ಕುತೂಹಲ, “ಗಂಡು ಶಾಸಕಿ’, ಎಂವಿ ಪರಂಪರೆ
Team Udayavani, Dec 11, 2021, 5:40 AM IST
“ಮಾಂಸ, ರಕ್ತಗಳಿಂದ ಕೂಡಿದ ಇಂತಹ ಒಬ್ಬ ವ್ಯಕ್ತಿ ಇದ್ದನೆ?ಎಂದು ಮುಂದಿನ ಪೀಳಿಗೆಯವರಿಗೆ ಸಂಶಯ ಬರಬಹುದು’ ಎಂದು ಐನ್‌ಸ್ಟೈನ್ 1944ರಲ್ಲಿ ಗಾಂಧೀಜಿ ಬದುಕಿರುವಾಗಲೇ ಹೇಳಿದ್ದರು. ಲಂಚ, ಮದ್ಯ, ಇಸ್ಪೀಟ್, ಕ್ಲಬ್‌ನಿಂದ ದೂರವಿರುವ ಅಧಿಕಾರಿಗಳು ಮಾತ್ರ ಬೇಕು ಎನ್ನುತ್ತಿದ್ದ ಅಂಕೋಲಾದ ಶಾಸಕಿ ಅನಸೂಯ ಶರ್ಮ (1978 -83) ಅವರಂತಹವರನ್ನು ಶಾಸಕಾಂಗದಲ್ಲಿ ಈಗ ನಿರೀಕ್ಷಿಸಬಹುದೆ? “ಈ ನಾಲ್ಕೂ ದುರ್ಗುಣಗಳಿಲ್ಲ’ ಎಂದು ಹೇಳಿದ ಕೆ. ಆರ್. ಶೆಣೈಯವರಂತಹ ಅಧಿಕಾರಿಗಳು ಸರಕಾರದ ಉನ್ನತ ಹುದ್ದೆಗಳಲ್ಲಿರುವುದನ್ನು ಕಾರ್ಯಾಂಗದಲ್ಲಿ ಈಗ ಕಲ್ಪಿಸಿಕೊಳ್ಳಬಹುದೆ?
“ಮುಂದಿನ ತಲೆಮಾರು ಮಾಂಸ ಮತ್ತು ರಕ್ತದಿಂದ ಕೂಡಿದ ಇಂತಹ ವ್ಯಕ್ತಿ ಈ ಭೂಮಿಯ ಮೇಲೆ ನಡೆದಾಡಿಕೊಂಡಿದ್ದ ಎಂದು ನಂಬುವುದೂ ಕಷ್ಟವಾಗಬಹುದು’- ಸಾಪೇಕ್ಷ ಸಿದ್ಧಾಂತವನ್ನು ಶೋಧಿಸಿದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ (1879-1955) ಗಾಂಧೀಜಿ ಕುರಿತು ಆಡಿದ ಮಾತಿದು.
ಪುಣೆಯ ಆಗಾಖಾನ್ ಅರಮನೆಯಲ್ಲಿ ಕಸ್ತೂರ್ಬಾ 1944ರ ಫೆಬ್ರವರಿ 22ರಂದು ಮೃತ ಪಟ್ಟಾಗ ಕಾರ್ಯಕರ್ತರು ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ರಚಿಸಿಕೊಂಡು ರಚನಾತ್ಮಕ ಕೆಲಸ ನಡೆಸಲು ನಿಧಿ ಸಂಗ್ರಹಿಸಿದರು. ಗಾಂಧೀಜಿಯವರಿಗೆ 75ನೆಯ ಹುಟ್ಟುಹಬ್ಬ ವಾದ ಕಾರಣ 75 ಲ.ರೂ. ನಿಧಿ ಸಂಗ್ರಹಿಸಲು ಕಾರ್ಯಕರ್ತರು ಗುರಿ ಇರಿಸಿಕೊಂಡರು. ಇದುವೇ ಮೊದಲ ಬಾರಿ ಗಾಂಧೀಜಿ ಹುಟ್ಟುಹಬ್ಬ ಆಚರಿಸಿಕೊಂಡದ್ದು. ಹುಟ್ಟುಹಬ್ಬದ ಆಚರಣೆಗೆ ಅವರು ವಿರೋಧಿಯಾಗಿದ್ದರು. ಆಗ ಬಹುತೇಕ ಕಾಂಗ್ರೆಸ್ ನಾಯಕರು ಜೈಲುವಾಸಿಯಾದ ಕಾರಣ ಧನ ಸಂಗ್ರಹ ಗುರಿಯಂತೆ ಆಗದು ಎಂಬ ಭಾವನೆ ಇತ್ತಾದರೂ ಗುರಿ ಮೀರಿತು.
