ಶಿವಸೇನೆ ಮತ್ತೆ ವಿಭಜನೆ ಅಂಚಿನಲ್ಲಿ
Team Udayavani, Jun 24, 2022, 10:20 AM IST
ಮರಾಠಿಗರ ಸಂಕಷ್ಟಗಳನ್ನು ಆಲಿಸುವ ಸಲುವಾಗಿಯೇ ರಚನೆಯಾದ ಪಕ್ಷ ಶಿವಸೇನೆ. ಶಿವಸೇನೆ ಎಂದರೆ, ಶಿವಾಜಿಯ ಸೇನೆ ಎಂದರ್ಥ. 1960ರ ಸುಮಾರಿಗೆ ಸ್ಥಳೀಯ ಮರಾಠಿಗರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ರಚನೆಯಾದ ಈ ಪಕ್ಷ, ಬಾಳಾ ಠಾಕ್ರೆ ಅವಧಿಯಲ್ಲಿ ಹೆಮ್ಮರವಾಗಿ ಬೆಳೆಯಿತು. ವಿಚಿತ್ರವೆಂದರೆ, ಬಾಳಾಠಾಕ್ರೆ ಬದುಕಿದ್ದ ಅವಧಿಯಲ್ಲೇ ಮೂರು ಬಾರಿ, ರೆಬೆಲ್ಸ್ ಕಂಡ ಈ ಪಕ್ಷ, ಇದೇ ಮೊದಲ ಬಾರಿಗೆ ಅವರ ಪುತ್ರ ಉದ್ಧವ್ ಠಾಕ್ರೆ ಅವಧಿಯಲ್ಲಿ ಬಂಡಾಯ ಕಂಡಿದೆ. ಆದರೂ ಈ ಪಕ್ಷ ಬೆಳದದ್ದು ಹೇಗೆ? ಇಂದಿಗೂ ಇದರ ಕಾರ್ಯಾಚರಣೆ ಹೇಗಿದೆ? ಈ ಕುರಿತ ಒಂದು ನೋಟ ಇಲ್ಲಿದೆ…
ಶಿವಸೇನೆ ಹುಟ್ಟಿದ್ದು ಹೇಗೆ?
1947ರ ಸ್ವಾತಂತ್ರ್ಯ ಅನಂತರದಲ್ಲಿ ರಾಜ್ಯಗಳ ನಿರ್ಮಾಣ ಸುಲಭದ ವಿಚಾರವೇನೂ ಆಗಿರಲಿಲ್ಲ. ಭಾಷೆಯ ಲೆಕ್ಕಾಚಾರದಲ್ಲಿ ರಾಜ್ಯಗಳ ರಚನೆ ಮಾಡತೊಡಗಿದಾಗ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಬೇರೆಯಾದವು. ಹಾಗೆಯೇ ಮರಾಠಿ ಮಾತನಾಡುತ್ತಿದ್ದ ಹೈದರಾಬಾದ್ ರಾಜ್ಯದಲ್ಲಿದ್ದ ಉಳಿದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾದವು. ಆದರೆ ಮುಂಬ ಯಿಯಲ್ಲಿ ಹೆಚ್ಚಾಗಿದ್ದವರು ಗುಜರಾತ್‌ನವರೇ. ಇವರ ವ್ಯಾಪಾರವೇ ಹೆಚ್ಚಾಗಿದ್ದ ಕಾರಣ, ಮರಾಠಿ ಗರು ಇಲ್ಲಿ ಪ್ರಾತಿನಿಧ್ಯ ಪಡೆಯಲಿಲ್ಲ ಎಂಬ ಆರೋಪಗಳೂ ಇದ್ದವು. ಸ್ಥಳೀಯರಿಗೆ ಪ್ರಾತಿನಿಧ್ಯ ಸಿಗಲಿಲ್ಲ ಮತ್ತು ಉದ್ಯೋಗ ಸಿಗುತ್ತಿಲ್ಲ ಎಂಬುದು 1960ರಲ್ಲಿ ಹೊಸದೊಂದು ಆಂದೋಲನ ಹುಟ್ಟಲು ಕಾರಣವಾಯಿತು. ಆಗ ಮಾರ್ಮಿಕ್ ಎಂಬ ವಾರ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡುತ್ತಿದ್ದ ಬಾಳಾಠಾಕ್ರೆ ಅವರು, ಮರಾಠಿಗರ ಪ್ರತಿನಿಧಿಯಾಗಿ ಗುರುತಿಸಿಕೊಂಡರು. 1966ರ ಜೂ. 19ರಂದು ಶಿವಸೇನೆ ಪಕ್ಷ ಸ್ಥಾಪನೆಯಾಯಿತು.
