![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 30, 2021, 2:22 PM IST
“ಬೆನ್ನು ಹುರಿಗೆ ಭಾರೀ ಪೆಟ್ಟಾಗಿದೆ. ಅದು ಕೂಡಿಕೊಳ್ಳು ವುದು ಅನುಮಾನ. ಕೈಕಾಲಿನ ಮೂಳೆಗಳೂ ಮುರಿದು ಹೋಗಿವೆ. ನರಗಳು ತುಂಡಾಗಿವೆ. ಹಾಗಾಗಿ ಈಕೆ ಬದುಕುವುದೂ ಕಷ್ಟ. ಅಕಸ್ಮಾತ್ ಜೀವ ಉಳಿದರೂ ಎದ್ದು ನಿಲ್ಲಲು, ತಿರುಗಾಡಲು ಸಾಧ್ಯವೇ ಇಲ್ಲ. ಸಾಯುವವ ರೆಗೂ ಹಾಸಿಗೆಯಲ್ಲಿಯೇ ಬಿದ್ದಿರಬೇಕಾಗುತ್ತದೆ…’ ವೈದ್ಯರ ಈ ಮಾತನ್ನು ಸುಳ್ಳು ಮಾಡಿ ಬದುಕಿರುವ, ಚಿತ್ರಕಲಾವಿದೆ ಯಾಗಿ ನೂರಾರು ಮಂದಿಗೆ ರೋಲ್ ಮಾಡೆಲ್ ಆಗಿ ರುವ ಪೂನಂ ರೈ ಎಂಬ ವೀರ ವನಿತೆಯ ಬಾಳ ಕಥೆ ಇದು.
***
ಬಿಹಾರದ ವೈಶಾಲಿ ಜಿಲ್ಲೆಯವರು ಬಿಂದೇಶ್ವರ ರೈ. ಇವರ ಮಗಳೇ ಪೂನಂ ರೈ. ಲೋಕೋಪಯೋಗಿ ಇಲಾಖೆಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ಬಿಂದೇಶ್ವರ, ನೌಕರಿಯ ಕಾರಣಕ್ಕೆ ವಾರಾಣಸಿಯಲ್ಲಿ ನೆಲೆನಿಂತರು. ಅವರಿಗೆ ಮೂವರು ಮಕ್ಕಳು: ಒಂದು ಹೆಣ್ಣು, ಎರಡು ಗಂಡು. ತನ್ನ ಬಾಲ್ಯ, ಅನಂತರದ ಬದುಕಿನ ಕುರಿತು ಪೂನಂ ಹೇಳುತ್ತಾರೆ: “ಅಪ್ಪ ನಮ್ಮನ್ನು ಬಹಳ ಮುದ್ದಿನಿಂದ ಸಾಕಿದರು. ನಾನಂತೂ ರಾಜಕುಮಾರಿಯಂತೆ ಬೆಳೆದೆ. ಬನಾರಸ್ ವಿವಿಯಲ್ಲಿ ಚಿತ್ರಕಲಾ ಪದವಿ ಪಡೆದೆ. 21ನೇ ವಯಸ್ಸಿಗೇ ಕುಟುಂಬದ ಹಿರಿಯರ ನಿಶ್ಚಯದಂತೆ, ಎಂಜಿ ನಿಯರ್ ಜತೆ ಮದುವೆಯಾಯಿತು. ಗಂಡನ ಮನೆಯಲ್ಲಿ ಮಗಳಿಗೆ ಯಾವುದೇ ಕೊರತೆ ಕಾಡದಿರಲಿ ಎಂಬ ಆಶಯದಿಂದ ಅಪ್ಪ ಒಂದು ಲಾರಿಯ ತುಂಬಾ ಮನೆಗೆ ಅಗತ್ಯವಿದ್ದ ಎಲ್ಲ ವಸ್ತುಗಳನ್ನೂ ಕೊಟ್ಟು ಕಳುಹಿಸಿದ್ದರು.
