ದೇಶದ ಎಲ್ಲರ ಒಳಹೊಕ್ಕಿದೆ ಆತ್ಮನಿರ್ಭರ ಶಬ್ದ


Team Udayavani, Jun 13, 2022, 9:40 AM IST

ದೇಶದ ಎಲ್ಲರ ಒಳಹೊಕ್ಕಿದೆ ಆತ್ಮನಿರ್ಭರ ಶಬ್ದ

ಆತ್ಮನಿರ್ಭರ….
ಕಳೆದ ಮೂರು ನಾಲ್ಕು ವರ್ಷಗಳಿಂದ ಆತ್ಮನಿರ್ಭರ ಎಂಬ ಶಬ್ದ ಭಾರತ ದೇಶದ ಎಲ್ಲ ಭಾಷೆಗಳ ಒಳಹೊಕ್ಕಿದೆ. ಅದು ತೀರಾ ಹೊಸ ಶಬ್ದವೇನಲ್ಲ. ಬಿಡಿ ಬಿಡಿಯಾಗಿ ಹಿಂದಿನಿಂದಲೂ ಪ್ರಯೋಗಿಸಲಾದ ಪದವೇ. ಆದರೆ ಹೊಸ ಬಗೆಯ ಸೂಧಿರ್ತಿಯಿಂದ, ಹೊಸ ಸಂಯೋಜನೆಯಿಂದ ಅದನ್ನು ಬಳಸಲಾಯಿತು. ಮತ್ತೆ ಮತ್ತೆ ಪ್ರಯೋಗಿಸಿದಂತೆ ಅದಕ್ಕೆ ಬೇರೆ ಬೇರೆಯಾದ ಅರ್ಥದ ಛಾಯೆಗಳೂ ಬಂದು ಸೇರಿಕೊಂಡವು. ಇಂದು ಅದೊಂದು “ರಾಷ್ಟ್ರೀಯ’ ಪದ. ರಾಷ್ಟ್ರ ಮಟ್ಟದ ಪ್ರಯೋಗ ಭಾಗ್ಯವನ್ನು ಪಡೆದ ಪದ. ಈಗ ಅದರಲ್ಲಿ ರಾಷ್ಟ್ರದ ಘನತೆಯನ್ನು ಸಾರುವ, ಸಂಸ್ಕೃತಿಯನ್ನು ಪುನರ್‌ ಚಿಂತನೆಗೆ ವಸ್ತುವಾಗಿಸುವ ಶಕ್ತಿ ಕುದುರಿದೆ. ಪ್ರಧಾನಿ ನರೇಂದ್ರ ಮೋದಿ ಅದನ್ನು ಟಂಕಿಸಿದವರು. ಆ ಪದದ ಗರ್ಭದೊಳಗೆ ಮಗುವಾಗಿ ಮೈದಳೆಯುತ್ತ ಮಲಗಿರುವ ಭಾರತತ್ವ-ಭಾರತ ತತ್ತ್ವವನ್ನು ಹೊರಬೆಳಕಿಗೆ ತಂದವರು.

ಈ ಪದವನ್ನು ರಾಜಕಾರಣದ ಹಿನ್ನೆಲೆಯಿಂದ ಯೋಚಿಸಬೇಕಾ ಗಿಲ್ಲ. ಪಕ್ಷಗಳ, ಗುಂಪುಗಾರಿಕೆಯ, ರಾಜಕೀಯ ಚಿಂತನೆಗಳ ಪೂರ್ವಾಗ್ರಹದಿಂದ ಆಲೋಚನೆಗೆ ತೊಡಗಿದರೆ ಶಬ್ದದ ಬಹು ಮುಖೀಯಾದ ಅರ್ಥ ಸುಭಗತೆಯನ್ನು ಕಳೆದು ಕೊಳ್ಳಬೇಕಾಗು ತ್ತದೆ. ಈ ಎಚ್ಚರದಿಂದಲೇ ನಾನು ಪದಾರ್ಥ ಚಿಂತನೆಗೆ ತೊಡಗಿಕೊಂಡವನು. ರಾಷ್ಟ್ರದ ಚರಿತ್ರೆ ಮತ್ತು ಭಾಷೆಗಳ ಇತಿಹಾಸದ ಹಿನ್ನೆಲೆಯಿಂದ ಈ ಪ್ರಯೋಗವನ್ನು ಪರಾಂಬರಿಸುವ ಉತ್ಸಾಹ ನನ್ನದು.

