ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!


Team Udayavani, Jan 27, 2022, 7:15 AM IST

ಎಲೆಮರೆಯ ಕಾಯಿಯಂತಿದ್ದ ಸಾಧಕರಿಗೆ ಸಿಕ್ಕಿತು ಫ‌ಲ!

ಪ್ರಶಸ್ತಿಗಳು ಪ್ರತಿಭೆ ಇರುವವರ ಸ್ವತ್ತು. ಆ ನಿಟ್ಟಿನಲ್ಲೇ ಸರಕಾರ ಪ್ರತೀ ವರ್ಷದ ಪದ್ಮ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳ ಮೂಲಕ ರಾಷ್ಟ್ರದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನೂ ಹುಡುಕಿ ಗೌರವಿಸುತ್ತಿದೆ. ಅದೇ ರೀತಿ ಈ ಬಾರಿಯೂ 128 ಸಾಧಕರಿಗೆ ಪದ್ಮ ಪ್ರಶಸ್ತಿ ಕೊಡುವುದಾಗಿ ಘೋಷಿಸಲಾಗಿದೆ. ಅದರಲ್ಲಿ ಮುನ್ನೆಲೆಯಲ್ಲಿ ಕೇಳಿ ಬಂದಿರುವ ಹೆಸರು ಕೆಲವಿದ್ದರೆ, ಎಲ್ಲೂ ಹೆಸರಿಸಿಕೊಳ್ಳದೆ, ಎಲೆ ಮರೆಯ ಕಾಯಿಗಳಂತೆ ಕೆಲಸ ಮಾಡಿದವರ ಹೆಸರು ಹಲವಿದೆ. ಪಟ್ಟಿಯಲ್ಲಿನ ಕೆಲವು ಸಾಧಕರ ಸಣ್ಣ ಪರಿಚಯ ಇಲ್ಲಿದೆ.

ಕೆ. ರಬಿಯಾ, ಕೇರಳ – ಸಮಾಜ ಸೇವೆ

ಕೇರಳದ ಮಲಪ್ಪುರಂನವವರಾದ ಕರಿವೆಪ್ಪಿಳ್‌ ರಬಿಯಾ ಅವರು ಹುಟ್ಟುತ್ತಲೇ ಅಂಗವಿಕಲರಾಗಿದ್ದರೂ ಅದನ್ನು ದೌರ್ಬಲ್ಯ ಎಂದು ಭಾವಿಸಿಯೇ ಇಲ್ಲ. ಸಮಾಜಕ್ಕೆ ತಮ್ಮಿಂದಾದ ಸೇವೆ ಸಲ್ಲಿಸುತ್ತಾ ಸಾರ್ಥಕ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸಾಕ್ಷರತಾ ಯೋಜನೆಯ ಮೂಲಕ ತಾತ್ಕಾಲಿಕ ಮಾರ್ಗದರ್ಶಕರಾಗಿ ಕೆಲಸ ಶುರುಮಾಡಿದ ರಬಿಯಾ ಅನಂತರ ತಮ್ಮ ವೆಲ್ಲಿಕ್ಕಾಡು ಗ್ರಾಮವನ್ನು “ಅಕ್ಷರಗಳ ಪ್ರಪಂಚ’ಕ್ಕೆ ಒಯ್ಯುವಲ್ಲಿ ಯಶಸ್ವಿಯಾದರು. ಸ್ವತಃ ಅವರ ತಾಯಿ ಮತ್ತು ಅಜ್ಜಿ ಕೂಡ ರಬಿಯಾರ ಮೂಲಕವೇ ಅಕ್ಷರ ಕಲಿತರು. ರಬಿಯಾರ ಪ್ರಯತ್ನದ ಫ‌ಲವಾಗಿ ಇಡೀ ವೆಲ್ಲಿಕ್ಕಾಡು “ಸಾಕ್ಷರರ ಗ್ರಾಮ’ವಾಗಿ ಬದ ಲಾಯಿತು. ಅನಂತರ ಗ್ರಾಮಸ್ಥರ ನೆರವಿನೊಂದಿಗೆ “ಚಲನಂ’ ಎಂಬ ಪಬ್ಲಿಕೇಶನ್‌ ಸಮೂಹ, ಕಾಟೇಜ್‌ ಇಂಡಸ್ಟ್ರಿ, ಟ್ಯೂಶನ್‌ ಕೇಂದ್ರಗಳು, ಗ್ರಾಮ ಗ್ರಂಥಾಲಯಗಳು, ಮನೋವಿಕಲಾಂಗ ಮತ್ತು ಕಿವುಡು ಮಕ್ಕಳಿಗೆಂದೇ ವಿಶೇಷ ಶಾಲೆ, ಚರ್ಚಾ ಕೊಠಡಿಗಳು, ಕೌಟುಂಬಿಕ ಕೌನ್ಸೆಲಿಂಗ್‌ ಕೇಂದ್ರಗಳು, ರಕ್ತದಾನ ತಂಡ, ಓದುವಿಕೆಗೆ ಉತ್ತೇಜನ ನೀಡುವ ಕ್ಲಬ್‌ಗಳು, ಸಣ್ಣ ಉಳಿತಾಯ ಯೋಜನೆಗಳನ್ನು ಆರಂಭಿಸಿದರು. ಗಮನಾರ್ಹ ವಿಚಾರವೆಂದರೆ, ಪೋಲಿಯೋ ಜತೆಗಿನ ಹೋರಾಟದೊಂದಿಗೇ ರಬಿಯಾ, ಕ್ಯಾನ್ಸರ್‌ ಕೂಡ ಗೆದ್ದಿದ್ದಾರೆ.

