ಡಿಪ್ರೆಶನ್ ನಲ್ಲಿದ್ದ ದಿನೇಶ್ ಕಾರ್ತಿಕ್ ‘ಮಿಸ್ಟರ್ ಫಿನಿಶರ್’ ಆದ ಕಥೆ; ಇದು ಲವ್ ಸ್ಟೋರಿಯಲ್ಲ
ಕೀರ್ತನ್ ಶೆಟ್ಟಿ ಬೋಳ, Sep 29, 2022, 5:00 PM IST
ಅದು 2022ರ ಐಪಿಎಲ್ ನ ಮೆಗಾ ಹರಾಜು ಕಾರ್ಯಕ್ರಮ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಆ ಒಂದು ವಿಚಾರಕ್ಕೆ ಕಾತರದಿಂದ ಕಾಯುತ್ತಿದ್ದರು. ಹಲವು ವರ್ಷಗಳಿಂದ ತಂಡದ ಆಧಾರ ಸ್ತಂಭವಾಗಿದ್ದ ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಅವರ ಬದಲಿಗೆ ಯಾರನ್ನು ಖರೀದಿ ಮಾಡುತ್ತಾರೆ ಎಂಬ ಕುತೂಹಲ ಆರ್ ಸಿಬಿ ಅಭಿಮಾನಿಗಳಿಗಿತ್ತು. ಎಬಿಡಿ ಸ್ಥಾನ ತುಂಬುವುದು ಎಂದರೆ ಸುಲಭದ ಮಾತಲ್ಲ. ಮಧ್ಯಮ ಕ್ರಮಾಂಕದಲ್ಲಿ ಆಡಬೇಕು, ಸ್ಫೋಟಕವಾಗಿ ಆಡುವ ತಾಕತ್ತು ಇರಬೇಕು, ಕೊನೆಯಲ್ಲಿ ತಂಡವನ್ನು ಗೆಲ್ಲಿಸುವ ಶಕ್ತಿ ಇರಬೇಕು, ಜೊತೆಗೆ ವಿಕೆಟ್ ಕೀಪರ್ ಕೂಡಾ ಆಗಿರಬೇಕು. ಆದರೆ ಹರಾಜಿನಲ್ಲಿ ಫ್ರಾಂಚೈಸಿ ಖರೀದಿ ಮಾಡಿದ ಹೆಸರು ನೋಡಿದ ಅಭಿಮಾನಿಗಳು ಬೇಸರಗೊಂಡಿದ್ದರು, ಈ ವಯಸ್ಸಾದವನು ಯಾಕೆ ಎಂದು ಮಾತನಾಡಿಕೊಂಡಿದ್ದರು. ಅಂದು ಬರೋಬ್ಬರಿ 5.5 ಕೋಟಿ ರೂ. ಗೆ ಬೆಂಗಳೂರು ಪಾಳಯ ಸೇರಿದ್ದ ಆ ‘ವಯಸ್ಸಾದವ’ ಬೇರಾರು ಅಲ್ಲ, ಅವರೇ ಸದ್ಯ ಟೀಂ ಇಂಡಿಯಾ ‘ಮಿಸ್ಟರ್ ಫಿನಿಶರ್’ ದಿನೇಶ್ ಕಾರ್ತಿಕ್.
ಬದುಕು ಸದಾ ಏರಿಳಿತಗಳ ಹಾದಿ. ಅಲ್ಲಿ ಸದಾ ಸವಾಲುಗಳು ಎದುರಾಗುತ್ತವೆ. ಆದರೆ ದಿನೇಶ್ ಕಾರ್ತಿಕ್ ರ ಜೀವನ ಇಂತಹ ಏರಿಳಿತಗಳ ಆಗರ. ಜೀವನದ ಕಷ್ಟವೆಲ್ಲಾ ತನಗೆ ಯಾಕೆ ಎಂದು ಕೊರಗಿ ಕಂಠಪೂರ್ತಿ ಮದ್ಯ ಕುಡಿದು ಬಿದ್ದಿದ್ದ ದಿನೇಶ್ ಇಂದು ಭಾರತೀಯ ತಂಡದ ಪ್ರಮುಖ ಸದಸ್ಯ ಆಗಿದ್ದಾನೆಂದರೆ ಅದು ಸುಲಭದ ಮಾತಲ್ಲ.
