ವಾತಾವರಣಕ್ಕೆ ಅನುಗುಣವಾಗಿರಲಿ ಆಹಾರ-ವಿಹಾರ
Team Udayavani, Dec 13, 2021, 6:30 AM IST
ಕೊನೆಗೂ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಸುಡುಬಿಸಿಲಿದ್ದರೆ ಕತ್ತಲು ಆವರಿಸುತ್ತಿದ್ದಂತೆಯೇ ಚಳಿ ಆರಂಭಗೊಳ್ಳುತ್ತಿದೆ. ಚಳಿಗಾಲದ ಸಂದರ್ಭದಲ್ಲಿ ನಮ್ಮ ಆರೋಗ್ಯ ರಕ್ಷಣೆ, ಜೀವನಶೈಲಿ ಮತ್ತು ಆಹಾರ ಸೇವನಾಕ್ರಮದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳತ್ತ ಗಮನ ಹರಿಸುವುದು ಅತ್ಯಗತ್ಯವಾಗಿದೆ. ಈ ಕುರಿತಂತೆ ಲೇಖನ ಸರಣಿ ಇಂದಿನಿಂದ.
ಮೂಲ ಘಟಕದ್ರವ್ಯಗಳ ಸಾಮ್ಯತೆಯ ಕಾರಣದಿಂದಾಗಿ ಮಾನವನ ದೇಹಕ್ಕೂ ಆತನಿರುವ ವಾತಾ ವರಣಕ್ಕೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ವಾತಾವರಣದಲ್ಲಾಗುವ ಬದಲಾವಣೆ ದೇಹದಲ್ಲೂ ಬದಲಾವಣೆಯನ್ನು ತರುತ್ತದೆ. ನಮ್ಮ ಜೀವನ ಶೈಲಿ ಈ ಬದಲಾವಣೆಗೆ ಅನುಗುಣವಾಗಿದ್ದಲ್ಲಿ ರೋಗಗಳಿಂದ ದೂರವಿರಬಹುದು. ಇಲ್ಲವಾದರೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ.
ವರ್ಷವನ್ನು ಆರು ಋತು ಗಳನ್ನಾಗಿ ವಿಭಾಗಿಸಲಾಗಿದೆ. ಪ್ರತಿಯೊಂದೂ ಋತುವಿನ ಎರಡು ತಿಂಗಳುಗಳಲ್ಲಿಯೂ ಪರಿಸರದ ಗುಣಧರ್ಮದ ಸಾಮ್ಯತೆಯೇ ಈ ವಿಭಜನೆಗೆ ಕಾರಣ. ಆರು ಋತುಗಳನ್ನು ಮತ್ತೆ ಎರಡು ಅಯನಗಳಾಗಿ ವಿಭಾಗಿಸಲಾಗಿದೆ.
ಉತ್ತರಾಯಣ (ಫೆಬ್ರವರಿ -ಜುಲೈ)ದಲ್ಲಿ ಸೂರ್ಯನು ಪ್ರಖರವಾಗಿರುವುದರಿಂದ ತಾಪವು ಏರುತ್ತಾ ಹೋಗಿ ಹಗಲು ದೀರ್ಘವಾಗಿ ಪ್ರಕೃತಿಯಲ್ಲಿ ಉಷ್ಣತೆಯು ಜಾಸ್ತಿಯಾಗುತ್ತದೆ. ಇದರಿಂದಾಗಿ ನೀರಿನ ಅಂಶವೂ ಬತ್ತಿ, ಜೀವಿಯ ಬಲವು ಶಿಶಿರದಿಂದ ಮೊದಲ್ಗೊಂಡು ಗ್ರೀಷ್ಮದವರೆಗೆ ದಿನೇದಿನೆ ಕಡಿಮೆ ಯಾಗುತ್ತದೆ. ವರ್ಷಾ ಋತುವಿನಿಂದ ಹೇಮಂತ ದವರೆಗಿನ ದಕ್ಷಿಣಾಯನ (ಆಗಸ್ಟ್- ಜನವರಿ)ದಲ್ಲಿ ಸೂರ್ಯನು ಭೂಮಿಗೆ ದೂರವಾಗಿ, ರಾತ್ರಿಯು ದೀರ್ಘವಾಗುತ್ತದೆ. ಇದು ಅಧಿಕ ನೀರಿನ ಸಂಚ ಯಕ್ಕೆ ಕಾರಣವಾಗಿ, ಜೀವಿಯ ಶಕ್ತಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ದೈಹಿಕ ಶಕ್ತಿ, ಜೀರ್ಣಶಕ್ತಿ ಹಾಗೂ ರೋಗಗಳನ್ನು ಪ್ರಭಾವಿಸುವ ಋತುಗಳಿಗೆ ಅನುಸಾರವಾಗಿ ಜೀವನಶೈಲಿಯನ್ನು ಬದಲಾಯಿಸಿ ಕೊಳ್ಳುವುದನ್ನು ಋತುಚರ್ಯೆ ಎನ್ನುತ್ತಾರೆ.