1944ರ ಅ. 2ರಂದು ಮಹಾರಾಷ್ಟ್ರದ ವಾರ್ಧಾದ ಸೇವಾಗ್ರಾಮ ಆಶ್ರಮದಲ್ಲಿ ದೇಶಭಕ್ತ ಉದ್ಯಮಿ ಜಮ್ನಾಲಾಲ್ ಬಜಾಜ್ ಪುತ್ರಿ ಮದಲಸಾ 75 ದೀಪಗಳನ್ನು ಬೆಳಗಿಸಲು ಯೋಜಿಸಿದರು. “ಸಾವಿರಾರು ಹಳ್ಳಿಗಳ ಜನರಿಗೆ ಆಹಾರ ಬೇಯಿಸಲು ಅಡುಗೆ ಎಣ್ಣೆ ಇಲ್ಲದಿರುವಾಗ ಅಲಂಕಾರಕ್ಕಾಗಿ ಇಷ್ಟೊಂದು ದೀಪವನ್ನು ಹಚ್ಚುವುದು ಅರ್ಥಹೀನ’ ಎಂದು ಮದಲಸಾರನ್ನು ತರಾಟೆಗೆ ತೆಗೆದುಕೊಂಡ ಗಾಂಧೀಜಿ, ದೀಪ ಹಚ್ಚುವ ಕಾರ್ಯಕ್ರಮ ರದ್ದುಗೊಳಿಸಿದರು. ಆಗ ಹೊರತಂದ ಸ್ಮರಣ ಸಂಚಿಕೆಯಲ್ಲಿ ಐನ್‌ಸ್ಟೈನ್ ಅಭಿಪ್ರಾಯವೂ ಇತ್ತು. ಈ ಪುಸ್ತಕವನ್ನು ಭಾರತ ಸರಕಾರ 2019ರಲ್ಲಿ ಗಾಂಧೀ -150ರ ಸಂದರ್ಭ ಆನ್‌ಲೈನ್‌ನಲ್ಲಿ ನೋಡಲು ಅವಕಾಶ ಮಾಡಿಕೊಟ್ಟಿದೆ. ಐನ್‌ಸ್ಟೈನ್ ಏಕೆ ಹಾಗೆ ಹೇಳಿದ್ದರೆಂಬುದು ಅರ್ಥವಾಗಬಹುದು.
“ನೀವು ಲಂಚ ತೆಗೆದುಕೊಳ್ಳಬಾರದು, ಮದ್ಯ ಪಾನ ಮಾಡಬಾರದು, ಇಸ್ಪೀಟು ಆಡಬಾರದು, ಕ್ಲಬ್‌ಗ ಹೋಗಬಾರದು’ – ಇದು ಯಾರೋ ಸಾಂಪ್ರದಾಯಿಕರು, ಸ್ಫೂರ್ತಿಯ ಭಾಷಣ ಮಾಡುವವರು, ಹಳೆಯ ಕಾಲದ ಗಾಂಧೀ ವಿಚಾರಧಾರೆಯವರು ನೀಡಿದ ಕರೆ ಅಲ್ಲ. ಉ.ಕ. ಜಿಲ್ಲೆಯ ಅಂಕೋಲಾ ಕ್ಷೇತ್ರದ (1978 -83) ಶಾಸಕಿಯಾಗಿದ್ದ ಅನಸೂಯ ಗಜಾನನ ಶರ್ಮ ಅವರು ವರ್ಗಾವಣೆ ಬಯಸಿದ ಸರಕಾರಿ ಅಧಿಕಾರಿಯೊಬ್ಬರಿಗೆ ಹಾಕಿದ್ದ ಷರತ್ತುಗಳಿವು.
