Lagrange point 1 ತಲುಪಿದ ಆದಿತ್ಯ ಎಲ್1: ಸೋಹೋ ಮತ್ತು ಆದಿತ್ಯ ಎಲ್1 ಯೋಜನೆಗಳ ತುಲನೆ
Team Udayavani, Jan 6, 2024, 7:06 PM IST
ಭಾರತದ ಮೊತ್ತ ಮೊದಲ ಬಾಹ್ಯಾಕಾಶ ಕೇಂದ್ರಿತ ಸೂರ್ಯ ಅನ್ವೇಷಣಾ ಯೋಜನೆಯಾದ ಆದಿತ್ಯ ಎಲ್1 ಉಪಗ್ರಹವನ್ನು ಕಳೆದ ವರ್ಷ ಸೆಪ್ಟೆಂಬರ್ 2ರಂದು ಉಡಾವಣೆಗೊಳಿಸಲಾಗಿತ್ತು. ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹವನ್ನು ಯಶಸ್ವಿಯಾಗಿ ಅದರ ಅಂತಿಮ ಕಾರ್ಯಾಚರಣಾ ಕಕ್ಷೆಯಾದ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್1) ಸುತ್ತಲಿನ ಹ್ಯಾಲೋ ಕಕ್ಷೆಗೆ ಅಳವಡಿಸಿದೆ. ಈ ಬಿಂದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿದ್ದು, ಇಲ್ಲಿಗೆ ತೆರಳುವ ಮೂಲಕ ಉಪಗ್ರಹ ನೂತನ ದಾಖಲೆ ನಿರ್ಮಿಸಿದೆ.
2023ರ ಸೆಪ್ಟೆಂಬರ್ 2ರಂದು ಉಡಾವಣೆಗೊಂಡ ಬಳಿಕ ತನ್ನ 126 ದಿನಗಳ ಪ್ರಯಾಣದಲ್ಲಿ ಆದಿತ್ಯ ಎಲ್1 ಬಹುತೇಕ 3.7 ಮಿಲಿಯನ್ ಕಿಲೋಮೀಟರ್ ಪ್ರಯಾಣಿಸಿದೆ. ಈ ಪ್ರಯಾಣ ಸಾಕಷ್ಟು ಸಂಕೀರ್ಣ ಪಥದಲ್ಲಿನ ಚಲನೆಯನ್ನು ಒಳಗೊಂಡಿತ್ತು. ಸುದೀರ್ಘ ಪ್ರಯಾಣದ ಬಳಿಕ ತನ್ನ ಅಂತಿಮ ಗುರಿಯನ್ನು ತಲುಪಿದ ಆದಿತ್ಯ ಎಲ್1 ಮುಂದಿನ 5.2 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದೆ.
ಲ್ಯಾಗ್ರೇಂಜ್ ಬಿಂದುವಿನಲ್ಲಿನ (ಎಲ್1) ತನ್ನ ಸ್ಥಾನದಿಂದ ಆದಿತ್ಯ ಎಲ್1 ಉಪಗ್ರಹ ಸೂರ್ಯನ ಕುರಿತಾದ ನಮ್ಮ ಜ್ಞಾನವನ್ನು ಹೆಚ್ಚಿಸಲು ವಿವಿಧ ಅಧ್ಯಯನಗಳನ್ನು ನಡೆಸಲಿದೆ. ಇದರ ವಿಶಿಷ್ಟ ಸ್ಥಾನ ಸೂರ್ಯನನ್ನು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ವೀಕ್ಷಿಸಲು ಮತ್ತು ಬಾಹ್ಯಾಕಾಶ ವಾತಾವರಣವನ್ನು ಅಧ್ಯಯನ ನಡೆಸಲು ನೆರವಾಗುತ್ತದೆ. ಈ ಉಪಗ್ರಹ ಸೌರ ಮಾರುತಗಳ ಕುರಿತು ಮುನ್ಸೂಚನೆ ಮತ್ತು ಎಚ್ಚರಿಕೆ ನೀಡಲು ನೆರವಾಗಲಿದ್ದು, ನಮ್ಮ ಸೌರ ಮಂಡಲದ ಕೇಂದ್ರ ತಾರೆಯಾದ ಸೂರ್ಯನ ಕುರಿತು ಮಹತ್ವದ ಮಾಹಿತಿಗಳನ್ನು ಒದಗಿಸಲಿದೆ.
ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಎನ್ನುವುದು ಒಂದು ವಿಶಿಷ್ಟ ಬಿಂದುವಾಗಿದ್ದು, ಇಲ್ಲಿ ಸೂರ್ಯ ಮತ್ತು ಭೂಮಿಯಂತಹ ಎರಡು ಬೃಹತ್ ಆಕಾಶಕಾಯಗಳ ನಡುವಿನ ಗುರುತ್ವಾಕರ್ಷಣಾ ಬಲಗಳು ಬಾಹ್ಯಾಕಾಶ ನೌಕೆಯಂತಹ ಸಣ್ಣ ಕಾಯದ ಕೇಂದ್ರಾಪಗಾಮಿ ಬಲವನ್ನು (ಸೆಂಟ್ರಿಫ್ಯೂಗಲ್ ಫೋರ್ಸ್) ಸಮವಾಗಿಸುತ್ತವೆ. ಎಲ್1 ಬಿಂದುವಿನಲ್ಲಿ ಸಣ್ಣ ಕಾಯಗಳು ಎರಡು ಬೃಹತ್ ಕಾಯಗಳ ಜೊತೆಗೆ ಸ್ಥಿರ ಕಕ್ಷೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಆದಿತ್ಯ ಉಪಗ್ರಹದ ಕಕ್ಷೆ ಹ್ಯಾಲೋ ಆಕಾರದಲ್ಲಿದ್ದು, ಭೂಮಿಯಿಂದ ಅಂದಾಜು 15 ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಇದು ಸೂರ್ಯನಿಗೆ ಭೂಮಿಗಿಂತ ಹೆಚ್ಚು ಹತ್ತಿರದಲ್ಲಿದ್ದರೂ, ಬಹಳಷ್ಟು ದೂರದಿಂದಲೇ ಸೂರ್ಯನನ್ನು ವೀಕ್ಷಿಸುತ್ತದೆ. ಯಾಕೆಂದರೆ ಸೂರ್ಯ ಭೂಮಿಯಿಂದ 15 ಕೋಟಿ ಕಿಲೋಮೀಟರ್ ದೂರದಲ್ಲಿದೆ.
ಪ್ರಸ್ತುತ, ನಾಸಾದ ವಿಂಡ್, ಏಸ್, ಮತ್ತು ಡಿಎಸ್‌ಸಿಒವಿಆರ್, ಇಎಸ್ಎ ಮತ್ತು ನಾಸಾದ ಜಂಟಿ ಯೋಜನೆಯಾದ ಸೋಹೋ ಯೋಜನೆಗಳು ಆದಿತ್ಯ ಎಲ್1 ಉದ್ದೇಶಿಸಿರುವ ರೀತಿಯಲ್ಲೇ ಎಲ್1 ಬಿಂದುವಿಗೆ ಸನಿಹದಲ್ಲಿವೆ.
ಸೋಹೋ ಮತ್ತು ಆದಿತ್ಯ ಎಲ್1: ಒಂದು ಮೇಲ್ನೋಟ
ಸೋಹೋ ಮತ್ತು ಆದಿತ್ಯ ಎಲ್1 ಎರಡೂ ಸೂರ್ಯ ಮತ್ತು ಭೂಮಿಯ ನಡುವಿನ ಎಲ್1 ಬಿಂದುವಿನಿಂದ ಸೂರ್ಯನನ್ನು ವೀಕ್ಷಿಸುವ ಬಾಹ್ಯಾಕಾಶ ನೌಕೆಗಳಾಗಿವೆ. ಆದರೆ, ಅವುಗಳ ಗುರಿ, ಉಪಕರಣಗಳು ಮತ್ತು ಉಡಾವಣಾ ಸಮಯದಲ್ಲಿ ಒಂದಷ್ಟು ಬದಲಾವಣೆಗಳನ್ನು ಹೊಂದಿವೆ. ಅವೆರಡರ ಪ್ರಮುಖ ಬದಲಾವಣೆಗಳು ಈ ಕೆಳಗಿನಂತಿವೆ:
1. ಅಂತಾರಾಷ್ಟ್ರೀಯ ಮತ್ತು ಭಾರತೀಯ ಯೋಜನೆಗಳು
ಸೋಲಾರ್ ಆ್ಯಂಡ್ ಹೀಲಿಯೋಸ್ಫಿಯರಿಕ್ ಅಬ್ಸರ್ವೇಟರಿ (ಸೋಹೋ) ಎನ್ನುವುದು ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ನಡುವಿನ ಜಂಟಿ ಯೋಜನೆಯಾಗಿದ್ದು, ಆದಿತ್ಯ ಎಲ್1 ಭಾರತದ ಇಸ್ರೋ ಸಂಸ್ಥೆಯ ಯೋಜನೆಯಾಗಿದೆ.
