ಮತದಾರನಿಗೆ ಆಧಾರ! ನಕಲಿ ಮತದಾರರಿಗೆ ಅಂಕುಶ
ಮತದಾರರ ಚೀಟಿ ಮತ್ತು ಆಧಾರ್ ಅನ್ನು ಲಿಂಕ್ ಮಾಡಬೇಕು ಎಂಬ ಆಲೋಚನೆ ಈಗಿನದ್ದೇನಲ್ಲ.
Team Udayavani, Dec 21, 2021, 7:20 AM IST
ಚುನಾವಣ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಮುಂದಾಗಿದೆ. ಸೋಮವಾರ ಲೋಕಸಭೆಯಲ್ಲಿ ಈ ಸಂಬಂಧ ಮಸೂದೆ ಮಂಡಿಸಿ, ಒಪ್ಪಿಗೆಯನ್ನೂ ಪಡೆಯಲಾಗಿದೆ. ಮತದಾರರ ಚೀಟಿ ಮತ್ತು ಆಧಾರ್ ನಡುವಿನ ಲಿಂಕ್‌ನಿಂದಾಗಿ ನಕಲಿ ಮತದಾರರ ಹೆಸರು ಡಿಲೀಟ್ ಆಗುತ್ತವೆ ಎಂದು ಒಂದು ಕಡೆಯ ವಾದವಾದರೆ, ಜನರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎಂದು ಇನ್ನೊಂದು ವರ್ಗ ಆತಂಕ ವ್ಯಕ್ತಪಡಿಸಿದೆ. ಹಾಗಾದರೆ ಈ ವೋಟರ್ ಐಡಿ-ಆಧಾರ್ ಲಿಂಕ್‌ನಿಂದ ಏನು ಲಾಭ? ಏನು ನಷ್ಟ? ಎಂಬ ಬಗ್ಗೆ ಒಂದು ಸಮಗ್ರ ವಿವರ ಇಲ್ಲಿದೆ..
2012ರಲ್ಲೇ ಚಿಗುರೊಡೆದ ಉಪಾಯ
ಮತದಾರರ ಚೀಟಿ ಮತ್ತು ಆಧಾರ್ ಅನ್ನು ಲಿಂಕ್ ಮಾಡಬೇಕು ಎಂಬ ಆಲೋಚನೆ ಈಗಿನದ್ದೇನಲ್ಲ. ಇದು 2012ರಲ್ಲಿ ಅಧಿಕಾರದಲ್ಲಿದ್ದ ಯುಪಿಎ ಕಾಲದಲ್ಲೇ ಬಂದ ಉಪಾಯ. ಆಗಿನ ಕೇಂದ್ರ ಚುನಾವಣ ಆಯುಕ್ತರಾಗಿದ್ದ ಎಚ್.ಎಸ್. ಬ್ರಹ್ಮ ಅವರು ಈ ಆಲೋಚನೆಯನ್ನು ಸರಕಾರದ ಮುಂದೆ ಇಟ್ಟಿದ್ದರು. ಆದರೆ ಆಗ ಇದು ಜಾರಿಯಾಗಲಿಲ್ಲ.
ನಕಲಿ ಮತದಾರರಿಗೆ ಅಂಕುಶ
- ಬಹಳಷ್ಟು ಸಂಖ್ಯೆಯಲ್ಲಿರುವ ನಕಲಿ ಮತದಾರರನ್ನು ಗುರುತಿಸಬಹುದು.
2. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋದರೂ ಸುಲಭವಾಗಿ ವಿಳಾಸ ಬದಲಿಸಬಹುದು.
- ಖಾಸಗಿತನದ ವಿಚಾರದ ಬಗ್ಗೆ ಆತಂಕ ಸಲ್ಲದು. ಇದನ್ನು ಬಗೆಹರಿಸಿಕೊಳ್ಳಬಹುದು.