ಚಳಿಗಾಲದ ಆಹಾರ ವಿಹಾರಗಳು
ಚಳಿಗಾಲದಲ್ಲಿ ದಕ್ಷಿಣಾಯನದ ಹೇಮಂತ ಮತ್ತು ಉತ್ತರಾಯಣದ ಶಿಶಿರ ಋತುಗಳ ಚರ್ಯೆಯನ್ನು ಪಾಲಿಸಬೇಕು. ಈಗ ಹೇಮಂತವಾದ ಕಾರಣ ಇದರ ಋತುಚರ್ಯೆಯ ಬಗ್ಗೆ ತಿಳಿದುಕೊಳ್ಳೋಣ. ಇದು ದಕ್ಷಿಣಾಯನದ ಕೊನೆಯ ಹಂತವಾಗಿದ್ದು ಜೀವಿಯು ಅತ್ಯಂತ ಶಕ್ತಿಯುತವಾಗಿರುತ್ತದೆ. ಕೆಲ ವೆಡೆ ಶೀತಲಗಾಳಿ, ಕೆಲವೆಡೆ ಹಿಮದ ರಾಶಿಯು ಅಧಿಕವಾಗಿರುತ್ತದೆ. ಹೊರಗಿನ ಶೈತ್ಯದಿಂದಾಗಿ ಶರೀ ರದ ಶಾಖವು ಜಠರದಲ್ಲಿಯೇ ತಡೆಯಲ್ಪಡುತ್ತದೆ. ಇದರಿಂದ ಹಸಿವು ವೃದ್ಧಿಯಾಗಿ ಗುರು (ಭಾರವಾದ) ಆಹಾರವನ್ನೂ ಜೀರ್ಣಿಸಿಕೊಳ್ಳುವ ತಾಕತ್ತು ಇರುತ್ತದೆ.
ಇಂಥ ಆಹಾರ ಸಿಗದೇ ಇದ್ದಾಗ ಜಠರಾಗ್ನಿಯು ದೇಹದ ಧಾತುಗಳನ್ನೇ ಜೀರ್ಣಿಸಲು ಆರಂಭಿ ಸುತ್ತದೆ.
ಶೀತಕಾಲವಾದ್ದರಿಂದ ಶೀತಕ್ಕೆ ವಿಪರೀತ ವಾದ ಆಹಾರವಿಹಾರಗಳೇ ಈ ಕಾಲದಲ್ಲಿ ರೋಗ ರಹಿತವಾಗಿರಲು ಬುನಾದಿ. ಹೇಮಂತ ಋತು ಚರ್ಯೆಯನ್ನು ಅನುಸರಿಸದೇ ಇದ್ದಲ್ಲಿ ಶರೀರ ಕೃಶವಾಗಬಹುದು. ಶೀತಬಾಧೆಯೂ ತಪ್ಪಿದ್ದಲ್ಲ. ಪಕ್ಷಾಘಾತ, ಕಂಪ, ಗಂಟುನೋವು ಮುಂತಾದ ವಾತರೋಗಗಳಿಗೂ ದಾರಿಯಾಗುತ್ತದೆ.
