Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್, ಗೆಣಸಿನ ಹೋಳಿಗೆ
ಶ್ರೀರಾಮ್ ನಾಯಕ್, Jan 13, 2025, 5:58 PM IST
Udayavani.Com ಪ್ರಿಯರಿಗೆ ಮಕರ ಸಂಕ್ರಾಂತಿ(Makar Sankranti) ಹಬ್ಬದ ಶುಭಾಶಯಗಳು… ಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಅಲ್ಲದೆ ಇದು ವರ್ಷದ ಮೊದಲ ಹಬ್ಬವೂ ಹೌದು ಹಾಗಾಗಿ ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಸಿಹಿ ಖಾದ್ಯಗಳು ಅಂದರೆ ಹೋಳಿಗೆ, ಲಡ್ಡು, ಕಜ್ಜಾಯ, ಪಾಯಸ, ಇನ್ನಿತರ ಸಿಹಿ ತಿನಿಸುಗಳು. ಈ ಬಾರಿಯ ಮಕರ ಸಂಕ್ರಾಂತಿಗೆ ನೀವೂ ಕೂಡಾ ಮನೆಯಲ್ಲಿ ಸಿಹಿ ಮಾಡಬೇಕೆಂದುಕೊಂಡಿದ್ದೀರಾ… ಹಾಗಾದರೆ ನಾವು ನಿಮಗಾಗಿ ಸಿಹಿ ಪೊಂಗಲ್ ಮತ್ತು ಗೆಣಸಿನ ಹೋಳಿಗೆ ರೆಸಿಪಿಗಳನ್ನು ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ. ಅದರಂತೆ ನೀವು ಮನೆಯಲ್ಲಿ ಸಿಹಿ ತಯಾರಿಸಿ ಮನೆಮಂದಿಯೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿರಿ…
ಸಿಹಿ ಪೊಂಗಲ್(Sweet Pongal)
ಬೇಕಾಗುವ ಸಾಮಗ್ರಿಗಳು
ಹೆಸ್ರು ಬೇಳೆ-1 ಕಪ್, ಬೆಳ್ತಿಗೆ ಅಕ್ಕಿ-1 ಕಪ್, ಹಾಲು-ಅರ್ಧ ಕಪ್, ತುಪ್ಪ-4 ಚಮಚ, ಬೆಲ್ಲ-ಅರ್ಧ ಕಪ್, ಸಕ್ಕರೆ-1/4 ಕಪ್, ತೆಂಗಿನ ತುರಿ-ಅರ್ಧ ಕಪ್, ಒಣದ್ರಾಕ್ಷಿ-ಸ್ವಲ್ಪ, ಗೋಡಂಬಿ-ಸ್ವಲ್ಪ , ಕೊಬ್ಬರಿ-2ತುಂಡು, ಏಲಕ್ಕಿ ಪುಡಿ-1ಟೀಸ್ಪೂನ್.
ತಯಾರಿಸುವ ವಿಧಾನ
ಮೊದಲಿಗೆ ಹೆಸ್ರು ಬೇಳೆ ಮತ್ತು ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದಿಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಹೆಸ್ರುಬೇಳೆಯನ್ನು ಹಾಕಿ ಅದು ಕೆಂಪಾಗುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ತದನಂತರ ಕುಕ್ಕರ್ ನಲ್ಲಿ ತೊಳೆದಿಟ್ಟ ಅಕ್ಕಿ, ಹುರಿದ ಬೇಳೆ, ಹಾಲು, ಒಂದು ಚಮಚದಷ್ಟು ತುಪ್ಪ ಮತ್ತು ನೀರನ್ನು ಸೇರಿಸಿ ಬೇಯಿಸಿಕೊಳ್ಳಿ. ಆ ಬಳಿಕ ಒಂದು ಪ್ಯಾನ್‌ಗೆ ಬೆಲ್ಲ ಮತ್ತು ಸಕ್ಕರೆಯನ್ನು ಹಾಕಿ ಕರಗಿಸಿ. ಈಗ ಬೇಯಿಸಿದ ಅಕ್ಕಿ- ಬೇಳೆಯನ್ನು ಹಾಕಿ ತುರಿದಿಟ್ಟ ತೆಂಗಿನಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಏಲಕ್ಕಿ ಪುಡಿ, ಮತ್ತು ತುಪ್ಪದಲ್ಲಿ ಹುರಿದ ಒಣದ್ರಾಕ್ಷಿ , ಕೊಬ್ಬರಿ,ಗೋಡಂಬಿಯನ್ನು ಹಾಕಿದರೆ ಸಿಹಿ ಪೊಂಗಲ್ ಸವಿಯಲು ಸಿದ್ಧ.