- ಕೆಲವರು ಬೇರೆ ರಾಜ್ಯಗಳಿಂದ ಇನ್ನೊಂದು ರಾಜ್ಯಕ್ಕೆ ಹೋಗುತ್ತಾರೆ. ಇವರು ತಾವು ಹೋದ ಕಡೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಕಷ್ಟ. ಇವರಿಗೆ ಆಧಾರ್ ಸಹಾಯ ಮಾಡುತ್ತದೆ.
- ಮತದಾರರ ಪಟ್ಟಿಯಲ್ಲಿ ಆಧಾರ್‌ನಲ್ಲಿರುವ ಹೆಸರೇ ಬರುವುದರಿಂದ ನಕಲಿ ಸಮಸ್ಯೆ ಕಡಿಮೆಯಾಗುತ್ತೆ.
2015ರಲ್ಲಿ ಅಧಿಕೃತವಾಗಿ ಆರಂಭ
ಕೇಂದ್ರ ಚುನಾವಣ ಆಯೋಗ 2015ರಲ್ಲೇ ಮತದಾರರ ಪಟ್ಟಿ ಜತೆಗೆ ಆಧಾರ್ ಲಿಂಕ್ ಮಾಡುವ ಕೆಲಸ ಶುರು ಮಾಡಿತ್ತು. ಕೇವಲ ಮೂರು ತಿಂಗಳಲ್ಲೇ 30 ಕೋಟಿ ಮತದಾರರ ಹೆಸರನ್ನು ಲಿಂಕ್ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಜನರ ಖಾಸಗಿತನಕ್ಕೆ ಧಕ್ಕೆಯಾಗುತ್ತೆ ಎಂದು ಹೇಳಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್, ಖಾಸಗಿತನಕ್ಕೆ ಧಕ್ಕೆ ಬೇಡ ಎಂದು ಹೇಳಿ, ಈ ಪ್ರಕ್ರಿಯೆ ನಿಲ್ಲಿಸಿತ್ತು.
50 ಲಕ್ಷ ಮತದಾರರ ಹೆಸರು ಮಾಯ
ಮತದಾರರ ಪಟ್ಟಿ ಮತ್ತು ಆಧಾರ್ ಲಿಂಕ್‌ನಿಂದಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು 50 ಲಕ್ಷ ಮತದಾರರ ಹೆಸರು ಮಾಯವಾಗಿತ್ತು. ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಅದೆಷ್ಟೋ ಮಂದಿ ಮತಗಟ್ಟೆಗೆ ಬಂದು, ಹೆಸರಿಲ್ಲದ ಕಾರಣದಿಂದಾಗಿ ವಾಪಸ್ ಹೋಗಿದ್ದರು. ಇದು ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಎರಡು ರಾಜ್ಯಗಳಲ್ಲೇ 50 ಲಕ್ಷ ಮತದಾರರ ಹೆಸರು ನಾಪತ್ತೆಯಾದರೆ, ದೇಶಾದ್ಯಂತ ಲಿಂಕ್ ಮಾಡಿದರೆ ಕೋಟ್ಯಂತರ ಜನರ ಹೆಸರು ಡಿಲೀಟ್ ಆಗಬಹುದು ಎಂಬ ಆತಂಕವೂ ಇದೆ.
ಕೇಂದ್ರ ಸರಕಾರ ಹೇಳುವುದು ಏನು?
ಕೇಂದ್ರ ಚುನಾವಣ ಆಯೋಗದ ವಾದವನ್ನೇ ಕೇಂದ್ರ ಸರಕಾರ ಕೂಡ ಮುಂದಿಟ್ಟಿದೆ. ಚುನಾವಣ ಕ್ಷೇತ್ರದಲ್ಲಿ ಸುಧಾರಣೆಯಾಗಬೇಕಾದರೆ ಆಧಾರ್ ಮತ್ತು ವೋಟರ್ ಐಡಿ ಲಿಂಕ್ ಆಗಬೇಕು. ಆಗ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆಯಬಹುದು. ಹಾಗೆಯೇ ಆಧಾರ್ ಅನ್ನು ಎಲ್ಲ ವಯಸ್ಕರಿಗೂ ನೀಡಲಾಗುತ್ತದೆ. ಯುವಕನೊಬ್ಬ 18 ವರ್ಷ ದಾಟಿದ ಕೂಡಲೇ ಆಧಾರ್ ಕಾರ್ಡ್ ಮುಂದಿಟ್ಟುಕೊಂಡು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಇದಕ್ಕಾಗಿಯೇ ವರ್ಷದಲ್ಲಿ ನಾಲ್ಕು ಬಾರಿ ಮತದಾರರ ನೋಂದಣಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ.
