Olympics Vs Para; ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಹೆಚ್ಚು ಯಶಸ್ಸು ಸಿಕ್ಕಿದ್ಹೇಗೆ?
ಪ್ಯಾರಿಸ್ ಒಲಿಂಪಿಕ್ಸ್ ಗಿಂತ 5 ಪಟ್ಟು ಹೆಚ್ಚು ಪದಕ ಗೆದ್ದ ಪ್ಯಾರಾ ಪಟುಗಳು
ಕೀರ್ತನ್ ಶೆಟ್ಟಿ ಬೋಳ, Sep 12, 2024, 5:27 PM IST
2024 ರ ಪ್ಯಾರಾಲಿಂಪಿಕ್ಸ್ ನಲ್ಲಿ (Paralympics) ಭಾರತ ಐತಿಹಾಸಿಕ ಪ್ರದರ್ಶನ ನೀಡಿದೆ. ಕೂಟದಲ್ಲಿ 29 ಪದಕಗಳನ್ನು ಗೆದ್ದಿದೆ. ವಿಶೇಷ ಸಾಮರ್ಥ್ಯವುಳ್ಳ ಅಥ್ಲೀಟ್ ಗಳ ಚತುರ್ವಾರ್ಷಿಕ ಮಹಾ ಕೂಟದಲ್ಲಿ ಇದು ಭಾರತದ ಅತ್ಯುತ್ತಮ ಸಾಧನೆಯಾಗಿದೆ. ಅದಕ್ಕಿಂತ ಕೆಲವೇ ದಿನ ಮೊದಲು ನಡೆದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆಗಿಂತ ಪ್ಯಾರಾಲಿಂಪಿಯನ್ ಗಳ ಸಾಧನೆಯು ಸುಮಾರು ಐದು ಪಟ್ಟು ಹೆಚ್ಚು. ಪ್ಯಾರಿಸ್ ಒಲಿಂಪಿಕ್ಸ್ (Paris Olympics) ನಲ್ಲಿ ಭಾರತದ ಅಥ್ಲೀಟ್ ಗಳು ಕೆಲವು ಪದಕಗಳಿಂದ ಸ್ವಲ್ಪದರಲ್ಲಿ ತಪ್ಪಿದ್ದು ಈ ಬಾರಿಯ ವಿಶೇಷತೆಯಾದರೆ, ಪ್ಯಾರಾಲಿಂಪಿಕ್ಸ್ ನಲ್ಲಿನ ಪದಕಗಳ ಸಾಧನೆಗಳನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು.
ಟೋಕಿಯೋ ಒಲಿಂಪಿಕ್ಸ್ ಗಿಂತಲೂ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಸಾಧನೆ ಕಳಪೆಯಾಗಿತ್ತು. ಟೋಕಿಯೋದಲ್ಲಿ ಭಾರತ 10 ಪದಕ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಒಲಿಂಪಿಯನ್ ಗಳು ಗೆದ್ದಿದ್ದು ಒಟ್ಟು 6 ಪದಕಗಳು. ಇದೇ ವೇಳೆ ಪ್ಯಾರಾಲಂಪಿಕ್ಸ್ ನಲ್ಲಿ ಗೆದ್ದಿರುವುದು ಒಟ್ಟು 29 ಪದಕಗಳು.
