Lisa Sthalekar; ಪುಣೆಯ ಕಸದ ತೊಟ್ಟಿಯಿಂದ ಆಸೀಸ್ ಕ್ರಿಕೆಟ್ ವರೆಗೆ; ಇದು ಸ್ಪೂರ್ತಿದಾಯಕ ಪಯಣ
ಕೀರ್ತನ್ ಶೆಟ್ಟಿ ಬೋಳ, Jul 11, 2024, 5:56 PM IST
ಆಗಷ್ಟೇ ಭೂಮಿಗೆ ಬಂದಿದ್ದ ಆ ಮಗುವನ್ನು ಅಪ್ಪಿ ಮುದ್ದಾಡುವ ಬದಲು ಆ ತಾಯಿ ಕಸದ ತೊಟ್ಟಿಗೆ ಎಸೆದಿದ್ದಳು. ಈ ಲೋಕದ ಬೆಳಕು ತೋರಿಸಿದ ತಾಯಿಗೆ ಆ ಮಗುವಿಗೆ ಭವಿಷ್ಯದ ದಾರಿ ತೋರಿಸುವ ಶಕ್ತಿ, ನಸೀಬು ಇರಲಿಲ್ಲ. ಆದರೆ ವಿಧಿಲಿಖಿತ ಬೇರೆಯೇ ಇತ್ತು. ಹೆತ್ತಾಕೆಗೆ ಬೇಡವಾದ ಮಗು ಮುಂದೆ ಇಡೀ ವಿಶ್ವವೇ ಕೊಂಡಾಡುವಂತೆ ಬೆಳೆಯಿತು. ಇದು ಯಾವುದೋ ಸಿನಿಮಾ ಕಥೆಯಲ್ಲ. ದುರಾದೃಷ್ಟದ ಬಾಗಿಲನ್ನು ಒದ್ದು ಕ್ರಿಕೆಟ್ ಲೋಕದಲ್ಲಿ ಮಿಂಚಿನಂತೆ ಪ್ರಕಾಶಿಸಿದ ಲಿಸಾ ಸ್ಥಾಲೇಕರ್ ಯಶೋಗಾಥೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಗಿ ಮಿಂಚಿ, ಹಲವು ದಾಖಲೆಗಳನ್ನು ಬರೆದು, ಆಸೀಸ್ ತಂಡದ ನಾಯಕತ್ವ ವಹಿಸಿದ್ದ, ನಾಲ್ಕು ಬಾರಿ ವಿಶ್ವಕಪ್ ಗೆದ್ದ ಸಾಧಕಿ ಲಿಸಾ ಸ್ಥಾಲೇಕರ್ ಜನಿಸಿದ್ದು ಭಾರತದ ಪುಣೆಯಲ್ಲಿ! ಇದು ವಿಚಿತ್ರವಾದರೂ ಸತ್ಯ.
1979ರ ಆಗಸ್ಟ್ 13ರಂದು ಪುಣೆಯ ಯಾವುದೋ ಮೂಲೆಯಲ್ಲಿ ಹೆಣ್ಣುಮಗಳೊಬ್ಬಳು ಮಗುವೊಂದಕ್ಕೆ ಜನ್ಮ ನೀಡಿದ್ದಳು. ಆದರೆ ಪರಿಸ್ಥಿತಿಯ ಒತ್ತಡವೋ, ಆ ಮಗುವಿನ ಹಣೆ ಬರಹದ ಪ್ರಭಾವವೋ ಏನೋ, ಕೆಲವೇ ಕ್ಷಣಗಳ ಹಿಂದೆ ‘ತಾಯಿ’ ಪಟ್ಟಕ್ಕೇರಿದ ಆ ಹೆಣ್ಣು ಈ ಮಗುವನ್ನು ಕಸದ ತೊಟ್ಟಿಯಲ್ಲಿ ಇಟ್ಟು ತನ್ನ ತಾಯ್ತನಕ್ಕೆರೆಗಿದ ಶಾಪಕ್ಕೆ ನೊಂದು ಅಲ್ಲಿಂದ ನಡೆದಿದ್ದಳು. ಆದರೆ ಆಕೆ ಮಾಡಿದ ಒಂದು ಒಳ್ಳೆಯ ಕೆಲಸವೆಂದರೆ ಮಗುವನ್ನು ಅನಾಥಾಶ್ರಮದ ಬಳಿ ಬಿಟ್ಟು ಹೋಗಿದ್ದು.