ಸಂಜಯ್‌ ರಾಜಾರಾಮ್‌, ಮೆಕ್ಸಿಕೋ-  ಕೃಷಿ

ಭಾರತ ಮೂಲದವರಾಗಿದ್ದು ಮೆಕ್ಸಿಕೋದಲ್ಲಿ ವಾಸವಾಗಿರುವ ಸಂಜಯ್‌ ರಾಜಾರಾಮ್‌(78) ವಿಶ್ವದ ಪ್ರಸಿದ್ಧ ಕೃಷಿ ವಿಜ್ಞಾನಿಗಳಲ್ಲಿ ಒಬ್ಬರು. ಅತೀ ಹೆಚ್ಚು ಇಳುವರಿ ಕೊಡುವ ಹಾಗೂ ಕಡಿಮೆ ಕೀಟಬಾಧೆಗೆ ಒಳಗಾಗಬಲ್ಲ 480 ತಳಿಯ ಗೋಧಿಯನ್ನು ಅವರು ಅಭಿವೃದ್ಧಿ ಪಡಿಸಿದ್ದಾರೆ. 51 ರಾಷ್ಟ್ರಗಳಲ್ಲಿ ಈ ತಳಿಗಳ ಬೆಳೆ ಬೆಳೆಯಲಾಗುತ್ತಿದೆ. ಅವರೇ ಕಂಡುಹಿಡಿದ ತಳಿಗಳಿಂದಾಗಿ ಈ ರಾಷ್ಟ್ರಗಳಲ್ಲಿ ಗೋಧಿ ಬೆಳೆ 20 ಕೋಟಿ ಟನ್‌ಗಳಷ್ಟು ಹೆಚ್ಚಳ ಕಂಡಿದೆ. ಕೃಷಿಯ ಬಗ್ಗೆ ಇನ್ನಷ್ಟು ಸಂಶೋಧನೆಗಳನ್ನು ಕೈಗೊಳ್ಳಲು ಅವರು ಒಟ್ಟು 700 ವಿಜ್ಞಾನಿಗಳಿಗೆ ತರಬೇತಿ ಕೊಟ್ಟಿದ್ದಾರೆ ಕೂಡ.

