ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ
ಹಾರ್ದಿಕ್ ಬೆನ್ನಿಗೆ ನಿಂತಿರುವ 'ಆ ಬಿಸಿಸಿಐ ಬಿಗ್ ಬಾಸ್' ಯಾರು?
ಕೀರ್ತನ್ ಶೆಟ್ಟಿ ಬೋಳ, May 13, 2024, 5:48 PM IST
16 ಸೀಸನ್ ಗಳಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ 17ನೇ ಸೀಸನ್ ಮರೆಯಲಾಗದ್ದು. ತಂಡವನ್ನು ಗಟ್ಟಿ ಮಾಡಬೇಕೆಂಬ ಕಾರಣದಿಂದ ಹಲವು ಪ್ರಯೋಗ ಮಾಡಿದ ಮುಂಬೈಗೆ ಇದೀಗ ಅದೇ ಪ್ರಯೋಗಗಳು ತಿರುಗೇಟು ನೀಡಿದೆ. ಈ ಬಾರಿಯ ಸೀಸನ್ ನಲ್ಲಿ ಹೊರಬಿದ್ದ ತಂಡವಾಗಿ ಕುಖ್ಯಾತಿ ಇದೀಗ ಮುಂಬೈ ಇಂಡಿಯನ್ಸ್ ನದ್ದು.
ಈ ಸೀಸನ್ ನ ಆರಂಭಕ್ಕೆ ಮೊದಲು ಗುಜರಾತ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತಂದು ಅವರಿಗೆ ನಾಯಕತ್ವ ವಹಿಸಲಾಗಿತ್ತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದು ಹಾಕಿದ ಕಾರಣದಿಂದ ಫ್ರಾಂಚೈಸಿ ಭಾರೀ ಟೀಕೆಗೆ ಒಳಗಾಗಿತ್ತು. ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ಬಳಿಕ ತಂಡವು ಮತ್ತಷ್ಟು ಹಿನ್ನಡೆ ಅನುಭವಿಸಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ಮುಂಬೈ ಡ್ರೆಸ್ಸಿಂಗ್ ರೂಮ್ ನಲ್ಲಿ ರೋಹಿತ್ ಮತ್ತು ಹಾರ್ದಿಕ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವಂತಿದೆ. ಹಾರ್ದಿಕ್ ನಾಯಕನಾಗಿರುವುದು ವಿದೇಶಿ ಆಟಗಾರರಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ, ದೇಶೀಯ ಪ್ರತಿಭೆಗಳು ರೋಹಿತ್ ನತ್ತ ನೋಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಂಬೈ ಇಂಡಿಯನ್ಸ್ ತಂಡವು ಎರಡು ಬಣಗಳಾಗಿ ವಿಂಗಡಿಸಲಾಗಿದೆ ಎಂದು ಮೈಕೆಲ್ ಕ್ಲಾರ್ಕ್ ಹೇಳಿಕೆ ನೀಡಿದ ನಂತರ, ಬೆಂಕಿಗೆ ತುಪ್ಪ ಸುರಿಯುವಂತಹ ವರದಿಯನ್ನು ಜಾಗರಣ್ ಮಾಡಿದೆ. ರೋಹಿತ್ ಮತ್ತು ಹಾರ್ದಿಕ್ ಮೈದಾನದಲ್ಲಿ ಎಲ್ಲವೂ ಸರಿಯಾಗಿ ಇದ್ದಂತೆ ಇದ್ದರೂ, ಇಬ್ಬರು ಕಣ್ಣಿಗೆ ಕಣ್ಣಿಟ್ಟು ಮಾತನಾಡುತ್ತಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮುಂಬೈ ಪಂದ್ಯಕ್ಕೆ ಮೊದಲು ರೋಹಿತ್ ಅಭ್ಯಾಸದ ಸಮಯದಲ್ಲಿ ಹಾರ್ದಿಕ್ ಎಲ್ಲಿಯೂ ಕಾಣಿಸಲಿಲ್ಲ. ರೋಹಿತ್ ಬ್ಯಾಟಿಂಗ್ ಬಳಿಕ, ತಿಲಕ್ ವರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಅಭ್ಯಾಸ ನಡೆಸಿದರು. ಆದರೆ, ಅಭ್ಯಾಸಕ್ಕೆ ಹಾರ್ದಿಕ್ ಸರದಿ ಬಂದಾಗ ಈ ಆಟಗಾರರು ಅಲ್ಲಿಂದ ನಡೆದರು ಎನ್ನುತ್ತಿದೆ ವರದಿ.
ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ನಾಯರ್ ಜೊತೆ ಮಾತನಾಡುತ್ತಾ ರೋಹಿತ್ ಶರ್ಮಾ ಅವರು, ಮುಂಬೈ ಇಂಡಿಯನ್ಸ್ ತಂಡ ತೊರೆಯುವ ಬಗ್ಗೆ ಮಾತನಾಡಿದ್ದರು. “ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ… ಏನೇ ಆದರೂ ಇದು ನನ್ನ ಮನೆ, ಇದು ನಾನು ನಿರ್ಮಿಸಿದ ದೇವಾಲಯ.. ಇಲ್ಲಿ ನನ್ನದು ಕೊನೆಯದು…” ಎಂದಿದ್ದರು.