ಹೀಗೆ ಈ ಮಗು ಪುಣೆಯ ಶ್ರೀವಾಸ್ತವ ಅನಾಥಾಶ್ರಮ ಸೇರಿತ್ತು. ಅಳು ಕೇಳಿ ಬಂದ ಅಲ್ಲಿನ ಮ್ಯಾನೇಜರ್ ಮಗುವನ್ನೆತ್ತಿಕೊಂಡು ಆಶ್ರಮ ಸೇರಿಸಿದ್ದರು. ಅಲ್ಲಿ ಆ ಹೆಣ್ಣು ಮಗುವಿಗೆ ನಾಮಕರಣವೂ ಆಗಿತ್ತು. ಮ್ಯಾನೇಜರ್ ಅಂದು ಆಕೆಗೆ ಇಟ್ಟ ಹೆಸರು ‘ಲೈಲಾ.’
ಸರಿಯಾದ ಸಮಯಕ್ಕೆ ಎಲ್ಲವೂ ಕೂಡಿ ಬಂದಾಗಲೇ ಉತ್ತಮವಾದದ್ದು ಏನೋ ಆಗುತ್ತದೆ ಎನ್ನುವಂತೆ, ಇದೇ ಸಮಯದಲ್ಲಿ ಡಾ. ಹರೇನ್ ಮತ್ತು ಸ್ಯೂ ಸ್ಥಾಲೇಕರ್ ಎಂಬ ದಂಪತಿ ಮಗುವೊಂದನ್ನು ದತ್ತು ಪಡೆಯಲು ಮುಂದಾಗಿದ್ದರು. ಅದಾಗಲೇ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದ ಈ ದಂಪತಿ ಗಂಡು ಮಗುವನ್ನು ತಮ್ಮ ಕುಟುಂಬಕ್ಕೆ ಸೇರಿಸಬೇಕೆಂದು ಬಯಸಿದ್ದರು.
ಇದನ್ನೂ ಓದಿ:ಚಪ್ರಿ ಎಂದಿದ್ದ ಜನರೇ ಇದೀಗ ಕೊಂಡಾಡುತ್ತಿದ್ದಾರೆ…: ಹಾರ್ದಿಕ್ ಯಶಸ್ಸಿನ ಕಥೆ
ಇನ್ನೇನು ಅಮೆರಿಕಾಗೆ ತೆರಳಬೇಕು ಎನ್ನುವ ಮೊದಲು ಈ ದಂಪತಿ ಪುಣೆಯ ಶ್ರೀವಾಸ್ತವ ಅನಾಥಶ್ರಮಕ್ಕೆ ಬಂದಿದ್ದರು. ಗಂಡು ಮಗುವೊಂದನ್ನು ಹುಡುಕಿಕೊಂಡು ಬಂದಿದ್ದ ದಂಪತಿಗೆ ಈ ಮೂರು ವಾರದ ಹೆಣ್ಣು ಮಗುವನ್ನು ಕಂಡಾಗ ಏನನಿಸಿತೋ, ವಿಶಿಷ್ಟ ಬಂಧನವೊಂದು ಸುತ್ತು ಹಾಕಿದಂತಾಯಿತು. ಲೈಲಾಳನ್ನು ದತ್ತು ಪಡೆದ ಅವರು ಆಕೆಯನ್ನು ಕರೆದುಕೊಂಡು ಅಮೆರಿಕಾಗೆ ತೆರಳಿದರು. ಹೀಗೆ ಲೈಲಾ ಲಿಸಾ ಸ್ಥಾಲೇಕರ್ ಆದರು.
