ಪ್ರಜಾಪ್ರಭುತ್ವದ ಹಬ್ಬದಲ್ಲಿ ಆರೋಪ- ಆಮಿಷಗಳದ್ದೇ ಆಟ: ಹೇಗಿತ್ತು ಈ ಬಾರಿಯ ಚುನಾವಣೆ?
ಕೀರ್ತನ್ ಶೆಟ್ಟಿ ಬೋಳ, May 11, 2023, 10:30 AM IST
ಪ್ರಜಾಪ್ರಭುತ್ವದ ಹಬ್ಬ ಮತದಾನ ಸಂಪನ್ನವಾಗಿದೆ. ಮತದಾರ ಪ್ರಭು ತನ್ನ ಹಕ್ಕಿನ ಚಲಾವಣೆ ಮಾಡಿ ರಾಜ್ಯದ ಭವಿಷ್ಯವನ್ನು ಮತಯಂತ್ರದಲ್ಲಿರಿಸಿದ್ದಾನೆ. ತನ್ನ ಆಯ್ಕೆಯ ಗುಂಡಿ ಒತ್ತಿ ಕೈಗೆ ನೀಲಿ ಶಾಹಿಯನ್ನು ಹೆಮ್ಮೆಯಿಂದ ಹಾಕಿಕೊಂಡಿದ್ದಾನೆ.
ಡಬಲ್ ಇಂಜಿನ್, ಭ್ರಷ್ಟಾಚಾರ, ಹಿಂದುತ್ವ, ಜಾತಿ ಲೆಕ್ಕಾಚಾರ, ಅಭಿವೃದ್ಧಿ ಮುಂತಾದ ವಿಚಾರಗಳ ಮೇಲೆ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿದೆ. ಒಂದು ತಿಂಗಳ ಕಾಲ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಬಾರಿ ರಾಜ್ಯವು ಈ ಹಿಂದೆ ಕಂಡರಿಯದ ಹಲವು ವಿಚಾರ- ವಿದ್ಯಮಾನಗಳಿಗೆ ಸಾಕ್ಷಿಯಾಯಿತು.
ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಫೈಟ್ ನಡೆದಿದೆ. ಬಂಡಾಯ ಬಿಸಿ, ಪಕ್ಷಾಂತರ ಪರ್ವದ ನಡುವೆ ಆರೋಪಗಳು, ಧಾರಾಳ ಭರವಸೆಗಳು, ಕಟು ಮಾತುಗಳು, ಆಮಿಷಗಳು ಹಿಂದಿನಂತೆ ಈ ಬಾರಿಯೂ ಚುನಾವಣೆಯಲ್ಲಿ ರಾಜ್ಯಭಾರ ಮಾಡಿದೆ.
40% ಆರೋಪ
ಚುನಾವಣೆಗೆ ಸಿದ್ದತೆಯಲ್ಲಿ ತೊಡಗಿರುವಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರಂಭಿಸಿದ 40% ಭ್ರಷ್ಟಾಚಾರ ಆರೋಪದ ಅಭಿಯಾನವು ಚುನಾವಣೆಯಲ್ಲೂ ಮುಂದುವರಿಯಿತು. ಹಲವು ಪ್ರಕರಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರತಿ ರ್ಯಾಲಿ, ಸಮಾವೇಶದಲ್ಲೂ ರಾಜ್ಯ ಸರ್ಕಾರದ ವಿರುದ್ಧ 40% ದಾಳಿ ನಡೆಸಿತ್ತು. ಅಲ್ಲದೆ ಪತ್ರಿಕಾ ಜಾಹೀರಾತಿನಲ್ಲೂ ಸರ್ಕಾರದ ರೇಟ್ ಲಿಸ್ಟ್ ಹಾಕಿತ್ತು.
ಡಬಲ್ ಇಂಜಿನ್ ಸರ್ಕಾರದ ವಿಚಾರ ಮುಂದಿಟ್ಟು ಎಲೆಕ್ಷನ್ ಗೆ ಹೋದ ಭಾರತೀಯ ಜನತಾ ಪಕ್ಷವು ಹಲವು ವಿಧಾನಗಳ ಮೂಲಕ ತಿರುಗೇಟು ನೀಡಿತ್ತು. ಕರ್ನಾಟಕದಲ್ಲಿ ತನ್ನ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಿಂದೆ ’85 ಪರ್ಸೆಂಟ್ ಕಮಿಷನ್’ ಸರ್ಕಾರಗಳನ್ನು ನಡೆಸಿದೆ ಎಂದು ಆರೋಪಿಸಿದರು. 1985 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ನೀಡಿದ್ದ ‘ಕೇಂದ್ರವು ಖರ್ಚು ಮಾಡುವ ಪ್ರತಿ ರೂಪಾಯಿಯಲ್ಲಿ ಕೇವಲ 15 ಪೈಸೆ ಫಲಾನುಭವಿಗಳನ್ನು ತಲುಪುತ್ತದೆ’ ಎಂಬ ಹೇಳಿಕೆ ಉಲ್ಲೇಖಿಸಿದ್ದರು.
