ, ಪರಿಸ್ಥಿತಿ ಉಲ್ಬಣಗೊಂಡಿತು.
ಇಂಥಹ ವಿಷಮ ಸಂದರ್ಭದಲ್ಲೆ ಶ್ರೀ ಶ್ರೀ ಶಂಕರ ಭಗವತ್ಪಾದರು ಅವತರಿಸಿದ್ದು, ಕ್ರಿ.ಶ.788 ವೈಶಾಖ ಶುದ್ಧ ಪಂಚಮಿಯ ಶುಭದಿನದಂದು, ತಂದೆ ಶಿವಗುರು, ತಾಯಿ ಆರ್ಯಾಂಬೆ. ಕೈಲಾಸದ ಶಿವನೇ ಶಂಕರನಾಗಿ ಅವತರಿಸಿದ್ದಾನೆ ಎಂಬುದು ಶಾಸ್ತ್ರಗಳ ಅಭಿಪ್ರಾಯ. ಶಿವಗುರುವಿನ ಆರಾಧ್ಯ ದೇವ ಚಂದ್ರಮೌಳೀಶ್ವರ ಕನಸಿನಲ್ಲಿ ಪ್ರತ್ಯಕ್ಷನಾಗಿ ದ್ವಂದ್ವದ ಆಯ್ಕೆಯನ್ನು ನೀಡಿದ, ಸೂಕ್ಷ್ಮಮತಿಯೂ, ಸರ್ವಜ್ಞನೂ, ಪ್ರಪಂಚ ಪ್ರಸಿದ್ಧನೂ, ಮಹಾನ್ ಸಾಹಿತ್ಯ ಸಂಪನ್ನನೂ ಆದ ಅಲ್ಪಾಯುಷಿ ಅಥವಾ ಅಲ್ಪಮತಿಯೂ, ಅಜ್ಞಾನಿಯೂ, ಅಪ್ರಸಿದ್ಧನೂ ಆದ ಧೀರ್ಘಾಯುಷಿಯ ಪುತ್ರನ ಆಯ್ಕೆ ನೀಡಿದಾಗ ಶಿವಗುರು ನಶ್ವರದೇಹ ಇಲ್ಲವಾದರೂ, ಜ್ಞಾನ ಬಲದಿಂದ, ಆತ್ಮಬಲದಿಂದ – ಕಾಲ ಕಾಲದಲ್ಲಿ ಸಲ್ಲುವ ಸತ್ಪುತ್ರನಿಗಾಗಿ ಪ್ರಾರ್ಥಿಸಿದ. ಕೇರಳದ ನದಿ ತೀರದ ‘ಕಾಲಟಿ’ ಅವತಾರ ಭೂಮಿಕೆಯಾಯಿತು. ಶಂಕರರು ಹುಟ್ಟಿನಿಂದ ಪಡೆದ ಆಯುಷ್ಯ ಕೇವಲ 8 ವರ್ಷ, ಸನ್ಯಾಸತ್ವದ ಸ್ಪರ್ಶದಿಂದ ಮತ್ತೇ 8 ವರ್ಷ ಉಪಲಬ್ಧವಾಯಿತು. ಈ ಹೊತ್ತಿಗೆ ತಾತ್ವಿಕ ತಾತ್ಪರ್ಯವನ್ನು ಸೃಷ್ಠಿಸಿಬಿಟ್ಟರು.
ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದು ಭಗವಾನ್ ವೇದವ್ಯಾಸರಿಂದ ಮೆಚ್ಚುಗೆ ಪಡೆದು, ತತ್ವ ಪ್ರಚಾರಕ್ಕಾಗಿ ಅವರಿಂದಲೇ 16 ವರ್ಷಗಳ ಆಯುಷ್ಯವನ್ನು ಪಡೆದರು. ಒಂದೇ ಜನ್ಮದಲ್ಲಿ ತ್ರಿಜನ್ಮಾವೃತ್ತಿಗಳನ್ನು ಪಡೆದ ಪರಮಹಂಸ ಪರಿವ್ರಾಜಕಾಚಾರ್ಯರು ಶ್ರೀ ಶ್ರೀ ಶಂಕರ ಭಗವತ್ಪಾದರು. ಅದ್ವೈತವೆಂಬ ಅನನ್ಯ ಅಸ್ತ್ರ ಶ್ರೀ ಶ್ರೀ ಶಂಕರ ಭಗವತ್ಪಾದರು ಅವತರಿಸಿದ ಕಾಲಘಟ್ಟದಲ್ಲಿ ಇದ್ದ ಗೊಂದಲ, ಕಸಿವಿಸಿ, ಸಂಘರ್ಷ, ಅಸ್ಪಷ್ಠತೆಗಳ ನಿವಾರಣೆಗೆ ಶಂಕರರು ಅನುಸರಿಸಿದ ಅನನ್ಯ ಅಸ್ತ್ರ ಅದು ‘ಅದ್ವೈತ’ ವೆಂಬ ಸರಳ ಸಿದ್ಧಾಂತ. ಇಂದಿನ ಸಮಾನತೆ, ಸಮತಾವಾದ, ಸಮಾಜವಾದದ ಮೂಲಬೀಜವೇ ಅದ್ವೈತ ಸಿದ್ಧಾಂತ.