ಗಮಿತ್‌ ರಮಿಲಾಬೆನ್‌ ರಾಯ್‌ಸಿಂಗ್‌ಭಾಯಿ, ಗುಜರಾತ್‌ – ಸಮಾಜ ಸೇವೆ

ಗಮಿತ್‌ ರಮಿಲಾಬೆನ್‌ ಗ್ರಾಮ ಪಂಚಾಯತ್‌ ಸದಸ್ಯೆ. ಊರಿನ ಜನರು ಶೌಚಾಲಯವಿಲ್ಲದೆ, ಬಯಲು ಶೌಚ ಮಾಡುತ್ತಿರುವುದನ್ನು ಗಮನಿಸಿದ ಅವರು, ಶೌಚಾಲಯ ನಿರ್ಮಾಣದ ಬಗ್ಗೆ ತಿಳಿದುಕೊಂಡರು. ಅವರ ಊರು ಗುಡ್ಡಗಾಡು ಪ್ರದೇಶದಲ್ಲಿದ್ದಿದ್ದರಿಂದಾಗಿ ಶೌಚಾಲಯ ನಿರ್ಮಾಣಕ್ಕೆ ಸಾಮಗ್ರಿ ಹೊತ್ತು ತರುವುದೂ ಒಂದು ದೊಡ್ಡ ಸವಾಲಾಗಿತ್ತು. ಆ ಸವಾಲು ಎದುರಿಸಲು ಸಿದ್ಧವಾದ ರಮಿಲಾಬೆನ್‌ ಊರಿನ ಮಹಿಳೆಯರನ್ನೆಲ್ಲ ಸೇರಿಸಿಕೊಂಡು ನೇಹಾ ಸಖೀ ಮಂಡಳಿ ಮೂಲಕ ಶೌಚಾಲಯ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ತಮ್ಮ ಊರು ಮಾತ್ರವಲ್ಲದೆ ಸುತ್ತ ಮುತ್ತಲಿನ ಒಟ್ಟು 9 ಹಳ್ಳಿಗಳಲ್ಲಿ 300ಕ್ಕೂ ಅಧಿಕ ಶೌಚಾಲಯ ನಿರ್ಮಿಸಿ ಸೈ ಎನಿಸಿಕೊಂಡರು.

ಕಮಲಿನಿ ಮತ್ತು ನಳಿನಿ, ಉತ್ತರ ಪ್ರದೇಶ- ಕಲೆ

ಉತ್ತರ ಪ್ರದೇಶದ ಆಗ್ರಾ ಮೂಲದ ಅಕ್ಕ ತಂಗಿ ಕಮಲಿನಿ ಆಸ್ಥಾನ್‌ ಮತ್ತು ನಳಿನಿ ಆಸ್ಥಾನ್‌. ತಂದೆ ವಾಯುಪಡೆಯಲ್ಲಿದ್ದು, ಅತಿ ಶಿಸ್ತು ಮತ್ತು ಕಟ್ಟುಪಾಡಿನ ಕುಟುಂಬದಲ್ಲಿ ಜನಿಸಿದವರಿವರು. ಕಲೆಯ ಗಂಧ ಗಾಳಿಯೂ ಗೊತ್ತಿರದ ಕುಟುಂಬದ ಈ ಇಬ್ಬರು ಹೆಣ್ಣು ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಹುಟ್ಟಿಸಿದ್ದು ಅವರ ತಾಯಿ. ಚಿಕ್ಕ ವಯಸ್ಸಿನಲ್ಲೇ ಪ್ರಸಿದ್ಧ ಕಥಕ್‌ ನೃತ್ಯಗಾರ ಗುರು ಪಂಡಿತ್‌ ಜೀತೇಂದ್ರ ಮಹಾರಾಜ್‌ ಬಳಿ ಕರೆದೊಯ್ದು ಕಥಕ್‌ ಕಲಿಸಿದ್ದರು. ಒಂದು ವರ್ಷದ ವಯಸ್ಸಿನ ಅಂತರವಿದ್ದರೂ ಒಂದೇ ರಾಶಿ ಭವಿಷ್ಯವಿಟ್ಟುಕೊಂಡು ಜನಿಸಿದ್ದ ಈ ಅಕ್ಕ ತಂಗಿಯಿಂದ ಜೋಡಿ ನೃತ್ಯವನ್ನೇ ಮಾಡಿಸಬೇಕೆಂದು ಗುರುಗಳು ಅವರಿಬ್ಬರಿಗೆ ತರಬೇತಿ ನೀಡಲಾರಂಭಿಸಿದರು. 1973ರಲ್ಲಿ ಕಥಕ್‌ ಕಲಿಕೆ ಆರಂಭಿಸಿದ ಈ ಜೋಡಿ ಪೂರ್ತಿ ಜೀವನವನ್ನೇ ಕಥಕ್‌ಗಾಗಿ ಮುಡಿಪಾಗಿಟ್ಟಿದೆ. ಯುರೋಪ್‌, ಅಮೆರಿಕ, ಯುಎಇ ಸೇರಿ ಅನೇಕ ರಾಷ್ಟ್ರಗಳಲ್ಲಿ ಈ ಜೋಡಿ ಪ್ರದರ್ಶನ ಕೊಟ್ಟಿದೆ. ಸಮುದ್ರ ಮಟ್ಟದಿಂದ 18,000 ಅಡಿ ಎತ್ತರದಲ್ಲಿರುವ ಕೈಲಾಸ ಮಾನಸ ಸರೋವರದಲ್ಲಿ, ಭದ್ರಿನಾಥ, ರಾಮೇಶ್ವರ, ತಿರುಪತಿ, ಕನ್ಯಾಕುಮಾರಿ ಸೇರಿ ರಾಷ್ಟ್ರದ ಎಲ್ಲ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೂ ಈ ಜೋಡಿ ನೃತ್ಯ ಕಾರ್ಯಕ್ರಮ ನೀಡಿದೆ. ಕಲೆಯನ್ನೇ ಮದುವೆಯಾಗಿರುವುದಾಗಿ ಹೇಳಿಕೊಳ್ಳುವ ಅಕ್ಕತಂಗಿ, ತಮಗಿಂತ ಮೊದಲು ತಮ್ಮ ಗುರುಗಳಿಗೆ ಗೌರವ ಸಲ್ಲಿಸಬೇಕು ಎನ್ನುವ ಕಾರಣಕ್ಕೇ ಅದೆಷ್ಟೋ ಪ್ರಶಸ್ತಿಗಳನ್ನೂ ತಿರಸ್ಕರಿಸಿದ್ದಾರೆ.