ಮರಾಠಿಗರ ಪಕ್ಷ
1966ರಲ್ಲಿ ರಚನೆಯಾದರೂ 1970ರ ಅನಂತರದಲ್ಲಿ ಮರಾಠಿಗರ ಧ್ವನಿಯಾಗಿ ಶಿವಸೇನೆ ಗುರುತಿಸಿಕೊಂಡಿತು. ಅಷ್ಟೇ ಅಲ್ಲ, ಭಾರತ ಹಿಂದೂ ರಾಷ್ಟ್ರವಾಗಬೇಕು ಎಂಬ ಒತ್ತಾಸೆಯನ್ನೂ ತೋರ್ಪಡಿಸಲು ಶುರು ಮಾಡಿತು. ಹೀಗಾಗಿಯೇ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾದವು ಎಂಬುದು ಬೇರೆ ಮಾತು. 1968ರಲ್ಲಿ ರಾಜಕೀಯಕ್ಕೆ ಅಧಿಕೃತವಾಗಿ ಕಾಲಿಟ್ಟ ಶಿವಸೇನೆ, ಮುಂಬಯಿ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ 121 ಸ್ಥಾನಗಳ ಪೈಕಿ 42 ಸ್ಥಾನಗ ಳನ್ನು ಗೆದ್ದುಕೊಂಡಿತು. ಅಷ್ಟೇ ಅಲ್ಲ, ಆರಂಭದಿಂದಲೂ ಮರಾಠಿಗರ ಹೆಮ್ಮೆಯ ಪಕ್ಷವಾಗಿ ಗುರುತಿಸಿಕೊಂಡ ಅದು, ಮುಂಬಯಿಯಲ್ಲಿ ಉತ್ತರ ಭಾರತದವರ ವಿರುದ್ಧ ದೊಡ್ಡ ದೊಡ್ಡ ಹೋರಾಟಗಳನ್ನೇ ನಡೆಸಿತು. 1971ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಐವರು ಕಣಕ್ಕಿಳಿದರಾದರೂ ಒಬ್ಬರೂ ಗೆಲ್ಲಲಿಲ್ಲ. 1980ರಲ್ಲಿ ಒಬ್ಬರು ಗೆದ್ದರು. 1991ರಲ್ಲಿ ಸ್ಪರ್ಧಿಸಿದ್ದ 22ರ ಪೈಕಿ ನಾಲ್ವರು ಗೆದ್ದಿದ್ದರು.
ಬಿಜೆಪಿ ಜತೆಗೆ ಮೈತ್ರಿ
1989ರಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, 1990ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿತು. ಆಗ ಶಿವಸೇನೆ 183 ಸ್ಥಾನಗಳಲ್ಲಿ ಸ್ಪರ್ಧಿಸಿ 52ರಲ್ಲಿ ಗೆಲುವು ಸಾಧಿಸಿತು. 1995ರಲ್ಲಿ 169ರಲ್ಲಿ ಸ್ಪರ್ಧಿಸಿ 73ರಲ್ಲಿ ಗೆಲುವು ಸಾಧಿಸಿತು. ಆಗ ಬಿಜೆಪಿ ಜತೆ ಸೇರಿ ಸರಕಾರ ರಚಿಸಿತು. ಮನೋಹರ ಜೋಶಿ ಶಿವಸೇನೆಯ ಕಡೆಯಿಂದ ಮೊದಲ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು.