ಅದು 2004. ಚಿಗುರು ಮೀಸೆಯ ಹುಡುಗ ದಿನೇಶ್ ಕಾರ್ತಿಕ್ ಭಾರತೀಯ ತಂಡಕ್ಕೆ ವಿಕೆಟ್ ಕೀಪರ್ ಆಗಿ ಪದಾರ್ಪಣೆ ಮಾಡಿದ್ದ. ಆದರೆ ಕೆಲ ಸಮಯದ ಬಳಿಕ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಎಂಬ ಸುಂಟರಗಾಳಿ ಬಂದಾಗ ಅವನೆದುರು ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ದೇಶಿಯ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ ಕಾರ್ತಿಕ್ 2007ರಲ್ಲಿ ಟೆಸ್ಟ್ ತಂಡಕ್ಕೆ ಆರಂಭಿಕರಾಗಿ ಆಯ್ಕೆಯಾಗಿದ್ದರು.
Years have passed but playing for ?? has still got that special feeling! pic.twitter.com/15OqoME0dK
— DK (@DineshKarthik) September 5, 2022
ಅದು 2007ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ. ವಾಸಿಂ ಜಾಫರ್ ಜೊತೆ ಆರಂಭಿಕರಾಗಿ ದಿನೇಶ್ ಕಾರ್ತಿಕ್. ಆ ಸರಣಿಯಲ್ಲಿ ಉತ್ತಮವಾಗಿ ಆಡಿದ ಕಾರ್ತಿಕ್ ನಾಲ್ಕು ಪಂದ್ಯಗಳಲ್ಲಿ 263 ರನ್ ಗಳಿಸಿದ್ದರು. ಭಾರತದ ಪರ ಆ ಸರಣಿಯಲ್ಲಿ ಕಾರ್ತಿಕ್ ರದ್ದೇ ಹೆಚ್ಚಿನ ಗಳಿಕೆ. ಆದರೆ ನಂತರ ಅದೇ ವರ್ಷ ಭಾರತದಲ್ಲಿ ನಡೆದ ಪಾಕಿಸ್ಥಾನ ಎದುರಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಕಾರ್ತಿಕ್ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಆ ವರ್ಷ ನಡೆದ ಏಕದಿನ ಮತ್ತು ಟಿ20 ವಿಶ್ವಕಪ್ ನಲ್ಲಿ ಆಡಿದರೂ ಕಾರ್ತಿಕ್ ತಂಡದ ಖಾಯಂ ಸದಸ್ಯನಾಗಿರಲಿಲ್ಲ. ಇದೇ ವೇಳೆ ಒಂದು ಘಟನೆ ನಡೆದಿತ್ತು, ಅದುವೇ ಬಾಲ್ಯದ ಗೆಳತಿ ಜೊತೆಗೆ ಕಾರ್ತಿಕ್ ಮದುವೆ!
2007ರಲ್ಲಿ ಗೆಳತಿ ನಿಖಿತಾ ಜೊತೆಗೆ ಕಾರ್ತಿಕ್ ಹೊಸ ಜೀವನ ಆರಂಭಿಸಿದ್ದರು. ಆ ಸಮಯದಲ್ಲಿ ಕಾರ್ತಿಕ್ ತಮಿಳುನಾಡು ರಣಜಿ ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ಅವರ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರುತ್ತಾರೆ. ಆಗ ತಮಿಳುನಾಡು ತಂಡದ ಆಟಗಾರ, ನಂತರ ಭಾರತ ತಂಡದ ಆಡಿದ ಆರಂಭಿಕ ಆಟಗಾರ ಮುರಳಿ ವಿಜಯ್.