ಗಂಡನ ಮನೆಗೆ ಬಂದೆನಲ್ಲ; ಆಗ ನನ್ನ ಕಣ್ತುಂಬ ಸಾವಿರ ಕನಸುಗಳಿದ್ದವು. ಆದರೆ 2 ವಾರ ಕಳೆಯುವುದ ರೊಳಗೆ ತತ್ತರಿಸಿ ಹೋಗುವಂಥ ಸಂಗತಿಯೊಂದು ಗೊತ್ತಾಯಿತು. ಏನೆಂದರೆ ನನ್ನ ಗಂಡ ಸೆಕೆಂಡ್ ಪಿಯುಸಿಗೇ ಕಾಲೇಜು ಬಿಟ್ಟಿದ್ದ. ಒಂದು ಕೆಲಸವಾಗಲಿ, ಆದಾಯವಾಗಲಿ ಇಲ್ಲದ ಅವನನ್ನು, ಎಂಜಿನಿಯರ್ ಎಂದು ಸುಳ್ಳು ಹೇಳಿ ಪರಿಚಯಿಸಲಾಗಿತ್ತು. ಹಿರಿಯರ ಮಾತುಗಳನ್ನು ಅಪ್ಪ ಸುಲಭವಾಗಿ ನಂಬಿ ಬಿಟ್ಟಿದ್ದರು. “ಸತ್ಯ ಹೇಳಿ, ನೀವು ಎಷ್ಟು ಓದಿದ್ದೀರಿ? ಏನು ಕೆಲಸ ಮಾಡ್ತೀರಿ ಎಂದು ಗಂಡನ ಬಳಿ ಕೇಳಿದಾಗ ಆತ ಹಾರಿಕೆಯ ಉತ್ತರ ಕೊಟ್ಟು ಎದ್ದು ಹೋಗುತ್ತಿದ್ದ. ನಾನು ಮತ್ತೆ ಮತ್ತೆ ಪ್ರಶ್ನಿಸಲು ಆರಂಭಿಸಿದಾಗ ಗಂಡನ ಜತೆ ಅತ್ತೆ ಮಾವನೂ ಸೇರಿ ಕೊಂಡು ಹೊಡೆದೇ ಬಿಟ್ಟರು. ಅನಂತರದಲ್ಲಿ ಜಗಳ- ಬೈಗುಳ, ಹೊಡೆತ ಮತ್ತು ರಾಜಿ ನಿತ್ಯದ ಸಂಗತಿಯಾಯಿತು. ಇಷ್ಟು ಸಾಲದೆಂಬಂತೆ, ನಿಮ್ಮ ಅಪ್ಪನ ಮನೆಯಿಂದ ಇನ್ನಷ್ಟು ಹಣ-ಆಭರಣ ತಗೊಂಡು ಬಾ ಎಂದು ಗಂಡನ ಮನೆಯವರು ದಿನವೂ ಒತ್ತಾಯ ಮಾಡತೊಡಗಿದರು. ಅಪ್ಪನ ಮನೆಯಲ್ಲಿ ಮಹಾರಾಣಿಯಂತೆ ಬೆಳೆದಿದ್ದ ನಾನು, ಅತ್ತೆಯ ಮನೆಯಲ್ಲಿ ಮನೆ ಕೆಲಸದವಳಿಗಿಂತ ಕಡೆಯಾಗಿ ಬದುಕುವ ಸ್ಥಿತಿ ಜತೆಯಾಗಿತ್ತು.