ಡಾ| ಸುಂಕರ್‌ ವೆಂಕಟ ಆದಿನಾರಾಯಣ ರಾವ್‌, ಆಂಧ್ರಪ್ರದೇಶ- ಔಷಧ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ 82 ವರ್ಷದ ವೈದ್ಯರಾಗಿರುವ ಸುಂಕರ್‌ ವೆಂಕಟ ತಮ್ಮ ಜೀವನವನ್ನೇ ಪೋಲಿಯೋ ರೋಗಿಗಳ ಚಿಕಿತ್ಸೆಗಾಗಿ ಮುಡಿಪಾಗಿಟ್ಟವರು. ಅವರು ಈವರೆಗೆ ದೇಶಾದ್ಯಂತ 20 ಲಕ್ಷಕ್ಕೂ ಅಧಿಕ ಪೋಲಿಯೋ ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ಕೊಟ್ಟಿದ್ದಾರೆ. 1 ಲಕ್ಷಕ್ಕೂ ಅಧಿಕ ಪೋಲಿಯೋ ಪೀಡಿತರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ಒಟ್ಟು 900ಕ್ಕೂ ಅಧಿಕ ಚಿಕಿತ್ಸಾ ಕ್ಯಾಂಪ್‌ಗ್ಳನ್ನು ಮಾಡುವ ಮೂಲಕ ರೋಗಿಗಳಿಗೆ ನೆರವಾಗಿದ್ದಾರೆ.

ಸಾಹುಕಾರ್‌ ಜಾನಕಿ, ತಮಿಳುನಾಡು- ಕಲೆ

1931ರಲ್ಲಿ ಆಂಧ್ರದಲ್ಲಿ ಜನಿಸಿದ ಜಾನಕಿ ಅವರು 1950ರಲ್ಲಿ ತೆಲುಗಿನ ನಿರ್ದೇಶಕ ಎಲ್‌.ವಿ.ಪ್ರಸಾದ್‌ ನಿರ್ದೇಶನದ “ಸಾಹುಕಾರ್‌’ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಆ ಸಿನೆಮಾ ಅದೆಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ ಜಾನಕಿ ಅವರ ಹೆಸರನ್ನೇ “ಸಾಹುಕಾರ್‌ ಜಾನಕಿ’ಯಾಗಿ ಮಾಡಿತು. ಮೊದ ಮೊದಲು ರೇಡಿಯೊ ಕಾರ್ಯಕ್ರಮ ಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದ ಸಾಹುಕಾರ್‌ ಜಾನಕಿ ಅನಂತರ ಪೂರ್ಣ ಪ್ರಮಾಣದಲ್ಲಿ ಸಿನೆ ರಂಗದಲ್ಲಿ ತೊಡಗಿಸಿಕೊಂಡರು. ಕನ್ನಡ, ತಮಿಳು, ತೆಲುಗು, ಮಲೆಯಾಳ ಹಾಗೂ ಹಿಂದಿ ಭಾಷೆಯ ಸಿನೆಮಾಗಳಲ್ಲಿ ಬಣ್ಣ ಹಚ್ಚಿದರು. ಡಾ| ರಾಜ್‌ಕುಮಾರ್‌, ಉದಯ್‌ಕುಮಾರ್‌ ಸಹಿತ ಕನ್ನಡದ ಅನೇಕ ಮೇರು ನಟರೊಂದಿಗೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಅವರ ಕನ್ನಡದ ಕೊನೆಯ ಚಿತ್ರ 2014ರ ಪುಂಗಿದಾಸ. ಕನ್ನಡದಲ್ಲಿ 25ಕ್ಕೂ ಹೆಚ್ಚು ಸೇರಿ ಒಟ್ಟಾರೆಯಾಗಿ 450ಕ್ಕೂ ಅಧಿಕ ಸಿನೆಮಾಗಳಲ್ಲಿ ಅವರು ನಟಿಸಿದ್ದಾರೆ.

