ಭಾರತದ ವನಿತಾ ಕ್ರಿಕೆಟ್‌ಗೆ ಸ್ಟಾರ್ ವ್ಯಾಲ್ಯೂ ಕೊಡಿಸಿದ್ದ ಅಂಜುಂ ಚೋಪ್ರಾ
Team Udayavani, Mar 16, 2023, 5:45 PM IST
ಅವರು ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ. ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹತ್ತನೇ ಕ್ರಮಾಂಕದಲ್ಲಿ ಆಡಲಿಳಿದ ಇವರು ಅನಂತರದ ದಿನಗಳಲ್ಲಿ ತಮ್ಮ ಪ್ರದರ್ಶನದ ಮೂಲಕ ಓಪನಿಂಗ್ ಬ್ಯಾಟರ್ ಆಗಿ ಭಡ್ತಿ ಪಡೆಯುತ್ತಾರೆ. ಭಾರತದ ಅದೆಷ್ಟೋ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗೆ ಹೆಚ್ಚು ಕಡಿಮೆ ಎಲ್ಲಾ ಕ್ರಮಾಂಕದಲ್ಲಿಯೂ ಬ್ಯಾಟ್ ಬೀಸಿ ಶಹಬಾಸ್ ಅನ್ನಿಸಿಕೊಂಡಿದ್ದ ಈ ಆಟಗಾರ್ತಿ ಬೇರೆ ಯಾರೂ ಅಲ್ಲ, ಭಾರತದ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿ ಅಂಜುಂ ಚೋಪ್ರಾ. ವನಿತಾ ಕ್ರಿಕೆಟ್ ಅಷ್ಟೊಂದು ಜನಪ್ರಿಯವಾಗಿಲ್ಲದ ಸಂದರ್ಭದಲ್ಲಿ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟು ತಮ್ಮ ಪ್ರದರ್ಶನದ ಮೂಲಕ ವನಿತಾ ಕ್ರಿಕೆಟ್ ಕಡೆ ಕೆಲವರಾದರೂ ತಿರುಗಿ ನೋಡುವಂತೆ ಮಾಡಿದ ಶ್ರೇಯ ಈ ಎಡಗೈ ಬ್ಯಾಟರ್, ಬಲಗೈ ಮಧ್ಯಮ ವೇಗಿಯದು.
ಅಂಜುಂ ಹುಟ್ಟಿದ್ದು ಮೇ 20, 1977 ನವದೆಹಲಿಯಲ್ಲಿ. ಬಾಲ್ಯದಿಂದಲೂ ಆ್ಯತ್ಲೆಟಿಕ್ಸ್, ಸ್ವಿಮ್ಮಿಂಗ್, ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಅಂಜುಂ ನ್ಯಾಶನಲ್ ಲೆವೆಲ್ ಬಾಸ್ಕೆಟ್‌ಬಾಲ್ ಪ್ಲೇಯರ್ ಕೂಡ ಹೌದು. ಇವರ ತಂದೆ ಕೃಷ್ಣನ್ ಬಾಲ್ ಚೋಪ್ರಾ ಒಬ್ಬ ಗಾಲ್ಫರ್ ಆಗಿದ್ದು, ಇವರ ತಾಯಿ ಪೂನಂ ಚೋಪ್ರಾ ಕಾರ್ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಸಹೋದರ ನಿರ್ವಾನ್ ಚೋಪ್ರಾ ನ್ಯಾಶನಲ್ ಲೆವೆಲ್ ಕ್ರಿಕೆಟರ್ ಆಗಿದ್ದರು. ಮನೆಯಲ್ಲಿದ್ದ ಈ ಕ್ರೀಡಾ ವಾತಾವರಣವೇ ಅವರನ್ನು ಕ್ರೀಡೆ ಎಡೆಗೆ ಸೆಳೆದಿದೆಂದರೆ ಅತಿಶಯೋಕ್ತಿಯಲ್ಲ. ಒಂಬತ್ತನೇ ವಯಸ್ಸಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅಂಜುಂ ಆರಂಭದಲ್ಲಿ ಶಾಲಾ ಕಾಲೇಜು ತಂಡಗಳನ್ನು ಪ್ರತಿನಿಧಿಸುತ್ತಿದ್ದರು ಮುಂದೆ ಅಂಡರ್ 15 ತಂಡದ ಪರವಾಗಿಯೂ ಆಡಲಿಳಿಯುತ್ತಾರೆ.
ಅಂಜುಂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 17ನೇ ವಯಸ್ಸಿನಲ್ಲಿ. 1995ರ ಫೆಬ್ರವರಿ 12ರಂದು ನ್ಯೂಜಿಲ್ಯಾಂಡ್ ವಿರುದ್ಧ ಅವರದೇ ನೆಲದಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣವನ್ನು ಅವರು ಆರಂಭಿಸುತ್ತಾರೆ. ಈ ಪಂದ್ಯದಲ್ಲಿ ನಾಲ್ಕು ಒವರ್ ಎಸೆದ ಅಂಜುಂ ನೀಡಿದ್ದು ಕೇವಲ 14 ರನ್. 10ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬರುವ ಅವರು 11 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅದೇ ವರ್ಷ ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ನೈಟ್ ವಾಚ್‌ಮನ್ ಆಗಿ ಆಡಲಿಳಿಯುವ ಅಂಜುಂ ಕೋಚ್ ತಮ್ಮ ಮೇಲೆ ಇರಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
2000ರಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಉಪನಾಯಕಿಯ ಜವಾಬ್ದಾರಿಯೊಂದಿಗೆ ಆಡಲಿಳಿದ ಅಂಜುಂ ಭಾರತ ಸೆಮಿ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಒತ್ತಡದ ಸಂದರ್ಭದಲ್ಲಿಯೂ ಉತ್ತಮವಾಗಿ ಬ್ಯಾಟ್ ಬೀಸಿ ತಂಡವನ್ನು ಗೆಲುವಿನ ದಡ ಸೇರಿಸಿದ ಹಲವು ಉದಾಹರಣೆಗಳು ಇವೆ.
ನಾಯಕಿಯಾಗಿ ಅಂಜುಂ
2002ರಲ್ಲಿ ಅಂಜುಂ ಅವರಿಗೆ ಭಾರತ ತಂಡದ ನಾಯಕತ್ವ ಲಭಿಸುತ್ತದೆ. ನಾಯಕಿಯಾಗಿ ಮೊದಲ ಟೆಸ್ಟ್ ಪಂದ್ಯ. ಎದುರಾಳಿ ಇಂಗ್ಲೆಂಡ್. ಆ ಪಂದ್ಯದಲ್ಲಿ ತಂಡದಲಿದ್ದ 7 ಜನ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಅನನುಭವಿ ಆಟಗಾರ್ತಿಯರು! ಇವರನ್ನು ಕಟ್ಟಿಕೊಂಡು ನಾಯಕತ್ವ ನಿಭಾಯಿಸುವ ಅಂಜುಂ ಎದುರಾಳಿ ತಂಡವನ್ನು ವೈಟ್‌ವಾಶ್ ಮಾಡಿ ಅಮೋಘ ಗೆಲುವು ದಾಖಲಿಸುತ್ತಾರೆ. ಮೊದಲ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಮ್ಮ ಚಾಣಾಕ್ಷ್ಯ ನಾಯಕತ್ವ ಹಾಗೂ ಬ್ಯಾಟಿಂಗ್ ಮೂಲಕ ಭಾರತಕ್ಕೆ ಮೊದಲ ಸಾಗರೋತ್ತರ ಟೆಸ್ಟ್ ಗೆಲುವನ್ನು ತಂದುಕೊಡುತ್ತಾರೆ.
ಅಂಜುಂ ಹೆಜ್ಜೆ ಗುರುತು
4 ಏಕದಿನ ಮತ್ತು 2 ಟಿ 20 ಸೇರಿ ಒಟ್ಟು 6 ವಿಶ್ವಕಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅಂಜುಂ 2005ರಲ್ಲಿ ಭಾರತ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ಯಾಟಿಂಗ್, ಬೌಲಿಂಗ್ ಜತೆ ಫೀಲ್ಡಿಂಗ್‌ನಲ್ಲಿಯೂ ಸೈ ಎನಿಸಿಕೊಂಡಿದ್ದ ಅಂಜುಮ್ ಭಾರತದ ಪರ 100 ಏಕದಿನ ಪಂದ್ಯವನ್ನಾಡಿದ ಹಾಗೂ ಏಕದಿನದಲ್ಲಿ 1,000 ಪೂರ್ತಿಗೊಳಿಸಿದ ಮೊದಲ ಆಟಗಾರ್ತಿ.
2012ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ಅಂಜುಂ 17 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 12 ಟೆಸ್ಟ್ ಪಂದ್ಯಗಳನಾಡಿದ್ದು, 4 ಅರ್ಧ ಶತಕ ಸಹಿತ 548 ರನ್ ಬಾರಿಸಿದ್ದಾರೆ. 127 ಏಕದಿನ ಪಂದ್ಯಗಳಿಂದ 1 ಶತಕ, 18 ಅರ್ಧ ಶತಕ ಸಹಿತ 2,856 ರನ್ ರಾಶಿ ಹಾಕಿದ್ದು, 18 ಟಿ20ಗಳಿಂದ 241 ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವವರ ಯಾದಿಯಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.
ರಾಜೀವ್ ಗಾಂಧಿ ಖೇಲ್‌ರತ್ನ, ಪದ್ಮಶ್ರೀ, ಅರ್ಜುನ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳಿಗೆ ಭಾಜನರಾಗಿರುವ ಅಂಜುಂ ಚೋಪ್ರಾ ವನಿತಾ ಕ್ರಿಕೆಟ್‌ಗೆ ನೀಡಿದ ಕೊಡುಗೆ ನಿಜಕ್ಕೂ ಸ್ಮರಣೀಯ.
-ಸುಶ್ಮಿತಾ ನೇರಳಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.