ಸಾಮಾಜಿಕ-ಧಾರ್ಮಿಕ ಸಮತೂಕದ ಸಂತ ಪೇಜಾವರಶ್ರೀ
Team Udayavani, Nov 8, 2021, 6:00 AM IST
ದಿಲ್ಲಿಯಲ್ಲಿ ಇಂದು (ನ. 8) ಧಾರ್ಮಿಕ – ಸಾಮಾಜಿಕ ಸಮತೋಲನದ ಸಂತ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ನಿರ್ಯಾಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಮತ್ತು ಅಕ್ಷರ ಸಂತ ಮಂಗಳೂರಿನ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಾಧಕರ ಸಾಧನೆಯ ಮೆಲುಕು.
ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಯನ್ನು ಜತೆಜತೆಯಾಗಿ ಅಳವಡಿಸಿಕೊಂಡ ಅಪರೂಪದ ಸಂತ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು.
ಶ್ರೀಪಾದರು 39ನೆಯ ತಂಡದ ವಿದ್ಯಾರ್ಥಿಗಳಿಗೆ ಹೇಳಿದ ಶಾಸ್ತ್ರಪಾಠದ ಮಂಗಲೋತ್ಸವವನ್ನು ಕೋಲಾರ ಜಿಲ್ಲೆಯ ಮುಳುಬಾಗಿಲು ಶ್ರೀಪಾದರ ರಾಜರ ಸನ್ನಿಧಿಯಲ್ಲಿ ನಡೆಸಲು ಯೋಜಿಸಿದ್ದರು. ಅವರೇ ಯೋಜಿಸಿದ ಕೊನೆಯ ಕಾರ್ಯಕ್ರಮವಿದು. ಅವರ ಅನುಪಸ್ಥಿತಿಯಲ್ಲಿ ಉದ್ಘಾಟನ ಸಭೆ ನಡೆಯುವಾಗ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಯಿತು. ವ್ಯಾಪಕ ಪ್ರವಾಸದ ನಡುವೆಯೂ ಎಂದೂ ವಿದ್ಯಾರ್ಥಿಗಳಿಗೆ ಶಾಸ್ತ್ರ ಪಾಠ ಹೇಳುವುದನ್ನು, ಸನ್ಯಾಸಧರ್ಮದ ಶಿಸ್ತನ್ನು ಬಿಟ್ಟಿರಲಿಲ್ಲ. ಹೀಗಾಗಿಯೇ ನಾಲಗೆಯಲ್ಲಿ ಶಾಸ್ತ್ರವಿದ್ಯೆ ಸದಾ ನಲಿದಾಡುತ್ತಿತ್ತು. “ದೇಶದಲ್ಲಿಯೇ ಇವರಿಗಿಂತ ಪ್ರತಿಭಾಸಂಪನ್ನ ಸಂಸ್ಕೃತ ವಿದ್ವಾಂಸರು ಈಗಿಲ್ಲ’ ಎಂದು ಘಂಟಾಘೋಷವಾಗಿ ಹೇಳಿದವರು “ಉದಯವಾಣಿ’ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯರು. ಕಾಶಿಯಲ್ಲಿ 1966ರಲ್ಲಿ ನಡೆದ ಒಂದು ಶಾಸ್ತ್ರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪಂ|ರಾಜರಾಜೇಶ್ವರ ಶಾಸ್ತ್ರಿಗಳು “ಇಂದು ನ್ಯಾಯಶಾಸ್ತ್ರದಲ್ಲಿ ಪಾಠಪ್ರವಚನ, ವಾಕ್ಯಾರ್ಥ ಮಾಡಬಲ್ಲ ವಿರಳಾತಿವಿರಳ ಸಮರ್ಥ ಪಂಡಿತ ಪರಿವ್ರಾಜಕರಲ್ಲಿ ಪೇಜಾವರ ಶ್ರೀಗಳು ಒಬ್ಬರು’ ಎಂದು ಹೇಳಿದ್ದರು.