ಕೊನ್ಸಮ್‌ ಇಬೊಮ್ಚ ಸಿಂಗ್‌, ಮಣಿಪುರ- ಕಲೆ

ಮಣಿಪುರದ ಇಂಫಾಲ್‌ ನಗರದ ಕೊನ್ಸಮ್‌ ಇಬೊಮ್ಚ ಸಿಂಗ್‌ರ ತಂದೆ ತಾಯಿ ಇಬ್ಬರೂ ಕಲೆಯಿಂದಲೇ ರಾಷ್ಟ್ರೀಯ ಪ್ರಶಸ್ತಿ ಪಡೆದಂಥವರು. ಅವರ ತಂದೆ ಕೊನ್ಸಮ್‌ ತೊನಾ ಸಿಂಗ್‌ ಗೊಂಬೆಗಳ ತಯಾರಿಕೆಯಲ್ಲಿ ಪ್ರಶಸ್ತಿ ಪಡೆದಿದ್ದರೆ ತಾಯಿ ಗಂಭಿನಿ ದೇವಿ ಬಿದಿರಿನ ಕೆಲಸಕ್ಕಾಗಿ ಪ್ರಶಸ್ತಿ ಪಡೆದಿದ್ದರು. ಪದವಿ ವಿದ್ಯಾಭ್ಯಾಸ ಮಾಡಿದ್ದರೂ ತಂದೆಯ ವಿಶಿಷ್ಟ ಕಲೆಯನ್ನೇ ಮುಂದುವರಿಸಿಕೊಂಡು ಬಂದ ಇಬೊಮ್ಚ ಸಿಂಗ್‌ ಸಂಪೂರ್ಣವಾಗಿ ಹ್ಯಾಂಡ್‌ಮೇಡ್‌ ಗೊಂಬೆಗಳನ್ನೇ ತಯಾರಿಸುತ್ತಾರೆ. ಮಣಿಪುರದಲ್ಲಿ ಸಾಂಪ್ರದಾಯಿಕವಾಗಿ ಬಂದಿದ್ದ ಹಳೆ ಬಟ್ಟೆಯ ಗೊಂಬೆಗಳ ಬದಲಾಗಿ ಒಣ ಹುಲ್ಲನ್ನು ಬಳಸಿ ಗೊಂಬೆ ಮಾಡಿ, ಅದರೊಟ್ಟಿಗೆ ಮಣ್ಣು, ಬಣ್ಣ, ಆಭರಣವನ್ನೆಲ್ಲ ಸೇರಿಸಿ ಚಂದಗಾಣಿಸಿದವರು. ಇಬೊಮ್ಚತಯಾರಿಸುವ ಗೊಂಬೆಗೆ ಅವರ ಪತ್ನಿಯೇ ಬಟ್ಟೆ ತಯಾರಿಸಿ, ಬಣ್ಣ ಬಣ್ಣದ ಆಭರಣವನ್ನೂ ಮಾಡಿ ಹಾಕುತ್ತಾರೆ.

ಒಂದು ಗೊಂಬೆ ತಯಾರಿಕೆಗೆ ಕನಿಷ್ಠ 1 ವಾರ ಬೇಕಂತೆ. ತಿಂಗಳಿಗೆ ಈ ಗೊಂಬೆ ಮಾರಾಟದಿಂದ 20-30 ಸಾವಿರ ರೂ. ದುಡಿಯುತ್ತಿದ್ದಾರೆ.

ಸ್ವಾಮಿ ಶಿವಾನಂದ,ಉತ್ತರ ಪ್ರದೇಶ-ಯೋಗ

ದೇಶದ ಅತ್ಯಂತ ಹಿರಿಯ ವ್ಯಕ್ತಿ ಉತ್ತರ ಪ್ರದೇಶದ ಸ್ವಾಮಿ ಶಿವಾನಂದ. ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಅವರ ವಯಸ್ಸು ಬರೋಬ್ಬರಿ 125 ವರ್ಷ. 1896ರ ಆಗಸ್ಟ್‌ 8ರಂದು ಜನಿಸಿದ್ದ ಅವರು ಈಗಲೂ ಪ್ರತೀ ದಿನ ಗಂಟೆಗಳ ಕಾಲ ಯೋಗ ಮಾಡುತ್ತಾರೆ. ಖಾರ, ಹಾಲು, ಹಣ್ಣು ಏನೂ ಸೇವಿಸದೆಯೇ ಆರೋಗ್ಯಕರ ಜೀವನ ನಡೆಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ವರ್ಷದ ಪದ್ಮ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಇವರೇ ಅತ್ಯಂತ ಹಿರಿಯರು.