ಹಾಗಾದರೆ ಪ್ಯಾರಾ ಅಥ್ಲೀಟ್ಸ್ ಗಳ ಸಾಧನೆಯ ಹಿಂದಿನ ಕಾರಣವೇನು? ದೇಶದಲ್ಲಿ ಸ್ಪೋರ್ಟ್ಸ್ ಕಲ್ಚರ್ ಬೆಳೆಯುತ್ತಿರುವ ಸಂದರ್ಭದಲ್ಲಿ ಪ್ಯಾರಾ ಕ್ರೀಡೆ ಸುಧಾರಣೆ ಹೇಗೆ ಆಗಿತ್ತು? ಅದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
ಟೋಕಿಯೋದಿಂದ ಸಿಕ್ಕ ಬೆಂಬಲ
ಪ್ಯಾರಿಸ್ ಪ್ಯಾರಲಂಪಿಕ್ಸ್ ನಲ್ಲಿ ಭಾರತದ ಈ ಸಾಧನೆಗೆ ನೀರೆರೆದಿದ್ದು ಟೋಕಿಯೋ ಪ್ಯಾರಲಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳು ಮಾಡಿದ ಸಾಧನೆ. ಅಲ್ಲಿಯ ಪ್ರದರ್ಶನ ಕಂಡು ಪ್ಯಾರಾ ಪಟುಗಳಿಗೆ ಭಾರತ ಸರ್ಕಾರದಿಂದ ಹೆಚ್ಚಿನ ಬೆಂಬಲ ಸಿಕ್ಕಿತು. ಈ ಕ್ರೀಡಾಪಟುಗಳ ಪ್ರದರ್ಶನ ಎದ್ದು ಕಾಣುತ್ತಿದ್ದಂತೆ ಅದು ಹೆಚ್ಚಿನ ಹಣವನ್ನೂ ಆಕರ್ಷಿಸಿತು. ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿಯ ಪ್ರಕಾರ, ಭಾರತ ಸರ್ಕಾರವು ಪ್ಯಾರಿಸ್ ಕೂಟದ (ತರಬೇತಿಯಿಂದ ಹಿಡಿದು) ಹಿಂದೆ 74 ಕೋಟಿ ರೂ. ಹೂಡಿಕೆ ಮಾಡಿದೆ. ಇದು ಟೋಕಿಯೋ 2021 ಕ್ಕೆ ಖರ್ಚು ಮಾಡಿದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು.
ಮೆಟ್ಟಿಲಾದ ಪ್ಯಾರಾ ಖೇಲೋ
2023ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ (KIPG) ಭಾರತದಲ್ಲಿ ಪ್ಯಾರಾ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಮಹತ್ವದ ಮೈಲಿಗಲ್ಲಾಯಿತು. ಮೂರು ಸ್ಥಳಗಳಲ್ಲಿ ಆಯೋಜಿಸಲಾದ ಈ ಬಹು-ಕ್ರೀಡಾ ಕಾರ್ಯಕ್ರಮವು ಏಳು ವಿಭಾಗಗಳನ್ನು ಒಳಗೊಂಡಿತ್ತು: ಪ್ಯಾರಾ ಆರ್ಚರಿ, ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಟೇಬಲ್ ಟೆನಿಸ್, ಪ್ಯಾರಾ ಪವರ್ ಲಿಫ್ಟಿಂಗ್, ಸಿಪಿ ಫುಟ್‌ಬಾಲ್ ಮತ್ತು ಪ್ಯಾರಾ ಶೂಟಿಂಗ್. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸರಿಸುಮಾರು 1,500 ಕ್ರೀಡಾಪಟುಗಳು, 200 ತಾಂತ್ರಿಕ ಅಧಿಕಾರಿಗಳು, 150 ಸ್ವಯಂ ಸೇವಕರು, 350 ಸಹಾಯಕ ಸಿಬ್ಬಂದಿ, 300 ಎಸ್ಕಾರ್ಟ್ ಗಳು ಭಾಗವಹಿಸಿದ್ದರು.
ಕೆಐಪಿಜಿ ವಿಶೇಷ ಸಾಮರ್ಥ್ಯವುಳ್ಳ ಕ್ರೀಡಾಪಟುಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುವ ಗುರಿಯೊಂದಿಗೆ ಆರಂಭವಾಗಿತ್ತು. ಲೈವ್ ಟೆಲಿಕಾಸ್ಟ್ ಮತ್ತು ಲೈವ್ ಸ್ಕೋರಿಂಗ್ ಸಿಸ್ಟಮ್ ನೊಂದಿಗೆ ಉನ್ನತ ವೃತ್ತಿಪರತೆಯೊಂದಿಗೆ ಕೂಟ ನಡೆಸಲಾಗಿತ್ತು. ಹೆಚ್ಚಿದ ಪ್ರಚಾರ ಮತ್ತು ಧನಸಹಾಯವು ಉತ್ತಮ ತರಬೇತಿಗೆ ಅವಕಾಶ ಮಾಡಿಕೊಟ್ಟಿತು. ಈ ಕಾರಣದಿಂದಲೇ ಪ್ಯಾರಿಸ್ ನಲ್ಲಿ ನಡೆದ ಮೆಗಾ ಕ್ರೀಡಾಕೂಟಕ್ಕೆ ದಾಖಲೆಯ 84 ಸದಸ್ಯರ ತಂಡವನ್ನು ಕಳುಹಿಸಲು ಭಾರತಕ್ಕೆ ಸಾಧ್ಯವಾಯಿತು.