ಆಚಾರನಿಷ್ಠೆ-ವೈಚಾರಿಕತೆ
ಜ್ವರವಿದ್ದರೂ ಸತತ ಎರಡು ದಿನ ಏಕಾದಶಿ ಬಂದರೂ ನಿರ್ಜಲ ಉಪವಾಸವನ್ನು ಜೀವನದ ಕೊನೆವರೆಗೂ ಬಿಟ್ಟಿರಲಿಲ್ಲ. ವೈಚಾರಿಕತೆಯನ್ನೂ ಬಿಟ್ಟವರಲ್ಲ. ಇದಕ್ಕೆ ಉದಾಹರಣೆ ಅವರು ರೇಷ್ಮೆ ಬಟ್ಟೆಯನ್ನು ಜೀವಿತದ ಕೊನೆಯ ಅವಧಿಯಲ್ಲಿ ತ್ಯಜಿಸಿದ್ದರು. ಕಾರಣವೆಂದರೆ ರೇಷ್ಮೆ ಹುಳುವಿನ ಸಾವು. ಐದನೆಯ ಪರ್ಯಾಯ ಅವಧಿಯಲ್ಲಿ ಬಾಳೆನಾರಿನ ಬಟ್ಟೆ (ನಾರು ಮಡಿ) ಧರಿಸಲು ನಿರ್ಧರಿಸಿದರು. ಇಷ್ಟು ಅವಧಿ ಏಕೆಂದರೆ ವಿಚಾರ ವಿಮರ್ಶೆ ನಡೆಸಲು. ವಿಮರ್ಶೆ ನಡೆಸಿ ಕೃಷ್ಣಮೃಗದ ಚರ್ಮದ ಮೇಲೆ ಕುಳಿತುಕೊಳ್ಳುವುದನ್ನು ಬಿಟ್ಟು ಹತ್ತಿ ಬಟ್ಟೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಹಿಂಸಾಸ್ಪರ್ಶ ಎಲ್ಲಿ ಕಂಡರೂ ಅಹಿಂಸೆಗೆ ಮೊದಲ ಆದ್ಯತೆ ಇವರ ನೀತಿ.
ವಿಧವಾ ಕಾಳಜಿ
ವಿಧವೆಯರನ್ನು ಅಪಮಾನಕರವಾಗಿ ನೋಡಬಾರದು, ಗೌರವದಿಂದ ಕಾಣಬೇಕು ಎನ್ನುತ್ತಿದ್ದ ಶ್ರೀಪಾದರು ಪುರುಷರ ಮುಂದಿಟ್ಟ ವಾದ ವೈಚಾರಿಕ: ಪುರುಷರು ಶಿಖೆ ಧಾರಣೆ (ಜುಟ್ಟು) ಮೊದಲಾದ ಧರ್ಮಶಾಸ್ತ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೂ ಧಾರ್ಮಿಕ, ಸಾಮಾಜಿಕ ವ್ಯವಹಾರಗಳಲ್ಲಿ ರಿಯಾಯಿತಿ ಪಡೆಯುವುದಿಲ್ಲವೆ? ವಿಧವೆಯರ ವಿಷಯದಲ್ಲಿ ಕೆಲವು ರಿಯಾಯಿತಿಗಳನ್ನು ಏಕೆ ನೀಡಬಾರದು?
ಇದನ್ನೂ ಓದಿ:ಜಗತ್ತಿನ ದೈತ್ಯ ಕಾರು ಕಂಪನಿ ಟೆಸ್ಲಾದ ಶೇ. 10ರಷ್ಟು ಷೇರು ಮಾರಾಟ?
ಪ್ರಾಕೃತಿಕ ವಿಕೋಪ, ಸಾಮರಸ್ಯ
ಅತಿವೃಷ್ಟಿ, ಅನಾವೃಷ್ಟಿ ಎಲ್ಲೇ ಸಂಭವಿಸಿದರೂ ಅಲ್ಲಿಗೆ ಧಾವಿಸಿ ಮನೆ, ಕೆರೆ ನಿರ್ಮಾಣ, ಗಂಜಿಕೇಂದ್ರಗಳ ಸ್ಥಾಪನೆ ಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸಾಮರಸ್ಯಕ್ಕೆ ಎಲ್ಲೇ ಧಕ್ಕೆಯಾದರೂ ಅಲ್ಲಿರುತ್ತಿದ್ದರು. ಮೀನಾಕ್ಷಿಪುರಂನಲ್ಲಿ ಮತಾಂತರವೇ ಇರಲಿ, ದ.ಕ. ಜಿಲ್ಲೆಯ ಎಸ್‌ಇಝಡ್‌ನಿಂದ ಕ್ರೈಸ್ತ ಸಮುದಾಯದವರಿಗೆ ತೊಂದರೆಯೇ ಆಗಿರಲಿ ಅಲ್ಲಿಗೆ ಧಾವಿಸಿದ್ದರು. “ನಾನು ಚಾಲಕನಾಗಿದ್ದಾಗ ದೂರದ ಪ್ರವಾಸದಲ್ಲಿ ನಮಾಜ್‌ಗೆ ಸ್ವಾಮೀಜಿಯವರೇ ಕಳುಹಿಸಿಕೊಡುತ್ತಿದ್ದರು’ ಎಂಬುದನ್ನು ಮೊಹಮ್ಮದ್ ಆರಿಫ್ ಹೇಳುತ್ತಾರೆ. ಇವರ ಅಣ್ಣ ಮೊಹಮ್ಮದ್ ಮನ್ಸೂರ್ ಕೂಡ ಶ್ರೀಗಳ ವಾಹನ ಚಾಲಕರಾಗಿದ್ದರು. ಆರಿಫ್ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆಯ ಶೇ. 80ರಷ್ಟು ಮುಸ್ಲಿಮರಿರುವ 370 ಸದಸ್ಯರ ಪೇಜಾವರ ಬ್ಲಿಡ್ ಡೊನೇಟ್ ಟೀಂ ಕಾರ್ಯನಿರ್ವಹಿಸುತ್ತಿದೆ. ಆದಿವಾಸಿಗಳ ನಾಡಿಗೂ ತೆರಳಿ ನೆರವಾಗಿದ್ದರು.