ಮುತ್ತುಕಣ್ಣಮ್ಮಾಳ್‌, ತಮಿಳುನಾಡು- ಕಲೆ

ಇವರಿಗೆ ಈಗ 91 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಪುಟಿಯುವ ಉತ್ಸಾಹದಿಂದ ನೃತ್ಯ ಮಾಡಿ ಮಂತ್ರಮುಗ್ಧಗೊಳಿಸುವ ಛಾತಿ ಇವರಿಗಿದೆ. ತಮಿಳುನಾಡಿನ ವಿರಾಳಿಮಲೈನ ಮುರುಗ ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದ 32 ದೇವದಾಸಿಯರ ಪೈಕಿ ಬದುಕುಳಿದಿರುವ ಏಕೈಕ ದೇವದಾಸಿಯೇ ಮುತ್ತುಕಣ್ಣಮ್ಮಾಳ್‌. ಪ್ರಾಚೀನ ನೃತ್ಯ ಪ್ರಕಾರಗಳಲ್ಲಿ ಒಂದಾದ ಸಾಧಿರ್‌ ನೃತ್ಯವೇ ಇವರ ಜೀವಾಳ. ಸಾಧಿರ್‌ ಎಂಬುದು ಭರತನಾಟ್ಯದ “ತಾಯಿ’. ಇತ್ತೀಚೆಗೆ ಭರತನಾಟ್ಯವು ಪ್ರಸಿದ್ಧಿ ಪಡೆದರೂ ಸಾಧಿರ್‌ ಅನ್ನೇ ನೆಚ್ಚಿಕೊಂಡಿರುವ ಬೆರಳೆಣಿಕೆಯ ಮಂದಿಯ ಪೈಕಿ ಇವರೂ ಒಬ್ಬರು. ಸಾಧಿರ್‌ ನೃತ್ಯ ಪ್ರಕಾರದ ವಿಶೇಷತೆಯೆಂದರೆ, ಇಲ್ಲಿ ಕಲಾವಿದೆಯು ತಾನೇ ಏಕಕಾಲಕ್ಕೆ ಹಾಡುತ್ತಾ, ಹೆಜ್ಜೆ ಹಾಕುತ್ತಾಳೆ. ವಯಸ್ಸು 90 ದಾಟಿದ್ದರೂ ಮುತ್ತುಕಣ್ಣಮ್ಮಾಳ್‌ ಈಗಲೂ ಹಲವು ಹೆಣ್ಣುಮಕ್ಕಳಿಗೆ ಸಾಧಿರ್‌ ನೃತ್ಯವನ್ನು ಕಲಿಸುತ್ತಿದ್ದಾರೆ. ಈ ಮೂಲಕ ಅಳಿಸಿಹೋಗುತ್ತಿರುವ ಕಲೆಯೊಂದನ್ನು ಉಳಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

ಫೈಸಲ್‌ ಅಲಿದಾರ್‌,ಜಮ್ಮು ಮತ್ತು ಕಾಶ್ಮೀರ- ಕ್ರೀಡೆ

2022ನೇ ಸಾಲಿನ ಪದ್ಮ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಸಾಧಕ ಫೈಸಲ್‌ ಅಲಿ ದರ್‌. ಉಗ್ರ ಪೀಡಿತ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ 33 ವರ್ಷದ ಈ ಯುವಕ ಅಲ್ಲಿ ಮಾರ್ಷಲ್‌ ಆರ್ಟ್ಸ್ ಕನಸು ಕಾಣುವವರಿಗೆ ಆಸರೆಯಾಗಿ ನಿಂತಿದ್ದಾರೆ. ನ್ಪೋರ್ಟ್‌ ಅಕಾಡೆಮಿ ಮಾಡಿಕೊಂಡು ಸುಮಾರು 4 ಸಾವಿರ ಕ್ರೀಡಾಪಟುಗಳಿಗೆ ತರಬೇತಿ ಕೊಟ್ಟಿದ್ದಾರೆ. ಫೈಸಲ್‌ ತರಬೇತಿ ಕೊಟ್ಟಿರುವ ಕೆಲವು ಕ್ರೀಡಾಪಟುಗಳು ಗ್ಲೋಬಲ್‌ ಕಿಕ್‌ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.