ಆತ್ಮನಿರ್ಭರ ಎಂಬುದು ಸಮಸ್ತಪದ. ಅದರಲ್ಲಿ ಆತ್ಮ ಮತ್ತು ನಿರ್ಭರ ಎಂಬ ಎರಡು ಘಟಕಗಳಿವೆ. ಆತ್ಮ ಎಂಬ ಶಬ್ದ ನಾನಾರ್ಥಕ. ಆತ್ಮ ಎಂದರೆ ಚೇತನ, ಶರೀರ, ಇಂದ್ರೀಯ, ಪ್ರಾಣ, ಮನಸ್ಸು, ಬುದ್ಧಿ, ಅಹಂಕಾರ ಹೀಗೆ ಎಲ್ಲವೂ ಆಗಬಹುದು. ಬೇರೆ ಬೇರೆ ಸಂದರ್ಭಗಳಿಗೆ ಬೇರೆ ಬೇರೆ ಅರ್ಥಗಳು. ನಿರ್ಭರ ಎಂದರೆ ನೈರ್ಭರ್ಯವುಳ್ಳದ್ದು. ನೈರ್ಭರ್ಯ ಎಂದರೆ ಒತ್ತಾಸೆ, ಭರವಸೆ, ತಾತ್ಪರ್ಯ, ಆಧಿಕ್ಯ, ಅತಿಶಯ, ಕೌಶಲ, ಸಾಮರ್ಥ್ಯ ಇತ್ಯಾದಿ. ಇವುಗಳೆಲ್ಲ ಸುಮಾರು ಒಂದೇ ವಿಧವಾದ ಅರ್ಥಗಳು. “ನಿತರಾಂ ಭರಃ ಯಸ್ಯ’ ಎಂಬ ವ್ಯುತ್ಪತ್ತಿಯ ನೆಲೆಯಲ್ಲಿ ಈ ಅರ್ಥಗಳು ಹೊಂದುತ್ತವೆ. “ನಿರ್ಗತೋ ಭರೋ ಯಸ್ಮಾತ್‌’ ಎಂಬ ವ್ಯುತ್ಪತ್ತಿಯಂತೆ ಹೊರೆಯಿಲ್ಲದೆ ಹಾಯಾಗಿ ಇರುವಂಥದು ಎಂಬ ಅರ್ಥವು ದೊರಕುತ್ತದೆ.

ಆತ್ಮನಿರ್ಭರ ಎಂಬ ಸಮಾಸಕ್ಕೆ ಆತ್ಮನ ಮೇಲೆ ಭರವಸೆಯನ್ನು ಇಟ್ಟ, ತನ್ನನ್ನು ತಾನು ನಂಬಿದ, ತನ್ನನ್ನು ತಾನು ತುಂಬಿಸಿಕೊಂಡ, ತನ್ನನ್ನು ತಾನು ಅವಲಂಬಿಸಿದ, ತನ್ನ ವಿಷಯದಲ್ಲಿ ತಾನು ಶಕ್ತವಾದ ಮುಂತಾದ ಅರ್ಥಗಳು ಸುಧಿರಿಸುತ್ತವೆ. ಈ ಎಲ್ಲ ಅರ್ಥಗಳು ಭಾರತ ದೇಶಕ್ಕೆ ಅಕ್ಷರಾರ್ಥದಲ್ಲಿಯೂ ಹೊಂದಿಕೊಳ್ಳುತ್ತವೆ. ಆದುದರಿಂದಲೇ ನಮ್ಮದು ಆತ್ಮನಿರ್ಭರ ಭಾರತ’.
“ಆತ್ಮನಿರ್ಭರ ಭಾರತ’ ಎಂಬ ವಾಕ್ಯವನ್ನು ಮೊಟ್ಟ ಮೊದಲ ಸಲ ಕೇಳಿದಾಗ ರೋಮಾಂಚನದ ಸಂಚಲನವಾಯಿತು. ಮತ್ತೆ ಮತ್ತೆ ಕೇಳುತ್ತ, ಅರ್ಥವನ್ನು ಗ್ರಹಿಸುತ್ತ, ಭಾವಿಸುತ್ತ ಮುಂದುವರಿದಂತೆ ಪ್ರತ್ಯಭಿಜ್ಞಾನದ ಹರ್ಷೋತ್ಕರ್ಷ ಉಂಟಾಯಿತು. “ನಿರ್ಭರ ಭಾರತ’ ಎಂಬ ಸರಳ ಪ್ರಾಸದಿಂದ ಹುಟ್ಟಿದ ಸಂತಸ ಇದಲ್ಲ. ಭಾವಿಸುತ್ತ ಮುಂದುವರಿದಂತೆ ಎಲ್ಲ ಅಧ್ಯಾತ್ಮ ಸಿದ್ಧಾಂತಗಳನ್ನೂ, ಸಾಮಾಜಿಕ, ಆರ್ಥಿಕವಾದ ವಿಚಾರಗಳನ್ನೂ, ರಾಜಕೀಯ ಮುಂಧೋರಣೆಗಳನ್ನೂ ತನ್ನ ಒಡಲೊಳಗೆ ಅಡಗಿಸಿಕೊಳ್ಳುವ-ಅಡಕ ಮಾಡಿಕೊಳ್ಳುವ ಪದದ ಹೀಚು ಮತ್ತು ವರ್ಚಸ್ಸುಗಳು ಪ್ರಕಾಶಿತವಾದವು. ಅದರಿಂದ ನಮ್ಮ ಮನಸ್ಸು ಈ ಪದವನ್ನು ಒಪ್ಪಿತು; ಅಪ್ಪಿಕೊಂಡಿತು.

