ನಾಳೆ ಶತಮಾನದ ಸುದೀರ್ಘ ಆಂಶಿಕ ಚಂದ್ರಗ್ರಹಣ
Team Udayavani, Nov 18, 2021, 6:50 AM IST
ನ. 19ರ ಚಂದ್ರಗ್ರಹಣ ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಭಾರತದ ಈಶಾನ್ಯ ಭಾಗಗಳ ಕೆಲವೊಂದು ಪ್ರದೇಶಗಳಲ್ಲಿ ಈ ಗ್ರಹಣವು ಚಂದ್ರನ ಮೇಲೆ ಅರೆ ನೆರಳಿನ ರೀತಿ ಗೋಚರಿಸುವ ಸಾಧ್ಯತೆಗಳಿವೆ.
ನವೆಂಬರ್ 19 ರ ಶುಕ್ರವಾರದಂದು ಈ ವರ್ಷದ ಎರಡನೇ, ಕೊನೆಯ ಹಾಗೂ 581 ವರ್ಷಗಳ ಅನಂತರದ ಸುದೀರ್ಘ ಆಂಶಿಕ ಚಂದ್ರಗ್ರಹಣ ಸಂಭವಿಸಲಿರುವುದು. ವಿಶ್ವಾದ್ಯಂತದ ಜನರು, ಖಗೋಳ ವಿಜ್ಞಾನಿಗಳು, ಪ್ರಾಯಶಃ ನಸುಗೆಂಪು ಬಣ್ಣದಿಂದ ಕಾಣಲಿರುವ ಚಂದ್ರನನ್ನು ಬರಿಗಣ್ಣಿ ನಿಂದ ಅಥವಾ ದೂರದರ್ಶಕದ ಮೂಲಕ ನೋಡಲುಉತ್ಸುಕರಾಗಿದ್ದಾರೆ. ಜಗತ್ತಿನಾದ್ಯಂತ ವೀಕ್ಷಣಾಲಯ ಗಳು, ಪ್ರಯೋಗ ಶಾಲೆಗಳ ಖಗೋಳ ವಿಜ್ಞಾನಿಗಳು ವರ್ಚುವಲ್ ಟೆಲಿ ಸ್ಕೋಪ್ ಯೋಜನೆಗಳ ಮೂಲಕ ಭೌತಿಕವಾಗಿ ಅಲ್ಲದಿದ್ದರೂ ವರ್ಚುವಲ್ ಆಗಿ ಚಂದ್ರಗ್ರಹಣವನ್ನು ನೋಡಲು ಸನ್ನದ್ಧರಾಗಿದ್ದಾರೆ.
ಆಕಾಶದಲ್ಲಿ ಸುಲಭದಲ್ಲಿ ಕಾಣಸಿಗುವ ಸೂರ್ಯ, ಚಂದ್ರರ ಚಲನೆಯ ಬಗ್ಗೆ ಪ್ರಾಚೀನ ಕಾಲದಿಂದಲೂ ಆಸಕ್ತಿ ಬೆಳೆದು ಬಂದಿದೆ. ನಮ್ಮ ಹಬ್ಬಗಳು, ಪುರಾಣಗಳು, ಆಕಾಶಕಾಯಗಳ ಬಗ್ಗೆ ಕಥೆಗಳು ಆಯಾ ದೇಶದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿವೆ.