ಡಾಟಾ ಸೋರಿಕೆ ಆತಂಕ
ಒಮ್ಮೆ ಆಧಾರ್ ಮತ್ತು ವೋಟರ್ ಐಡಿ ಲಿಂಕ್ ಮಾಡಿದರೆ ಇದರ ಸಂಪೂರ್ಣ ಮಾಹಿತಿಯು ಕೇಂದ್ರ ಚುನಾವಣ ಆಯೋಗದ ಸರ್ವರ್‌ನಲ್ಲಿ ಶೇಖರಣೆಯಾಗುತ್ತದೆ. 2019ರಲ್ಲಿ ಆಂಧ್ರ ಮತ್ತು ತೆಲಂಗಾಣದ 7.8 ಕೋಟಿ ಮಂದಿಯ ಖಾಸಗಿ ಮಾಹಿತಿ ಸೋರಿಕೆ ಆಗಿತ್ತು. ಒಂದು ವೇಳೆ ದೇಶದ ಎಲ್ಲ ಮತದಾರರ ಹೆಸರು ಲೀಕ್ ಆದರೆ ಅಪಾಯವುಂಟಾಗುತ್ತದೆ ಎಂದು ಹೇಳಲಾಗುತ್ತಿದೆ.
ವಿಪಕ್ಷಗಳ ಆರೋಪವೇನು?
ಆಧಾರ್ ಜತೆ ವೋಟರ್ ಐಡಿ ಸೇರಿಸುವುದರಿಂದ ಜನರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ರಾಜಕೀಯ ನಾಯಕರು ಆತಂಕ ವ್ಯಕ್ತಪಡಿಸುತ್ತಾರೆ. ಅಲ್ಲದೆ, ನೈಜ ಮತದಾರರೂ ಪಟ್ಟಿಯಿಂದ ಹೊರಗುಳಿಯಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು. 2015ರಲ್ಲೇ ಪ್ರಾಯೋಗಿಕವಾಗಿ ಈ ಎರಡು ರಾಜ್ಯಗಳಲ್ಲಿ ಮತದಾರರ ಪಟ್ಟಿ ಮತ್ತು ಆಧಾರ್ ಲಿಂಕ್ ಮಾಡಲಾಗಿತ್ತು. 2018ರಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 30 ಲಕ್ಷ ಮಂದಿ ಮತ ಚಲಾಯಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ಇವರೆಲ್ಲರ ಹೆಸರುಗಳು ಮತದಾರರ ಪಟ್ಟಿಯಿಂದಲೇ ಮಾಯವಾಗಿದ್ದವು. ಹಾಗೆಯೇ ಆಂಧ್ರದಲ್ಲೂ 20 ಲಕ್ಷ ಮಂದಿ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿತ್ತು. ಇವರು ನಕಲಿ ಮತದಾರರಲ್ಲ, ನೈಜ ಮತದಾರರು ಎಂದು ವಿಪಕ್ಷಗಳು ವಾದಿಸಿವೆ.
ಖಾಸಗಿತನ: ಸುಪ್ರೀಂ ತೀರ್ಪು ಏನು?