ಇನ್ನು ಹೇಮಂತದ ಅನಂತರ ಬರುವ ಶಿಶಿರದಲ್ಲೂ ಚಳಿಯೇ ಪ್ರಧಾನವಾಗಿದ್ದು, ತುಸು ಅಧಿಕವಾಗಿಯೇ ವಾತಾವರಣ ಶೀತಲವಾಗಿರುತ್ತದೆ. ಆದರೆ ಈ ಋತು ಉತ್ತರಾಯಣದ ಆರಂಭವಾಗಿದ್ದು ತೇವಾಂಶ ಕಡಿಮೆಯಾಗ ತೊಡಗುತ್ತದೆ. ಹಾಗಾಗಿ ಶೀತದೊಂದಿಗೆ ಶುಷ್ಕ ತೆಯೂ ಅನುಭವವಾಗುತ್ತದೆ. ವಾತಾವರಣದಲ್ಲಿ ಹೇಮಂತ ಹಾಗೂ ಶಿಶಿರದಲ್ಲಿ ತುಂಬಾ ವ್ಯತ್ಯಾಸವಿಲ್ಲದ ಕಾರಣ ಒಂದೇ ರೀತಿಯ ಆಹಾರ-ವಿಹಾರಗಳನ್ನು ಪಾಲಿಸಬಹುದು.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
ಚಳಿಗಾಲದ ಆಹಾರ ಸಂಹಿತೆ
ಚಳಿಗಾಲದಲ್ಲಿ ಅಧಿಕವಾಗಿರುವ ಜೀರ್ಣಶಕ್ತಿಗನು ಗುಣವಾಗಿ ಗುರು ತರವಾದ ಸಿಹಿ, ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು. ದೇಹದಲ್ಲಿ ಕಫ ಸಂಗ್ರಹವಾಗದಂತೆ ಮಾಡಲು ಹುಳಿರಸ ಮತ್ತು ಉಪ್ಪಿನಾಂಶದಿಂದ ಕೂಡಿದ ಬಿಸಿ ಬಿಸಿ ಪದಾರ್ಥ ಗಳನ್ನು ನಿತ್ಯವೂ ಸೇವಿಸಬೇಕು. ರಾತ್ರಿಯ ಅವಧಿ ಜಾಸ್ತಿ ಇರುವುದರಿಂದ ರಾತ್ರಿ ಬೇಗನೆ ಊಟ ಮಾಡಬೇಕು. ಎದ್ದೊಡನೆ ಹಸಿವು ಜಾಸ್ತಿ ಇರುವುದರಿಂದ ಬೆಳಗ್ಗಿನ ಉಪಾಹಾರವನ್ನು ತಪ್ಪದೆ ಸೇವಿಸಬೇಕು. ಹಾಗಾಗಿಯೇ ಈ ಕಾಲದಲ್ಲಿ ಬರುವ ಧನುರ್ಮಾಸದ ವ್ರತದಲ್ಲಿ ಬೆಳಗ್ಗೆ ಬೇಗ ಹೆಸರುಬೇಳೆ ಮತ್ತು ಅಕ್ಕಿಯಿಂದ ಮಾಡಿದ ಪೊಂಗಲ್ ಅಥವಾ ಹುಗ್ಗಿ ಮತ್ತು ಬೆಲ್ಲ-ಹುಣಸೆಯಿಂದ ಮಾಡಿದ ಹುಳಿಬಜ್ಜಿಯನ್ನು ಸೇವಿಸುವ ಸಂಪ್ರದಾಯವಿದೆ. ಅದಲ್ಲದೇ ಚಳಿಗಾಲದಲ್ಲಿ ಆಚರಿಸುವ ಸಂಕ್ರಾಂತಿ ಯಲ್ಲಿ ಎಳ್ಳು, ಬೆಲ್ಲ ಕೊಬ್ಬರಿ, ಕಡಲೆಬೀಜ ಇತ್ಯಾದಿ ಗಳನ್ನು ಸೇರಿಸಿ ಹಂಚಿ ತಿನ್ನುವ ಕ್ರಮವಿದೆ. ಈ ಸಾಂಪ್ರದಾಯಿಕ ತಿನಿಸು ಚರ್ಮದ ಆರೋಗ್ಯವನ್ನು ಶುಷ್ಕತೆಯಿಂದ ರಕ್ಷಿಸುತ್ತದೆ.