ಏನಾಗಿ ಹೋಯ್ತು ನನ್ನ ಜೀವನ ಎಂದು ಯೋಚಿ ಸುವ ವೇಳೆಗೆ ಬದುಕು ಇನ್ನೊಂದು ಹಂತಕ್ಕೆ ಬಂದು ನಿಂತಿತ್ತು: ನಾನು ಗರ್ಭಿಣಿಯಾಗಿದ್ದೆ. ವಿಷಯ ತಿಳಿದ ದಿನವೇ ಅತ್ತೆ-ಮಾವ ಸ್ಪಷ್ಟವಾಗಿ ಹೇಳಿ ಬಿಟ್ಟರು- “ಗಂಡು ಮಗುವಾದ್ರೆ ಮಾತ್ರ ನಿನಗೆ ಮರ್ಯಾದೆ ಸಿಗೋದು, ಹೆಣ್ಣು ಮಗು ಆದ್ರೆ ನಿನ್ನನ್ನು ಸುಮ್ನೆà ಬಿಡಲ್ಲ…’ ಜಗಳ ಮತ್ತು ರಾಜಿಯ ಮಧ್ಯೆಯೇ 9 ತಿಂಗಳು ಕಳೆದು, ಹೆರಿಗೆ ನೋವೆಂದು ಆಸ್ಪತ್ರೆಗೆ ಸೇರಿದೆ. ಹೆಣ್ಣು ಮಗುವಿನೊಂದಿಗೆ ಮನೆಗೆ ಮರಳಿದೆ. 02-02-1997- ಈ ದಿನವನ್ನು ನಾನು ಸಾಯುವವರೆಗೂ ಮರೆಯಲಾರೆ. ನಾನಾಗ 2 ತಿಂಗಳ ಹಸೀಬಾಣಂತಿ. ಅವತ್ತು ಸಂಜೆಯಿಂದಲೇ ಅತ್ತೆ, ಮಾವ ಜಗಳ ಆರಂಭಿಸಿದ್ದರು. ರಾತ್ರಿಯಾಗುತ್ತಿದ್ದಂತೆ ಅವರ ಜತೆಗೆ ಗಂಡನೂ ಸೇರಿಕೊಂಡ. “ಹೆಣ್ಣು ಹೆತ್ತಿದ್ದೀಯಲ್ಲ; ಅದೊಂದು ಹುಣ್ಣಿದ್ದ ಹಾಗೆ. ಅದರಿಂದ ಏನುಪಯೋಗ? ನಿಮ್ಮ ಅಪ್ಪನ ಮನೆಯಿಂದ ಹಣ ತಗೊಂಡು ಬಾ ಅಂತ ಎಷ್ಟು ಸರ್ತಿ ಹೇಳಬೇಕು?’- ಹೀಗೆ ಸಾಗಿತ್ತು ಅವರ ಮಾತಿನ ಧಾಟಿ.
ಮಗುವನ್ನು ಮಲಗಿಸಿ, ಅತ್ತೆ ಮಾವನಿಗೆ ತಿಳಿ ಹೇಳಲು ಪ್ರಯತ್ನಿಸಿದೆ. ಆದರೆ ಅನಂತರದ ಕ್ಷಣಗಳಲ್ಲಿ ಮಾತಿಗೆ ಮಾತು ಬೆಳೆದು ಜಗಳ ಜೋರಾಯಿತು. ಹೊಡೆಯಲು ಬಂದ ಗಂಡ, ಇದ್ದಕ್ಕಿದ್ದಂತೆಯೇ ನನ್ನನ್ನು ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಿಬಿಟ್ಟ…
***
ಕಣ್ತೆರೆದಾಗ ಆಸ್ಪತ್ರೆಯಲ್ಲಿದ್ದೆ. ಕೈ-ಕಾಲುಗಳನ್ನು ಅಲುಗಿ ಸಲೂ ಆಗದಂಥ ಅಸಾಧ್ಯ ನೋವು. ಸುತ್ತಲೂ ಅಪ್ಪನ ಕುಟುಂಬದ ಪ್ರಮುಖರು ಕಣ್ತುಂಬಿಕೊಂಡು ನಿಂತಿದ್ದರು. ಏನೋ ಹೇಳಲು ಹೋದೆ- ಮಾತೇ ಹೊರಡಲಿಲ್ಲ. ಅನಂತರದಲ್ಲಿ ಗೊತ್ತಾದ ಸಂಗತಿಗಳೆಂದರೆ- ಅಮ್ಮಾ, ಎಂದು ಚೀರುತ್ತಾ ಬಿದ್ದ ನನ್ನನ್ನು ನೆರೆ ಹೊರೆಯವರು ಆಸ್ಪತ್ರೆಗೆ ಸೇರಿಸಿದ್ದರು. ಆರು ತಿಂಗಳ ಕಾಲ ನಾನು ಪ್ರಜ್ಞೆಯಿಲ್ಲದೆ ಮಲಗಿದ್ದೆ! ನನಗೆ ಏನಾಗಿದೆ? ಆಸ್ಪತ್ರೆಯಿಂದ ಯಾವಾಗ ಡಿಸ್ಚಾರ್ಜ್ ಆಗುತ್ತೆ ಎಂಬ ಯೋಚನೆಯಲ್ಲಿ ನಾನಿದ್ದಾಗಲೇ ಅಪ್ಪನ ಬಳಿ ಬಂದ ವೈದ್ಯರು ವಿಷಾದದಿಂದ ಹೇಳಿದ್ದರು: “ಬೆನ್ನು ಹುರಿಗೆ ಭಾರೀ ಪೆಟ್ಟಾಗಿದೆ. ಅದು ಕೂಡಿಕೊಳ್ಳುವುದು ಅನುಮಾನ. ಕೈಕಾಲಿನ ಮೂಳೆಗಳೂ ಮುರಿದು ಹೋಗಿವೆ. ನರಗಳು ತುಂಡಾಗಿವೆ. ಹಾಗಾಗಿ ಈಕೆ ಬದುಕುವುದೂ ಕಷ್ಟ. ಅಕಸ್ಮಾತ್ ಜೀವ ಉಳಿದರೂ ಎದ್ದು ನಿಲ್ಲಲು, ತಿರುಗಾಡಲು ಸಾಧ್ಯವೇ ಇಲ್ಲ. ಸಾಯುವವರೆಗೂ ಹಾಸಿಗೆಯಲ್ಲಿಯೇ ಬಿದ್ದಿರ ಬೇಕಾಗುತ್ತದೆ…’
ಈ ಮಾತುಗಳಿಂದ ಅಪ್ಪ ಅಧೀರರಾಗಲಿಲ್ಲ. “ಗಾಬರಿ ಆಗಬೇಡ. ಬೇರೆ ಊರಲ್ಲಿ ಇರುವ ದೊಡ್ಡ ಆಸ್ಪತ್ರೆಗೆ ಹೋಗೋಣ. ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ, ನಿನ್ನನ್ನು ಉಳಿಸಿಕೊಳ್ತೇನೆ’ ಎಂದರು. ಬಿಹಾರ, ಉತ್ತರ ಪ್ರದೇಶ, ದಿಲ್ಲಿಯಲ್ಲಿದ್ದ ಆಸ್ಪತ್ರೆಗಳ ಕದ ತಟ್ಟಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅನಂತರದ 15 ವರ್ಷಗಳ ಕಾಲವನ್ನು ನಾನು ಜೀವಂತ ಶವದಂತೆಯೇ ಕಳೆದುಬಿಟ್ಟೆ. ಆರಂಭದ ದಿನಗಳಲ್ಲಿ ಸ್ಪರ್ಶ ಜ್ಞಾನವೂ ಇರಲಿಲ್ಲ. ಎಷ್ಟೋ ಬಾರಿ ಮೂತ್ರ ವಿಸರ್ಜನೆಯಾದದ್ದೂ ಗೊತ್ತಾಗುತ್ತಿರಲಿಲ್ಲ. ಕಾಲಿನ ಮೇಲೆ ಇರುವೆ ಬಂದರೆ, ಸೊಳ್ಳೆ ಕುಳಿತರೆ ಅದನ್ನು ಓಡಿಸುವಷ್ಟು ಶಕ್ತಿಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ- ನಿನಗಿದು ಪುನರ್ಜನ್ಮ. ಆಗಿದ್ದನ್ನೆಲ್ಲ ಮರೆತು ಬಿಡು. ಇವತ್ತಲ್ಲ ನಾಳೆ ನಿನಗೆ ಎದ್ದು ನಿಲ್ಲುವ ಶಕ್ತಿ ಬಂದೇ ಬರುತ್ತೆ, ಎಂದು ಹೇಳುತ್ತಾ ನನ್ನನ್ನು ಜೋಪಾನ ಮಾಡಿದವರು ನನ್ನ ಅಪ್ಪ-ಅಮ್ಮ. ಈ ವೇಳೆಗೆ ಅಣ್ಣನಿಗೆ ಮದುವೆಯಾಗಿತ್ತು. ನನ್ನ ಪುಟ್ಟ ಮಗಳ ಜವಾಬ್ದಾರಿಯನ್ನು ಅತ್ತಿಗೆ ವಹಿಸಿಕೊಂಡಿದ್ದರು. ಎಷ್ಟೋ ಬಾರಿ ನನ್ನ ಮಗಳು ಓಡಿಬಂದು ತಬ್ಬಿಕೊಳ್ಳುತ್ತಿದ್ದಳು. ಕೆಲವೊಮ್ಮೆ, ಅವಳ ಸ್ಪರ್ಶದ ಅರಿವೂ ನನಗೆ ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ದೇಹ ಸ್ವಾಧೀನ ಕಳೆದುಕೊಂಡಿತ್ತು.