2019ರಲ್ಲಿ ಕೋವಿಡ್‌ ಕಾಣಿಸಿಕೊಂಡಿತು. ಒಬ್ಬರಿಂದ ಒಬ್ಬರಿಗೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಗಾಳಿ ಬೀಸಿದಂತೆ ಹರಡಿತು. ನೆಗಡಿ, ಕೆಮ್ಮು, ಕಫ, ಉಸಿರಾಟದ ತೊಂದರೆ, ಜ್ವರಗಳಿಂದ ಜನ ಬಳಲಿದರು. ಪ್ರತ್ಯೇಕ ಔಷಧಗಳು ಇಲ್ಲ. ಇರುವ ಔಷಧೋಪಚಾರಗಳು ವಿಫಲ. ಆಸ್ಪತ್ರೆಗಳು ತುಂಬಿದವು. ಲಕ್ಷಾಂತರ ಜನ ಸಾಯತೊಡಗಿದರು. ಸಂಪರ್ಕ ಮತ್ತು ಸೋಂಕುಗಳನ್ನು ತಪ್ಪಿಸಲು ಬೇರೆ ದಾರಿಗಳೇ ಇರಲಿಲ್ಲ.ಅನಿವಾರ್ಯವಾಗಿ ಲಾಕ್‌ಡೌನ್‌ಗಳು ಜಾರಿಯಾದವು. ವಿಶ್ವದ ಆರ್ಥಿಕ ಸ್ಥಿತಿ ಕುಸಿಯಿತು. ಬಡತನ ಬಂತು.

2020ರ ಫೆಬ್ರವರಿ- ಮಾರ್ಚ್‌ ನಡುವೆ ಮಹಾಮಾರಿ ಭಾರತದ ಒಳಗೆ ನುಗ್ಗಿ ದೇಶಾದ್ಯಂತ ಹರಡಲು ಆರಂಭಿಸಿತು. ಅಮೆರಿಕ, ಚೀನ, ಫ್ರಾನ್ಸ್‌, ಮೊದಲಾದ ಸುಸಜ್ಜಿತ ದೇಶಗಳೇ ಕಂಗಾಲಾಗಿ ಕೈಚೆಲ್ಲಿರುವ ಹೊತ್ತಿನಲ್ಲಿ ಅಪಾರ ಜನಸಂಖ್ಯೆ ಹೊಂದಿರುವ ಭಾರತ ದೇಶ ಇನ್ನೇನು ಮಾಡಲು ಸಾಧ್ಯ? ಸೋಂಕಿನ ಸ್ವರೂಪವೇ ಗೊತ್ತಿಲ್ಲ. ವೈರಾಣುಗಳ ಉತ್ಪತ್ತಿ, ಹರಡುವಿಕೆ, ನಾಶಗಳ ಬಗ್ಗೆ ಖಚಿತವಾದ ಅಧ್ಯಯನವಿಲ್ಲ, ಅರಿವಿಲ್ಲ. ಊಹಾಪೋಹಗಳ ಸರಮಾಲೆ, ಕೆಮ್ಮಿದರೆ ಸಾವಿನ ಭಯ. ನೆಗಡಿಯಾಗಿ ಉಸಿರು ಬಿಗಿ ಹಿಡಿದರೆ ಸಾವಿನ ಸಂಕಟ. ಇಂಥ ಮಹಾಭೀತಿಯ ಕಗ್ಗತ್ತಲೆಯ ಕಾಲದಲ್ಲಿ ನೂರಹತ್ತು ಕೋಟಿ ಭಾರತೀಯರಿಗೆ ಬದುಕಿನ ಆಸರೆಯಾಗಿ, ಆಶಾಜ್ಯೋತಿಯಾಗಿ ದೊರಕಿದ ಸಂಜೀವನ ಮಂತ್ರ “ಆತ್ಮನಿರ್ಭರ ಭಾರತ’.

ದೀರ್ಘ‌ಕಾಲದ ಲಾಕ್‌ಡೌನ್‌ಗಳು ಜನರಿಗೆ ಏಕಾಂತದ ಸಿದ್ಧತೆಗಳನ್ನು ಕಲಿಸಿದವು. ಬಹಿರಂಗಕ್ಕೆ ಕಡಿವಾಣ ಬಿತ್ತು. ಅಂತರಂಗ ತೆರೆಯಿತು. ಧ್ಯಾನ, ಜಪ, ಪ್ರಾರ್ಥನೆಗಳ ಹದವನ್ನು ಅವರ ಮನಸ್ಸು ಪಡೆಯಿತು. ತಮ್ಮ ಆರೋಗ್ಯಕ್ಕೆ ತಾವೇ ಹೊಣೆ ಎಂಬ ಆತ್ಮಪ್ರತ್ಯಯ ಬಲಿಯಿತು. ವೈದ್ಯರನ್ನೂ, ಆಸ್ಪತ್ರೆಗಳನ್ನೂ ನಂಬಿದರೆ ಏನೂ ಪ್ರಯೋಜನವಿಲ್ಲ -ಎಂದು ಅನಿಸಿತು. ಸುತ್ತ ಮುತ್ತ, ಅಕ್ಕಪಕ್ಕ ಸಿಕ್ಕ ವನಸ್ಪತಿಗಳಿಂದ ಕಷಾಯ ಸಿದ್ಧಪಡಿಸಿ ಕುಡಿದರು. ಸಿಕ್ಕಷ್ಟೇ ಆಹಾರ ಪದಾರ್ಥಗಳಿಂದ ದಿನ ಕಳೆದರು. ಆಯುರ್ವೇದ, ಯುನಾನಿಗಳು, ಅಡುಗೆ ಮನೆಯೊಳಗೆ ಹೊಕ್ಕವು. ದೇಶೀ ಪದ್ಧತಿ ಜೀವನ ವಿಧಾನ ಅನಿವಾರ್ಯವಾಗಿ, ಸಂಯಮ ಬಾಳಿನ ಎಲ್ಲ ಸ್ತರಗಳಲ್ಲಿ ಮೆರೆಯಿತು. ಲಸಿಕೆಗಳು ಸಿದ್ಧವಾದವು. ಆರು ತಿಂಗಳಿನ ಕಿರಿದಾದ ಅವಧಿಯಲ್ಲಿ ಜನರಿಗೆ ಲಸಿಕೆ ಹಾಕಿಸಿ ದೇಶ ಮಹಾಭಯದಿಂದ ಹೊರಗೆ ಬಂತು.