ಸೋಹೋ ಬಾಹ್ಯಾಕಾಶ ನೌಕೆಯನ್ನು ಮಾತ್ರಾ ಮಾರ್ಕೋನಿ (ಈಗ ಆ್ಯಸ್ಟ್ರಿಯಂ) ನೇತೃತ್ವದಲ್ಲಿ 14 ಯುರೋಪಿಯನ್ ದೇಶಗಳ ಕಂಪನಿಗಳು ಜಂಟಿಯಾಗಿ ನಿರ್ಮಿಸಿದ್ದವು. ಈ ಬಾಹ್ಯಾಕಾಶ ನೌಕೆಯ ಸರ್ವಿಸ್ ಮಾಡ್ಯುಲ್ (ಸೌರ ಫಲಕಗಳು, ಥ್ರಸ್ಟರ್‌ಗಳು, ಕಂಟ್ರೋಲ್ ಸಿಸ್ಟಮ್‌ಗಳು ಮತ್ತು ಸಂವಹನ ತಂತ್ರಜ್ಞಾನಗಳನ್ನು ಒಳಗೊಂಡಿರುವ ಮಾಡ್ಯುಲ್) ಅನ್ನು ಫ್ರಾನ್ಸಿನ ಟೌಲೋಸ್‌ನಲ್ಲಿ ನಿರ್ಮಿಸಲಾಯಿತು. ವೈಜ್ಞಾನಿಕ ಉಪಕರಣಗಳನ್ನು ಒಯ್ಯುವ ಭಾಗವನ್ನು ಯುಕೆಯ ಪೋರ್ಟ್ಸ್‌ಮೌತ್‌ನಲ್ಲಿ ಜೋಡಿಸಿ, ಬಳಿಕ ಟೌಲೋಸ್‌ನಲ್ಲಿ ಸರ್ವಿಸ್ ಮಾಡ್ಯುಲ್‌ಗೆ ಅಳವಡಿಸಲಾಯಿತು. ನಾಸಾ ಸೋಹೋದ ಉಡಾವಣೆ, ಟ್ರ್ಯಾಕಿಂಗ್, ಮಾಹಿತಿ ಸಂಗ್ರಹಣೆ ಮತ್ತು ಆದೇಶ ನೀಡುವ ಜವಾಬ್ದಾರಿ ವಹಿಸಿಕೊಂಡಿತು.
2. ಸೂರ್ಯನನ್ನು ಅಧ್ಯಯನ ನಡೆಸುವ ಬಾಹ್ಯಾಕಾಶ ಯೋಜನೆಗಳು
ಸೋಹೋ ಡಿಸೆಂಬರ್ 1995ರಲ್ಲಿ ಉಡಾವಣೆಗೊಂಡಿತು. ಇದು ಬಹುತೇಕ 2 ಸೋಲಾರ್ ಸೈಕಲ್‌ಗಳ ಅವಧಿಯಲ್ಲಿ (ಒಂದು ಸೋಲಾರ್ ಸೈಕಲ್ ಬಹುತೇಕ 11 ವರ್ಷದ ಅವಧಿ ಹೊಂದಿರುತ್ತದೆ) ಸೂರ್ಯನ ಅಧ್ಯಯನ ನಡೆಸುತ್ತಾ ಬಂದಿದೆ. ಆದರೆ ಆದಿತ್ಯ ಎಲ್1 ಸೆಪ್ಟೆಂಬರ್ 2023ರಲ್ಲಿ ಉಡಾವಣೆಗೊಂಡಿತ್ತು. ಇದು ಅಂದಾಜು 125 ದಿನಗಳ ಪ್ರಯಾಣದ ಬಳಿಕ, ಜನವರಿ 6ರಂದು ತನ್ನ ಕಕ್ಷೆಗೆ ತಲುಪಿತು.