ಪರಮೋಚ್ಚ ನಾಯಕ ಬಾಳಾಠಾಕ್ರೆ
ಶಿವಸೇನೆ ಕಟ್ಟುವಲ್ಲಿ ಬಾಳಾಠಾಕ್ರೆ ಅವರ ಪಾತ್ರವನ್ನು ಮರೆಯುವಂತಿಲ್ಲ. ಒಬ್ಬಂಟಿಯಾಗಿಯೇ ಪಕ್ಷವನ್ನು ಕಟ್ಟಿ ಬೆಳೆಸಿದರು ಎಂದು ಹೇಳ ಬಹುದು. ಬಿಜೆಪಿ ಜತೆಗೆ ಸೇರಿ ದೇಶದಲ್ಲಿ ಹಲವಾರು ಹಿಂದೂಪರ ಆಂದೋಲನ ಗಳನ್ನೂ ಕೈಗೊಂಡಿದ್ದರು. ಜತೆಗೆ ಶಿವಾಜಿ ಮತ್ತು ಮರಾಠಿ ಪ್ರೈಡ್ ಎಂಬ ಪ್ರವೃತ್ತಿಯನ್ನು ಮರಾಠಿಗರಲ್ಲಿ ಬೆಳೆಸಿದವರು ಠಾಕ್ರೆ ಎಂದರೆ ತಪ್ಪಾಗ ಲಾರದು. ಬಾಳಾಠಾಕ್ರೆ ಅವರು ಫೈರ್‌ಬ್ರ್ಯಾಂಡ್‌ನಂತಿದ್ದರೆ, ಇವರ ರೀತಿಯ ಸ್ವಭಾವ ಬೆಳೆಸಿಕೊಂಡಿದ್ದ ಸಂಬಂಧಿ ರಾಜ್ ಠಾಕ್ರೆ ಇವರ ಉತ್ತರಾಧಿಕಾರಿ ಯಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ 2012ರಲ್ಲಿ ಬಾಳಾಠಾಕ್ರೆ ಅವರು ನಿಧನ ಹೊಂದಿದಾಗ ಇವರ ಕಡೇ ಮಗ ಉದ್ಧವ್ ಠಾಕ್ರೆ ಅವರು ಶಿವಸೇನೆಯ ನೇತೃತ್ವ ವಹಿಸಿಕೊಂಡರು.
ಹಿರಿಯನಿಂದ ಕಿರಿಯನತ್ತ…
ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ ಶಿವಸೇನೆಯೇ ದೊಡ್ಡ ಪಕ್ಷವಾಗಿತ್ತು. ಬಿಜೆಪಿ ಕಿರಿಯ ಪಕ್ಷವಾಗಿತ್ತು. ಅನಂತರದ ದಿನ ಗಳಲ್ಲಿ ಈ ಬೆಳವಣಿಗೆ ಬೇರೆಯಾಗತೊಡಗಿತು. 2014ರ ಅನಂತರವಂತೂ ಶಿವಸೇನೆ, ಬಿಜೆಪಿ ನಡುವಿನ ಕಂದಕವೂ ಹೆಚ್ಚಿತು. 2014ರಲ್ಲಿ ಕೇಂದ್ರ ದಲ್ಲಿ, ಮಹಾರಾಷ್ಟ್ರದಲ್ಲಿ ಬಿಜೆಪಿಯೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಗ ಕೇಂದ್ರದಲ್ಲಿ ಮೋದಿ ಅವರು ಪ್ರಧಾನಿಯಾದರೆ, ದೇವೇಂದ್ರ ಫಡ್ನವೀಸ್ ಸಿಎಂ ಆದರು. ಮೊದಲಿಗೆ ಈ ಎರಡೂ ಸರಕಾರಗಳಲ್ಲಿ ಪಾಲ್ಗೊಳ್ಳಲು ಶಿವಸೇನೆ ಒಪ್ಪಲಿಲ್ಲ. ನಂತರ ಸಂಧಾನ ಮಾತುಕತೆಗಳು ನಡೆದು, ಎರಡೂ ಪಕ್ಷಗಳು ಒಟ್ಟಿಗೆ ನಡೆದವು. ಆದರೆ 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಒಂದಾಗಿ ಸ್ಪರ್ಧಿಸಿದವು. ಆದರೆ ಬಿಜೆಪಿ 106 ಸ್ಥಾನ ಪಡೆದು ದೊಡ್ಡ ಪಕ್ಷ ವಾದರೆ, ಶಿವಸೇನೆ 56 ಸ್ಥಾನಗಳನ್ನು ಗಳಿಸಿತ್ತು. ಆಗ ಬಿಜೆಪಿ ಸಖ್ಯ ತೊರೆದು, ಕಾಂಗ್ರೆಸ್,ಎನ್‌ಸಿಪಿ ಜತೆ ಸೇರಿ ಸರಕಾರ ರಚನೆ ಮಾಡಲಾಯಿತು.