ಅದ್ವೈತವೆಂದರೆ ಎರಡಲ್ಲದ್ದು..! ಒಂದೇ ಎನ್ನುವ ತತ್ವ. ‘ಪರಮಾತ್ಮನು ಮತ್ತು ನಾನು’ ಬೇರೆ ಬೇರೆಯಲ್ಲ ಎರಡೂ ಒಂದೇ ಎನ್ನುವುದೇ ಶ್ರೀ ಶಂಕರರ ವಾದ. ಅವನು ‘ಪರಮ-ಆತ್ಮ’ ನಾನು ಆತ್ಮ..! ಪರಮಾತ್ಮನಿಂದ ಸಿಡಿದ ಒಂದು ಕಿರಣ. ಸಮುದ್ರದಿಂದ ಒಂದು ಬೊಗಸೆ ನೀರನ್ನು ತೆಗೆದರೆ, ಬೊಗಸೆಯಲ್ಲಿರುವುದೂ ಸಮುದ್ರದ ನೀರೇ! ಸಮುದ್ರದಲ್ಲಿರುವುದು ಅದೇ ನೀರು. ಬೊಗಸೆಯಲ್ಲಿ ಅಲ್ಪವಾಗಿದೆ, ಸಮುದ್ರದಲ್ಲಿ ಅಖಂಡವಾಗಿದೆ. ಬೊಗಸೆಯನ್ನು ಚೆಲ್ಲಿದರೆ ಆ ನೀರು ಸಮುದ್ರವನ್ನು ಸೇರಿ, ಸಮುದ್ರವೇ ಆಗಿಬಿಡುತ್ತದೆ. ಆದ್ದರಿಂದ ಆ ಎರಡೂ ಒಂದೇ! ಹಾಗೆಯೇ ಪರಮಾತ್ಮನಿಂದ ಸಿಡಿದ ಒಂದು ಸಣ್ಣ ಕಿರಣ ದೇಹದ ಗೂಡನ್ನು ಸೇರುತ್ತದೆ. ದೇಹದ ಸಾವಿನೊಂದಿಗೆ ಪುನಃ ಪರಮಾತ್ಮನನ್ನೇ ಸೇರಿಬಿಡುತ್ತದೆ. ಆದ್ದರಿಂದ ‘ಪರಮಾತ್ಮ ಮತ್ತು ನಾನು’ ಎರಡೂ ಬೇರೆ ಬೇರೆಯಲ್ಲ ಎರಡೂ ಒಂದೇ..! ಇದೇ ‘ಅದ್ವೈತ’. ಇದೊಂದು ಅತ್ಯಂತ ರೋಮಾಂಚನಕಾರಿಯಾದ ಸಂಗತಿ. ಪರಮಾತ್ಮನ ಅಂಶವೇ ನಾನು. ನಾನು ಬ್ರಹ್ಮ – ಅಹಂ ಬ್ರಹ್ಮಾಸ್ಮಿ..! ನಾನು ಮಾತ್ರವಲ್ಲ ನೀನೂ ಬ್ರಹ್ಮ.. ಎಲ್ಲರೂ ಬ್ರಹ್ಮರೇ..! ಎಲ್ಲರೂ ಸಮಾನರು ಎನ್ನುವುದು ಶಂಕರರ ಕ್ರಾಂತಿಕಾರಿ ನಿಲುವು! ಅಸಮಾನತೆಗೆ, ಅನ್ಯಾಯಕ್ಕೆ, ತುಳಿತಕ್ಕೆ, ಅಸ್ಪಶ್ಯತೆಗೆ, ಮೇಲು-ಕೀಳು ಎನ್ನುವ ತಾರತಮ್ಯ ನಿವಾರಣೆಗೆ ದಿವ್ಯೌಷದ ‘ಅದ್ವೈತ’ ಸಿದ್ಧಾಂತ. ಎಲ್ಲರೂ ಪರಮಾತ್ಮರೇ ಎಂದು ಹೇಳಿಬಿಟ್ಟ ಮೇಲೆ ಇನ್ನೆಲ್ಲಿಯ ಅಸ್ಪಶ್ಯತೆ.