ಸ್ತ್ರೀಯರಿಗೂ ಸನ್ಯಾಸ
ಮಹಿಳೆಯರು, ಹಿಂದುಳಿದವರಿಗೂ ಸನ್ಯಾಸವನ್ನು ನೀಡಿದರು. “ಯಾರು ನಿಸರ್ಗದಿಂದ ಅತೀ ಕಡಿಮೆ ಪಡೆದು, ಸಮಾಜಕ್ಕೆ ಹೆಚ್ಚು ತ್ಯಾಗ ಮಾಡುತ್ತಾರೋ ಅವರೇ ಸಂತ’ ಎಂದು ಗುರುಗಳು ಹೇಳಿದ್ದರು ಎಂಬುದನ್ನು ಶಿಷ್ಯೆ ಉಮಾಭಾರತಿ 2016ರ ಜ. 18ರ ಪರ್ಯಾಯ ದರ್ಬಾರ್ ಸಭೆಯಲ್ಲಿ ಉಲ್ಲೇಖಿಸಿದ್ದರು. 1970ರಲ್ಲಿ ಉಡುಪಿ ಪಂದುಬೆಟ್ಟಿನ ವಾರಿಜಾಕ್ಷಿ ಶೆಟ್ಟಿಯವರಿಗೆ ಸನ್ಯಾಸ ದೀಕ್ಷೆ ನೀಡಿದರು. ಬಳಿಕ ಸುಭದ್ರಾಮಾತಾ ಎಂಬ ಹೆಸರಿನಲ್ಲಿ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧರಾಗಿ ಇತ್ತೀಚೆಗೆ ನಿರ್ಯಾಣರಾದರು.
ನ್ಯಾಯಾಲಯದ ಪುರಸ್ಕಾರ
1980ರ ದಶಕದಿಂದ ಅಯೋಧ್ಯೆ ವಿಷಯದ ಎಲ್ಲ ಹೋರಾಟಗಳಿಗೆ ನೇತೃತ್ವ ಕೊಡುತ್ತಿದ್ದರು. ಇವರ ವಿಚಾರಕ್ಕೆ ಪೂರಕವಾಗಿ ಸರ್ವೋಚ್ಚ ನ್ಯಾಯಾಲಯ 2019ರ ನ. 9ರಂದು ತೀರ್ಪು ನೀಡಿತು. ಸುಬ್ರಹ್ಮಣ್ಯದಲ್ಲಿ ಮಡೆ ಸ್ನಾನದ ವಿಚಾರದಲ್ಲಿ ಶ್ರೀಗಳು ಕೊಟ್ಟ ಎಡೆ ಸ್ನಾನದ ಸಲಹೆಯನ್ನು ಉಚ್ಚ ನ್ಯಾಯಾಲಯ ಅಂಗೀಕರಿಸಿತು.
