ಅಷ್ಟಾವಕ್ರನೂ ಅಂಬಿಕಾತನಯದತ್ತರೂ…
Team Udayavani, Feb 19, 2022, 11:15 AM IST
ಮೊದಲ ಚಿತ್ರ ದ.ರಾ.ಬೇಂದ್ರೆಯವರದ್ದು. ಇನ್ನೊಬ್ಬರು ಬೇಂದ್ರೆಯವರಂತೆ ಕಾಣುವವರು ಕಾರ್ಕಳ ನೀರೇಬೈಲೂರು ಸಮೀಪದ ಕಣಜಾರು ನಿವಾಸಿ ಪುಂಡರೀಕಾಕ್ಷ ಭಟ್. ಈ ಹಿಂದೆ ಉಡುಪಿಯಲ್ಲಿ ಆಟೋ ರಿಕ್ಷಾ ಡ್ರೈವರ್ ಆಗಿದ್ದ ಇವರು ಪೇಜಾವರ, ಅದಮಾರು ಮಠಗಳಲ್ಲಿ ಟೆಂಪೋ, ಕೆಲವು ಸಮಯ ಬಸ್ ಡ್ರೈವರ್ ಆಗಿದ್ದರು. ಈಗ ನಿವೃತ್ತಿ ಜೀವನದಲ್ಲಿದ್ದಾರೆ.
ಅಷ್ಟಾವಕ್ರನೆಂಬ ಋಷಿಯೊಬ್ಬನಿದ್ದ. ಈತನ ಉಲ್ಲೇಖ ಉಪನಿಷತ್ತಿನಲ್ಲಿ, ಮಹಾ ಭಾರತದಲ್ಲಿ ಬರುತ್ತದೆ. ಈತನ ಹೆಸರೇ ಹೇಳು ವಂತೆ ದೇಹದಲ್ಲಿ ಒಟ್ಟು ಎಂಟು ಕಡೆ ವಕ್ರತೆ (ಅಂಗವೈಕಲ್ಯ) ಇತ್ತು.
ಜನಕ ಮಹಾರಾಜನ ಆಸ್ಥಾನದಲ್ಲಿ ಬ್ರಹ್ಮಜ್ಞಾನಿಗಳ ಸಭೆ ನಡೆಯುತ್ತಿತ್ತು. ಅಷ್ಟಾವಕ್ರನೂ ಹೋದಾಗ ಈತನನ್ನು ನೋಡಿ ನಗುತ್ತಾರೆ. ದಾರಿ ತಪ್ಪಿದೇನೋ ಎಂದನಿಸಿ “ಇದು ಬ್ರಹ್ಮಜ್ಞಾನಿಗಳ ಸಭೆ ಹೌದೆ ಅಲ್ಲವೆ?’ ಎಂದು ಕೇಳುತ್ತಾನೆ. ಅಲ್ಲಿದ್ದವರು “ಹೌದು, ಸಂಶಯವೇಕೆ?’ ಎಂದು ಕೇಳುತ್ತಾರೆ. “ಬ್ರಹ್ಮಜ್ಞಾನಿಗಳ ಸಭೆ ಎಂದು ತಿಳಿದು ಬಂದೆ. ಈಗ ನೋಡಿದರೆ ಇದು ಚರ್ಮಜ್ಞಾನಿಗಳ ಸಭೆ. ನನ್ನ ದೇಹದ ಹೊರ ನೋಟ ನೋಡಿ ನಗುತ್ತಿದ್ದೀರಲ್ಲಾ? ಇದು ಚರ್ಮಜ್ಞಾನಿಗಳ ಸಭೆಯಲ್ಲದೆ ಮತ್ತಿನ್ನೇನು?’ ಎಂದು ಅಷ್ಟಾವಕ್ರ ಅಣಕಿಸುತ್ತಾನೆ. ಅಲ್ಲಿದ್ದವರಿಗೆ ಜ್ಞಾನೋದ ಯವಾಗಿ ಈತನನ್ನು ಯಥೋಚಿತವಾಗಿ ಗೌರವಿಸುತ್ತಾರೆ. ಅಷ್ಟಾವಕ್ರನಿಂದಾಗಿ ನಿಜಾರ್ಥದ ಬ್ರಹ್ಮಜಿಜ್ಞಾಸೆ ನಡೆಯಿತು.