3. ಸೌರ ವೀಕ್ಷಣೆಗೆ ವೈಜ್ಞಾನಿಕ ಉಪಕರಣಗಳು
ಸೋಹೋ ಸೂರ್ಯನ ಒಳಭಾಗ, ವಾತಾವರಣ, ಮತ್ತು ಸೌರ ಮಾರುತಗಳ ಅಧ್ಯಯನ ನಡೆಸಲು 12 ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ. ಆದಿತ್ಯ ಎಲ್1 ಏಳು ಉಪಕರಣಗಳನ್ನು ಹೊಂದಿದ್ದು, ಸೂರ್ಯನ ಕ್ರೋಮೋಸ್ಫಿಯರ್, ಕೊರೋನಾ ಮತ್ತು ಬಾಹ್ಯಾಕಾಶ ವಾತಾವರಣದ ಅಧ್ಯಯನ ನಡೆಸುವ ಗುರಿ ಹೊಂದಿದೆ.
4. ಧೂಮಕೇತುಗಳು ಮತ್ತು ಸೌರ ಸ್ಫೋಟಗಳ ಅಧ್ಯಯನ
ಸೋಹೋ ಸೂರ್ಯನ ಸುತ್ತ ಸುತ್ತುವ ಸಾವಿರಾರು ಧೂಮಕೇತುಗಳನ್ನು ಗುರುತಿಸಿದೆ. ಆದಿತ್ಯ ಎಲ್1 ಸೌರ ಸ್ಫೋಟಗಳ ಮೂಲಗಳು ಮತ್ತು ಆಯಾಮಗಳು, ಭೂಮಿಯ ಮೇಲೆ ಅವುಗಳ ಪರಿಣಾಮಗಳನ್ನು ಅಧ್ಯಯನ ನಡೆಸಲಿದೆ.
5. ಸೌರ ಅನ್ವೇಷಣಾ ಯೋಜನೆಗಳ ಹೋಲಿಕೆ
ಆದಿತ್ಯ ಎಲ್1 ಯೋಜನೆಯನ್ನು 5.2 ವರ್ಷಗಳ ಅವಧಿಗೆ ಕಾರ್ಯಾಚರಿಸುವ ರೀತಿಯಲ್ಲಿ ರೂಪಿಸಲಾಗಿದೆ. ಆದರೆ ಇನ್ನೊಂದೆಡೆ, ಸೋಹೋ ಯೋಜನೆ 1995ರ ಡಿಸೆಂಬರ್ ತಿಂಗಳಲ್ಲಿ ಉಡಾವಣೆಗೊಂಡಿತ್ತು. ಆರಂಭದಲ್ಲಿ ಅದು 1998ರ ತನಕ ಕಾರ್ಯಾಚರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ತನ್ನ ಜೀವಿತಾವಧಿಯ ಕುರಿತ ಎಲ್ಲ ನಿರೀಕ್ಷೆಗಳನ್ನೂ ಮೀರಿ ಕಾರ್ಯಾಚರಿಸಿದೆ. ಸೋಹೋ ಇಂದಿಗೂ ಕಾರ್ಯಾಚರಿಸುತ್ತಿದ್ದು, ಅತ್ಯಂತ ಸುದೀರ್ಘ ಅವಧಿಗೆ ಕಾರ್ಯಾಚರಣೆ ನಡೆಸಿದ ಸೂರ್ಯ ಅನ್ವೇಷಣಾ ಯೋಜನೆ ಎಂಬ ಕೀರ್ತಿಗೆ ಪಾತ್ರವಾಗಿದೆ. ತನ್ನ ಸುದೀರ್ಘ ಕಾರ್ಯಾಚರಣೆಯ ಮೂಲಕ ಸೋಹೋ ಉಪಗ್ರಹವನ್ನು ಸೌರ ಅನ್ವೇಷಣೆಗೆ ಸಂಬಂಧಿಸಿದಂತೆ ಮಹತ್ವದ ಕೊಡುಗೆಗಳನ್ನು ನೀಡಿದೆ.