ಸೂರ್ಯ ಮತ್ತು ಚಂದ್ರರ ಗ್ರಹಣವಂತೂ ವಿಶೇಷವಾಗಿದ್ದು ವಿಜ್ಞಾನಿಗಳ ಪಾಲಿಗೆ ಸದಾ ಕುತೂ ಹಲಕಾರಿ ಮಾತ್ರವಲ್ಲದೆ ಬೇಕಾದ ದತ್ತಾಂಶ ಗಳನ್ನು ಪಡೆದುಕೊಳ್ಳಲು ಸುವರ್ಣಾವಕಾಶವಾಗಿದೆ. ಐನ್‌ಸ್ಟೈನ್ ಸಾಮಾನ್ಯ ಸಾಪೇಕ್ಷ ಸಿದ್ಧಾಂತವನ್ನು ಮಂಡಿಸಿದಾಗ ಗುರುತ್ವಾಕರ್ಷಣ ಶಕ್ತಿಯು ಬೆಳಕಿನ ಕಿರಣವನ್ನು ಬಗ್ಗಿಸಬಲ್ಲುದು ಎಂದು ಸೈದ್ಧಾಂತಿಕ ವಾಗಿ ಪ್ರತಿಪಾದಿಸಿದ. ಅದು ಹೌದೇ ಅಲ್ಲವೇ? ಎನ್ನುವುದನ್ನು ಪ್ರಯೋಗದ ಮೂಲಕ ಪರೀಕ್ಷಿಸಲು ಸರ್ ಅರ್ಥರ್ ಎಡ್ಡಿಂಗ್‌ಟನ್ 1919ರ ಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಸೂರ್ಯ ಬಿಂಬದ ನೇರ ಹಿಂದಿನ ನಕ್ಷತ್ರದ ಬೆಳಕು ಕಾಣಸಿಗುವುದೇ ಎಂದು ಪರೀಕ್ಷಿಸಿದ ಪ್ರಯೋಗ ಸಫಲವಾಯಿತು. ಆ ಮೂಲಕ ಐನ್‌ಸ್ಟೈನ್ ಹೇಳಿದ್ದು ಸರಿ ಎಂದು ಸಾಬೀತಾಯಿತು.
ಬೀವರ್ ಚಂದ್ರಗ್ರಹಣ
ಈಗ ಸಂಭವಿಸಲಿರುವ ಗ್ರಹಣದ ಹುಣ್ಣಿಮೆಯ ಚಂದ್ರನನ್ನು ಅಮೆರಿಕದಲ್ಲಿ ಬೀವರ್ ಚಂದ್ರ ಎಂದು ಕರೆಯುತ್ತಾರೆ. ಅಲ್ಲಿ ಈ ಋತುವಿನಲ್ಲಿ ಬೀವರ್‌ಗಳು (ಪ್ರಕೃತಿಯ ಎಂಜಿನಿಯರ್ ಎಂದು ಕರೆಯಲ್ಪಡುವ ನೀರುನಾಯಿಯ ಜಾತಿ) ತಮ್ಮ ವಾಸಕ್ಕಾಗಿ ನದಿಯ ಹತ್ತಿರವಿರುವ ಜಾಗದಲ್ಲಿ ಸೂಕ್ತ ಸ್ಥಳಗಳನ್ನು ಹುಡುಕಿಕೊಳ್ಳುತ್ತವೆ. ಇದೇ ಸಂದರ್ಭದಲ್ಲಿ ಈ ಗ್ರಹಣ ಸಂಭವಿಸುತ್ತಿರುವುದರಿಂದ ಇದನ್ನು ಬೀವರ್ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.
ಚಂದ್ರ ತಾಮ್ರವರ್ಣಿಯಾಗಿ ಗ್ರಹಣದ ಸಮಯ ದಲ್ಲಿ ಕಾಣುವುದು ವಾತಾವರಣದಲ್ಲಿ ಬೆಳಕಿನ ಚದುರುವಿಕೆಯಿಂದ. ಈ ಬದಲಾಗುತ್ತಿರುವ ಚಂದ್ರನ ಬಣ್ಣವನ್ನು ನೋಡಿ ಆನಂದಿಸುವುದು ಕುತೂಹಲಿಗರಿಗೊಂದು ಅವಕಾಶ. ಈ ಬಾರಿ ವೀಕ್ಷಕರು ಅವಸರವಸರವಾಗಿ ಓಡಿ ಬರಬೇಕಿಲ್ಲ. ಗ್ರಹಣ ಸುದೀರ್ಘ ಅವಧಿಯದ್ದಾಗಿದ್ದರಿಂದ ಗ್ರಹಣ ವೀಕ್ಷಣೆಗೆ ಸಾಕಷ್ಟು ಸಮಯ ಲಭ್ಯವಾಗಲಿದೆ. ಆದರೆ ಈ ಅಂಶಿಕ ಚಂದ್ರಗ್ರಹಣಗಳು ಹೆಚ್ಚು ಸಂಭವಿಸಿದರೂ ಪೂರ್ಣ ಚಂದ್ರಗ್ರಹಣದಷ್ಟು ಆಕರ್ಷ ಣೀಯವಾಗಿರುವುದಿಲ್ಲ. ನಾಸಾದ ಪ್ರಕಾರ 228 ಚಂದ್ರಗ್ರಹಣಗಳು 21ನೇ ಶತಮಾನದಲ್ಲಿ ಸಂಭವಿಸಿ ದರೂ ವೀಕ್ಷಣೆಯ ಭಾಗ್ಯ ಕೆಲವು ಪ್ರದೇಶಗಳಲ್ಲಿ ಮಾತ್ರ ಲಭ್ಯ. ನ. 19ರ ಚಂದ್ರಗ್ರಹಣ ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಭಾರತದ ಈಶಾನ್ಯ ಭಾಗಗಳ ಕೆಲವೊಂದು ಪ್ರದೇಶಗಳಲ್ಲಿ ಈ ಗ್ರಹಣವು ಅರೆ ನೆರಳಿನ ಚಂದ್ರ ಗ್ರಹಣವಾಗಿ ಗೋಚರಿಸುವ ಸಾಧ್ಯತೆಗಳಿವೆ.