ಕೊರೊನಾವನ್ನು ಹಿಮ್ಮೆಟ್ಟಿಸುವ ಸಂಕೇತವಾಗಿ ದೇಶಾದ್ಯಂತ ದೀಪವನ್ನು ಬೆಳಗಿದರು. ದೀಪದಿಂದ ಕೋವಿಡ್‌ ಹಿಮ್ಮೆಟ್ಟಿರಲಾರದು. ಆದರೆ ಬೆಳಗಿಸಿದ ದೀಪ ಜನರ ಮನೋದಾಡ್ಯìವನ್ನು ಇಮ್ಮಡಿಸಿತು. ಸ್ವಸ್ಥವಾದ ಮನಸ್ಸು ದೇಹವನ್ನು ವಜ್ರವಾಗಿಸುತ್ತದೆ. ಕೋವಿಡ್‌ ಜತೆ ಜನತೆ ಬದುಕಲು ಸಿದ್ಧವಾಯಿತು!

“ಆತ್ಮನಿರ್ಭರ ಭಾರತ’ ಕೇವಲ ಘೋಷಣೆಯಲ್ಲ. ರಾಜಕಾರಣದ ಹುಸಿಯಾದ ಆಂದೋಲನ ಅಲ್ಲ. ತಾತ್ಕಾಲಿಕವಾದ ರಾಜಕೀಯ ಯೋಜನೆ ಅಲ್ಲ. ಭಾರತೀಯ ಸಂಸ್ಕೃತಿಯ ಪುನರ್ಭವ ಸೂತ್ರವದು. ಸಮಾಜದ ಸರ್ವಾಂಗೀಣ ಅಭ್ಯುದಯದ ಸರಣಿಯದು.

ದಕ್ಷಿಣ ಆಫ್ರಿಕಾದಲ್ಲಿ ಹೋರಾಟದ ಸೋಲು ಗೆಲುವುಗಳಿಂದ ಗಾಂಧೀಜಿಯವರ ಒಳಮನಸ್ಸಿನಲ್ಲಿ ಹೊಸದಾದ ಸೂಧಿರ್ತಿ ಬಂತು. ಅದು ದರ್ಶನವಾಗಿ ಆಕಾರವನ್ನು ಪಡೆಯಿತು. ಅದಕ್ಕೆ ಅವರು “ಸತ್ಯಾಗ್ರಹ’ ಎಂದು ಹೆಸರಿಟ್ಟರು. ಮೊದಮೊದಲು ಸತ್ಯಾಗ್ರಹ ಆಡಳಿತ ಯಂತ್ರವನ್ನು ಕಣ್ತೆರೆಸುವ ರಾಜಕೀಯ ಅಸ್ತ್ರವಾಗಿ ಬಳಸಲ್ಪಟ್ಟಿತು. ಮುಷ್ಕರ, ಹರತಾಳ, ಸಭೆ, ವಿರೋಧಿ ಘೋಷಣೆ, ಅಸಹಕಾರ, ಚಳವಳಿ ಮುಂತಾದವು ಅದರ ಬೇರೆ ಬೇರೆ ರೂಪಗಳಾಗಿ ಬೆಳೆದವು. ಜೀವನ ಇರುವುದು ಸತ್ಯಕ್ಕಾಗಿ. ಸತ್ಯದರ್ಶನ ಜೀವನದ ಗುರಿ. ಸತ್ಯದರ್ಶನವನ್ನು ತಾನೊಬ್ಬ ಪಡೆದರೆ ಸಾಲದು. ಉಳಿದವರೂ ಪಡೆಯು ವಂತಾಗಬೇಕು. ಉಳಿದವರ ಸತ್ಯದರ್ಶನವನ್ನು ಮೊದಲು ಪಡೆದವನ ಹೊಣೆ. ಅದಕ್ಕಾಗಿ ಆಗ್ರಹ ಅನಿವಾರ್ಯ. ಆಗ್ರಹ ಸತ್ಯಕ್ಕಾಗಿ. ಆದುದರಿಂದ ಆಗ್ರಹ ತಪ್ಪಲ್ಲ. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ತಾತ್ಕಾಲಿಕವಾದ ರಾಜಕೀಯ ಹೋರಾಟವಾಗಿ ಉಳಿಯದೆ ಜೀವನ ದರ್ಶನವಾಗುತ್ತದೆ; ಜೀವ ಮಾನದ ದರ್ಶನವಾಗುತ್ತದೆ. ಅದನ್ನೇ ಗಾಂಧೀಜಿಯವರು ಸಬರಮತಿ ಆಶ್ರಮದ ದಿನಚರಿಯವರೆಗೂ ವಿಸ್ತರಿಸಿದರು. ಸತ್ಯಾಗ್ರಹ ದರ್ಶನ ಪರ್ಯವಸಾಯಿಯಾದ ಜೀವನ ವಿಧಾನವೆ ಆಯಿತು. ಸತ್ಯದರ್ಶ ನದ ಕ್ರಿಯಾ ಮುಖ ವಿಸ್ತಾರದ ಒಂದು ಪರಿಯೇ ಆಯಿತು.