6. ಸೋಹೋ ಮತ್ತು ಆದಿತ್ಯ ಎಲ್1: ಕಕ್ಷೀಯ ಪ್ರಯಾಣ
ತನ್ನ ಉಡಾವಣಾ ಸಂದರ್ಭದಲ್ಲಿ, ಸೋಹೋ ಬಾಹ್ಯಾಕಾಶ ನೌಕೆ 1,850 ಕೆಜಿ ತೂಕ ಹೊಂದಿತ್ತು. ಇದರಲ್ಲಿ ಯೋಜನೆಯ ಶಕ್ತಿ, ಸಂವಹನ ಮತ್ತು ವೈಜ್ಞಾನಿಕ ಪ್ರಯೋಗಗಳಿಗೆ ಅವಶ್ಯಕವಾದ ಸರ್ವಿಸ್ ಮತ್ತು ಪೇಲೋಡ್ ಮಾಡ್ಯುಲ್‌ಗಳ ತೂಕವೂ ಸೇರಿತ್ತು. ಆದಿತ್ಯ ಎಲ್1 ಯೋಜನೆ ಒಟ್ಟು 1,475 ಕೆಜಿ ತೂಕ ಹೊಂದಿದ್ದು, ಇದರಲ್ಲಿ 244 ಕೆಜಿ ವೈಜ್ಞಾನಿಕ ಪೇಲೋಡ್‌ಗಳಾಗಿವೆ.
ಸೋಹೋ ಅನ್ನು ಮೊದಲ ಲ್ಯಾಗ್ರೇಂಜ್ ಬಿಂದುವಿನ ಸುತ್ತಲಿನ ಹ್ಯಾಲೋ ಕಕ್ಷೆಗೆ ಉಡಾವಣೆಗೊಳಿಸಲಾಗಿತ್ತು. ಸೋಹೋ ತನ್ನ ಉಡಾವಣೆಯ ಬಳಿಕ ಕಕ್ಷೆಗೆ ತಲುಪಲು ಮೂರೂವರೆ ತಿಂಗಳ ಅವಧಿ ತೆಗೆದುಕೊಂಡಿತು. ಇದಕ್ಕೆ ಹೋಲಿಸಿದರೆ, ಆದಿತ್ಯ ಎಲ್1 ಯೋಜನೆಯೂ ಸಹ ಎಲ್1 ಬಿಂದುವಿನ ಸುತ್ತಲಿನ ಹ್ಯಾಲೋ ಕಕ್ಷೆಗೆ ತಲುಪುವ ಗುರಿಯನ್ನೇ ಹೊಂದಿದ್ದು, ಬಹುತೇಕ ನಾಲ್ಕು ತಿಂಗಳ ಪ್ರಯಾಣ ಬೆಳೆಸಿ, ತನ್ನ ಅಂತಿಮ ಗುರಿ ತಲುಪಿತು. ಈ ಅವದಿ ಸೋಹೋದ ಪ್ರಯಾಣಕ್ಕಿಂತಲೂ ಸ್ವಲ್ಪ ಹೆಚ್ಚಿನ ಅವಧಿಯಾಗಿದೆ.
7. ಗಾತ್ರದ ಹೋಲಿಕೆ: ಸೋಹೋ ವರ್ಸಸ್ ಆದಿತ್ಯ ಎಲ್1
ಆದಿತ್ಯ ಎಲ್1 ಗಾತ್ರದಲ್ಲಿ ಸೋಹೋಗಿಂತ ಸಣ್ಣದಾಗಿದೆ. ಸೋಹೋ ಸೂರ್ಯನೆಡೆಗೆ ಚಾಚಿದ ಅಕ್ಷದಲ್ಲಿ 4.3 ಮೀಟರ್ ಇದ್ದು, 9.5 ಮೀಟರ್‌ಗಳ ಸೌರ ಫಲಕಗಳ ವ್ಯಾಪ್ತಿಯನ್ನು ಹೊಂದಿದೆ. ಇನ್ನೊಂದೆಡೆ, ಆದಿತ್ಯ ಎಲ್1 ಸೂರ್ಯನೆಡೆಗಿನ ಅಕ್ಷದಲ್ಲಿ ಕೇವಲ 0.89 ಮೀಟರ್ ಇದ್ದು, ಸೋಹೋದ ಉದ್ದದ ಅಂದಾಜು 20.7% ಇದೆ. ಆದಿತ್ಯ ಎಲ್1ನ ಸೌರ ಫಲಕಗಳ ನಿಖರ ಗಾತ್ರವನ್ನು ತಿಳಿಸಿಲ್ಲವಾದರೂ, ಅವುಗಳು ಆದಿತ್ಯ ಎಲ್1ನ ಗಾತ್ರದ ಪ್ರಮಾಣಕ್ಕೆ ಅನುಗುಣವಾಗಿದ್ದರೆ, ಅಂದಾಜು 1.78 ಮೀಟರ್ ಅಗಲವಾಗಿರಬಹುದು. ಇದು ಸೋಹೋದ ಸೌರ ಫಲಕದ 18.7% ಗಾತ್ರವಾಗಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.