ಸುದೀರ್ಘ ಚಂದ್ರಗ್ರಹಣ
1440ರ ಫೆಬ್ರವರಿ 18ರಂದು ಸುದೀರ್ಘ ಅವಧಿಯ ಆಂಶಿಕ ಚಂದ್ರಗ್ರಹಣ ಸಂಭವಿ ಸಿತ್ತು. ಸುಮಾರು 581 ವರ್ಷಗಳ ಅನಂತರ ಈ ಆಂಶಿಕ ಚಂದ್ರಗ್ರಹಣ ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ನ. 19ರ ಮಧ್ಯಾಹ್ನ ಗಂಟೆ 12.48ಕ್ಕೆ ಗ್ರಹಣ ಆರಂಭಗೊಳ್ಳಲಿದ್ದು ಸಂಜೆ ಗಂಟೆ 4.17ಕ್ಕೆ ಮುಕ್ತಾಯಗೊಳ್ಳಲಿದೆ. ಚಂದ್ರನ ಸುಮಾರು ಶೇ.97ರಷ್ಟು ಭಾಗವನ್ನು ದಟ್ಟ ನೆರಳು ಆವರಿಸಿದರೂ ಇದನ್ನು ಆಂಶಿಕ ಎಂದು ಪರಿಗಣಿಸಲಾಗಿದೆ. ಸುಮಾರು 3.30 ಗಂಟೆ ಅವಧಿಯ ಈ ಗ್ರಹಣದಲ್ಲಿ ಚಂದ್ರನ ಬಿಂಬ ಭೂಮಿಯ ವಾತಾವರಣವನ್ನು ಹೊಂದಿ ಕೊಂಡು ತಾಮ್ರವರ್ಣ ತಾಳುವುದನ್ನು ವೀಕ್ಷಕರು ಕಾಣಬಹುದು. ಇದೇ ವೇಳೆ ಅರೆ ನೆರಳಿನ ಚಂದ್ರಗ್ರಹಣವು ಪೂರ್ವಾಹ್ನ ಗಂಟೆ 11.32ಕ್ಕೆ ಆರಂಭಗೊಂಡು ಸಂಜೆ ಗಂಟೆ 5.33ಕ್ಕೆ ಅಂತ್ಯಗೊಳ್ಳಲಿದೆ. ಹೀಗಾಗಿ ಈಶಾನ್ಯ ಭಾರತದ ಕೆಲವೊಂದು ಪ್ರದೇಶಗಳಲ್ಲಿ ಈ ಚಂದ್ರ ಗ್ರಹಣದ ಅಂತಿಮ ಹಂತ ಕಾಣಸಿಗುವ ಸಾಧ್ಯತೆ ಇದೆಯಾದರೂ ಆಗಸ ಮೋಡದಿಂದ ಕೂಡಿರದೇ ಶುಭ್ರವಾಗಿರುವುದು ಬಲು ಮುಖ್ಯ.
ಗ್ರಹಣಗಳು ಹೇಗೆ ಸಂಭವಿಸುತ್ತವೆ?