ಗೆಣಸಿನ ಹೋಳಿಗೆ(Sweet Potato Holige)
ಬೇಕಾಗುವ ಸಾಮಗ್ರಿಗಳು
ಸಿಹಿಗೆಣಸು-4, ಮೈದಾ ಹಿಟ್ಟು-1ಕಪ್, ಬೆಲ್ಲ-1ಕಪ್, ಚಿರೋಟಿ ರವೆ-ಅರ್ಧ ಕಪ್, ಅರಿಶಿನ ಪುಡಿ-1ಟೀಸ್ಪೂನ್, ಎಣ್ಣೆ-3ಚಮಚ, ತುಪ್ಪ, ಏಲಕ್ಕಿ ಪುಡಿ-ಅರ್ಧ ಟೀಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಗಸಗಸೆ-ಸ್ವಲ್ಪ, ತೆಂಗಿನ ತುರಿ-ಅರ್ಧ ಕಪ್.
ತಯಾರಿಸುವ ವಿಧಾನ
ಮೊದಲಿಗೆ ಸಿಹಿಗೆಣಸನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಬೇಯಿಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಮೈದಾ ಹಿಟ್ಟು,ಚಿರೋಟಿ ರವೆ , 3ಚಮಚದಷ್ಟು ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಸುಮಾರು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ. ತದನಂತರ ಒಲೆಯ ಮೇಲೆ ಒಂದು ಬಾಣಲೆಯನ್ನಿಟ್ಟು ಅದಕ್ಕೆ ಬೆಲ್ಲವನ್ನು ಹಾಕಿ ಸ್ವಲ್ಪ ಹೊತ್ತು ಕುದಿಸಿ ಆಮೇಲೆ ತೆಂಗಿನ ತುರಿ, ಗಸಗಸೆ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ. ನಂತರ ಬೇಯಿಸಿದ ಸಿಹಿ ಗೆಣಸನ್ನು ಹಾಕಿ ನುಣ್ಣಗೆ ಮಾಡಿಕೊಳ್ಳಿ. ನಂತರ ಸಿದ್ದಪಡಿಸಿಕೊಂಡಿದ್ದ ಹಿಟ್ಟನ್ನು ಸಣ್ಣ-ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು,ಕೈಯಿಂದ ಚಪ್ಪಟೆ ಮಾಡಿ ಮಧ್ಯಕ್ಕೆ ಮಾಡಿಟ್ಟ ಹೂರಣವನ್ನು ಇಟ್ಟು ಎಲ್ಲಾ ಬದಿಗಳನ್ನೂ ಹಿಟ್ಟಿನಿಂದ ಮುಚ್ಚಿ. ಬಳಿಕ ಈ ಉಂಡೆಯನ್ನು ಚಪಾತಿಯಂತೆ ಲಟ್ಟಿಸಿಕೊಳ್ಳಿ. ನಂತರ ಒಲೆಯ ಮೇಲೆ ತವಾ ಇಟ್ಟು , ಎಣ್ಣೆ ಅಥವಾ ತುಪ್ಪವನ್ನು ಹಾಕಿ ಕಾದನಂತರ ಮಾಡಿಟ್ಟ ಹೋಳಿಗೆಯನ್ನು ಹಾಕಿ ಎರಡೂ ಬದಿಯನ್ನು ಹದವಾಗಿ ಕಾಯಿಸಿದರೆ ಬಿಸಿ-ಬಿಸಿಯಾದ ಗೆಣಸಿನ ಹೋಳಿಗೆ ಸವಿಯಲು ಸಿದ್ಧ.
-ಶ್ರೀರಾಮ್ ಜಿ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.