ಸಾವಾಜಿ ಭಾಯಿ ಧೊಲಾಕಿಯಾ, ಗುಜರಾತ್‌- ಸಮಾಜ ಸೇವೆ

“ಉದ್ಯೋಗಿಗಳಿಗೆ 600 ಕಾರು ಉಡುಗೊರೆಯಾಗಿ ನೀಡಿದ ವಜ್ರೋದ್ಯಮಿ’. ಕಳೆದ ಕೆಲವು ವರ್ಷಗಳಿಂದ ದೀಪಾವಳಿ ಸಮಯದಲ್ಲಿ ಇಂಥದ್ದೊಂದು ಹೆಡ್‌ಲೈನ್‌ನೊಂದಿಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದ್ದನ್ನು ನೀವು ನೋಡಿರಬಹುದು. ಕಂಪೆನಿಯ ನೌಕರರಿಗೆ ಭರ್ಜರಿ ಗಿಫ್ಟ್ ಕೊಡುವ ಆ ಉದ್ಯಮಿಯೇ ಸಾವಾಜಿ ಭಾಯಿ ಧೊಲಾಕಿಯಾ. ಇವರು ಗುಜರಾತ್‌ನ ಅಮ್ರೇಲಿ ಜಿಲ್ಲೆಯ ದುಭಾಲಾ ಗ್ರಾಮದವರು. 13ನೇ ವಯಸ್ಸಿನಲ್ಲೇ ಶಾಲೆ ತೊರೆದು, ದೊಡ್ಡಪ್ಪನ ವಜ್ರದ ವ್ಯಾಪಾರದಲ್ಲಿ ಸಹಾಯ ಮಾಡಲು ಆರಂಭಿಸಿದ್ದ ಸಾವಾಜಿ ಭಾಯಿ, ಈಗ ಹರಿಕೃಷ್ಣ ಎಕ್ಸ್‌ಪೋರ್ಟ್‌ ಕಂಪೆನಿಗೆ ಮಾಲಕ. 2014ರಲ್ಲಿ ಕಂ±ಪೆನಿ 400 ಕೋಟಿ ರೂ.ಗಳ ವಹಿವಾಟು ದಾಖಲಿಸಿತ್ತು. ಪ್ರಸ್ತುತ ಸಾವಾಜಿ ಭಾಯಿ ಅವರು 6 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದು, ಸುಮಾರು 50 ದೇಶಗಳಿಗೆ ವಜ್ರಾಭರಣಗಳನ್ನು ರಫ್ತು ಮಾಡುತ್ತಾರೆ. 2011ರಲ್ಲಿ ದೀಪಾವಳಿ ಹಬ್ಬಕ್ಕೆ ನೌಕರರಿಗೆ ಭರ್ಜರಿ ಬೋನಸ್‌ ನೀಡಿ ಸುದ್ದಿಯಾಗಿದ್ದರು. 2015ರಲ್ಲಿ ಉದ್ಯೋಗಿಗಳಿಗೆ 491 ಕಾರು, 200 ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 2018ರಲ್ಲಿ 600 ಮಂದಿಗೆ ಕಾರು, 900 ಮಂದಿಗೆ ನಿಶ್ಚಿತ ಠೇವಣಿ ಸರ್ಟಿಫಿಕೆಟ್‌ ಕೊಟ್ಟಿದ್ದಾರೆ.