ಸತ್ಯದ ಬಿಡಿಯಾದ ಒಂದು ಕಿಡಿ ಅಸತ್ಯದ ಒಣಗಿದ ಬಣವೆಯನ್ನೇ ಸುಡುತ್ತದೆ. ಎಲ್ಲಿಯ ಸೂರ್ಯ ಮುಳುಗದ ಆಂಗ್ಲರ ಸಾಮ್ರಾಜ್ಯ! ಎಲ್ಲಿಯ ಗಾಂಧಿ. ಬ್ರಿಟಿಷರು ಸತ್ಯಾಗ್ರಹದ ಅಶಸ್ತ್ರಘಾತಕ್ಕೆ ಕಂಪಿಸಿದರು. ಪಾರತಂತ್ರ್ಯದ ಸಂಕೋಲೆಗಳು ಕಳಚಿದವು. ಹಲವು ದೇಶಗಳು ಸ್ವತಂತ್ರವಾದವು. ಗಾಂಧೀಜಿಯವರು ಕೊಟ್ಟ ಸತ್ಯಾಗ್ರಹದ ಮಾರ್ಗ ವಿಶ್ವದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತ್ಯಂತರಕ್ಕೆ ಕಾರಣ ವಾಯಿತು. “ಸತ್ಯಾಗ್ರಹ’ ಎಂಬ ಜೀವನದರ್ಶನ ಮತ್ತು ಜೀವನವಿಧಾನಗಳ ಮಾದರಿಯಲ್ಲಿಯೇ ವಿಶ್ವವನ್ನೂ, ಭಾರತವನ್ನೂ ಮುನ್ನಡೆಸಬಹುದಾದ ಸಿದ್ಧಾಂತವಾಗಿ ರೂಪು ಗೊಳ್ಳುವ ಅರ್ಹತೆ “ಆತ್ಮನಿರ್ಭರ’ ಎಂಬ ಪರಿಕಲ್ಪನೆಗೆ ಇದೆ. ಆದರೆ ಅದರ ಕ್ರಿಯಾ ಮುಖವಾದ ವಿಸ್ತಾರ ಇನ್ನು ಮೇಲೆ ರೂಪುಗೊಳ್ಳಬೇಕಷ್ಟೆ!
ತನ್ನನ್ನು ತಾನು ನಂಬುವುದು ಆತ್ಮವಿಶ್ವಾಸ. ತನ್ನನ್ನು ತಾನು ಅರಿಯುವುದು ಆತ್ಮಪ್ರತ್ಯಯ. ತನ್ನಲ್ಲಿ ತಾನು ನೆಲೆಗೊಳ್ಳುವುದು ಆತ್ಮಸ್ಥಿತಿ. ತನ್ನನ್ನು ತಾನು ತುಂಬಿಸಿಕೊಳ್ಳುವುದು ಆತ್ಮಭರಣ. ತನ್ನಲ್ಲಿ ತಾನು ಶ್ರದ್ಧೆಯಿಡುವುದು ಆತ್ಮನಿಷ್ಠೆ. ತನ್ನಿಂದ ತಾನು ಶಕ್ತನಾಗುವುದು ಆತ್ಮಶಕ್ತಿ. ತನ್ನಲ್ಲಿ ತಾನು ತೃಪ್ತನಾಗುವುದು ಆತ್ಮತೃಪ್ತಿ. ಇವುಗಳಲ್ಲಿ ಕೆಲವು ಆತ್ಮನಿರ್ಭರತೆಯೆ ಪೂರ್ವಾಂಗಗಳು; ಕೆಲವು ಉತ್ತರಾಂಗಗಳು; ಕೆಲವು ಅದರ ಪರಿಪಾಕದ ಪರಿಗಳು. ಇವುಗಳು ಇಲ್ಲದೆ ಆತ್ಮನಿರ್ಭರತೆ ಇಲ್ಲ; ಆತ್ಮನಿರ್ಭರತೆ ಇಲ್ಲದೆ ಇವುಗಳೂ ಇರಲಾರವು. ಆತ್ಮನಿರ್ಭರತೆ ಮೊದಲು ಮೈದಳೆಯುವುದು ವ್ಯಷ್ಟಿಯಲ್ಲಿ-ವ್ಯಕ್ತಿಯಲ್ಲಿ. ಅದು ಕೊನೆಯಲ್ಲಿ ನೆಲೆ ನಿಲ್ಲುವುದು ಸಮಷ್ಟಿಯಲ್ಲಿ-ಸಮಾಜದಲ್ಲಿ. ಸಮಷ್ಟಿಯ ಆತ್ಮನಿರ್ಭರತೆ ವ್ಯಷ್ಟಿಯ ಆತ್ಮನಿರ್ಭರತೆಗಳ ಮೊತ್ತವಲ್ಲ. ಅದು ಅದಕ್ಕಿಂತ ವ್ಯತಿರಿಕ್ತ- ವಿಲಕ್ಷಣ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆತ್ಮ ಸಂಬಂಧಿಯಾದ ಪಾತ್ರತ್ವವೇ ಆತ್ಮ ನಿರ್ಭರತೆ. ಎಲ್ಲದರ ಒಳಗಿದ್ದು; ಎಲ್ಲವನ್ನೂ ತನ್ನೊಳಗೆ ಮಾಡಿಕೊಂಡು, ಎಲ್ಲದರ ಆಚೆಗೂ ಇರುವ ವಸ್ತು ಆತ್ಮ. ಅದರ ಸಂಬಂಧದಿಂದ ಬರುವ ಪಾತ್ರತ್ವ ವಿಶ್ವಂಭರ ವ್ಯಕ್ತಿತ್ವ. ಇಂಥ ವ್ಯಕ್ತಿತ್ವದ ನಿರ್ಮಾಣವೇ ಭಾರತೀಯ ಸಂಸ್ಕೃತಿಯ ಪ್ರಯೋಗ ಮತ್ತು ಪರಿಣಾಮ. ಆತ್ಮಪ್ರತ್ಯಯ ಮತ್ತು ಆತ್ಮವಿಶ್ವಾಸಗಳು ಸೋತಾಗಲೆಲ್ಲ ಭಾರತ ಸೋತಿದೆ.