ನಿತ್ಯವೂ ಹೊಸ ಅಕ್ಕಿ, ಗೋಧಿ, ಉದ್ದು, ರಾಗಿ ಇತ್ಯಾದಿ ಬೇಳೆ ಕಾಳುಗಳ ಪುಲಾವ್, ಪುಳಿಯೋಗರೆ, ಇಡ್ಲಿ, ದೋಸೆ, ಚಪಾತಿ, ಅನ್ನ ಬಿಸಿ ಬಿಸಿಯಾಗಿಯೇ ತಿನ್ನಬೇಕು. ಹಿಟ್ಟು ಹಾಗೂ ಬೆಲ್ಲದಿಂದ ಮಾಡಿದ ಪದಾರ್ಥಗಳು, ಎಣ್ಣೆ ತಿಂಡಿಗಳಾದ ವಡೆ, ಸಂಡಿಗೆ, ಚಕ್ಕುಲಿ ಇತ್ಯಾದಿಗಳನ್ನು ತಿನ್ನಲು ಯಾವ ಆಕ್ಷೇಪವೂ ಇಲ್ಲ. ಕಜ್ಜಾಯ, ಎಳ್ಳುಂಡೆ, ಶ್ರೀಖಂಡ, ಕೋವಾ, ಮಲಾಯಿ ಮುಂತಾದ ಹಾಲಿನಿಂದ ಮಾಡಿದ ಸಿಹಿ ತಿಂಡಿಗಳು, ಮಿಠಾಯಿಗಳೂ ಇರಲಿ.
ಸೊಪ್ಪುಗಳ ತಂಬುಳಿ, ಚಟ್ನಿ, ಆಲೂಗಡ್ಡೆ, ಗೆಣಸು, ಕ್ಯಾರೆಟ್, ಸುವರ್ಣಗಡ್ಡೆ, ಅವರೆಕಾಯಿ, ಕುಂಬಳಕಾಯಿ, ಪಡವಲಕಾಯಿ, ಸೋರೆಕಾಯಿ, ಬೆಂಡೆಕಾಯಿ, ಕೋಸು, ಸೀಮೆಬದನೆ ಇತ್ಯಾದಿ ತರಕಾರಿಗಳ ಸಾರು, ಪಲ್ಯ, ಸಾಂಬಾರು, ನೆಲ್ಲಿ ಚೆಟ್ಟು, ಮಜ್ಜಿಗೆ ಹುಳಿ, ಮೊಸರು ಬಜ್ಜಿ, ಮಾಂಸದಡಿಗೆ ಇಷ್ಟ ಪಡುವ ಮಂದಿಗೆ ಜಲಚರ ಪ್ರಾಣಿಗಳ ಮಾಂಸ ರಸ ಎಲ್ಲವೂ ಸ್ವೀಕಾರಾರ್ಹ. ದ್ರಾಕ್ಷಿ, ಖರ್ಜೂರ, ಪಪ್ಪಾಯಿ, ಅನಾನಾಸ್, ಕಿತ್ತಳೆ, ಸಪೋಟ ಮುಂತಾದ ಹಣ್ಣುಗಳು, ಕಬ್ಬಿನ ಹಾಲು, ಬಿಸಿನೀರು ಹೇಮಂತದಲ್ಲಿ ಹಿತವಾಗಿರುತ್ತವೆ.