ಪ್ರತ್ಯೇಕತೆಯ ಲಾಭ
ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಸುಧಾರಿತ ಪ್ರದರ್ಶನದ ಹಿಂದಿನ ಒಂದು ಪ್ರಮುಖ ಅಂಶವೆಂದರೆ ಕ್ರೀಡಾ ವಿಭಾಗಗಳ ಪ್ರತ್ಯೇಕತೆ. ಪ್ಯಾರಾಲಿಂಪಿಕ್ಸ್ ಅಥ್ಲೀಟ್ ಗಳನ್ನು ಅವರ ಅಂಗವೈಕಲ್ಯಗಳ ಆಧಾರದ ಮೇಲೆ ವರ್ಗೀಕರಿಸುತ್ತದೆ. ಭಾಗಶಃ ಅಥವಾ ಸಂಪೂರ್ಣವಾಗಿ ಕುರುಡು, ಅಂಗ ವೈಕಲ್ಯಗಳು, ಬೌದ್ಧಿಕ ಅಸಾಮರ್ಥ್ಯಗಳು ಇತ್ಯಾದಿ ಹೀಗೆ ಪ್ರತ್ಯೇಕ ವಿಭಾಗ ಮಾಡಲಾಗುತ್ತದೆ. ಈ ಪ್ರತ್ಯೇಕತೆಯು ಕ್ರೀಡಾಪಟುಗಳು ಮಿಶ್ರ ಸ್ಪರ್ಧಿಗಳ ವಿರುದ್ಧದ ಬದಲಿಗೆ ಅವರ ನಿರ್ದಿಷ್ಟ ವರ್ಗಗಳಲ್ಲಿ ಸ್ಪರ್ಧಿಸುತ್ತಾರೆ. ಉದಾಹಣೆಗೆ ಜಾವೆಲಿನ್ ನಲ್ಲಿ ಚಿನ್ನ ಗೆದ್ದ ಸುಮಿತ್ ಅಂಟಿಲ್ ಅವರು ಎಫ್ 54 ವಿಭಾಗದಲ್ಲಿ ಗೆದ್ದರೆ, ನವದೀಪ್ ಸಿಂಗ್ ಅವರು ಎಫ್ 41 ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಕ್ರೀಡಾಪಟುಗಳ ಸಣ್ಣ ಗುಂಪುಗಳು ಕೂಡಾ ಯಶಸ್ಸಿಗೆ ಒಂದು ಕಾರಣವಾಗುತ್ತದೆ. ಆದರೂ ಇದು ಸುಲಭವೇನಲ್ಲ!