ಹಾರ್ದಿಕ್ ಆಯ್ಕೆಗೆ ಸಿದ್ದವಿರದ ರೋಹಿತ್- ಅಜಿತ್
ಟಿ20 ವಿಶ್ವಕಪ್ ಗೆ ತಂಡ ಪ್ರಕಟ ಮಾಡುವ ಮೊದಲು ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವ ಸಂಭಾವ್ಯತೆಯ ಬಗ್ಗೆ ಹಲವು ಅನುಮಾನಗಳು ಮೂಡಿತ್ತು. ಇದಕ್ಕೆ ಅನುಗುಣವಾಗಿ ಹಾರ್ದಿಕ್ ಆಯ್ಕೆಯಾಗುವುದಿಲ್ಲ ಎಂಬ ವರದಿಗಳು ಬಂದಿದ್ದವು. ಆದರೆ ಅಂತಿಮವಾಗಿ ತಂಡ ಪ್ರಕಟವಾದಾಗ ಹಾರ್ದಿಕ್ ಆಯ್ಕೆಯಾಗಿದ್ದು ಮಾತ್ರವಲ್ಲದೆ ಉಪ ನಾಯಕನಾಗಿಯೂ ಸ್ಥಾನ ಪಡೆದಿದ್ದರು.
ಕೆಲ ದಿನಗಳ ಹಿಂದೆ ಟಿ20 ವಿಶ್ವಕಪ್‌ಗಾಗಿ ಭಾರತದ 15 ಸದಸ್ಯರ ತಂಡವನ್ನು ಅಂತಿಮಗೊಳಿಸುತ್ತಿರುವಾಗ, ನಾಯಕ ರೋಹಿತ್ ಶರ್ಮಾ ಅಥವಾ ಅಜಿತ್ ಅಗರ್ಕರ್ ಮತ್ತು ಆಯ್ಕೆ ಸಮಿತಿಯು ಹಾರ್ದಿಕ್ ಅವರನ್ನು ತಂಡಕ್ಕೆ ಸೇರಿಸಲು ಬಯಸಿರಲಿಲ್ಲ ಎನ್ನಲಾಗಿದೆ. ನಾಯಕ ಮತ್ತು ಆಯ್ಕೆ ಸಮಿತಿಯು ತಂಡಕ್ಕೆ ಹಾರ್ದಿಕ್ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು, ಆದರೆ ‘ಒತ್ತಡ’ದ ಕಾರಣದಿಂದ ಪಾಂಡ್ಯ ಆಯ್ಕೆಯಾದರು ಎನ್ನುತ್ತಿದೆ ವರದಿ.
ಅಜಿತ್ ಅಗರ್ಕರ್ ಅವರು ‘ಒತ್ತಡ’ಕ್ಕೆ ಮಣಿಯಬೇಕಾಯಿತು. ಈ ಒತ್ತಡ ಏನು ಮತ್ತು ಯಾರಿಂದ ಬಂದಿದೆ ಎಂಬುದನ್ನು ಉಲ್ಲೇಖಿಸಲಾಗಿಲ್ಲ. ಬಿಸಿಸಿಐ ನ ಬಿಗ್ ಬಾಸ್ ಗಳು ಆಯ್ಕೆ ಸಮಿತಿಯ ಮೇಲೆ ಒತ್ತಡ ಹಾಕಿದ್ದಾರೆ ಎಂದು ನಂಬಲಾಗಿದೆ. ಬಿಸಿಸಿಐ ರೋಹಿತ್ ಶರ್ಮಾ ಬಳಿಕ ಹಾರ್ದಿಕ್ ಅವರನ್ನು ಭಾರತದ ಭವಿಷ್ಯದ ನಾಯಕನಾಗಿ ನೋಡುತ್ತಿದೆ ಎನ್ನಲಾಗಿದೆ.
ಮುಗಿಯಿತಾ ರೋಹಿತ್ ಟಿ20 ಕೆರಿಯರ್?
2022ರ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿ ಕ್ರಿಕೆಟ್ ನಿಂದ ದೂರವೇ ಉಳಿದಿದ್ದ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಟಿ20 ಕೆರಿಯರ್ ಮುಗಿಯುವ ಹಂತದಲ್ಲಿದೆ ಎನ್ನಲಾಗಿದೆ. ಈ ಬಾರಿಯ 20 ವಿಶ್ವಕಪ್ ಅವರ ಕೊನೆಯ ಟಿ20 ಆಟವಾಗಲಿದೆ ಎನ್ನುತ್ತಿದೆ ವರದಿ. ಇದಾದ ಬಳಿಕ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿದೆ.
37 ವರ್ಷ ವಯಸ್ಸಿನ ರೋಹಿತ್ ಅವರು 2022 ರ ನವೆಂಬರ್‌ನಿಂದ ಕೇವಲ ಮೂರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಎರಡು ಶೂನ್ಯ ಮತ್ತು ಒಂದು ಶತಕವನ್ನು ದಾಖಲಿಸಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಆರಂಭದಲ್ಲಿ ಒಂದು ಶತಕದೊಂದಿಗೆ ಉತ್ತಮವಾಗಿ ಆಡಿದರೂ ಬಳಿಕ ಫಾರ್ಮ್ ಕೈಕೊಟ್ಟಿದೆ.
ಹಾರ್ದಿಕ್ ಜತೆಗಿನ ಮನಸ್ತಾಪ, ಅವರ ನಾಯಕತ್ವಕ್ಕೆ ಬಿಸಿಸಿಐ ಬಿಗ್ ಬಾಸ್ ಗಳ ಬೆಂಬಲ ಹೀಗೆ ಎಲ್ಲವನ್ನೂ ಗಮನಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ ಗೆ ಹೆಚ್ಚಿನ ಭವಿಷ್ಯವಿಲ್ಲ ಎನ್ನಬಹುದು. ಯಾಕೆಂದರೆ ಇತ್ತೀಚೆಗೆ ಬೇರೊಂದು ಪ್ರಸಂಗವನ್ನು ಉಲ್ಲೇಖಿಸುತ್ತಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ‘ಬಿಸಿಸಿಐಗೆ ಯಾರೂ ಮುಖ್ಯರಲ್ಲ’ ಎಂದಿದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.