ವಿಹಾರ ವಿಚಾರ
ಪ್ರಯತ್ನಪೂರ್ವಕವಾಗಿ ದೇಹವನ್ನು ಶೀತದಿಂದ ರಕ್ಷಿಸಿಕೊಳ್ಳಬೇಕು. ಬೆಚ್ಚಗಿನ ಎಳ್ಳೆಣ್ಣೆಯ ಶಿರಸಹಿತ ಶರೀರ ಅಭ್ಯಂಗದೊಂದಿಗೆ ಸ್ನಾನಕ್ಕೆ ಬಿಸಿನೀರು ಉಪಯೋಗಿಸಿ. ತಲೆಗೆ ತುಂಬಾ ಬಿಸಿ ಇದ್ದ ನೀರಿನ ಪ್ರಯೋಗದಿಂದ ಕೂದಲು ಮತ್ತು ಕಣ್ಣುಗಳಿಗೆ ಹಾನಿಯಾಗಬಹುದು. ಹಾಗಾಗಿ ನೀರು ಹಿತವಾಗಿ ಬೆಚ್ಚಗಿರುವಂತೆ ನೋಡಿಕೊಳ್ಳಿ. ಶರೀರಕ್ಕೆ ಔಷಧೀಯ ಸುಗಂಧ ದ್ರವ್ಯಗಳ ಲೇಪನ, ಪರಿಸರಕ್ಕೆ ಗಂಧಯುಕ್ತ ಧೂಪ ಹಾಕುವುದನ್ನೂ ಮಾಡಬಹುದು. ಚಳಿಗಾಲ ದಲ್ಲಿ ಚರ್ಮ ಶುಷ್ಕವಾಗುವುದನ್ನು ತಡೆಯಲು ನೀರಿನಲ್ಲಿ ಎರಡು ಹನಿ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ನೀಲಗಿರಿ ಎಣ್ಣೆ, ಲವಂಗದೆಣ್ಣೆ ಯಾವುದನ್ನೂ ಬೆರೆಸಬಹುದು. ದಿನವೂ ಮಾಡುವ ವ್ಯಾಯಾಮದ ಅವಧಿ ಹಾಗೂ ಶ್ರಮವನ್ನು ಹೆಚ್ಚಿಸಿಕೊಳ್ಳಿ. ಸೂರ್ಯ ನಮಸ್ಕಾರವನ್ನು ಜಾಸ್ತಿ ಮಾಡಿ. ಕುಸ್ತಿ ಮಾಡುವ ಆಸಕ್ತಿ ಇದ್ದರೆ ಇದು ಸಕಾಲ.
ನಿತ್ಯವೂ ನಡಿಗೆಯ ಅಭ್ಯಾಸವಿದ್ದರೆ ಮುಂಜಾನೆಯ ಚಳಿ ಸ್ವಲ್ಪ ಕಡಿಮೆಯಾದ ಅನಂತರ ಮನೆಯಿಂದ ಹೊರಡುವುದೊಳಿತು. ಸೂರ್ಯನ ಕಿರಣಗಳಿಗೆ ಮೈ (ಸನ್ ಬಾತ್) ಒಡ್ಡಬೇಕು. ಬೆಂಕಿಯ ಶಾಖಕ್ಕೂ ಮೈ ಒಡ್ಡಬಹುದು. ವಾಸಿಸುವ ಸ್ಥಳವೂ ಬೆಚ್ಚಗಿರಬೇಕು. ಬೆಚ್ಚಗಿನ ವಸ್ತ್ರಗಳನ್ನು ಉಪಯೋಗಿಸಿ. ಪಾದಗಳನ್ನು ಸಂಪೂರ್ಣವಾಗಿ ಮುಚ್ಚುವ ಬೆಚ್ಚನೆಯ ಚಪ್ಪಲಿಗಳನ್ನು ಧರಿಸಬೇಕು.
ಇವುಗಳು ನಿಷಿದ್ಧ
ಬೇಗ ಜೀರ್ಣವಾಗುವ ಆಹಾರ ಪದಾರ್ಥಗಳು, ಖಾರ, ಕಹಿ, ಚೊಗರು ರಸಗಳ ಆಹಾರಗಳು, ವಾತವೃದ್ಧಿಯನ್ನು ಮಾಡುವ ಲಘು ಅನ್ನಪಾನಗಳು, ಗಂಜಿನೀರು, ಹಳೆ ಬೇಳೆ ಕಾಳುಗಳು, ನುಗ್ಗೇಕಾಯಿ, ಮೆಣಸಿನಕಾಯಿ, ಸಾಸಿವೆ, ಬಾಳೆಹಣ್ಣು, ಸೀಬೆಹಣ್ಣು, ತಣ್ಣೀರು, ತಂಪು ಪಾನೀಯಗಳು, ಐಸ್‌ಕ್ರೀಮ್‌ಗಳು.
– ಡಾ| ಚೈತ್ರಾ ಎಸ್. ಹೆಬ್ಟಾರ್
ಕುತ್ಪಾಡಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.