ಹಿಂದೆ ಸರಿದ ದಿಗ್ಗಜರು
ಈ ಬಾರಿಯ ಚುನಾವಣೆಯಲ್ಲಿ ಹಲವು ದಿಗ್ಗಜರು ಸ್ವಯಂ ನಿವೃತ್ತಿ ಪಡೆದು ಅಚ್ಚರಿ ಮೂಡಿಸಿದರು. ಬಿ ಎಸ್ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್ ಎ ರವೀಂದ್ರನಾಥ್ ಮುಂತಾದವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ಹೊಸಬರಿಗೆ ದಾರಿ ಮಾಡಿ ಕೊಟ್ಟರು.
ಬಜರಂಗಿ ಸದ್ದು
ಪ್ರಚಾರದ ಕೊನೆಯ ಹಂತದಲ್ಲಿ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ‘ಬಜರಂಗದಳ’ ದಂತಹ ಸಂಘಟನೆಗಳ ವಿರುದ್ಧ ನಿರ್ಣಾಯಕವಾಗಿ ಕ್ರಮ ಕೈಗೊಳ್ಳುವ ಮತ್ತು ನಿಷೇಧಿಸುವ ಕಾಂಗ್ರೆಸ್‌ನ ಪ್ರಣಾಳಿಕೆಯ ಭರವಸೆಯು ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚು ಪ್ಲಸ್ ಆಯಿತು. ಕಾಂಗ್ರೆಸ್ ನ ಎಲ್ಲಾ ಆರೋಪಗಳಿಗೆ ಬಿಜೆಪಿಗೆ ಬಜರಂಗ ದಳ ವಿಚಾರ ಗುರಾಣಿಯಾಯಿತು. ಬಜರಂಗ ದಳಕ್ಕೂ ಹನುಂತನಿಗೂ ಲಿಂಕ್ ಮಾಡಿದ ಬಿಜೆಪಿ ಭಾವನಾತ್ಮಕ ದಾಳಿ ನಡೆಸಿತು.
ಪ್ರಧಾನಿಯವರು ‘ಬಜರಂಗ ಬಲಿ ಕಿ ಜೈ’ ಎಂದು ತಮ್ಮ ಭಾಷಣವನ್ನು ಆರಂಭಿಸಿದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ‘ಜೈ ಬಜರಂಗ ಬಲಿ, ತೊಡ್ ದೋ ಭ್ರಷ್ಟಾಚಾರ್ ಕಿ ನಲಿ’ ಎಂಬ ಘೋಷಣೆ ಕೂಗಿದರು.
ಮಹಾ ಬಂಡಾಯ
ಈ ಬಾರಿಯ ಚುನಾವಣೆ ಯಾರೂ ಊಹಿಸದ ಬಂಡಾಯಕ್ಕೆ ಸಾಕ್ಷಿಯಾಯಿತು. ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ದಿಗ್ಗಜ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಪಕ್ಷವನ್ನೇ ತೊರೆದರು. ಅಲ್ಲದೆ ಕಮಲ ಪಾಳಯ ತೊರೆದು ನೇರ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಬಿ ಫಾರಂ ಪಡೆದು ಸ್ಪರ್ಧಿಸಿದ್ದಾರೆ.
ದಕ್ಷಿಣ ಕನ್ನಡದ ಜಿಲ್ಲೆಯ ಪುತ್ತೂರು ಕೂಡಾ ದೊಡ್ಡ ಬಂಡಾಯಕ್ಕೆ ಕಂಡಿದೆ. ಇಲ್ಲಿಯೂ ಬಿಜೆಪಿ ಪೆಟ್ಟು ಅನುಭವಿಸಿದೆ. ಹಿಂದೂಪರ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ನಿರಾಕರಿಸಿದ್ದು, ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾರೆ. ರಾಜ್ಯದಲ್ಲಿ ಗಮನ ಸೆಳೆದಿರುವ ಕ್ಷೇತ್ರಗಳ ಪೈಕಿ ಪುತ್ತೂರು ಕೂಡಾ ಒಂದು.
