ಭಾಂದವ್ಯ ಬೆಸೆಯುವ ರಾಷ್ಟ್ರೀಯ ಹಬ್ಬ ಗಣೇಶ ಚತುರ್ಥಿ
ಧರ್ಮಜಾಗೃತಿಯ ಜತೆಗೆ ಜಾತಿ, ಧರ್ಮಗಳನ್ನು ಮೀರಿದ ದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು.
Team Udayavani, Aug 29, 2022, 12:09 PM IST
ದೇಶ-ವಿದೇಶಗಳಲ್ಲೂ ಜನಪ್ರಿಯಗೊಂಡಿರುವ ಗಣೇಶ ಚತುರ್ಥಿ ಇಂದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಗಣೇಶ ಚೌತಿ ಹಿಂದುಗಳ ಪವಿತ್ರ ಹಬ್ಬ. ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಆಚರಿಸುವ ದಿನ. ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ.
ಗಣೇಶ ಹಬ್ಬದ ವೈಶಿಷ್ಟ್ಯ: ಇದೀಗ ಗಣೇಶ ಚತುರ್ಥಿ ನಮ್ಮೆಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಹಬ್ಬದ ಸಡಗರಕ್ಕೆ ಒಂದೆಡೆಯಿಂದ ತಳಿರು ತೋರಣದ ಬಿರುಸು ಪ್ರಾರಂಭಗೊಂಡಿದ್ದರೆ, ಮತ್ತೊಂದೆಡೆಯಿಂದ ತಿಂಗಳುಗಟ್ಟಲೆಯ ಪೂಜೆ ಸ್ವೀಕರಿಸಲು ಗಣೇಶನ ವಿಗ್ರಹ ಕೂಡ ಭರದಿಂದ ಸಿದ್ಧಗೊಳ್ಳುತ್ತಿದೆ. ಗಣೇಶ ಹಬ್ಬದ ವಿಶೇಷತೆಯೇ ಅದು. ಎಲ್ಲಾ ಹಬ್ಬಗಳ ಆಚರಣೆ ಹೆಚ್ಚೆಂದರೆ ಮೂರ್ನಾಲ್ಕು ದಿನಗಳಿದ್ದರೆ ಈ ಗಣೇಶ ಹಬ್ಬವು ಕೆಲವೆಡೆ ಬರೋಬ್ಬರಿ ಒಂದು ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ. ಮಣ್ಣಿನ ಗಣಪನಿಗೆ ಅಲಂಕಾರ ಮಾಡಿ ಅದರ ಮುಂದೆ ನಮ್ಮೆಲ್ಲರ ತಾಪತ್ರಯಗಳನ್ನು ತಿಳಿಸಿ ಮನಸ್ಸು ಹಗುರಾಗಿಸಿ ಕೊನೆಗೆ ಆತನನ್ನು ನೀರಲ್ಲಿ ಲೀನಗೊಳಿಸುವುದು ಗಣೇಶ ಹಬ್ಬದ ವೈಶಿಷ್ಟ್ಯ.
ಹಿನ್ನೆಲೆ: ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ, ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ.
ಮನೆ, ದೇವಸ್ಥಾನಗಳಿಗೆ ಮಾತ್ರ ನಡೆಯುತ್ತಿದ್ದ ’ಚೌತಿ’ಗೆ ಸಾರ್ವಜನಿಕ ವೇದಿಕೆ ಒದಗಿಸುವ ಪರಂಪರೆಗೆ ನಾಂದಿ ಹಾಡಿದ್ದು ಬಾಲಗಂಗಾಧರ ತಿಲಕ್ ಅವರು. ಗಣೇಶೋತ್ಸವಗಳ ಮೂಲಕ ಜನರನ್ನು ಒಂದುಗೂಡಿಸಿ ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳ್ಳಲು ಏಕತೆಯನ್ನು ಸಾಧಿಸುವ ತಿಲಕ್ ಅವರ ಪ್ರಯತ್ನ ಧರ್ಮಜಾಗೃತಿಯ ಜತೆಗೆ ಜಾತಿ, ಧರ್ಮಗಳನ್ನು ಮೀರಿದ ದೇಶಭಕ್ತಿ, ಏಕತಾ ಶಕ್ತಿಗೆ ಮುನ್ನುಡಿ ಬರೆಯಿತು.