ಇತ್ತ ದಿನೇಶ್ ಕಾರ್ತಿಕ್ ಗೆ ವಿವಾಹದ ಬಳಿಕ ಭಾರತೀಯ ತಂಡದಲ್ಲಿ ಅವಕಾಶ ಕಡಿಮೆಯಾಯ್ತು. ಅತ್ತ ಮುರಳಿ ವಿಜಯ್ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುತ್ತಿದ್ದ. ಈ ಸಮಯದಲ್ಲಿ ವಿಜಯ್ ಗೂ ಕಾರ್ತಿಕ್ ಪತ್ನಿ ನಿಖಿತಾಗೂ ಪ್ರೇಮಾಂಕುರವಾಗಿತ್ತು. ಹೌದು, ತಮಿಳುನಾಡು ರಣಜಿ ತಂಡದ ಕ್ಯಾಪ್ಟನ್ ನ ಪತ್ನಿ ಅದೇ ತಂಡದ ಆಟಗಾರನೊಬ್ಬನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಇದು ಎಷ್ಟು ಮಂದುವರಿದಿತ್ತು ಎಂದರೆ ತಮಿಳುನಾಡು ತಂಡದ ಎಲ್ಲಾ ಆಟಗಾರರಿಗೆ ಇದು ತಿಳಿದಿತ್ತು. ಆದರೆ ತನ್ನ ಬೆನ್ನ ಹಿಂದೆ ಇಷ್ಟೆಲ್ಲಾ ಆಗುತ್ತಿದ್ದರೂ ಕಾರ್ತಿಕ್ ಗೆ ಇದ್ಯಾವುದೂ ಗೊತ್ತಿರಲಿಲ್ಲ.
ಅದು 2012, ಪರಿಸ್ಥಿತಿ ಮತ್ತಷ್ಟು ಹಳಸಿತ್ತು. ನಿಖಿತಾ ಗರ್ಭಿಣಿಯಾಗಿದ್ದರು. ಆದರೆ ಒಂದು ವಿಚಾರ ಕೇಳಿ ದಿನೇಶ್ ಗೆ ಆಕಾಶವೇ ತಲೆಗೆ ಬಿದ್ದ ಅನುಭವ. ತನ್ನ ಪತ್ನಿಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎಂದು ದಿನೇಶ್ ಗೆ ಗೊತ್ತಾಗಿತ್ತು. ಆಗಲೇ ಅವರಿಗೆ ಈ ಮುರಳಿ ವಿಜಯ್ ಕಥೆ ಗೊತ್ತಾಗಿದ್ದು. ದಿನೇಶ್ ಡಿವೋರ್ಸ್ ನೀಡಿದರು. ದಿನೇಶ್ ರಿಂದ ವಿಚ್ಛೇದನ ಪಡೆದ ಮರುದಿನವೇ ನಿಖಿತಾ- ವಿಜಯ್ ವಿವಾಹ ನಡೆದಿತ್ತು! ಇದಾಗಿ ಮೂರು ತಿಂಗಳಲ್ಲಿ ನಿಖಿತಾ ಮಗುವಿಗೆ ಜನ್ಮ ನೀಡಿದ್ದರು. ಇತ್ತ ದಿನೇಶ್ ಕಾರ್ತಿಕ್ ಇದೆಲ್ಲವನ್ನು ಅರಗಿಸಿಕೊಳ್ಳಲಾಗದೆ ಕುಸಿದು ಹೋಗಿದ್ದರು.