ನಾಲ್ಕು ಬಾರಿ ಬಂಡಾಯ :
ಶಿವಸೇನೆ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ನಾಲ್ಕು ಬಾರಿ ತನ್ನೊಳಗಿನ ತಿಕ್ಕಾಟದಿಂದಾಗಿಯೇ ನಾಲ್ಕು ಬಾರಿ ಬಂಡಾಯ ಕಂಡಿದೆ. ಅಲ್ಲದೆ ಪಕ್ಷದ ಪ್ರಮುಖ ನಾಯಕರೇ ಕೈಕೊಟ್ಟು ಹೋಗಿದ್ದಾರೆ. ಅವರುಗಳೆಂದರೆ…
1. ಛಗನ್ ಭುಜಬಲ್
1991ರಲ್ಲಿ ಶಿವಸೇನೆಗೆ ಮೊದಲ ಬಾರಿಗೆ ಏಟು ಕೊಟ್ಟವರು ಛಗನ್ ಭುಜಬಲ್. ಪಕ್ಷದ ಒಬಿಸಿ ಫೇಸ್ ಆಗಿದ್ದ ಇವರು, ಶಿವಸೇನೆ ಯನ್ನು ಗ್ರಾಮೀಣ ಮಟ್ಟದಲ್ಲೂ ಸಂಘಟಿಸಲು ಪ್ರಯತ್ನಿಸಿದ್ದವರು. ಆದರೆ ಪಕ್ಷದ ಸಂಘಟನೆಗಾಗಿ ತಾವು ಎಷ್ಟೇ ಕೆಲಸ ಮಾಡಿದರೂ, ಗುರುತಿಸುತ್ತಿಲ್ಲ ಎಂಬ ಒಂದೇ ಕಾರಣದಿಂದಾಗಿ ಪಕ್ಷದ ವಿರುದ್ಧವೇ ಬಂಡಾಯವೆದ್ದರು. ಅಂದರೆ 1990ರಲ್ಲಿ ಶಿವಸೇನೆ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಭುಜಬಲ್ ಪಾತ್ರ ಹೆಚ್ಚಾಗಿತ್ತು. ಆದರೆ ಆ ಸಂದರ್ಭ ದಲ್ಲಿ ಸರಕಾರ ರಚನೆ ಮಾಡುವಲ್ಲಿ ವಿಫಲವಾದರೂ, ವಿಪಕ್ಷ ಸ್ಥಾನ ತಮಗೇ ಸಿಗುತ್ತದೆ ಎಂದು ಇವರು ಭಾವಿಸಿದ್ದರು. ಆದರೆ ಬಾಳಾಠಾಕ್ರೆ ಅವರು ಮನೋಹರ್ ಜೋಶಿ ಅವರಿಗೆ ಈ ಸ್ಥಾನ ನೀಡಿದರು. ಇದರಿಂದ ಒಳಗೊಳಗೆ ಅಸಮಾಧಾನಗೊಂಡಿದ್ದ ಭುಜಬಲ್, 1991ರಲ್ಲಿ 18 ಶಾಸಕರೊಂದಿಗೆ ಬಂಡಾಯ ಸಾರಿದರು. ವಿಚಿತ್ರವೆಂದರೆ, ಒಂದೇ ದಿನದಲ್ಲಿ 12 ಶಾಸಕರು ಶಿವಸೇನೆಗೆ ವಾಪಸ್ ಬಂದರು. ಅನಂತರ ಭುಜಬಲ್ ಎನ್‌ಸಿಪಿ ಸೇರಿದರು.
2. ನಾರಾಯಣ ರಾಣೆ
ಬಾಳಾಠಾಕ್ರೆ ಅವರ ಅತ್ಯಾಪ್ತ ಎನ್ನಿಸಿಕೊಂಡಿದ್ದ ನಾರಾಯಣ ರಾಣೆ ಅವರೂ ಪಕ್ಷದೊಳಗಿನ ತಿಕ್ಕಾಟದಿಂದಾಗಿ ಪಕ್ಷ ತೊರೆದರು. 2005ರಲ್ಲಿ ಶಿವಸೇನೆ ಬಿಟ್ಟು, ಕಾಂಗ್ರೆಸ್ ಸೇರಿದರು. ಅನಂತರ ಅಲ್ಲೂ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಕಾರಣವನ್ನು ನೀಡಿ ಈಗ ಬಿಜೆಪಿ ಸೇರಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ನಾರಾಯಣ ರಾಣೆ ಅವರು ಪಕ್ಷ ಬಿಡಲು, ಪಕ್ಷದಲ್ಲಿ ಉದ್ಧವ್ ಠಾಕ್ರೆ ಅವರಿಗೆ ಬಾಳಾ ಠಾಕ್ರೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ ಎಂಬುದೇ ಕಾರಣವಾಗಿತ್ತು.