ಸಮಾಜವಾದದ ಪರಿಕಲ್ಪನೆಗೆ ಶಂಕರರ ತತ್ವಸಿದ್ಧಾಂತವೇ ಮೂಲ ಆಕರ. ಆದ್ದರಿಂದಲೇ ಮೋದಿಯವರ ಕೇಂದ್ರ ಸರ್ಕಾರ ಶ್ರೀ ಶಂಕರ ಜಯಂತಿಯನ್ನು ‘ಅಂತರಾಷ್ಟ್ರೀಯ ತತ್ವ ದಿನಾಚರಣೆಯನ್ನಾಗಿ’ ಪ್ರಕಟಿಸಿರುವುದು. ಮಹಾನ್ ಸಾಧಕ ಕೇವಲ 32 ವರ್ಷಗಳ ಜೀವಿತಾವಧಿಯಲ್ಲಿ ಒಂದು ಯುಗದ ಸಾಧನೆಯನ್ನು ಮಾಡಿದವರು ಶ್ರೀ ಶ್ರೀ ಶಂಕರಭಗವತ್ಪಾದರು. ಸ್ವರ್ಗದ ಕಲ್ಪನೆಯನ್ನು ತಿರಸ್ಕರಿಸಿ ಮುಕ್ತಿಯ ಮಾರ್ಗವನ್ನು ತೋರಿದರು. ವೇದದ ಬದಲಿಗೆ ವೇದಾಂತದ ಪರಿಕಲ್ಪನೆಯನ್ನು ಕೊಟ್ಟರು. ಜ್ಞಾನಕ್ಕೆ ಪ್ರಾಧಾನ್ಯತೆಯನ್ನು ನೀಡಿ, ಪ್ರಸ್ಥಾನತ್ರಯಗಳನ್ನು ವಿರಚಿಸಿದರು.
* ಸಾಹಿತ್ಯ ಮಾಲೆ, ಸ್ತೋತ್ರ ಮಾಲೆಗಳನ್ನು ರಚಿಸಿ ಭಕ್ತಿಗೂ ಮಾನ್ಯತೆ ಇದೆ ಎಂದು ತೋರಿದರು.
*ನಾಲ್ಕು ಧರ್ಮಪೀಠಗಳನ್ನು ಸ್ಥಾಪಿಸಿ, ಧರ್ಮ ಸಾಮ್ರಾಜ್ಯವನ್ನೇ ಸಂಸ್ಥಾಪಿಸಿದರು.
* ಅಖಂಡ ಭಾರತ ಸಂಚಾರ ಮಾಡಿ, ಭಾರತದ ಸಮಗ್ರತೆಯನ್ನು ಎತ್ತಿಹಿಡಿದು, ಭಾರತವನ್ನು ಮಗದೊಮ್ಮೆ ಧರ್ಮಭೂಮಿಯನ್ನಾಗಿಸಿದ ಭಾರತದ ಭಾಗ್ಯವಿಧಾತ ಶ್ರೀ ಶ್ರೀ ಶಂಕರ ಭಗವತ್ಪಾದರು.
ಅಂದಿಗೂ, ಇಂದಿಗೂ, ಎಂದೆಂದಿಗೂ ಶ್ರೀ ಶಂಕರಾಚಾರ್ಯರೇ ಗುರುಗಳು, ಜಗದ್ಗುರುಗಳು, ಆದಿಗುರುಗಳು, ಸಾರ್ವಕಾಲಿಕ ಗುರುಗಳು; ಸಾರ್ವಜನಿಕ ಗುರುಗಳು. ಸಮಾನತಾ ಮಂತ್ರಘೋಷ ಮಾಡಿದ ಪ್ರಪ್ರಥಮ ಗುರುಗಳು – ಮಾರ್ಗದರ್ಶಕ ಗುರುಗಳು, ಉಪನಿಷತ್ತುಗಳನ್ನು ಮೊಟ್ಟ ಮಾದಲ ಬಾರಿಗೆ ಅರ್ಥೈಸಿದ ಅವಧೂತ ಗುರುಗಳು; ವೇದಾಂತವನ್ನು ವಾಖ್ಯಾನಿಸಿದ ಆಧ್ಯಾತ್ಮ ಗುರುಗಳು. ಭಗವದ್ಗೀತೆಗೆ ಭಾಷ್ಯ ಬರೆದ ಚಿಂತಕ ಗುರುಗಳು, ಭಾರತವನ್ನು ಬರಿಗಾಲಲ್ಲಿ ಸುತ್ತಿದ ಪಥ ಪ್ರವರ್ತಕ ಜಂಗಮ ಗುರುಗಳು, ವಾದಗಳನ್ನೆಲ್ಲ ಅರಗಿಸಿಕೊಂಡ ಅಗಸ್ತ್ಯ ಗುರುಗಳು, ಅದ್ವೈತವನ್ನು ಸರ್ವ ಮಾನ್ಯ ಮಾಡಿದ ಸಿದ್ಧಾಂತಿ ಗುರುಗಳು, ಸರ್ವಜ್ಞ ಪೀಠಾರೋಹಣ ಮಾಡಿದ ಪುಂಸರಸ್ವತಿಗಳು, ಕಶ್ಮೀರದ ಶಾರದೆಯಿಂದಲೇ ಸನ್ಮಾನಿತರಾದ ವಿದ್ವದ್ಗುರುಗಳು.