ಅಸ್ಪೃಶ್ಯತೆ ವಿರುದ್ಧ ಹೋರಾಟ
ಸಮಾಜದ ಮೇಲುಕೀಳು ಎಂಬ ಕೆಟ್ಟ ಭಾವನೆ ವಿರುದ್ಧ ಅವರ ಮನಸ್ಸು ಚಿಕ್ಕಂದಿನಿಂದಲೂ ತುಡಿಯುತ್ತಿತ್ತು. ಸ್ವಾಮೀಜಿಯಾದ ಬಳಿಕ 1930-40ರ ದಶಕದಲ್ಲಿ ಪೇಜಾವರ ಮಠದಲ್ಲಿ ಕೆಲವು ಜಾತಿಯವರು ಮಠದ ಒಳಗೆ ಬಾರದೆ ಇರುವುದನ್ನು ಗಮನಿಸಿ ಅವರನ್ನೂ ಒಳಗೆ ಕರೆದು ಪ್ರಸಾದವನ್ನು ನೀಡುವ ಕ್ರಮ ಆರಂಭಿಸಿದರು. 1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಮೊದಲ ಪ್ರಾಂತ ಸಮ್ಮೇಳನದ ಮೂಲಕ ಶ್ರೀಗಳು ವಿಶೇಷವಾಗಿ ದಲಿತರ ಕುರಿತಾಗಿ ದಾಪುಗಾಲು ಇರಿಸಿದರು. 1970ರಲ್ಲಿ ದಲಿತರ ಕಾಲನಿಗೆ ಪಾದಯಾತ್ರೆ ನಡೆಸಿದಾಗ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿತು. ಅವರ ಮಾನವೀಯ ಕಾಳಜಿ ವಿರೋಧವನ್ನು ಮಣಿಸಿತು. ಈ ನೀತಿ ಕೊನೆವರೆಗೂ ಇತ್ತು. 1969ರಲ್ಲಿ ಉಡುಪಿ ಪುರಸಭೆಗೆ ತಲೆಮೇಲೆ ಮಲ ಹೊರುವ ಕೆಟ್ಟ ಪದ್ಧತಿಯನ್ನು ನಿಷೇಧಿಸಿದ ದೇಶದ ಮೊದಲ ಪುರಸಭೆ ಎಂಬ ಕೀರ್ತಿ ಇದೆ. “ಈ ನಿರ್ಣಯ ಸ್ವೀಕರಿಸುವಲ್ಲಿ ಶ್ರೀಗಳ ಪ್ರಭಾವ, ಪ್ರೇರಣೆ ಇತ್ತು’ ಎಂಬುದನ್ನು ಪುರಸಭಾಧ್ಯಕ್ಷರಾಗಿದ್ದ ಡಾ| ವಿ.ಎಸ್. ಆಚಾರ್ಯ ನೆನಪಿಸಿಕೊಳ್ಳುತ್ತಿದ್ದರು.
ಸ್ಥಳೀಯಾಧ್ಯಕ್ಷರಿಂದ ರಾಷ್ಟ್ರಾಧ್ಯಕ್ಷರವರೆಗೆ 1997ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ ವಾಯಿತು. 1997ರ ಬಳಿಕ ಇಬ್ಬರು ದಲಿತ ಸಮುದಾ ಯದವರು ಉಡುಪಿ ನಗರಸಭಾಧ್ಯಕ್ಷರಾಗಿದ್ದಾರೆ.
ಶ್ರೀಗಳ 4, 5ನೆಯ ಪರ್ಯಾಯದಲ್ಲಿ ಪೌರಸಮ್ಮಾನ ನಡೆಸಿದವರು ಆನಂದಿ ಮತ್ತು ಪಿ.ಯುವರಾಜ್. ಆನಂದಿ ಬಳಿಕ ಡಾ|ವನಜಾಕ್ಷಿ, 5ನೇ ಪರ್ಯಾಯದಲ್ಲಿ ದಿನಕರ ಬಾಬು ಜಿ.ಪಂ. ಅಧ್ಯಕ್ಷರಾದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ದಲಿತರಿಗೆ ಸಿಗಲಿಲ್ಲ. ಇದರ ಬಳಿಕದ ಗೃಹ ಸಚಿವ ಸ್ಥಾನದಲ್ಲಿ 3, 4, 5ನೆಯ ಪರ್ಯಾಯದಲ್ಲಿ ಕ್ರಮವಾಗಿ ಇದ್ದವರು ಬಿ. ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ| ಜಿ. ಪರಮೇಶ್ವರ್. 