ಬಾಲಗಂಗಾಧರ ತಿಲಕರ ಕೊಡುಗೆ: 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.
ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಲೋಕಮಾನ್ಯ ತಿಲಕರು, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ಹೋಗಲಾಡಿಸಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಸಮರ್ಪಕವಾಗಿ ಬಳಸಿಕೊಂಡರು.
ಆರಂಭದಲ್ಲಿ ಇದು ಜಾತಿ-ಜಾತಿಗಳ ನಡುವಿನ ಏಕತೆಯ ಪ್ರತೀಕದಂತೆ ಕಂಡು ಬಂದರೂ ಕ್ರಮೇಣ, ಬ್ರಿಟೀಷ್ ದುರಾಡಳಿತದ ವಿರುದ್ಧ ತಿಲಕರು ಆರಂಭಿಸಿದ ಪರೋಕ್ಷ ಹೋರಾಟ ಎಂಬುದು ಅರ್ಥವಾಯಿತು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರ ಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ ದೇವಸ್ವರೂಪಿಯಾಗಿದ್ದ.
ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಮುಖ್ಯ ಹಬ್ಬವಾಗಿದ್ದ ಗಣೇಶೋತ್ಸವ, ಸ್ವರಾಜ್ ಆಂದೋಲನದ ಸಂದರ್ಭದಲ್ಲಿ ಸಂಘಟಿತ ಸ್ವರೂಪ ಪಡೆಯಿತು. ಗಣೇಶನ ಬೃಹತ್ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು, ಚರ್ಚಾಗೋಷ್ಠಿಗಳು ಮುಂತಾದವುಗಳ ರೂಪದಲ್ಲಿ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು.
ಜನರ ಮೇಲೆ ನಿಯಂತ್ರಣ ಹೇರಲು ಬ್ರಿಟಿಷ್ ಆಡಳಿತವು ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು. ಅಲ್ಲಿಂದ ಮುಂದಕ್ಕೆ ಪ್ರತಿವರ್ಷ ಇದೇ ಕ್ರಮ ಮುಂದುವರಿಯಿತು. `ದೇವರು ಸರ್ವರಿಗೂ ಸೇರಿದವನು’ ಎಂಬ ತಿಲಕರ ಕರೆಗೆ ಓಗೊಟ್ಟು ಎಲ್ಲ ಜಾತಿ, ಪಂಥಗಳ ಜನರೂ ಒಂದಾದರು. ಒಟ್ಟಿಗೇ ಸೇರಿದರು. ಪೂಜೆ ಮಾಡಿದರು. ದೇಶಕ್ಕೆ ಒದಗಿಬಂದಿರುವ ದಾಸ್ಯವನ್ನು ತೊಲಗಿಸಲು ಸಂಕಲ್ಪ ಮಾಡತೊಡಗಿದರು. ತಮ್ಮ ತಮ್ಮ ಊರು, ಪ್ರದೇಶಗಳಿಗೂ ಮೀರಿದ ರಾಷ್ಟ್ರೀಯ ದೃಷ್ಟಿಯನ್ನು ಸಾಮಾನ್ಯ ಜನರೂ ಪಡೆಯತೊಡಗಿದರು.
ಭಾರತೀಯ ಜನರು ಒಂದೆಡೆ ಸೇರುವುದನ್ನು ತಡೆಯಲು ಬ್ರಿಟಿಷ್ ಸರಕಾರ ಯತ್ನಿಸುತ್ತಿದ್ದ ಕಾಲ ಅದು. ಆ ಸಮಯದಲ್ಲಿ ಊರೂರುಗಳಿಗೂ ಸಾರ್ವಜನಿಕ ಗಣೇಶೋತ್ಸವ ಪ್ರವೇಶಿಸಿತು. ಹಬ್ಬದ ಸಮಯದಲ್ಲಿ ಸಾರ್ವಜನಿಕವಾಗಿ ಸಂಗೀತ, ನೃತ್ಯ, ನಾಟಕ, ಕವಿಗೋಷ್ಠಿ, ಕಥಾಶ್ರವಣ, ಭಾಷಣ – ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುವಂತೆ ತಿಲಕರು ಪ್ರೋತ್ಸಾಹಿಸಿದರು. ವಿವಿಧ ಭಾಷೆ ಹಾಗೂ ಪ್ರಾಂತ್ಯಗಳ, ಆದರೆ ಒಂದೇ ದೇಶದ, ಮಕ್ಕಳನ್ನು ಒಂದಾಗಿ ಬೆಸೆಯಿತು ಗಣೇಶ ಚೌತಿ.
