ಫ್ಲಿಂಟಾಫ್ ನಿಂದ ಸಾರಾ ಟೇಲರ್ ವರೆಗೆ.. ಕ್ರಿಕೆಟ್ ಅಂಗಳದಲ್ಲಿ ವಿಚಿತ್ರ ಖಿನ್ನತೆ!
ಕೀರ್ತನ್ ಶೆಟ್ಟಿ ಬೋಳ, Jun 19, 2020, 7:16 PM IST
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ‘ಖಿನ್ನತೆ’ ಬಗೆಗಿನ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಖಿನ್ನತೆ, ಆತಂಕ, ಒತ್ತಡಗಳಿಂದ ಬಹಳಷ್ಟು ಜನರು ಒದ್ದಾಡುತ್ತಾರೆ. ಅದರಲ್ಲೂ ತಾರಾ ಪಟ್ಟ ಏರಿದವರು ಬಹಳಷ್ಟು ಮಂದಿ ತಮ್ಮ ದುಗುಡವನ್ನು ಹೇಳಿಕೊಳ್ಳಲಾಗದೆ, ಬಿಡಲಾಗದೆ ಕೊರಗುತ್ತಾರೆ. ಇದಕ್ಕೆ ಕ್ರೀಡಾಪಟುಗಳೂ ಹೊರತಾಗಿಲ್ಲ.
ಇತ್ತೀಚೆಗಷ್ಟೇ ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ತಮಗಿರುವ ಖಿನ್ನತೆ ಸಮಸ್ಯೆಗಳ ಹೇಳಿಕೊಂಡಿದ್ದರು. ಇದರಿಂದ ಹೊರಬರಲು ಕೆಲ ಕಾಲ ತಂಡದಿಂದಲೂ ಹೊರ ನಡೆದಿದ್ದರು. ಅಂತೆಯೇ ಖಿನ್ನತೆ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಐವರು ಕ್ರಿಕೆಟ್ ಆಟಗಾರರ ಪರಿಚಯ ಇಲ್ಲಿದೆ.
ಮಾರ್ಕಸ್ ಟ್ರೆಸ್ಕೊತಿಕ್
ಇಂಗ್ಲೆಂಡ್ ಕ್ರಿಕೆಟ್ ತಂಡದ ಆಧಾರ ಸ್ಥಂಬವಾಗಿದ್ದ ಮಾರ್ಕಸ್ ಟ್ರೆಸ್ಕೊತಿಕ್ ತನ್ನ ಕ್ರಿಕೆಟ್ ಜೀವನದ ಉತ್ತುಂಗ ಸ್ಥಿತಿಯಲ್ಲಿ ಕ್ರಿಕೆಟ್ ಗೆ ರಾಜೀನಾಮೆ ನೀಡಿದರು. ಕಾರಣ ಮಾರ್ಕಸ್ ತನ್ನ 32ನೇ ವಯಸ್ಸಿನಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು.
2006ರ ಭಾರತದ ಪ್ರವಾಸದ ವೇಳೆ ಮಾನಸಿಕ ಆರೋಗ್ಯದ ಸಮಸ್ಯೆ ಎದುರಾದ ಕಾರಣ ಸರಣಿಯ ನಡುವಿನಲ್ಲೇ ಮಾರ್ಕಸ್ ತವರಿಗೆ ಮರಳಿದ್ದರು. ನಂತರ ತಮ್ಮ ಬಗ್ಗೆ ಹೇಳಿಕೊಂಡಿದ್ದ ಅವರು, ನಿದ್ದೆ ಬರುತ್ತಿರಲಿಲ್ಲ. ಅದಕ್ಕಾಗಿ ನಿದ್ದೆ ಮಾತ್ರೆ ತೆಗೆದುಕೊಂಡು ಮಲಗುತ್ತಿದ್ದೆ ಎಂದಿದ್ದರು. ಈ ಬಗ್ಗೆ ಒಂದು ಪುಸ್ತಕವನ್ನೂ ಬರೆದಿದ್ದರು.