ಹೀಗಿದ್ದಾಗಲೇ ಪವಾಡವೊಂದು ನಡೆಯಿತು. ನಿಧಾನಕ್ಕೆ ಎದ್ದು ಕೂರುವಂಥ ಚೈತನ್ಯ ಬಂತು. ನನ್ನನ್ನು ಪರೀಕ್ಷಿಸಿದ ವೈದ್ಯರು- “ಸಾಮಾನ್ಯವಾಗಿ ನರಗಳು ಕತ್ತರಿಸಿ ಹೋದಾಗ ತಿರುಗಿ ಬೆಳೆಯುವುದು ತುಂಬಾ ನಿಧಾನ. ಕೆಲವೊಮ್ಮೆ ಬೆಳೆಯುವುದೇ ಇಲ್ಲ. ಆದರೂ ಕೆಲವೊಬ್ಬರಲ್ಲಿ ದಿನಕ್ಕೆ ಒಂದು ಮಿ.ಮೀ.ನಂತೆ ಬೆಳೆಯುತ್ತವೆ. ಹಾಗೆ ಬೆಳೆದಾಗ ಕೂಡ ಕತ್ತರಿಸಿದ ನರದೆಡೆಗೆ ಮುಂದಿನ ತುದಿ ಕೂಡುವ ಸಾಧ್ಯತೆ ಸಾವಿರಕ್ಕೆ ಒಮ್ಮೆ ಮಾತ್ರ. ಅಂಥದೊಂದು ಪವಾಡ ನಿಮ್ಮ ಮಗಳ ದೇಹದಲ್ಲಿ ನಡೆದು ಬಿಟ್ಟಿದೆ!’ ಎಂದರು. ಈಗ ನನ್ನ ಉತ್ಸಾಹಕ್ಕೆ ರೆಕ್ಕೆ ಬಂತು. ಊರು ಗೋಲಿನ ಸಹಾಯದಿಂದ ನಿಲ್ಲಲು ಕಲಿತೆ. ಇಂಥದೊಂದು ಸಂಭ್ರಮದ ಹಿಂದೆಯೇ ನೋವು ಜತೆಯಾಗಲಿದೆ ಎಂಬ ಅಂದಾಜೂ ನನಗಿರಲಿಲ್ಲ. ಸಣ್ಣದೊಂದು ಅನಾರೋಗ್ಯಕ್ಕೆ ಒಳಗಾದ ಅಪ್ಪ, 2014ರಲ್ಲಿ ಇದ್ದಕ್ಕಿದ್ದಂತೆ ತೀರಿಕೊಂಡರು. ಅಪ್ಪನಿಲ್ಲದ ಲೋಕದಲ್ಲಿ ಬದುಕಿದ್ದು ಪ್ರಯೋಜನವಿಲ್ಲ ಅನ್ನಿಸಿತು. ಅದರ ಹಿಂದೆಯೇ- ಅಕಸ್ಮಾತ್ ನಾನು ಸತ್ತು ಹೋದರೆ ಮಗಳು ತಬ್ಬಲಿಯಾಗುತ್ತಾಳೆ ಅನಿಸಿ ಸಂಕಟವಾಯಿತು. ಮಗಳಿಗೋಸ್ಕರವಾದರೂ ಬದುಕ ಬೇಕು, ಅಪ್ಪನ ಹೆಸರನ್ನು ಉಳಿಸು ವಂಥ ಕೆಲಸ ಮಾಡ ಬೇಕು ಎಂಬ ಯೋಚನೆಯೂ ಬಂತು. ಅಣ್ಣನ ಬಳಿ ಇದನ್ನೆಲ್ಲ ಹೇಳಿದಾಗ-‘ ನಾನು ಸಪೋರ್ಟ್ ಮಾಡ್ತೇನೆ, ಏನು ಬೇಕಾದ್ರೂ ಮಾಡು’ ಎಂದ.