******
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (1896-1981) ಕಾವ್ಯ ನಾಮ ಅಂಬಿಕಾತನಯದತ್ತ. ಸಾಹಿತಿ, ಕವಿಯಾಗಿ ಪ್ರಸಿದ್ಧಿ ಹೊಂದಿದ್ದರೂ ಸ್ವಾತಂತ್ರ್ಯ ಹೋರಾಟ, ಇದೇ ಕಾರಣಕ್ಕಾಗಿ ಉದ್ಯೋಗ ನಷ್ಟ ಹೀಗೆ ನೈತಿಕ ಜೀವನದ ಹಾದಿಯಲ್ಲಿ ಬಡತನವನ್ನು ಇಷ್ಟಪಟ್ಟು ಅನುಭವಿಸಿದವರು.
ಬೇಂದ್ರೆಯವರನ್ನು ಒಮ್ಮೆ ಕೇಂದ್ರ ಸಚಿವ ದಾತಾರ್ ಧಾರವಾಡದ ಪ್ರವಾಸಿ ಮಂದಿರದಲ್ಲಿರುವಾಗ ಜರೂರಾಗಿ ಭೇಟಿ ಆಗುವಂತೆ ತಿಳಿಸಿದರು. ಸಚಿವರ ಮೊಕ್ಕಾಂ ಅಂದರೆ ಕೇಳಬೇಕೆ? ಈಗಲೂ ಸಚಿವರು ಬರುತ್ತಾರೆಂದರೆ ಜಿಲ್ಲಾಡಳಿತ ಇತರೆಲ್ಲ ಕೆಲಸಗಳನ್ನು ಬದಿಗಿರಿಸಿ “ಹುಜೂರ್ ಸಾರ್’ ಎನ್ನುತ್ತದೆ. ದೊಡ್ಡ ಜನಸಮೂಹ ಸೇರಿತ್ತು. ಸಚಿವರ ಕಾರ್ಯದರ್ಶಿ ಠಾಕುಠೀಕಾಗಿ “ನಿಮ್ಮ ಹೆಸರೇನು?’ ಎಂದು ಕೇಳಿದರು. “ಬೇಂದ್ರೆ ಅಂತಾರ’ ಎಂದರು. “ಸಚಿವರನ್ನು ಕಾಣುವ ಉದ್ದೇಶ?’ ಎಂದಾಗ “ಅವರಿಂದಲೇ ತಿಳಿಯಿರಿ’ ಎಂದದ್ದು ಕಾರ್ಯದರ್ಶಿಗೆ ತಬ್ಬಿಬ್ಟಾಯಿತು. ಇವರ ಧ್ವನಿ ಕೇಳಿ ಸಚಿವ ದಾತಾರರೇ ಹೊರಬಂದು ಕೈ ಮುಗಿದು, ಕೈಕುಲುಕಿ ಒಳಕ್ಕೆ ಕರೆದುಕೊಂಡು ಹೋದರು. 15-20 ನಿಮಿಷಗಳ ಬಳಿಕ ಸಚಿವರು ಬೇಂದ್ರೆಯವರನ್ನು ಬೀಳ್ಕೊಟ್ಟರು.
ಬೇಂದ್ರೆಯವರು ತಮ್ಮ ಮನೆ ಇರುವ ಸಾಧನಕೇರಿಗೆ ನಡೆದುಕೊಂಡು ಹೊರಟರು. ರಸ್ತೆ ಬದಿ ಇರುವ ಚಪ್ಪಲಿ ಅಂಗಡಿಯವನು “ಶರಣ್ರೀ ಸಾಹೇಬ್ರ’ ಎಂದು ಗೌರವಿಸಿ ಸಂಬೋಧಿಸಿದ. “ಓಹೋ ಶರಣು ಶರಣು, ಏನಪ್ಪಾ ತಮ್ಮé ಚಲೋ ಇದ್ದೀಯಾ? ಮನೀ ಕಡೀ ಎಲ್ಲ ಕ್ಷೇಮ ಇದ್ದಾರಾ?’ ಎಂದು ವಂದಿಸಿದರು. ಉಭಯ ಕುಶಲೋಪರಿ ಬಳಿಕ “ಸಾಹೇಬ್ರ, ಸ್ವಲ್ಪ ಪಾಲೀಶ್ ಮಾಡಿಕೊಡ್ತೀನ್ರಿ, ಬಹಳ ದಿನ ಆಗೈತಿ’ ಎಂದು ಚಪ್ಪಲಿ ಕಡೆ ಕೈತೋರಿಸಿ ಹೇಳಿದ. “ಈಗ ಟೈಮಿಲ್ಲ. ಮತ್ತೆ ನೋಡೋಣ’ ಎಂದಾಗಲೂ ಕೇಳದೆ “ಒಂದು ಮಿನಿಟ್‌ದಾಗ ಮಾಡ್‌ಕೊಡ್ತೀನ್ರಿ’ ಎಂದು ಕಾಲಿಂದ ಚಪ್ಪಲಿ ಕಿತ್ತುಕೊಳ್ಳೋದರಲ್ಲಿದ್ದ. ಚಪ್ಪಲಿ ಕಳಚಿ ಅವನ ಮುಂದೆ ಕುಕ್ಕರಗಾಲಿನಲ್ಲಿ ಛತ್ರಿ ಊರಿಕೊಂಡು ಬೇಂದ್ರೆ ಕುಳಿತರು. ನಾಡಿನಲ್ಲೆಲ್ಲ “ವರಕವಿ’ ಎಂದು ಪ್ರಸಿದ್ಧರಾದ ಬೇಂದ್ರೆ ಆಗಷ್ಟೇ ಕೇಂದ್ರ ಸಚಿವರ ಜತೆ ಸಲುಗೆಯಿಂದ ಮಾತಾಡಿ ಬಂದು ಫುಟ್‌ಪಾತ್ ಮೇಲೆ ಚಪ್ಪಲಿ ಹೊಲಿಯುವ ಅಂಗಡಿ ಮುದ್ದೆ ಕುಕ್ಕರಗಾಲಿನಲ್ಲಿ ಕುಳಿತಿದ್ದರು. ಆತನಿನ್ನೂ ಪಾಲೀಶ್ ಶುರುಮಾಡುವಷ್ಟರಲ್ಲಿ “ಸಾಕು, ಸಾಕು, ಹೊತ್ತಾಗ್ತದ’ ಎಂದು ಆತುರ ಮಾಡಿ ಅರ್ಧ ರೂಪಾಯಿ ಕೊಟ್ಟು ಹೊರಟರು. “ಬ್ಯಾಡ್ರೀ ಅಪ್ಪಾರೇ, ತಮ್ಮಂತಹವರಿಗೆ ಚಪ್ಪಲಿ ಒರೆಸಿಕೊಟ್ರ ನಮ್ಮ ಹರಳಯ್ಯ ಬಸವಣ್ಣನವರಿಗೆ ಮೈಯಿಂದ ಚಮ್ಡ ತೆಗೆದು ಹಾವಿಮಾಡಿಕೊಟ್ಟ ಪುಣ್ಯದಾಗ ನನ್ಗು ಒಂದು ಧೂಳಿನಷ್ಟು ಪಾಲು ಸಿಕೆôತ್ರೀ’ ಎಂದು ವಿನಮ್ರನಾಗಿ ಹೇಳಿದರೂ ಕೇಳದೆ ಹೊರಟೇಬಿಟ್ಟರು.
“ನೋಡೀ ಅವಾ, ಪಾಲೀಶ್ ಆಗ್ಬೇಕು ಅಂತಾನ. ಇವ ಮಾತ್ರ ಅಲ್ಲ, ಎಲ್ಲರೂ ಪಾಲೀಶ್ ಆಗ್ಬೇಕು ಅಂತಾರ. ಪಾಲೀಶ್ ಚಪ್ಪಲಿಗಾ ಗ್ಬೇಕಂತಾರ. ಮಂದೀ ತಾವು ಮಾತ್ರ ಪಾಲೀಶ್ ಆಗೋ ಹಂಗಿಲ್ಲ’ ಎಂದು ಹೇಳಿದ ಬೇಂದ್ರೆ, “ಚಪ್ಪಲಿಗೆ ಪಾಲೀಶ್ ಆದರ ನಮಗೂ ಕಿಮ್ಮತ್ ಏರ್ತದ ಅಂತದ ಲೋಕ. ಈಗ ಈ ಚಪ್ಪಲೀ ಕಡೀಲಿಂದ, ಬೇಂದ್ರೆ ಕಿಮ್ಮತ್ ಕೂಡ ಏರ್ಲಿಕ್ ಹತ್ಯಾದ’ ಎಂಬ ಗೂಢಾರ್ಥದ ಮಾತನ್ನೂ ತೇಲಿಸಿಬಿಟ್ಟರು. ಇವರ ವ್ಯಕ್ತಿತ್ವ ಕಂಡೇ “ಬೆಂದರೆ ಬೇಂದ್ರೆಯಾದಾನು’ ಎಂದು ಸಾಹಿತಿ ಕುಂದಾಪುರ ತಾಲೂಕು ಬವಳಾಡಿ ಮೂಲದ ಬಿ.ಎಚ್.ಶ್ರೀಧರ್ ಉದ್ಗರಿಸಿದ್ದು.