ಮಧುರ್‌ ಜೆಫ್ರಿ, ಅಮೆರಿಕ- ಸಾಹಿತ್ಯ

ಭಾರತದ ರಾಜಧಾನಿ ಹೊಸದಿಲ್ಲಿಯಲ್ಲಿ ಹುಟ್ಟಿ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಅನಂತರ ವಿದೇಶಿ ಹುಡುಗನನ್ನೇ ಮದುವೆಯಾಗಿ ಅಲ್ಲಿಯೇ ಜೀವನ ಆರಂಭಿಸಿದವರು ಮಧುರ್‌ ಜೆಫ್ರಿ. ವಿದೇಶಿ ಜೀವನಶೈಲಿಗೆ ಅಂಟಿಕೊಂಡಿದ್ದ ಅವರು ಸಿನೆಮಾಗಳಲ್ಲಿ ನಟಿಸಿ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡರು. ವಿದೇಶದಲ್ಲಿದ್ದರೂ ಭಾರತೀಯ ಖಾದ್ಯವನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದ ಅವರು ಮೊದಲಿಗೆ “ಆ್ಯನ್‌ ಇನ್ವಿಟೇಶನ್‌ ಟು ಇಂಡಿಯನ್‌ ಕುಕ್ಕಿಂಗ್‌’ ಹೆಸರಿನ ಪುಸ್ತಕ ಬರೆದರು. ಅವರ ಆ ಪುಸ್ತಕಕ್ಕೆ ಅತೀ ಹೆಚ್ಚು ಜನಪ್ರಿಯತೆ ಸಿಕ್ಕ ಅನಂತರ ಅದೇ ರೀತಿಯಲ್ಲಿ ಭಾರತದ ವಿಶೇಷ ಖಾದ್ಯಗಳನ್ನೆಲ್ಲ ಪರಿಚಯಿಸುತ್ತ 45 ವರ್ಷಗಳಲ್ಲಿ 30 ಪುಸ್ತಕಗಳನ್ನು ಬರೆದಿದ್ದಾರೆ. ವಿದೇಶಿ ನೆಲದಲ್ಲಿ ನಿಂತು ಭಾರತೀಯ ಖಾದ್ಯ ಪರಂಪರೆಯನ್ನು ಪಸರಿಸುತ್ತ ಬಂದಿದ್ದಾರೆ.

ಶಂಕರನಾರಾಯಣ ಮೆನನ್‌, ಕೇರಳ- ಕ್ರೀಡೆ

ಇವರನ್ನು ಕೇರಳದ “ಲಿವಿಂಗ್‌ ಲೆಜೆಂಡ್‌ ಇನ್‌ ಕಳರಿಪಯಟ್ಟು’ ಎಂದು ಕರೆಯಲಾಗುತ್ತದೆ. ಮಾರ್ಷಲ್‌ ಆರ್ಟ್ಸ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಶಂಕರನಾರಾಯಣ ಮೆನನ್‌ ಅವರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ತೃಶೂರ್‌ನ ಚಾವಕ್ಕಾಡ್‌ನಲ್ಲಿ ಜನಿಸಿದ ಮೆನನ್‌ ಅವರನ್ನು ಎಲ್ಲರೂ ಪ್ರೀತಿಯಿಂದ “ಉಣ್ಣಿ ಗುರುಕ್ಕಲ್‌’ ಎಂದು ಕರೆಯುತ್ತಾರೆ. ವಯಸ್ಸು 93 ಆಗಿದ್ದರೂ ಈಗಲೂ ತೃಶೂರ್‌ನಲ್ಲಿ ಕಳರಿ ತರಬೇತಿ ನೀಡುತ್ತಾರೆ. ಪ್ರತೀ ದಿನ ಸುಮಾರು 100ರಷ್ಟು ವಿದ್ಯಾರ್ಥಿಗಳಿಗೆ ಕಳರಿಪಯಟ್ಟು ಸಮರಕಲೆಯನ್ನು ಕಲಿಸಿಕೊಡುತ್ತಾರೆ. ಕಳರಿಯ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಮೆನನ್‌ ಕುಟುಂಬ ಮಹತ್ವದ ಪಾತ್ರ ವಹಿಸಿದೆ. ಒಂದು ಕಾಲದಲ್ಲಿ ಮಲಬಾರ್‌ ಪ್ರಾಂತ್ಯವನ್ನು ಆಳುತ್ತಿದ್ದ ವೆಟ್ಟತ್ತುನಾಡು ರಾಜನ ಸೇನೆಯ ನೇತೃತ್ವವನ್ನು ಇದೇ ಕುಟುಂಬ ವಹಿಸಿತ್ತು. ಉಣ್ಣಿ ಗುರುಕ್ಕಲ್‌ ಹಾಗೂ ಅವರ ಮಕ್ಕಳು ಯುಕೆ, ಅಮೆರಿಕ, ಫ್ರಾನ್ಸ್‌, ಬೆಲ್ಜಿಯಂ, ಶ್ರೀಲಂಕಾ ಮತ್ತಿತರ ದೇಶಗಳಲ್ಲೂ ತಮ್ಮ ಸಮರಕಲಾ ನೈಪುಣ್ಯವನ್ನು ಪ್ರದರ್ಶಿಸಿದ್ದಾರೆ. ಜಗತ್ತಿನಾದ್ಯಂತ 17 ಶಾಖೆಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ಕಳರಿ ತರಬೇತಿಯನ್ನೂ ನೀಡಿದ್ದಾರೆ.

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.