ಸಾವಿರಾರು ವರ್ಷಗಳ ಇತಿಹಾಸದಲ್ಲಿ ಶಕರು, ಹೂಣರು, ಯವನರು, ಪರ್ಷಿಯನ್ನರು, ಮುಸಲ್ಮಾನರು, ಬ್ರಿಟಿಷರು, ಪೋರ್ಚುಗೀಸರು, ಡಚ್ಚರು-ಹೀಗೆ ಅನೇಕ ವಿದೇಶಿಯರು ಭಾರತದ ಮೇಲೆ ದಂಡೆತ್ತಿ ಬಂದರು. ದೇಶವನ್ನು ಲೂಟಿ ಮಾಡಿದರು. ಕೆಲವರು ಆಕ್ರಮಿಸಿ ನೆಲೆನಿಂತರು. ಆತ್ಮಪ್ರತ್ಯಯ ತಲೆಯೆತ್ತಿ ನಿಂತಾಗ, ನಮ್ಮವರು ಅವರನ್ನು ಹಿಮ್ಮೆ ಟ್ಟಿಸಿದರು. ಇಲ್ಲಿಯೇ ಉಳಿದವರನ್ನು ನಮ್ಮ ಸಂಸ್ಕೃತಿಯಲ್ಲಿ ಕರಗಿಸಿ ಕೊಂಡರು. ವ್ಯಾಪಾರ ವಾಣಿಜ್ಯಗಳು ಜೀವನದ ಎಲ್ಲ ರಂಗಗಳಲ್ಲಿ ಆವರಿಸಿಕೊಂಡಾಗ ಆತ್ಮಭರಣ ಪ್ರಜ್ಞೆ ಮರೆಯಾಯಿತು. ಸ್ವಾವಲಂಬೀ-ಸ್ವದೇಶೀ ಸೂತ್ರಗಳು ಹಿಂದೆ ಬಿದ್ದವು.

ವಿದೇಶೀ ವ್ಯಾಪಾರಕ್ಕೆ ವಸ್ತುಗಳಿಗೆ ನಮ್ಮ ಗ್ರಾಮ ನಗರಗಳು ಅಂಗಡಿಯ ಮುಂಗಟ್ಟುಗಳಾದವು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಮತ್ತೆ ತಲೆಯೆತ್ತಿದ ಖಾದೀ, ಗ್ರಾಮೋದ್ಯೋಗ, ಗುಡಿಗಾರಿಕೆ, ಸ್ವದೇಶೀ ವಸ್ತು ಪ್ರೀತಿಗಳು ತಕ್ಕಮಟ್ಟಿಗೆ ಪ್ರತಿಭಟನೆಯನ್ನು ಮಾಡಿದವು. ನಮ್ಮ ಜೀವನ ವಿಧಾನ, ವಸ್ತುಗಳು, ವಿದ್ಯೆ, ವಿಜ್ಞಾನ, ಕಲೆ, ಕೌಶಲ, ಅಧ್ಯಾತ್ಮ, ಧರ್ಮ, ದೇವಾಲಯಗಳ ಬಗ್ಗೆ ಮೂಡಿದ ಆದರ, ಕಾಳಜಿ, ವಿಶ್ವಾಸಗಳು ಭಾರತೀಯತೆಯನ್ನು ಬೆಳಗಿಸುತ್ತ ಮುಂದುವರಿದಿವೆ. ಇಂಥ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ವೈಧಾನಿಕ ಸಂಘರ್ಷಗಳ ನೇತೃತ್ವವನ್ನು ವಹಿಸಿಕೊಂಡು ಭಾರತತ್ವವನ್ನು ಉಳಿ ಸುತ್ತ, ಬೆಳೆಸುತ್ತಿರುವ ಜೀವದ್ರವ ಆತ್ಮನಿರ್ಭರತೆಯೇ ಆಗಿದೆ.