ಭಕ್ತಿಯ ಭರಾಟೆಯಲ್ಲಿ ಗುಡಿ ಸುತ್ತಿ, ಘಂಟೆ ಹೊಡೆದು, ನೆಲದಲ್ಲಿ ಉರುಳಿ, ಮಂಗಳಾರತಿಯ ಬಿಸಿ ಮುಟ್ಟಿ, ತೀರ್ಥ ಕುಡಿದು, ಪ್ರಸಾದ ತಿಂದರೆ ಎಲ್ಲವೂ ಮುಗಿಯಿತೆಂಬ ಹುಂಬತನವನ್ನು ಅಲ್ಲಾಡಿಸಿಬಿಟ್ಟರು. ಭಕ್ತಿ ಬೇಕು, ಅದಕ್ಕೊಂದು ಪರಿಧಿ ಬೇಕು. ಆತ್ಮದಲ್ಲಿ ಬ್ರಹ್ಮ ಜಿಜ್ಞಾಸೆ ಮಾಡಬೇಕು, ಪರಬ್ರಹ್ಮನ ಅನುಸಂಧಾನವಾಗಬೇಕು. ಇದಕ್ಕೆ ಜ್ಞಾನ ಬೇಕು, ಸುಜ್ಞಾನ ಬೇಕು, ಸತ್ಯಜ್ಞಾನ ಬೇಕು, ಶುದ್ಧಜ್ಞಾನ ಬೇಕು, ಆದ್ದರಿಂದ ಜ್ಞಾನಪಥ ಅನಿವಾರ್ಯ, ಅರಿವಿನ ದಾರಿಯ ಬೆಳಕು ಅಗತ್ಯ. ಆದ್ದರಿಂದ ಜ್ಞಾನಿಗಳಾಗಿ, ಬುದ್ಧಿವಂತರಾಗಿ, ವಿವೇಕಿಗಳಾಗಿ ಎಂದವರು ಶ್ರೀ ಶ್ರೀ ಶಂಕರರು.
ಶಂಕರ-ನಾರಾಯಣ ನಡುವೆ; ಹರಿ-ಹರರ ನಡುವೆ ಐಕ್ಯವನ್ನು ಸಾಧಿಸಿದ್ದು, ಇವರಲ್ಲಿ ಭೇದವಿಲ್ಲವೆಂದು ಸಾರಿ, ಬೋಧಿಸಿ, ಕೀರ್ತಿಸಿ ಪ್ರಭಾವಿಸಿದ ಮಹಾಮುನಿಯೇ ಶ್ರೀ ಶ್ರೀ ಶಂಕರರು ಮತ್ತು ಸಾಂಸ್ಕೃತಿಕ ಸಾಹಸ ಮತ್ತಾವ ಶಾಖಾಧ್ಯಕ್ಷರಲ್ಲೂ ಕಾಣಲು ಸಾಧ್ಯವಾಗಿಲ್ಲ. ವೇದಾಂತವೆಂದರೆ ಶಾಂಕರ ವೇದಾಂತ, ಸಿದ್ಧಾಂತವೆಂಕರೆ ಅದ್ವೈತ ಸಿದ್ಧಾಂತ. ಕವಿಶ್ರೇಷ್ಠ, ಸಿದ್ಧಾಂತಿ ಪ್ರಮುಖ, ತತ್ವ ವಿಚಾರವೇತ್ತ, ಜ್ಞಾನ ಪ್ರವರ್ತಕ, ಪೀಠ ಸ್ಥಾಪಕ, ಭಾಷ್ಯ ನಿರ್ಮಾತೃ, ಅಸದೃಶ ಪ್ರಾಂಥ ಪ್ರಧಾನ, ಸಮಾಜಸುಧಾರಕ, ಏಕವೇವಾದ್ವಿತೀಯ ಜ್ಞಾನನಿಧಿ ಶ್ರೀ ಶ್ರೀ ಶಂಕರಾಚಾರ್ಯರು – ಅಹಂ ಬ್ರಹ್ಮಾಸ್ಮಿ..!
ರಂಗಬ್ರಹ್ಮ ಡಾ. ಎಸ್.ಎಲ್.ಎನ್.ಸ್ವಾಮಿ ರಂಗಕರ್ಮಿ – ಹಿರಿಯ ಮಾಧ್ಯಮ ಅನುಭವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.