ಅಲ್ಲದೆ ಬಿಜೆಪಿ ಟಿಕೆಟ್ ವಂಚಿತ ಎಂ.ಪಿ ಕುಮಾರಸ್ವಾಮಿ, ಆಯನೂರು ಮಂಜುನಾಥ್, ಕಾಂಗ್ರೆಸ್ ನ ಮೊಯ್ದೀನ್ ಬಾವ ಜೆಡಿಎಸ್ ಗೆ ಸೇರಿದರು. ಆದರೆ ಜೆಡಿಎಸ್ ತೊರೆದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೈಎಸ್ ವಿ ದತ್ತಾ ಮತ್ತೆ ಜೆಡಿಎಸ್ ಗೆ ಮರಳಿದರು. ಕಾರಣ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು.
ಕರಾವಳಿಯಲ್ಲಿ ಬಿಜೆಪಿ ತಂತ್ರ
ಬಿಜೆಪಿಯ ಪ್ರಯೋಗ ಶಾಲೆ ಎಂದೇ ಹೆಸರಾದ ಕರಾವಳಿಯಲ್ಲಿ ಬಿಜೆಪಿ ಈ ಬಾರಿ ಪ್ರುಯೋಗ ನಡೆಸಿತು. ಕಳೆದ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿ ಯಶಸ್ಸು ಕಂಡಿದ್ದ ಕಮಲ ಪಾಳಯ ಈ ಬಾರಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೊಸಬರಿಗೆ ಅವಕಾಶ ನೀಡಿದೆ. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕು ಶಾಸಕರು ಟಿಕೆಟ್ ವಂಚಿತರಾಗಿದ್ದಾರೆ.
ಸದ್ದು ಮಾಡದ ಆಪ್- ಪ್ರಜಾಕೀಯ, ರೆಡ್ಡಿ
ಈ ಬಾರಿಯ ವಿಧಾನಸಭೆ ಚುನಾವಣೆಯೂ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ನಡೆದಿದೆ. ಪಂಜಾಬ್ ನಲ್ಲಿ ಕಮಾಲ್ ಮಾಡಿದ್ದ ಆಮ್ ಆದ್ಮಿ ಪಕ್ಷವು ಇಲ್ಲಿ ತನ್ನ ಕರಾಮತ್ತು ತೋರಿಸಲು ವಿಫಲವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಒಮ್ಮೆ ರಾಜ್ಯಕ್ಕೆ ಬಂದಿದ್ದ ಕೇಜ್ರಿವಾಲ್ ಮತ್ತೆ ಈ ಕಡೆ ಬರದಿರುವುದು ಇದನ್ನೇ ಸೂಚಿಸುತ್ತದೆ. ಅಲ್ಲದೆ ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷವು ಸದ್ದು ಮಾಡಲಿಲ್ಲ. ಜನಾರ್ಧನ ರೆಡ್ಡಿ ಅವರ ಕೆಕೆಪಿ ಪಕ್ಷ ಕೆಲವೇ ಕೆಲವು ಕ್ಷೇತ್ರಗಳಿಗೆ ಸೀಮಿತವಾಯಿತು.
ಸಾಮಾಜಿಕ ಜಾಲತಾಣ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಸಾಮಾಜಿಕ ಜಾಲತಾಣಗಳ ಬಳಕೆ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ಹೆಚ್ಚಿನ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ತರಹೇವಾರಿ ಪೋಸ್ಟರ್ ಗಳು, ವಿಡಿಯೋಗಳ ಮೂಲಕ ತಮ್ಮ ಕೆಲಸಗಳು, ಭರವಸೆಗಳನ್ನು ಮತದಾರರ ಮುಂದಿಡುವ ಕೆಲಸ ಮಾಡಿದ್ದಾರೆ. ಅಲ್ಲದೆ ಎಂದಿನಂತೆ ಸುಳ್ಳು ಸುದ್ದಿಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ವಿಚಾರಕ್ಕಿಂತ ಭಾವನಾತ್ಮಕ ಆಟಗಳು
ಜನತೆಯ- ರಾಜ್ಯದ ಅಭಿವೃದ್ದಿಗಿಂತ ಆರೋಪ- ಪ್ರತ್ಯಾರೋಪಗಳು ಚುನಾವಣಾ ಸರಕಾಗಿತ್ತು. ದೋಷಾರೋಪಣೆಗಳು, ಯಾರು ಹೆಚ್ಚು ಭ್ರಷ್ಟ ಎಂಬ ಲೆಕ್ಕಾಚಾರಗಳೇ ಪ್ರಮುಖ ವಿಚಾರವಾಗಿತ್ತು. ಜನರ ಭಾವನೆಗಳ ಸುತ್ತ ರಾಜಕೀಯದ ಆಟ ಈ ಬಾರಿಯೂ ಮುಂದುವರಿದಿತ್ತು.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?
Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…
Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.