ಮೊದಲು ನಾನು ತಯಾರಾಗಬೇಕಿತ್ತು. 15 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಕಾರಣಕ್ಕೆ ಸ್ನಾಯುಗಳು ಸೆಟೆದುಕೊಂಡಿದ್ದವು. ಸಲೀಸಾಗಿ ಕೈ ಎತ್ತಲು, ಬೆರಳು ಮಡಚಲು ಆಗುತ್ತಿರಲಿಲ್ಲ. ಇದಕ್ಕೆ ಚಿಕಿತ್ಸೆಯ ರೂಪದಲ್ಲಿ ಫಿಸಿಯೋಥೆರಪಿ ಆರಂಭವಾದಾಗ, ಬೆರಳು ಮಡಚಿದರೆ ಸಾಕು, ಸುತ್ತಿಗೆಯಲ್ಲಿ ಹೊಡೆದಷ್ಟು ನೋವಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಬಾಯಿಗೆ ಬಟ್ಟೆ ತುರುಕಿಕೊಂಡು ನೋವು ನುಂಗಿದೆ. ಆರೆಂಟು ತಿಂಗಳ ಫಿಸಿಯೋ ಚಿಕಿತ್ಸೆಯ ಅನಂತರ ಫೈನ್ ಅಂಡ್ ಫಿಟ್ ಅನ್ನಿಸಿತು. ಆಗ ಶುರುವಾ ದದ್ದೇ- ಬಿಂದೇಶ್ವರ ರೈ ಫೌಂಡೇಶನ್ ಎಂಬ ಎನ್‌ಜಿಒ. ಆತ್ಮರಕ್ಷಣೆಯ ಕಲೆ ಮತ್ತು ವಿದ್ಯೆ ದೊರೆತಾಗ ಮಾತ್ರ ಹೆಣ್ಣು ಮಕ್ಕಳು ಈ ಸಮಾಜವನ್ನು ಎದುರಿಸಿ ನಿಲ್ಲಲು ಸಾಧ್ಯ ಅನಿಸಿದ್ದರಿಂದ ನಮ್ಮ ಎನ್‌ಜಿಒ ವತಿಯಿಂದ ಟೆಕ್ವಾಂಡೊ ಸಮರ ಕಲೆ ತರಬೇತಿ ಆರಂಭಿಸಿದೆವು. ಅದರ ಬೆನ್ನಿಗೇ ಪೇಂಟಿಂಗ್ ಮಾಡಬೇಕೆಂಬ ಹುಮ್ಮಸ್ಸೂ ನನಗೆ ಬಂತು. ಮನಸ್ಸಿನ ಭಾವನೆಗಳಿಗೆ ಚಿತ್ರದ ರೂಪು ಕೊಟ್ಟೆ. ಭೇಟಿ ಬಚಾವೋ ಭೇಟಿ ಪಡಾವೋ ಘೋಷಣೆಗೆ ಸಂಬಂಧಿಸಿದ ಚಿತ್ರ ರಚಿಸಿ 2018ರಲ್ಲಿ ಪ್ರಧಾನಿ ಮೋದಿಯವರ ಮೆಚ್ಚುಗೆಗೂ ಪಾತ್ರಳಾದೆ. ಪುನರಪಿ ಜನನಂ ಎಂಬ ಮಾತಿನಂತೆ, ಎರಡನೇ ಜನ್ಮದ ರೂಪದಲ್ಲಿ ಸಿಕ್ಕಿದ ಬದುಕು ಬಂಗಾರದ ಕ್ಷಣಗಳನ್ನೇ ಉಡುಗೊರೆಯಾಗಿ ಕೊಟ್ಟಿತು.