3. ರಾಜ್ ಠಾಕ್ರೆ
ಛಗನ್ ಭುಜಬಲ್ ಮತ್ತು ನಾರಾಯಣ ರಾಣೆಗಿಂತ ಹೆಚ್ಚು ಪೆಟ್ಟು ನೀಡಿದ್ದು, ಸಂಬಂಧಿ ರಾಜ್ ಠಾಕ್ರೆ ಅವರು ಪಕ್ಷ ತೊರೆದು ಸ್ವಂತ ಪಕ್ಷ ಕಟ್ಟಿದಾಗ. 2006ರಲ್ಲಿ ಶಿವಸೇನೆ ತೊರೆದ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಟ್ಟಿದರು. ಶಿವಸೇನೆಗೆ ಹೊರಗಿನವರಿಗಿಂತ ಒಳಗಿನ ಶತ್ರುಗಳೇ ಹೆಚ್ಚಾಗಿದ್ದಾರೆ ಎಂಬುದು ರಾಜ್ ಠಾಕ್ರೆ ಅವರ ಮಾತಾಗಿತ್ತು. ಅಲ್ಲದೆ, ಬಾಳಾಠಾಕ್ರೆ ಉತ್ತರಾಧಿಕಾರಿಯಾಗಿ ತಮ್ಮನ್ನು ನೇಮಕ ಮಾಡಬಹುದು ಎಂದೇ ರಾಜ್ ಠಾಕ್ರೆ ಭಾವಿಸಿದ್ದರು. ಆದರೆ ಉದ್ಧವ್ ಠಾಕ್ರೆ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿದೆ ಎಂಬುದು ಅರಿವಾದ ಮೇಲೆ ಅವರು ಪಕ್ಷ ಬಿಟ್ಟರು. ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ, ಶಿವಸೇನೆ ತನ್ನ ಎಲ್ಲ ನಾಯಕರನ್ನು ಟೇಕನ್ ಫಾರ್ ಗ್ರಾಂಟೆಡ್ ರೀತಿಯಲ್ಲಿ ನೋಡುತ್ತಿದೆ. ಅವರ ಸಮಸ್ಯೆಗಳು, ನೋವುಗಳ ಬಗ್ಗೆ ಕೇಳುವುದಿಲ್ಲ. ಹೀಗಾಗಿಯೇ ನಾಯಕರು ಪಕ್ಷ ಬಿಟ್ಟು ಹೋದರು.
4. ಏಕನಾಥ ಶಿಂಧೆ
ಮೇಲಿನ ಮೂರು ಬೆಳವಣಿಗೆಗಳು ಬಾಳಾಠಾಕ್ರೆ ಅವರು ಬದುಕಿದ್ದಾಗಲೇ ಆದ ಘಟನೆಗಳು. ಆದರೆ ಈ ಬಂಡಾಯ ಉದ್ಧವ್ ಠಾಕ್ರೆ ಅವರ ಕಾಲದಲ್ಲಿ ಆಗುತ್ತಿದೆ. ಈಗಲೂ ಕಾರಣ ಮಾತ್ರ ಅದೇ. ಪಕ್ಷದಲ್ಲಿ ನಾಯಕರ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ ಎಂಬುದು. ವಿಚಿತ್ರವೆಂದರೆ ಈ ಬಾರಿ ಏಕನಾಥ ಶಿಂಧೆ ಅವರು ದೊಡ್ಡ ಪ್ರಮಾಣದ ಪೆಟ್ಟನ್ನೇ ನೀಡಿದ್ದಾರೆ. ಪಕ್ಷದ ಮುಕ್ಕಾಲು ಭಾಗ ಶಾಸಕರನ್ನು ತಮ್ಮ ಜತೆಗೆ ಕರೆದುಕೊಂಡು ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.