2013ರ ಮೇ 13ರಂದು ಸಿದ್ದರಾಮಯ್ಯನವರ ಸರಕಾರ ಬಂದರೂ ಡಾ| ಜಿ. ಪರಮೇಶ್ವರ್ ಗೃಹ ಸಚಿವರಾದುದು ಬಹಳ ದಿನಗಳ ಬಳಿಕ, ಕೆಲವೇ ತಿಂಗಳು. ಅವರು 2016ರ ಜ. 17ರ ರಾತ್ರಿ ಶ್ರೀಗಳವರನ್ನು ಗೃಹ ಸಚಿವರಾಗಿ ಸರಕಾರದ ವತಿಯಿಂದ ಅಭಿನಂದಿಸಿದ್ದರು. 4ನೆಯ ಪರ್ಯಾಯದಲ್ಲಿ ಕೆ.ನಾರಾಯಣನ್ ರಾಷ್ಟ್ರಪತಿ ಹುದ್ದೆಯಲ್ಲಿದ್ದರು. 5ನೆಯ ಪರ್ಯಾಯದಲ್ಲಿ ರಾಮನಾಥ ಕೋವಿಂದ್ ರಾಷ್ಟ್ರಪತಿಯಾದರು, 2018ರ ಡಿ. 27ರಂದು ಉಡುಪಿಯಲ್ಲಿ ಶ್ರೀಗಳವರನ್ನು ಗೌರವಿಸಿದರು. ಅಯೋಧ್ಯೆ ಕುರಿತಂತೆ ನ್ಯಾಯಾಲಯ ತೀರ್ಪು ನೀಡಿದಾಗ ವಿವಾದಿತ ಭೂಮಿಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಲು ಮತ್ತು ಮಸೀದಿ ನಿರ್ಮಾಣಕ್ಕೆ ಜಮೀನು ನೀಡುವ ಎರಡನ್ನೂ ಶ್ರೀಗಳು ಸಮಾನವಾಗಿ ಸ್ವಾಗತಿಸಿದ್ದು 2019ರ ನ. 9ರಂದು. ಈಗ ಕೋವಿಂದರಿಂದ ಪ್ರಶಸ್ತಿ ಪ್ರದಾನ ಆಗುವುದು ನ. 8ರಂದು.
ಸತ್ಯವಾನ್ ಸತ್ಯಸಂಕಲ್ಪಃ
ಘಟನಾವಳಿಗಳು ಕಾಕತಾಳೀಯ, ಆದರೆ ಕುತೂಹಲಕಾರಿ. ಶ್ರೀಕೃಷ್ಣಾಷ್ಟೋತ್ತರದಲ್ಲಿ “ಸತ್ಯವಾನ್ ಸತ್ಯಸಂಕಲ್ಪಃ’ ಎಂದಿದೆ. ಒಬ್ಬ ಭಕ್ತ ನಿಷ್ಕಾಮ, ನಿಸ್ವಾರ್ಥ ಸಂಕಲ್ಪವನ್ನು ಮಾಡಿದರೆ, ಅದಕ್ಕೆ ಎಷ್ಟೋ ಪಟ್ಟು ಜಾರಿಗೊಳಿಸುವುದು ನಿಸರ್ಗದ (ಸತ್ಯಸಂಕಲ್ಪನ) ನಿಯಮವೆ? ಅತೀ ಸುಲಭದಲ್ಲಿ ಸ್ವಸ್ಥ ಸಮಾಜ ರೂಪಿಸಲು ಇದೊಂದು ಸರಳ ಮಾರ್ಗ.
ವಿದ್ಯಾಸಂಸ್ಥೆ, ಛತ್ರ, ಸಮಾವೇಶ
ನಾಡಿನ ಹಲವೆಡೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಛತ್ರಗಳ ನಿರ್ಮಾಣ, ಸಾವಿರಾರು ಸಂತರು ಪಾಲ್ಗೊಂಡ ಎರಡು ಧರ್ಮಸಂಸದ್, ಸಂಸ್ಕೃತ ಮಾತನಾಡುವ ಸಾವಿರಾರು ಜನರು ಒಂದೆಡೆ ಕಾಣಬಹುದಾದ ಸಂಸ್ಕೃತ ಭಾರತೀ ರಾಷ್ಟ್ರೀಯ ಸಮ್ಮೇಳನ (ಶತಾಯುಷಿ ಹಿರಿಯಡಕದ ಗುರುವ ಕೊರಗ ಸಂಸ್ಕೃತ ಸಂಭಾಷಣ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಇತಿಹಾಸ ಇದೇ ಸಮ್ಮೇಳನದಲ್ಲಿ), ರಾಷ್ಟ್ರೀಯ ಸ್ತರದ ಕನಕದಾಸ ಜಯಂತ್ಯುತ್ಸವ ಇತ್ಯಾದಿಗಳು ಉಲ್ಲೇಖನೀಯ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.