76 ಟೆಸ್ಟ್ ಪಂದ್ಯಗಳನ್ನಾಡಿರುವ ಮಾರ್ಕಸ್, 123 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಜೋನಾಥನ್ ಟ್ರಾಟ್
ದಕ್ಷಿಣ ಆಫ್ರಿಕಾ ಮೂಲದ ಜೋನಾಥನ್ ಟ್ರಾಟ್ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿದ್ದರು. 2013-14ರ ಆ್ಯಶಸ್ ಸರಣಿಯ ವೇಳೆಗೆ ಟ್ರಾಟ್ ಗೆ ಮಾನಸಿಕ ಅನಾರೋಗ್ಯದ ಬಗ್ಗೆ ಅರಿವಾಗಿತ್ತು. ಹೀಗಾಗಿ ಸರಣಿಯ ಮಧ್ಯೆದಲ್ಲೇ ಟ್ರಾಟ್ ಆಸೀಸ್ ನಿಂದ ಇಂಗ್ಲೆಂಡ್ ಗೆ ವಾಪಾಸ್ಸಾಗಿದ್ದರು. ತಮ್ಮ ಸಮಸ್ಯೆಯ ಬಗ್ಗೆ ಯಾರಾದರೂ ಕೇಳಿದರೆ ಟ್ರಾಟ್ ಸಿಡಿಮಿಡಿಗೊಳ್ಳುತ್ತಿದ್ದರು. ನಾನೇನು ಹುಚ್ಚನಲ್ಲ ಎಂದು ರೇಗುತ್ತಿದ್ದರು.
2015ರಲ್ಲಿ ವೆಸ್ಟ್ ಇಂಡೀಸ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟ್ರಾಟ್ ಕಾಣಿಸಿಕೊಂಡಿದಿಲ್ಲ. ಟ್ರಾಟ್ 53 ಟೆಸ್ಟ್ ಪಂದ್ಯವಾಡಿದ್ದು, 68 ಏಕದಿನ ಪಂದ್ಯಗಳನ್ನಾಡಿದ್ದರು. ಆ್ಯಂಡ್ರ್ಯೂ ಸ್ಟ್ರಾಸ್ ನಾಯಕತ್ವದಲ್ಲಿ ಟ್ರಾಟ್ ಪ್ರಧಾನ ಆಟಗಾರರಾಗಿದ್ದರು.
ಸಾರಾ ಟೇಲರ್
ಇಂಗ್ಲೆಂಡ್ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಾರಾ ಟೇಲರ್ ಕೂಡಾ ಡಿಪ್ರೆಶನ್ ಸಮಸ್ಯೆಗೆ ಒಳಗಾದವರೇ. 2006ರಲ್ಲಿ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾದ ಸಾರಾ ಸದ್ಯ ಇಂಗ್ಲೆಂಡ್ ಪರ ಅತೀ ಹೆಚ್ಚು ಅಂತರಾಷ್ಟ್ರೀಯ ರನ್ ಬಾರಿಸಿದ ದಾಖಲೆ ಮಾಡಿದ್ದಾರೆ.
ಅಂತಾರಾಷ್ಟ್ರೀ ಕ್ರಿಕೆಟ್ ನಲ್ಲಿ 6553 ರನ್ ಬಾರಿಸಿರುವ ಸಾರಾ ಅಷ್ಟೇ ಅದ್ಭುತ ವಿಕೆಟ್ ಕೀಪರ್ ಆಗಿದ್ದರು. ವಿಕೆಟ್ ಹಿಂದೆ 232 ಬಾರಿ ಬ್ಯಾಟರ್ ಗಳ ಬೇಟೆಯಾಡಿದ್ದ ಸಾರಾ 2019ರಲ್ಲಿ ಹಠಾತ್ತನೇ ವಿದಾಯ ಹೇಳಿದ್ದರು. ಆತಂಕದಂತಹ ಖಿನ್ನತೆಯಿಂದ ಸಾರಾ ಬಳಲುತ್ತಿದ್ದರು. ಇದಿರಿಂದ ಆಟದ ಮೇಲೆ ಗಮನ ಹರಿಸಲು ಆಗುತ್ತಿರಲಿಲ್ಲ. ನನ್ನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ನಿವೃತ್ತಿಯಾಗಲು ಬಯಸಿದ್ದೇನೆ ಎಂದು ಸಾರಾ ಹೇಳಿದ್ದರು.