ಟೋಕಿಯೋದಲ್ಲಿ 100 ಮೀಟರ್ ಟಿ12 ವೇಗದ ಸ್ಪರ್ಧೆಯಲ್ಲಿ 11ನೇ ಸ್ಥಾನ ಪಡೆದಿದ್ದ ಸಿಮ್ರನ್ ಸಿಂಗ್, ಈ ಬಾರಿ 200 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಸರಿಯಾದ ತರಬೇತಿ ನೀಡಿದರೆ ಒಲಿಂಪಿಕ್ ಮತ್ತು ಪ್ಯಾರಾಲಂಪಿಕ್ ಪ್ರದರ್ಶನಗಳ ನಡುವಿನ ಅಂತರವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಪ್ಯಾರಾ ಕೋಚ್ ರಾಹುಲ್ ಬಾಲಕೃಷ್ಣ. ಟೋಕಿಯೋ ಪ್ರದರ್ಶನದ ಬಳಿಕ ಸಿಮ್ರನ್ ಅವರಿಗೆ ಭಾರತ ಸರ್ಕಾರವು ಕೋಚ್ ಮತ್ತು ಗೈಡ್ ರನ್ನು ವ್ಯವಸ್ಥೆ ಮಾಡಿತ್ತು. ಪ್ಯಾರಾ-ಕ್ರೀಡಾಪಟುಗಳನ್ನು ಆರಂಭದಲ್ಲಿಯೇ ಗುರುತಿಸುವುದು ಮತ್ತು ಬೆಂಬಲ ನೀಡುವುದರಿಂದ ಭವಿಷ್ಯದ ಒಲಿಂಪಿಕ್ ಗಳಲ್ಲಿ ಇನ್ನೂ ಹೆಚ್ಚಿನ ಫಲಿತಾಂಶಗಳನ್ನು ನೀಡಬಹುದು ಎನ್ನುತ್ತಾರೆ ಅವರು.
ಈ ಬಾರಿಯ ಪ್ಯಾರಾಲಂಪಿಕ್ಸ್ ನಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. 17 ಪದಕಗಳು ಅಥ್ಲೆಟಿಕ್ಸ್ ನಲ್ಲಿಯೇ ಗೆದ್ದುಕೊಂಡಿದೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಕಳೆದ ಬಾರಿ ಟೋಕಿಯೋದಲ್ಲಿ ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆ 18!
ಮೂಲಸೌಕರ್ಯಗಳು
ವಿವಿಧ ಕ್ರೀಡೆಗಳಲ್ಲಿ ದೇಶದ ಯಶಸ್ಸಿನಲ್ಲಿ ಸಾಂಸ್ಕೃತಿಕ ಅಂಶಗಳು ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. 2024 ರ ಪ್ಯಾರಾಲಿಂಪಿಕ್ಸ್ ನಲ್ಲಿ ಶೂಟಿಂಗ್ ಮತ್ತು ಬ್ಯಾಡ್ಮಿಂಟನ್, ಎಸೆತ ಕ್ರೀಡೆಗಳಲ್ಲಿ ಭಾರತದ ಸಾಧನೆಗಳಿಗೆ ಸರಿಯಾದ ಇಕೋ-ಸಿಸ್ಟಮ್ ಕಾರಣವೆಂದು ಹೇಳಬಹುದು.
ಸೋನಿಪತ್ ಟಾಪ್ ಥ್ರೋಯಿಂಗ್ ಅಥ್ಲೀಟ್ ಗಳನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದಲ್ಲಿ ಶೂಟಿಂಗ್ ತರಬೇತಿ ನೀಡಲಾಗುತ್ತಿದೆ. ಹೀಗಾಗಿ ಶೂಟಿಂಗ್ ನಲ್ಲಿ ಭಾರತದ ಪದಕಗಳಿಗೆ ಪ್ರಮುಖ ಕೊಡುಗೆ ನೀಡುತ್ತಿದೆ.
ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಸಂಯೋಜನೆ ಮತ್ತು ಕ್ರೀಡೆಗಳ ಕಾರ್ಯತಂತ್ರದ ಪ್ರತ್ಯೇಕತೆಯು ಭಾರತದ ಪ್ಯಾರಾಲಿಂಪಿಕ್ ಅಥ್ಲೀಟ್ ಗಳಿಗೆ ಹೆಚ್ಚು ಪ್ರಯೋಜನವನ್ನು ನೀಡಿದೆ. ಭವಿಷ್ಯದಲ್ಲಿ ನಿರಂತರ ಯಶಸ್ಸಿಗೆ ವೇದಿಕೆಯನ್ನೂ ಇದು ನಿರ್ಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
Zakir Hussain: 5 ರೂ ಕಾನ್ಸರ್ಟ್ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್ ನಾದಮಯ ಪಯಣ
Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್ ಆಗುತ್ತಿರುವ ಈ ಬಾಲಕ ಯಾರು?
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.