ಈವರೆಗೆ ನಮ್ಮ ಎನ್‌ಜಿಒದಲ್ಲಿ ಟೆಕ್ವಾಂಡೊ ಕಲಿತ ಮಕ್ಕಳ ಸಂಖ್ಯೆ 3,000 ದಾಟಿರಬಹುದು. ಅವರಲ್ಲಿ ಹಲವರು ರಾಜ್ಯ, ರಾಷ್ಟ್ರ ಮಟ್ಟದ ಚಾಂಪಿಯನ್‌ಗಳಾಗಿದ್ದಾರೆ. ಈ ಬಾರಿ ಒಲಿಂಪಿಕ್ಸ್ ಗೂ ಹೋಗಿಬಂದಿದ್ದಾರೆ. ಡ್ಯಾನ್ಸ್, ಯೋಗ, ಧ್ಯಾನದ ತರಗತಿಗಳನ್ನೂ ಈಗ ಆರಂಭಿಸಲಾಗಿದೆ. ಸಿರಿವಂತರಿಂದ ಶುಲ್ಕ ಪಡೆದು, ಬಡ ವರ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಎನ್‌ಜಿಒಗೆ ಮೂಲ ಬಂಡವಾಳವಾಗಿ ಅಪ್ಪ ಕೊಟ್ಟಿದ್ದ ಹಣವಿದೆ. ನನ್ನ ಪೇಂಟಿಂಗ್‌ಗೆ ಸಿಗುವ ಹಣವೆಲ್ಲ ಎನ್‌ಜಿಒಗೆ ಹೋಗುತ್ತದೆ. ನನಗೆ ಆಸರೆಯಾಗಿ ಅಣ್ಣ-ಅತ್ತಿಗೆ ಇದ್ದಾರೆ. ಮಗಳು ಡಿಗ್ರಿ ಮುಗಿಸಿದ್ದಾಳೆ. ನನ್ನ ಬದುಕಿನ ಜತೆೆ ಆಟವಾಡಿದ ಗಂಡನ ಕುರಿತು ಏನು ಹೇಳಲಿ? ಅವನನ್ನು ಶಿಕ್ಷಿಸಲು ದೇವರಿದ್ದಾನೆ. ಮಗಳನ್ನು ನೋಡಲಿಕ್ಕಾದರೂ ಆತ ಒಮ್ಮೆ ಕೂಡ ಬರಲಿಲ್ಲ. ಅಂಥವರ ಬಗ್ಗೆ ಯೋಚಿಸ ಲಾರೆ. ಇರುವೆಯಂಥ ಜೀವಿ ಕೂಡ ಬೆಟ್ಟ ಹತ್ತಬಲ್ಲದು ಅಂದಮೇಲೆ, ಮನುಷ್ಯರಾಗಿ ಹುಟ್ಟಿದ ನಾವು ಏನಾದರೂ ಸಾಧನೆ ಮಾಡಿಯೇ ಬಾಳಯಾತ್ರೆ ಮುಗಿಸಬೇಕು ಎನ್ನುವುದು ನನ್ನ ಆಸೆ-ಆಶಯ ಎನ್ನುತ್ತಾರೆ ಪೂನಂ.
ಪದೇ ಪದೆ ಜತೆಯಾಗುವ ಸೋಲುಗಳ ಕಾರಣಕ್ಕೆ ಹತಾಶೆ ಆವರಿಸಿ ಬದುಕು ರಸ್ತೆಯ ಮಧ್ಯೆ ಗಕ್ಕನೆ ನಿಂತಾಗಲೆಲ್ಲ- “ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೇತನ’ ಎಂಬ ಭಾವವೊಂದು ಕೈ ಜಗ್ಗುವುದು ಇಂಥ ಸಾಧಕಿಯರ ಯಶೋಗಾಥೆಯನ್ನು ಓದಿ ದಾಗಲೇ. ಬೆನ್ನು ಮೂಳೆ ಮುರಿದು ಹೋದರೂ ಬಂಗಾರದಂಥ ಬದುಕನ್ನು ತನ್ನದಾಗಿಸಿಕೊಂಡ ಪೂನಂ ಅವರಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ- [email protected]
-ಎ.ಆರ್.ಮಣಿಕಾಂತ್
Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?
ಬಚ್ಚನ್, ಮೋಹನ್‌ಲಾಲ್ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.