ಹಣ ಮೆರೆಯುವಾಗ ಗುಣ ಸ್ಮರಣೆಗೆ ಬರಬೇಕು; ಸ್ವತ್ಛಂದತೆ ಕುಣಿಯುವಾಗ ಸಂಯಮವನ್ನು ಸ್ವಾಗತಿಸಬೇಕು; ಭೋಗದ ಬಯಕೆ ತಿವಿಯುವಾಗ ಯೋಗದ ತ್ವರೆ ಹುಟ್ಟಬೇಕು; ಅಪವ್ಯಯ ಅಡ್ಡೆಸುವಾಗ ತ್ಯಾಗ ನುಗ್ಗಬೇಕು; ಕ್ಷುದ್ರಕ್ಷುಲ್ಲಕಗಳು ಮೇಲೆದ್ದು ಬರುವಾಗ ಮಹತ್ತು ಆವರಿಸಬೇಕು ಇಂತಹ ಭಾರತೀಯತೆ ಬೆಳಗಬೇಕಾದರೆ ಆತ್ಮನಿರ್ಭರತೆ ಮೊಳಗಬೇಕು.

ಭಾರತದ ಅಧ್ಯಾತ್ಮವನ್ನು “ಆತ್ಮನಿರ್ಭರ’ ಎಂದೇ ಸೂತ್ರಿಸಬಹುದು. ಈ ದೇಶದಲ್ಲಿ ಅಧ್ಯಾತ್ಮ ಅಗಾಧವಾಗಿ ಬೆಳೆದಿದೆ. ಹತ್ತಾರು ದರ್ಶನಗಳು ತತ್ತ್ವ ಜ್ಞಾನಕ್ಕಾಗಿ ಪ್ರವೃತ್ತವಾಗಿವೆ. ಹಲವಾರು ಶಾಸ್ತ್ರಗಳು ಹಿತ ಮತ್ತು ಪುರುಷಾರ್ಥಗಳನ್ನು ಪ್ರಾಪ್ತಿಸಲು ಮಾರ್ಗಗಳಾಗಿ ಅಣಿಯಾಗಿವೆ. ಚಾರ್ವಾಕನಿಂದ ತೊಡಗಿ ಸುಶಿಕ್ಷಿತ ಬೌದ್ಧರ ವರೆಗಿನ ನಾಸ್ತಿಕದರ್ಶನಗಳಾಗಲಿ, ನ್ಯಾಯ ವೈಶೇಷಿಕದಿಂದ ಮೊದಲ್ಗೊಂಡು ಅದ್ವೈತದವರೆಗಿನ ಆಸ್ತಿಕ ದರ್ಶನಗಳಾಗಲಿ, ಆತ್ಮ ವಸ್ತುವನ್ನು ನಿರಾಕರಿಸಲಿಲ್ಲ. ಆತ್ಮ ಸ್ವರೂಪದ ಬಗ್ಗೆ ಅವುಗಳಲ್ಲಿ ವಿವಾದ, ಚರ್ಚೆ, ವಿರೋಧಗಳು ಇರಬಹುದು. ಆದರೆ ಎಲ್ಲ ದರ್ಶನಗಳ ತಾತ್ಪರ್ಯ ನಿಂತಿರುವುದು ಆತ್ಮ ಪದಾರ್ಥದಲ್ಲಿ. ಆತ್ಮ ಪುರುಷಾರ್ಥ ಆದುದರಿಂದ ಪ್ರಿಯ; ಉಳಿದ ಜಗತ್ತು ಆತ್ಮಸಂಬಂಧದಿಂದ ಪ್ರಿಯ. ಜಗತ್ತು ಸತ್ಯವಾಗಲಿ, ಮಿಥ್ಯೆಯಾಗಲಿ, ಮಾಯಿಕವಾಗಲಿ, ಶೂನ್ಯವಾಗಲಿ ಅದರಲ್ಲಿ ಒತ್ತಾಸೆಯಿಲ್ಲ, ನಂಬಿಕೆಯಿಲ್ಲ. ಬದುಕು ನೆಲೆ ನಿಲ್ಲುವುದು ಆತ್ಮನಲ್ಲಿ. ಇಹಪರಗಳು ಆತ್ಮನಿಗೇ. ಆತ್ಮನ ಮರೆವು ಸಂಸಾರ; ಆತ್ಮನ ಅರಿವು ಮುಕ್ತಿ. ಆತ್ಮನ ಇರವು ತತ್ತ್ವ. ಹೀಗೆ ಭಾರತದ ದರ್ಶನ ಕ್ಷೇತ್ರ ಆತ್ಮನಿರ್ಭರ.