******
ಅಷ್ಟಾವಕ್ರನ ಮಾತಿಗೂ ಅಂಬಿಕಾತನಯದತ್ತರ ಮಾತಿಗೂ ಲಾಗು ಆಗುತ್ತದೆ. ಚಪ್ಪಲಿ ಪಾಲೀಶ್‌ಗೂ ಸಮಾಜ ಕೊಡುವ ಘನತೆ, ಗೌರವಕ್ಕೂ ವ್ಯಂಗ್ಯಾರ್ಥವನ್ನು ಬೇಂದ್ರೆ ಬಹಿರಂಗಪಡಿಸಿದ್ದರು. ಅನೇಕ ವರ್ಷಗಳು ಸಂದು ಹೋದಂತೆ ಸಾಕಷ್ಟು ಬೆಳವಣಿಗೆಗಳೂ ಆಗುತ್ತವೆ. ಕಾರು, ಒಡವೆ, ಬಂಗ್ಲೆ, ಹುದ್ದೆ, ಅಧಿಕಾರ, ಕೀರ್ತಿ, ಸಂಪತ್ತು ಇತ್ಯಾದಿ ಪಾಲೀಶ್‌ಗಳಿಂದಾಗಿ ನಮ್ಮ ಕಿಮ್ಮತ್ತು ಏರುತ್ತದೆ ಎಂದು ತಪ್ಪಾಗಿ ಭಾವಿಸಿದ ಸ್ಪರ್ಧಾಲೋಕದಲ್ಲಿದ್ದೇವೆ. ತಿನ್ನುವ ಅಕ್ಕಿಯನ್ನೂ ಪಾಲೀಶ್‌ಗಿರಿ ಬಿಟ್ಟಿಲ್ಲ. ಇವೆರಡೂ ತರಹದ ಪಾಲೀಶ್ ಕಾಯಿಲೆಗಳನ್ನು ತಂದೊಡುತ್ತಿವೆ. ಈಗ ಹೊರಗಿನ ಕ್ಲೀನಿಂಗ್ ಪ್ರಜ್ಞೆ ಕೆಲವರಲ್ಲಿಯಾದರೂ ಮೂಡಿದೆ. ಇದರಿಂದಾಗಿ ಮನೆ ಆವರಣದ ಬದಲು ತೋಡು, ಕಡಲು, ನದಿ, ಚರಂಡಿಗಳಲ್ಲಿ ಮತ್ತು ಹೊರಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಳೆಯುತ್ತಿವೆ. ಒಟ್ಟಾರೆ ಒಳಗೆ ಕ್ಲೀನಿಂಗ್ ಪ್ರಜ್ಞೆ ಮೂಡುವುದು ಕಡಿಮೆ. ಒಳಗೆ ಪಾಲೀಶ್ ಆಗದೆ ಹೊರಗೇ ಆಗುತ್ತಿದ್ದರೆ ಆ ಇಂಬ್ಯಾಲೆನ್ಸ್ ಮುಂದೇನಾದೀತು? ಇಂತಹ ಅನುಸಂಧಾನ ನಿತ್ಯ ನಡೆಯಬೇಕಾಗಿದೆ. ಪುರಂದರದಾಸರು “ಮನವ ಶೋಧಿಸಬೇಕು ನಿಚ್ಚ (ನಿತ್ಯ)| ದಿನದಿನ ಮಾಡುವ ಪಾಪ ಪುಣ್ಯದ ವೆಚ್ಚ||’ ಎಂದು ಘೋಷಿಸಿದಂತೆ, ನಾವೂ ನಿತ್ಯ ಘೋಷಿಸಿಕೊಳ್ಳಬೇಕು, ಅದರಂತೆ ಜೀವನವನ್ನು ಪೋಷಿಸಿಕೊಳ್ಳಬೇಕು. ಇದು ಒಳಗಿನ ಪಾಲೀಶ್‌ಗಾಗಿ…
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.