ವೈಯಕ್ತಿಕ ಬದುಕಿನ ಈ ಆಘಾತದಿಂದ ತತ್ತರಿಸಿ ಹೋಗಿದ್ದ ಕಾರ್ತಿಕ್ ಡಿಪ್ರೆಶನ್ ಗೆ ಒಳಗಾಗಿದ್ದರು. ಭಾರತ ತಂಡದಲ್ಲೂ ಸ್ಥಾನವಿಲ್ಲ. ದೇಶಿಯ ಕ್ರಿಕೆಟ್ ನಲ್ಲೂ ಪ್ರದರ್ಶನ ಕಡಿಮೆಯಾಗಿತ್ತು. ತಮಿಳುನಾಡು ತಂಡದ ನಾಯಕತ್ವವೂ ಕೈ ತಪ್ಪಿತು. ಅದು ಸಿಕ್ಕಿದ್ದು ಮತ್ತದೇ ಮುರಳಿ ವಿಜಯ್ ಗೆ. ಐಪಿಎಲ್ ನಲ್ಲೂ ವೈಫಲ್ಯ ಅನುಭವಿಸಿದರು. ಪತ್ನಿ ಮತ್ತು ಗೆಳೆಯನ ಮೋಸವನ್ನು ಮರೆಯಲಾಗದ ಕಾರ್ತಿಕ್ ಕುಡಿತದ ಮೊರೆ ಹೋದರು. ಪ್ರಾಕ್ಟಿಸ್ ಗೆ ಹೋಗುವುದನ್ನು ಕಡಿಮೆ ಮಾಡಿದರು. ಜಿಮ್ ಮರೆತರು.
ಮನೆ ಬಿಟ್ಟು ಬಾರದ ದಿನೇಶ್ ಕುರಿತು ಮಾಹಿತಿ ತಿಳಿದ ಅವರ ಜಿಮ್ ಟ್ರೈನರ್ ಮನೆಗೆ ಬಂದು ಮನವೊಲಿಸಿದರು. ಹಲವು ಪ್ರಯತ್ನಗಳ ಬಳಿಕ ದಿನೇಶ್ ಕೊನೆಗೂ ಜಿಮ್ ಗೆ ಬಂದಿದ್ದರು. ಇದೇ ಜಿಮ್ ಗೆ ಬರುತ್ತಿದ್ದ ‘ಆಕೆ’ ಯು ಇದನ್ನು ಗಮನಿಸಿದಳು. ಜಿಮ್ ಟ್ರೈನರ್ ನಿಂದ ಮಾಹಿತಿ ಪಡೆದ ಆಕೆ ದಿನೇಶ್ ನೆರವಿಗೆ ನಿಂತಳು. ಆಕೆ ಬೇರಾರು ಅಲ್ಲ, ಭಾರತದ ಸ್ಕ್ವಾಶ್ ಚಾಂಪಿಯನ್ ದೀಪಿಕಾ ಪಳ್ಳಿಕಲ್.
ತರಬೇತುದಾರ ಹಾಗೂ ದೀಪಿಕಾ ಅವರ ಶ್ರಮ ಫಲ ನೀಡತೊಡಗಿತು. ಈಗ ದಿನೇಶ್ ಕಾರ್ತಿಕ್ ಸುಧಾರಣೆಯ ಹಾದಿಯಲ್ಲಿದ್ದರು. ಮತ್ತೊಂದೆಡೆ, ಮುರಳಿ ವಿಜಯ್ ಅವರ ಪ್ರದರ್ಶನ ಕಳಪೆಯಾಗ ತೊಡಗಿತು. ಭಾರತ ತಂಡದಿಂದ ಹೊರಬಿದ್ದ ವಿಜಯ್ ಅವರನ್ನು ಐಪಿಎಲ್ ನಲ್ಲೂ ಅವಕಾಶ ಕಳೆದುಕೊಂಡರು. ದೀಪಿಕಾ ಪಳ್ಳಿಕಲ್ ಬೆಂಬಲದೊಂದಿಗೆ ದಿನೇಶ್ ಕಾರ್ತಿಕ್ ನೆಟ್ ನಲ್ಲಿ ತೀವ್ರ ಅಭ್ಯಾಸ ಪ್ರಾರಂಭಿಸಿದರು. ಗೆಳೆಯ ಅಭಿಷೇಕ್ ನಾಯರ್ ಕೂಡಾ ನೆರವಿಗೆ ಬಂದರು. ಇದರ ಪರಿಣಾಮ ಕಾಣಿಸಲಾರಂಭಿಸಿತು. ದಿನೇಶ್ ಕಾರ್ತಿಕ್ ದೇಶೀಯ ಕ್ರಿಕೆಟ್ ನಲ್ಲಿ ದೊಡ್ಡ ಸ್ಕೋರ್ ಗಳನ್ನು ಮಾಡಲು ಪ್ರಾರಂಭಿಸಿದರು. ಮತ್ತೆ ಐಪಿಎಲ್ ಗೆ ಆಯ್ಕೆಯಾದ ದಿನೇಶ್, ಮೊದಲು ಗುಜರಾತ್ ಲಯನ್ಸ್, ನಂತರ ಕೆಕೆಆರ್ ಗೆ ಆಡಿದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಕೂಡಾ ಆಡಿದರು.
ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಂತ ದೀಪಿಕಾ ಜೊತೆ ದಿನೇಶ್ ವಿವಾಹವಾದರು. 2018ರಲ್ಲಿ ಮತ್ತೆ ಟೀಂ ಇಂಡಿಯಾಗೆ ಆಯ್ಕೆಯಾದ ದಿನೇಶ್ ನಿದಹಾಸ್ ಟ್ರೋಫಿ ಫೈನಲ್ ನಲ್ಲಿ ಎಂದೂ ಮರೆಯಲಾಗದ ಇನ್ನಿಂಗ್ ಆಡಿದರು. ಧೋನಿ ನಿವೃತ್ತಿಯ ದಿನಗಳು ಹತ್ತಿರ ಬರುತ್ತಿದ್ದಂತೆ ದಿನೇಶ್ ಗೆ ಅವಕಾಶ ನೀಡಲಾಯಿತು. 2019ರ ವಿಶ್ವಕಪ್ ನಲ್ಲೂ ಆಡಿದರು. ಆದರೆ ಮತ್ತೆ ಅವಕಾಶ ಸಿಗಲಿಲ್ಲ. 2020ರಲ್ಲಿ ಸೀಸನ್ ನಡುವೆ ಕೆಕೆಆರ್ ನಾಯಕತ್ವ ತೊರೆಯಬೇಕಾಯಿತು. ತಂಡವೂ ಕೈಬಿಟ್ಟಿತು. ಆದರೆ ನಂತರ ನಡೆದಿದ್ದು ಮಾತ್ರ ಒಂದು ಅದ್ಭುತ.
Dreams do come true ?
— DK (@DineshKarthik) September 12, 2022
ಬರೋಬ್ಬರಿ 5.5 ಕೋಟಿ ರೂ. ಗೆ ಆರ್ ಸಿಬಿ ಕ್ಯಾಂಪ್ ಸೇರಿದ 37 ವರ್ಷದ ದಿನೇಶ್ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದರು. ಅದಕ್ಕೂ ಮಿಗಿಲಾಗಿ ಅದ್ಭುತ ಸ್ಟ್ರೈಕ್ ರೇಟ್ ನಲ್ಲಿ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡರು. ಕೊನೆಯ ಎರಡು ಓವರ್ ನಲ್ಲಿ ಎಷ್ಟು ರನ್ ಇದ್ದರೂ ಕಾರ್ತಿಕ್ ಗಳಿಸುತ್ತಾರೆ ಎಂಬ ಧೈರ್ಯವನ್ನು ಅಭಿಮಾನಿಗಳಲ್ಲಿ ತುಂಬಿದರು. ಸದ್ಯ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿರುವ ಅವರು ಮುಂದಿನ ಟಿ20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ. ಇದು ಕಾರ್ತಿಕ್ ಗೆಲುವು. ಇದು ನಿರಾಶೆಯ ಪಾತಾಳದಿಂದ ಆತ್ಮವಿಶ್ವಾಸದ ಶಿಖರವೇರಿದ ಹಿಂದಿನ ಸತತ ಪ್ರಯತ್ನದ ಗೆಲುವು.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.