ಹಿತ ಮತ್ತು ಪುರುಷಾರ್ಥಗಳನ್ನು ಸಾಧಕ ಪಡೆಯುವ ವಿಧಾನ ಆಧಿದೈವಿಕ. ಈಶ್ವರಾನುಗ್ರಹವಿಲ್ಲದೆ ತತ್ತ್ವ ದರ್ಶನವಿಲ್ಲ. ಅವನ ಅನುಗ್ರಹದಿಂದ ಸಾಧಕನಿಗೆ ಅದ್ವೈತವಾಸನಾ. ಪೂಜ್ಯ, ಪೂಜಕ ಮತ್ತು ಪೂಜಾ ಎಂಬ ತ್ರಿಕೂಟದಲ್ಲಿ ಪೂಜಕನೇ ಪ್ರಧಾನ. ಪೂಜ್ಯನಾದ ಭಗವಂತನಿಗೆ ಪೂಜೆಯ ಅಗತ್ಯವಿಲ್ಲ. ಅಗತ್ಯವಿರುತ್ತಿದ್ದರೆ ಅವನು ಪೂಜ್ಯನಾಗಬಹುದಾದರೂ ಭಗವಂತನಾಗುತ್ತಿರಲಿಲ್ಲ. ಪೂಜೆಯ ಫಲವಾದ ಯೋಗ-ಭೋಗಗಳು ಪೂಜಕನಿಗೆ-ಸಾಧಕನಿಗೆ. ಪೂಜೆ, ಧ್ಯಾನ, ತಪಸ್ಸುಗಳು ಪರ್ಯವಸಾನ ನಿರುಪಾಧಿಕವಾದ-ಶುದ್ಧವಾದ ಸ್ವಸ್ವರೂಪದ ಆವಿರ್ಭಾವದಲ್ಲಿ. ಆದುದರಿಂದ ಇವು ಆತ್ಮನಿರ್ಭರತೆ ಯಿಂದ ಉದಿಸುವ, ಅಲ್ಲಿಯೆ ಲಯಿಸುವ ಕ್ರಿಯೆಗಳಾಗಿವೆ.

ಚರಕ ಸಂಹಿತೆಯಲ್ಲಿ ಸ್ವಸ್ಥನ ಲಕ್ಷಣವನ್ನು ಹೀಗೆ ವಿವರಿಸಲಾಗಿದೆ:
ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ |
ಪ್ರಸನ್ನಾತೆ¾àಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ ||

ವಾತ, ಪಿತ್ತ ಮತ್ತು ಕಫ ಎಂಬ ದೋಷಗಳು ಸಮವಾಗಿರಬೇಕು. ದೇಹದಲ್ಲಿರುವ ಅಗ್ನಿಗಳು ಅನುದ್ವಿಗ್ನವಾಗಿರಬೇಕು; ಸಪ್ತಧಾತುಗಳು ಆವಿಕೃತವಾಗಿರಬೇಕು ; ವಿಸರ್ಜನೆ ಕಾಲಕಾಲಕ್ಕೆ ಸರಿಯಾಗಿರಬೇಕು; ದೇಹ ಇಂದ್ರಿಯ’ ಮನಸ್ಸುಗಳು ಪ್ರಸನ್ನವಾಗಿರಬೇಕು; ಅಂಥವನನ್ನು ಸ್ವಸ್ಥ ಎಂದು ಕರೆಯುತ್ತಾರೆ. ಸ್ವಸ್ಥನ ಈ ಲಕ್ಷಣಗಳೇ ಆತ್ಮನಿರ್ಭರನಲ್ಲೂ ಇರುತ್ತವೆ. ಆದರೆ ಜೀವಪ್ರಸನ್ನತೆ ಅಧಿಕವಾಗಿ ಸೇರಿಕೊಂಡಿರುತ್ತದೆ.

ಭಾರತ ಕಂಡರಸಿದ ಆತ್ಮನಿರ್ಭರತೆ ಒಂದು ಪರಮಾದರ್ಶ. ಅದು ಜೀವನದ ಅನನ್ಯ ಗುರಿ. ಅದನ್ನು ತಲುಪಿಸುವ ದಾರಿ ದೀರ್ಘ‌ವಾಗಿದೆ. ಅಲ್ಲಿ ಸುಗಮವಾಗಿ ಸಂಚರಿಸಲು ನಮ್ಮ ವಿದ್ಯೆ, ವಿಜ್ಞಾನ, ಕಲೆ, ಧರ್ಮ, ಸಮುದಾಚಾರಗಳನ್ನು ಕಾಲ ಕಾಲಕ್ಕೆ ಪರಿಷ್ಕರಿಸಿಕೊಳ್ಳಬೇಕು. ಅದಕ್ಕೆ ಉಚಿತವಾದ ಕ್ರಿಯಾವಿಸ್ತಾರವನ್ನು ರೂಪಿಸಿಕೊಳ್ಳಬೇಕು.
(ಲೇಖಕರು: ಖ್ಯಾತ ವಾಗ್ಮಿಗಳು, ಚಿಂತಕರು, ಯಕ್ಷಗಾನ ಅರ್ಥಧಾರಿಗಳು)

– ವಿದ್ವಾನ್‌ ಉಮಾಕಾಂತ ಭಟ್ಟ

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.