ಬೇಡ್ತಿ, ಅಘನಾಶಿನಿ ನದಿಗೆ ಅಣೆಕಟ್ಟು ನಿರ್ಮಿ ಸುವ ಪ್ರಸ್ತಾವವನ್ನು ಸರಕಾರ ಅಂಗೀಕರಿಸಿದ ಸಂದರ್ಭ ವಿಧಾನಸಭೆಯಲ್ಲಿ ಗರ್ಜಿಸಿ ಯೋಜನೆ ನಿಲ್ಲಿಸುವಂತೆ ಮಾಡಿದ ಅನಸೂಯ ಶರ್ಮರಿಗೆ “ಗಂಡು ಶಾಸಕಿ’ ಎಂಬ ಕೀರ್ತಿ ಇದೆ. 40 ವರ್ಷಗಳ ಬಳಿಕವೂ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣ ಸಮಿತಿ ಸಕ್ರಿಯವಾಗಿದೆ.
ಅನಸೂಯರನ್ನು ಭೇಟಿಯಾದವರು, ನಾಲ್ಕೂ ಷರತ್ತುಗಳು ಈಗಾಗಲೇ ನನ್ನಲ್ಲಿವೆ ಎಂದವರು ಕೆ.ರತ್ನಾಕರ ಶೆಣೈ. ದಿವಾನರಾಗುವ ಮೊದಲು ಸರ್ ಎಂ.ವಿಶ್ವೇಶ್ವರಯ್ಯ ಕುಳಿತಿದ್ದ ರಾಜ್ಯದ ಮುಖ್ಯ ಎಂಜಿನಿಯರ್ ಸ್ಥಾನವನ್ನು ಮುಂದೊಂದು ದಿನ ಶೆಣೈ ಅಲಂಕರಿಸಿದರು. “ನಾನು ಮಣಿಪಾಲ ಎಂಐಟಿಯಲ್ಲಿ ಓದು ಮುಗಿಸಿದ (ಎರಡನೆಯ ಬ್ಯಾಚ್ 1958-61) ತತ್‌ಕ್ಷಣ ಕೆಲಸಕ್ಕೆ ಸೇರುವಾಗ ಕಾಪು ಗೋವಿಂದ ಶೆಟ್ಟಿಯವರಂತಹ ಕರ್ಮಣ್ಯೇವಾಧಿಕಾರಾಸ್ಥೆ.. ಎಂಬಂತೆ ಬದುಕುತ್ತಿದ್ದ ಹಿರಿಯ ಅಧಿಕಾರಿ ಗಳು, ಸಂಸ್ಕಾರ ಕೊಟ್ಟ ತಂದೆ, ತಾಯಿ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವಕಾಶ ಕಲ್ಪಿಸಿದ ಡಾ| ಟಿಎಂಎ ಪೈ, ಎಂಜಿಎಂ ಕಾಲೇಜಿನಲ್ಲಿದ್ದ ಪ್ರೊ| ಬಿ.ವಿ.ಆಚಾರ್, ಪ್ರೊ| ಯು.ಎಲ್. ಆಚಾರ್‌ರಂತಹ ಶಿಕ್ಷಕರು ಈ ಪ್ರಾತಃಸ್ಮರಣೀಯರೇ ನನ್ನ ಜೀವನದ ಪಂಚಾಂಗ’ ಎನ್ನುತ್ತಾರೆ ಶೆಣೈ.