2018ರಲ್ಲಿ ಐದು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಆಧಾರ್ ಅನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಹೇಳಿ, ಖಾಸಗಿತನವನ್ನು ಎತ್ತಿಹಿಡಿದಿತ್ತು. ಅಲ್ಲದೆ ಪ್ಯಾನ್ ಮತ್ತು ಆಧಾರ್ ಲಿಂಕ್ ಅನ್ನು ಕಡ್ಡಾಯ ಮಾಡಿದ್ದನ್ನೂ ಎತ್ತಿಹಿಡಿದಿತ್ತು. ಆದರೆ ಖಾಸಗಿ ಕಂಪೆನಿಗಳು ಆಧಾರ್‌ನ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಶೇಖರಿಸಿ ಇರಿಸಿಕೊಳ್ಳುವಂತಿಲ್ಲ ಎಂದೂ ಹೇಳಿತ್ತು. ವಿಶೇಷವೆಂದರೆ ಅಂದಿನ ತೀರ್ಪಿನಲ್ಲಿ ಆಧಾರ್ ಮತ್ತು ವೋಟರ್ ಐಡಿ ಲಿಂಕ್ ಮಾಡಬಹುದೇ ಎಂಬ ವಿಚಾರದಲ್ಲಿ ಏನನ್ನೂ ಹೇಳಿರಲಿಲ್ಲ.
2019ರಲ್ಲಿ ಕೇಂದ್ರ ಸರಕಾರ ಆಧಾರ್ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಬ್ಯಾಂಕ್ ಅಕೌಂಟ್‌ಗಳು ಮತ್ತು ಮೊಬೈಲ್ ಸಂಪರ್ಕ ಪಡೆಯಲು ಆಧಾರ್ ಅನ್ನು ಸ್ವಯಂ ಪ್ರೇರಣೆಯಿಂದ ನೀಡಬಹುದು ಎಂದಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಕೇಸ್ ಇನ್ನೂ ಬಾಕಿ ಇದೆ.
ಇಷ್ಟವಿದ್ದರೆ ಅಷ್ಟೇ ಲಿಂಕ್.. ಅಪಾಯವೇನು?
ಆಧಾರ್ ಅನ್ನು 2013ರಲ್ಲಿ ಜಾರಿಗೆ ತಂದಾಗ ಇದೂ ಐಚ್ಛಿಕವಷ್ಟೇ ಎಂದು ಹೇಳಲಾಗಿತ್ತು. ಬರ್ತಾ ಬರ್ತಾ ಇದು ಕಡ್ಡಾಯವಾದಂತೆ ಆಯಿತು. ಈಗಲೂ ಅಷ್ಟೇ, ಮೊದಲಿಗೆ ಐಚ್ಛಿಕ ಎಂದು ಹೇಳುತ್ತಾರೆ, ಮುಂದಿನ ದಿನಗಳಲ್ಲಿ ಕಡ್ಡಾಯವಾದಂತೆ ಆಗುತ್ತದೆ ಎಂಬ ಆತಂಕ ಜನರಲ್ಲಿ ಇದೆ. ಅಷ್ಟೇ ಅಲ್ಲ, ಸರಕಾರದ ಯೋಜನೆಗಳನ್ನು ಪಡೆಯುವಾಗ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಲೇಬೇಕು ಎಂದು ಸರಕಾರ ಹೇಳಿದೆ. ವಿಶೇಷವೆಂದರೆ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿ ಈ ನಿರ್ಧಾರ ಮಾಡಲಾಗಿದೆ ಎಂಬುದು ಕೆಲವರ ಆರೋಪ. ಆಧಾರ್ ಲಿಂಕ್ ಸಂಬಂಧ ಕೇಂದ್ರ ಚುನಾವಣ ಆಯೋಗ ತಮ್ಮ ಅರ್ಜಿಯಲ್ಲಿ ಆಧಾರ್ ಸಂಖ್ಯೆಗೆ ಒಂದು ಕಾಲಂ ಬಿಟ್ಟಿತ್ತು. ಈಗಲೂ ಈ ಕಾಲಂ ಇದೆ. ಜನರು ಆಧಾರ್ ಮಾಹಿತಿ ಕೊಡಬೇಕೇ ಅಥವಾ ಬೇಡವೇ ಎಂಬ ಮಾಹಿತಿ ಇಲ್ಲದೇ, ಆಧಾರ್ ಮಾಹಿತಿ ಕೊಡುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.