ಅಮೆರಿಕಾದಿಂದ ಕೀನ್ಯಾಗೆ ತೆರಳಿದ ಲಿಸಾ ತಂದೆ ತಾಯಿ ಅಲ್ಲಿಂದ ಆಸ್ಟೇಲಿಯಾಗೆ ತೆರಳಿದರು. ಆಗ ಲಿಸಾಗೆ ನಾಲ್ಕರ ಹರೆಯ. ಕಾಂಗರೂ ನಾಡಿನ ಪೌರತ್ವ ಪಡೆಯುವ ಉದ್ದೇಶದಿಂದ ಅಲ್ಲೇ ನೆಲೆಸುವ ನಿರ್ಧಾರ ಮಾಡಿದರು. ಭಾರತೀಯ ತಂದೆ ಡಾ. ಹರೇನ್ ಮತ್ತು ಇಂಗ್ಲೀಷ್ ತಾಯಿ ಸ್ಯೂ ಸ್ಥಾಲೇಕರ್ ಮಗಳು ಲಿಸಾ ಆಸ್ಟೇಲಿಯಾದ ಸಿಡ್ನಿಯಲ್ಲಿ ತನ್ನ ಬಾಲ್ಯ ಕಳೆದರು.
ತಂದೆಯಿಂದಲೇ ಮನೆಯಂಗಳದಲ್ಲಿ ಲಿಸಾಗೆ ಮೊದಲ ಬಾರಿ ಕ್ರಿಕೆಟ್ ಪರಿಚಯವಾಗಿತ್ತು. ಸ್ಥಳೀಯ ಬೀದಿಯ ಹುಡುಗರೊಂದಿಗೆ ಆಡಲು ಆರಂಭಿಸಿದ ಲಿಸಾ ಬಳಿಕ ವೆಸ್ಟ್ ಪೆನ್ನಂಟ್ ಹಿಲ್ಸ್ ಚೆರ್ರಿಬ್ರೂಕ್ ಕ್ರಿಕೆಟ್ ಕ್ಲಬ್ ಸೇರಿ ತನ್ನ ಆಟವನ್ನು ಇನ್ನಷ್ಟು ಉನ್ನತಕ್ಕೆ ಕೊಂಡೊಯ್ದರು.
ನ್ಯೂಸೌತ್ ವೇಲ್ಸ್ ಪರವಾಗಿ ಆಡುತ್ತಿದ್ದ ಲಿಸಾ 2001ರ ಜೂನ್ 29ರಂದು ಆಸ್ಟ್ರೇಲಿಯಾ ರಾಷ್ಟ್ರೀಯ ವನಿತಾ ತಂಡಕ್ಕೆ ಪದಾರ್ಪಣೆ ಮಾಡಿದರು. ಆಸೀಸ್ ಪರವಾಗಿ ಮೂರು ಮಾದರಿಯಲ್ಲಿ 187 ಪಂದ್ಯವಾಡಿರುವ ಲಿಸಾ ಒಟ್ಟು 3913 ರನ್ ಗಳಿಸಿದ್ದಾರೆ. ಅಲ್ಲದೆ 229 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಇದನ್ನೂ ಓದಿ:1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್
ವನಿತಾ ಕ್ರಿಕೆಟ್ ನಲ್ಲಿ 1000 ರನ್ ಮತ್ತು ನೂರು ವಿಕೆಟ್ ಪಡೆದ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದವರು ಲಿಸಾ. 2005 ಮತ್ತು 2013ರ ಏಕದಿನ ವಿಶ್ವಕಪ್, 2010 ಮತ್ತು 2012ರ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ ಲಿಸಾ ಸ್ಥಾಲೇಕರ್ ಆಸ್ಟ್ರೇಲಿಯಾ ಮತ್ತು ಐಸಿಸಿ ಹಾಲ್ ಆಫ್ ಫೇಮ್ ಗೆದ್ದ ಅಪರೂಪದ ಸಾಧಕಿ.
ಅದೃಷ್ಟದ ಬಲದಿಂದ ಕಸದ ತೊಟ್ಟಿಯಿಂದ ಉತ್ತಮ ಬದುಕು ಸಿಕ್ಕರೆ, ನಂತರದ ಸಾಧನೆಗೆ ಲಿಸಾ ಕಠಿಣ ಪರಿಶ್ರಮವೇ ಕಾರಣ. ನನಗೆ ಜೀವನ ಕೊಟ್ಟ ಪೋಷಕರು ಇರುವಾಗ ನಾನೇಕೆ ನಿಜವಾದ ತಂದೆ ತಾಯಿಯನ್ನು ಹುಡುಕಬೇಕು ಎನ್ನುವ ಲಿಸಾ ಜೀವನಕಥೆ ಯಾವುದೇ ಸಿನಿಮಾಗೆ ಕಡಿಮೆಯಿಲ್ಲ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?
Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.