ಹೀಗೆ ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಮೂಲಕ ತಿಲಕರು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ಕಷ್ಟಕರವಾದ ಪರಿಸ್ಥಿತಿಯನ್ನು ನಿರ್ಮಿಸಿದರು. ಭಾರತೀಯರ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾದದೇ ಇದ್ದೂದೂ ಬ್ರಿಟಷರ ನಿರ್ಗಮನಕ್ಕೆ ಒಂದು ಕಾರಣ. ಜನರು ಮಾನಸಿಕವಾಗಿ ಬ್ರಿಟಿಷರೊಡನೆ ಒಂದಾಗದೇ ಇದ್ದುದು, ಅವರ ಮೇಲ್ಮೆಯನ್ನು ಸ್ವೀಕರಿಸದೇ ಇದ್ದುದು, ಅವರ ಆಳ್ವಿಕೆಗೆ ದೊಡ್ಡ ಪೆಟ್ಟು ಕೊಟ್ಟಿತು. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಗಣೇಶ ಚತುರ್ಥಿ ಬಹಳ ಸಹಕಾರಿಯಾಯಿತು.
ಸ್ವಾತಂತ್ರ್ಯಾ ನಂತರ ಗಣೇಶೋತ್ಸವ: ಸ್ವಾತಂತ್ರ್ಯದ ಬಳಿಕವೂ ಧಾರ್ಮಿಕವಾಗಿ ಬಹಳಷ್ಟು ಮಹತ್ವ ಪಡೆದ ಗಣೇಶೋತ್ಸವನ್ನು ಇಂದು ಬೀದಿ-ಬೀದಿಗಳಲ್ಲಿ ಆಚರಿಸಲಾಗುತ್ತಿದೆ.ದೇಶದ ವಿವಿಧೆಡೆಗಳಲ್ಲಿ ವಿಜೃಂಭಣೆಯಿಂದ ನಡೆಯುವ ಚೌತಿ ಹಬ್ಬವು ಇಂದು ಬಹುತೇಕ ’ಸಾರ್ವಜನಿಕ ಗಣೇಶೋತ್ಸವ’ ಗಳೊಂದಿಗೆ ಸೇರಿಹೋಗಿದೆ. ಯಾಕೆಂದರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸಂಘಗಳ ಕಾರ್ಯಚಟುವಟಿಕೆ ಆ ರೀತಿ ಇದೆ.
ಕರಾವಳಿ ಕರ್ನಾಟಕದಲ್ಲಂತೂ ’ಚೌತಿ’ ಎಂಬುದು “ಮನೆ ಮನೆಗಳಲ್ಲಿ ಆರಾಧನೆ’ ಎನ್ನುವುದಕ್ಕಿಂತಲೂ ’ಸಾರ್ವಜನಿಕ ಗಣೇಶೋತ್ಸವದೊಂದಿಗೆ ಸೇರಿ ಮಾಡುವ ಆಚರಣೆ’ ಎನ್ನುವಷ್ಟರ ಮಟ್ಟಿಗಿದೆ. ಇತ್ತೀಚಿನ ವರ್ಷ ಗಳಲ್ಲಂತೂ ಗಣೇಶೋತ್ಸವ ಸಮಿತಿಗಳ ಮೂಲಕವೇ ’ಚೌತಿ’ ನಡೆಯುವಂತಾಗಿದೆ.ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು.
– ಯಶಸ್ವಿನಿ ಸುರೇಂದ್ರ ಗೌಡ, ಕೊಟ್ಟಿಗೆಹಾರ
ಮೈಸೂರ್ ವಿಶ್ವವಿದ್ಯಾಲಯ ಮೈಸೂರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.