ಗ್ರಹಣಗಳು ಖಗೋಳದ ವಿಸ್ಮಯಕಾರಿ ನೆರಳು- ಬೆಳಕಿನ ಆಟ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿರುವಾಗ ಸೂರ್ಯ ಅಥವಾ ಚಂದ್ರಗ್ರಹಣಗಳು ಸಂಭವಿಸುತ್ತವೆ. ಸೂರ್ಯಗ್ರಹಣವಾಗಲು ಚಂದ್ರ, ಸೂರ್ಯನ ಮತ್ತು ಭೂಮಿಯ ನಡುವೆ ಬಂದು ನಮಗೆ ಸೂರ್ಯನ ಬಿಂಬ ಮರೆಯಾಗುತ್ತದೆ. ಇದು ಪೂರ್ಣ ಸೂರ್ಯಗ್ರಹಣ, ಕಂಕಣ ಅಥವಾ ಅಂಶಿಕ ಸೂರ್ಯಗ್ರಹಣವಾಗಬಹುದು. ಇದು ಅಮಾ
ವಾಸ್ಯೆಯ ದಿನ ಸಂಭವಿಸುತ್ತದೆ. ಚಂದ್ರಗ್ರಹಣ ವಾಗಬೇಕಾದರೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರಬೇಕು. ಭೂಮಿಯ ಪೂರ್ಣ ನೆರಳಿನ ಭಾಗಕ್ಕೆ ಚಂದ್ರ ಬಂದಾಗ ಪೂರ್ಣ ಚಂದ್ರಗ್ರಹಣ. ಭೂಮಿಯ ಪೂರ್ಣ ನೆರಳಿನ ಭಾಗಕ್ಕೆ ಚಂದ್ರ ಬಂದರೆ ಆಂಶಿಕ ಚಂದ್ರಗ್ರಹಣ.
ಚಂದ್ರಗ್ರಹಣ ಕಾಲದಲ್ಲಿ ಚಂದ್ರ ಬಿಂಬ ಕೆಂಪಾ ಗಲು ಕಾರಣ ಬೆಳಕಿನ ಚದುರುವಿಕೆ. ಭೂಮಿ ಯಲ್ಲಿ ನಾವು ಕಾಣುವ ನೀಲಾಕಾಶ, ಸೂರ್ಯಾಸ್ತ ಮಾನದ ಕೆಂಬಣ್ಣ ಆಕಾಶ ಇವು ಇಂತಹ ಚದು ರುವಿಕೆಯಿಂದಾಗುವುದು. ಗ್ರಹಣ ಕಾಲದಲ್ಲಿ ಚಂದ್ರನ ಮೇಲೆ ಬೀಳುವ ಸೂರ್ಯನ ಕಿರಣಗಳು ಭೂಮಿಯ ವಾತಾವರಣದ ಮೂಲಕ ಚದುರಿ ಹಾದುಹೋದವುಗಳು. ವಾತಾವರಣದಲ್ಲಿ ಧೂಳು, ಮೋಡ ಜಾಸ್ತಿ ಇದ್ದಲ್ಲಿ ಕೆಂಪು ಜಾಸ್ತಿ.
ವರ್ಷದ ಕೊನೆಯ ಚಂದ್ರಗ್ರಹಣವನ್ನು ನೋಡ ಲಾಗುವುದಿಲ್ಲವೆಂದು ನಾವು ನಿರಾಶರಾಗಬೇಕಿಲ್ಲ. ಮಾಧ್ಯಮಗಳು, ವೀಕ್ಷಣಾಲಯಗಳು ಭಾರೀ ಪ್ರಚಾರವನ್ನು ಈ ವಿದ್ಯಮಾನಕ್ಕೆ ನೀಡುತ್ತಿವೆ. ಆಸಕ್ತರು ಹಾಗೂ ಖಗೋಳ ಕುತೂಹಲಿಗರು ಇಂಟರ್‌ನೆಟ್ ಜಾಲಾಡಿ ಮಾಧ್ಯಮಗಳ ಸಹಾಯ ದಿಂದ ಕಂಪ್ಯೂಟರ್‌ನಲ್ಲಿ ಗ್ರಹಣದ ನೇರ ವೀಕ್ಷಣೆ ಮಾಡಬಹುದು.
-ಡಾ| ಕೆ. ವಿ. ರಾವ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.