ಸ್ಟೀವ್ ಹಾರ್ಮಿಸನ್
ಇಂಗ್ಲೆಂಡ್ ತಂಡದ ವೇಗದ ಬೌಲರ್ ಆಗಿದ್ದ ಸ್ಟೀವ್ ಹಾರ್ಮಿಸನ್ 2002ರಿಮದ 2009ರವರೆಗೆ ರಾಷ್ಟ್ರೀಯ ತಂಡದ ಪರ ಆಡಿದ್ದರು. ತನ್ನ ಘಾತಕ ವೇಗದಿಂದ ಎದುರಾಳಿಗೆ ನಡುಕ ಹುಟ್ಟಿಸುತ್ತಿದ್ದ ಹಾರ್ಮಿಸನ್ ಗೆ ಆತಂಕ ಮತ್ತು ಮನೆಗೀಳು ( ಹೋಮ್ ಸಿಕ್ ನೆಸ್) ಕಾಡುತ್ತಿತ್ತು. ಬಹಳ ಬೇಗನೇ ಈ ಕಾಯಿಲೆಗಳಿಂದ ಹಾರ್ಮಿಸನ್ ಬಳಲುತ್ತಿದ್ದ. ಹೋಟೆಲ್ ಗಳಲ್ಲಿ ರಾತ್ರಿಯೆಲ್ಲಾ ನಿದ್ದೆ ಬರದೇ ಹೊರಳಾಡುತ್ತಿದ್ದ. ಒಬ್ಬನೇ ಕುಳಿತು ಅಳುತ್ತಿದ್ದ.
ಇಂಗ್ಲೆಂಡ್ ತಂಡ ಪ್ರವಾಸ ಮಾಡಿದಾಗೆಲ್ಲಾ ಹಾರ್ಮಿಸನ್ ಮನೆಯ ನೆನಪಾಗಿ ಚಡಪಡಿಸುತ್ತಿದ್ದ. ಇದು ಆಟದ ಮೇಲೂ ಪ್ರಭಾವ ಬೀರುತ್ತಿತ್ತು. 2010ರ ನಂತರ ಹಾರ್ಮಿಸನ್ ತಂಡದಿಂದ ಹೊರಬಿದ್ದ. 2013ರಲ್ಲಿ ವಿದಾಯ ಹೇಳಿದ.
ಆ್ಯಂಡ್ರೂ ಫ್ಲಿಂಟಾಫ್
ಇಂಗ್ಲೆಂಡ್ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆಲ್ ರೌಂಡರ್ ಆ್ಯಂಡ್ರೂ ಫ್ಲಿಂಟಾಫ್ ಕೂಡಾ ಖಿನ್ನತೆಯಿಂದ ಬಳಲುತ್ತಿದ್ದರು. 2006-07 ಆ್ಯಶಸ್ ಸೋಲಿನ ಬಳಿಕ ಫ್ಲಿಂಟಾಫ್ ಖಿನ್ನತೆಗೆ ಜಾರಿದ್ದ. 2007ರ ವಿಶ್ವಕಪ್ ಸಮಯದಲ್ಲೂ ಫ್ಲಿಂಟಾಫ್ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ.
ಆಂಗ್ಲರ ತಂಡದ ಪ್ರಧಾನ ಅಸ್ತ್ರವಾಗಿದ್ದ ಫ್ಲಿಂಟಾಫ್ ಇನ್ನೂರಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ಏಳು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದರು. ಜೊತೆಗೆ 400 ಮಿಕ್ಕಿ ವಿಕೆಟ್ ಕಬಳಿಸಿದ್ದರು.
ಫ್ಲಿಂಟಾಫ್ ನಂತರ ಕುಡಿತದ ದಾಸರಾದರು. ಕುಡಿದು ಕಿರಿಕ್ ಮಾಡಿದ್ದೂ ಇದೆ. ಈ ಬಗ್ಗೆ ಮಾತನಾಡಿದ ಅವರು, ನನಗೆ ಏನು ಆಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ಯಾವುದೂ ಅರ್ಥವಾಗುತ್ತಿರಲಿಲ್ಲ. ಅದಕ್ಕಾಗಿ ಕುಡಿತ ಆರಂಭಿಸಿದೆ. ಆದರೆ ಅಗತ್ಯಕ್ಕಿಂತ ಜಾಸ್ತಿಯೇ ಕುಡಿಯುತ್ತಿದೆ. ಇದು ತಪ್ಪು ಎಂದು ಹಲವರು ಹೇಳಿದ್ದರು, ಆದರೆ ಖಿನ್ನತೆಯ ಬಗ್ಗೆ ಯಾರಲ್ಲಿಯೂ ಹೇಳಲಿಲ್ಲ ಎಂದು ಫ್ಲಿಂಟಾಫ್ ಹೇಳಿಕೊಂಡಿದ್ದರು.
ಕೀರ್ತನ್ ಶೆಟ್ಟಿ ಬೋಳ