1980-81ರಲ್ಲಿ ಶ್ರವಣಬೆಳಗೊಳದ ಗೊಮ್ಮ ಟೇಶ್ವರನ ಸಹಸ್ರಮಾನ, 1992ರ ಮಹಾ ಮಸ್ತಕಾಭಿಷೇಕದ ಹೊಣೆಗಾರಿಕೆ ನಿರ್ವಹಿಸಿದ ಶೆಣೈಯವರು ರಾಜ್ಯದ ಮುಖ್ಯ ಎಂಜಿನಿಯರ್ ಆಗಿ 1998ರಲ್ಲಿ ನಿವೃತ್ತಿಯಾದ ಬಳಿಕ ಕೇಂದ್ರ ಸರಕಾರದ ಇಂಡಿಯನ್ ನ್ಯಾಶನಲ್ ಟ್ರಸ್ಟ್ ಆಫ್ ಆರ್ಟ್ ಆ್ಯಂಡ್ ಕಲ್ಚರ್ ಹೆರಿಟೇಜ್ (ಇಂಟೇಕ್) ಮೂಲಕ ಮೂಡಬಿದಿರೆ ಸಾವಿರಕಂಬದ ಬಸದಿ, ಉಳ್ಳಾಲದ ಜೈನಮಂದಿರ, ಬನವಾಸಿಯಲ್ಲಿ ಹೂತುಹೋಗಿದ್ದ ನಾಲ್ಕು ದೇವಸ್ಥಾನಗಳ ಉತVನನ, ಬಾರಕೂರಿನ ಪಂಚಲಿಂಗೇಶ್ವರ, ಮಣಿಗಾರ ಕೇರಿ, ಚೌಳಿಕೇರಿ, ಮೂಡುಕೇರಿ ದೇವಸ್ಥಾನಗಳಿಗೆ ಮರುಜೀವ ಕೊಟ್ಟರು.
ಅನಸೂಯರಿದ್ದ 1980ರ ದಶಕವೆಂದರೆ ಬಹಳ ಹಿಂದಿನ ಕಾಲವಲ್ಲ. ಯಾವುದೇ ಅಧಿಕಾರಿ ಈಗೇನಾದರೂ ವರ್ಗಾವಣೆ ಕೋರಿದರೆ ಇಂತಹ ಷರತ್ತುಗಳನ್ನು ಕೇಳುವ ಸ್ಥಿತಿಯಲ್ಲಿ ಶಾಸಕರು ಇದ್ದಾರೆಯೋ? ಅಥವಾ ಇಂತಹ ಗುಣಗಳುಳ್ಳ ಅಧಿಕಾರಿಗಳು ಸಚಿವರು, ಮುಖ್ಯಮಂತ್ರಿಗಳಿಗೆ ಬೇಕೋ? ಆಳುವವರಿಗೆ ಇಂತಹವರು ಬೇಡವಾದರೆ ಆಡಳಿತದಿಂದ ಎಂತಹ ಆಡಳಿತ ನಿರೀಕ್ಷಿಸಲು ಸಾಧ್ಯ?
ಅನಸೂಯರ ಷರತ್ತುಗಳನ್ನು ಸುಲಭದಲ್ಲಿ ಸ್ವೀಕರಿಸುವ ಧೈರ್ಯ ಶೆಣೈಯವರಿಗೆ ಇತ್ತು, ನಿವೃತ್ತಿಯಾಗುವವರೆಗೂ ಇತ್ತು. ನಿವೃತ್ತಿ ಅನಂತರ ಪುನರುತ್ಛರಿಸುವ ಧೈರ್ಯವೂ ಇದೆ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಯಿಂದ ಹಂತ ಹಂತವಾಗಿ ಮೇಲೇರಿ ಮುಖ್ಯ ಎಂಜಿನಿಯರ್ ಆದವರು ಕೆಲವು ಮಂದಿ ಇರಬಹುದು. ನಾಲ್ಕು ಷರತ್ತುಗಳಲ್ಲಿ ಕೊನೆಯ ಮೂರನ್ನಾದರೂ ಪಾಲಿಸುವವರಿರಬಹುದು, ಮೊದಲ ಷರತ್ತನ್ನು ಪಾಲಿಸುವವರಿದ್ದರೆ..?
ಗಾಂಧೀಜಿ, ಐನ್‌ಸ್ಟೈನ್, ಅನಸೂಯ ಶರ್ಮ ಈಗಿಲ್ಲ. ಶೆಣೈಯವರಂತಹವರು ಈಗ ಅಧಿಕಾರದಲ್ಲಿದ್ದಾರೋ ಎಂಬ ಪ್ರಶ್ನೆ ಬರಬಹುದು. 81ರ ಶೆಣೈ ಉತ್ತಮ ಆರೋಗ್ಯ ದೊಂದಿಗೆ, ಅಮೆರಿಕದ ವೇತನ ಬೇಡ ಭಾರತದ ವೇತನ ಸಾಕೆಂದು ನೆಲೆಸಿದ ಪುತ್ರನ ಜತೆ ಉಡುಪಿ ಇಂದ್ರಾಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.