ಬೊರಿವಲಿ ಗಲ್ಲಿಯಲ್ಲಿ ಆಫ್ ಸ್ಪಿನ್ನರ್ ಆಗಿದ್ದ ರೋಹಿತ್ ದ್ವಿಶತಕದ ಕನಸೂ ಕಂಡಿರಲಿಕ್ಕಿಲ್ಲ…
Team Udayavani, May 1, 2021, 9:20 AM IST
ರೋಹಿತ್ ಶರ್ಮಾ.. ಟೀಂ ಇಂಡಿಯಾದ ಉಪನಾಯಕ. ಏಕದಿನ ಕ್ರಿಕೆಟ್ ನಲ್ಲಿ ಮೂರು ದ್ವಿಶತಕ ಬಾರಿಸಿರುವ ವಿಶ್ವದ ಏಕಮಾತ್ರ ಆಟಗಾರ. ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ. ಕ್ರೀಸ್ ಕಚ್ಚಿ ನಿಂತರೆ ಬೌಲರ್ ಗಳ ಬೆವರಿಳಿಸುವ ಬ್ಯಾಟ್ಸಮನ್.. ಇಂತಹ ರೋಹಿತ್ ಶರ್ಮಾ ಒಂದು ಕಾಲದಲ್ಲಿ ಆಫ್ ಸ್ಪಿನ್ನರ್ ಆಗಿದ್ದವರು! ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯಲು ಹೆಣಗಾಡುತ್ತಿದ್ದ ಮುಂಬೈಕರ್ ಈಗ ವಿಶ್ವದ ಅಗ್ರ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆಂದರೆ ಅದರ ಹಿಂದೆ ಹಲವು ಕಠಿಣ ಪರಿಶ್ರಮದ ಕಥೆಯಿದೆ.
ಮುಂಬೈ.. ಕನಸುಗಳ ನಗರಿ, ಭಾರತದ ವಾಣಿಜ್ಯ ರಾಜಧಾನಿ. ಹಲವು ಕನಸುಗಳನ್ನು ಹೊತ್ತು ಪ್ರತಿದಿನ ಸಾವಿರಾರು ಮಂದಿ ಈ ನಗರಕ್ಕೆ ಬರುತ್ತಾರೆ. ಹಲವರು ಹೊಟ್ಟೆಪಾಡಿಗಾಗಿ ದುಡಿಯಲು ಬಂದರೆ, ಮತ್ತೆ ಹಲವರು ಬಾಲಿವುಡ್ ನಲ್ಲಿ ಮಿಂಚಬೇಕೆಂದು ಬರುತ್ತಾರೆ. ಇನ್ನು ಕೆಲವರು ಬ್ಯಾಟ್ ಹಿಡಿದುಕೊಂಡು ಮುಂದೊಂದು ದಿನ ಸಚಿನ್ ತೆಂಡೂಲ್ಕರ್, ಸುನೀಲ್ ಗಾವಸ್ಕರ್ ಆಗುತ್ತೇನೆಂದು ಟ್ರೈನ್ ಹಿಡಿದುಕೊಂಡು ಬರುತ್ತಾರೆ. ಅಂತಹ ಕನಸಿನ ನಗರಿಯಲ್ಲಿ ಮಧ್ಯಮ ವರ್ಗದಲ್ಲಿ ಜನಿಸಿದವ ರೋಹಿತ್ ಶರ್ಮಾ.
ಡೊಂಬಿವಲಿಯಲ್ಲಿ ಪೂರ್ಣಿಮಾ ಮತ್ತು ಗುರುನಾಥ್ ಶರ್ಮಾ ದಂಪತಿಯ ಮಗನಾಗಿ ಜನಿಸಿದ ರೋಹಿತ್ ಬಾಲ್ಯದ ದಿನಗಳು ಬಡತನದಿಂದಲೇ ಕೂಡಿತ್ತು. ಆದರೆ ಕೌಟುಂಬಿಕ ಕಾರಣಗಳಿಂದ ರೋಹಿತ್ ಬೊರಿವಲಿಯಲ್ಲಿದ್ದ ತನ್ನ ಮಾವನ ಜೊತೆ ಇರಬೇಕಾಗಿತ್ತು.
ಬೊರಿವಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ರೋಹಿತ್ ಶರ್ಮಾ ಒಂದು ದಿನ ಸ್ಥಳೀಯ ಕೋಚ್ ದಿನೇಶ್ ಲಾಡ್ ಕಣ್ಣಿಗೆ ಬಿದ್ದಿದ್ದ. ಉತ್ತಮವಾಗಿ ಆಫ್ ಸ್ಪಿನ್ ಬಾಲ್ ಹಾಕುತ್ತಿದ್ದ ಬಾಲಕನನ್ನು ದಿನೇಶ್ ಆಯ್ಕೆ ಟ್ರಯಲ್ ಗೆ ಕರೆದಿದ್ದರು. ಬ್ಯಾಟಿಂಗ್ ನಲ್ಲಿ ಅಷ್ಟಾಗಿ ಉತ್ಸಾಹ ತೋರಿಸದ ರೋಹಿತ್ ಅಲ್ಲೂ ಆಫ್ ಸ್ಪಿನ್ ಬೌಲಿಂಗ್ ಮಾಡಿದ್ದ.
ಕೋಚ್ ದಿನೇಶ್ ಲಾಡ್ ರಿಂದ ತರಬೇತಿ ಪಡೆಯಲು ಬಾಲಕ ರೋಹಿತ್, ಸ್ವಾಮಿ ವಿವೇಕಾನಂದ ಇಂಟರ್ ನ್ಯಾಶನಲ್ ಸ್ಕೂಲ್ ಗೆ ಸೇರಬೇಕಿತ್ತು. ಆದರೆ ರೋಹಿತ್ ಕುಟುಂಬ ಮಗನನ್ನು ಅಂತಹ ದೊಡ್ಡ ಶಾಲೆಗೆ ಸೇರಿಸುವಷ್ಟು ಶಕ್ತವಾಗಿರಲಿಲ್ಲ. ಮೇಲಾಗಿ ಆ ಸಮಯದಲ್ಲಿ ರೋಹಿತ್ ತಂದೆ ಕೆಲಸವನ್ನೂ ಕಳೆದುಕೊಂಡು ಮನೆಯಲ್ಲೇ ಇದ್ದರು. ಆದರೆ ಬಾಲಕನ ಆಟ ನೋಡಿದ ಶಾಲೆಯ ಆಡಳಿತ ಮಂಡಳಿ ಆತನನ್ನು ಉಚಿತವಾಗಿ ಸೇರಿಸಿಕೊಂಡಿತು.
ಈ ಸಮಯದಲ್ಲಿ ಕೋಚ್ ದಿನೇಶ್ ಲಾಡ್ ಅವರು ರೋಹಿತ್ ಶರ್ಮಾನ ಬ್ಯಾಟಿಂಗ್ ಕೌಶಲ್ಯದ ಮೇಲೆ ಕಣ್ಣಿಟ್ಟಿದ್ದರು. ನಂತರ ಆತನಿಗೆ ಆಫ್ ಸ್ಪಿನ್ ಗಿಂತ ಹೆಚ್ಚಾಗಿ ಬ್ಯಾಟಿಂಗ್ ನತ್ತ ಗಮನ ಹರಿಸುವಂತೆ ಸೂಚಿಸಿದರು. ಇದು ಈತನ ಭವಿಷ್ಯವನ್ನೇ ಬದಲಿಸಿದ್ದು ಮಾತ್ರ ಸುಳ್ಳಲ್ಲ.
ಮುಂದೆ 2006ರ ಅಂಡರ್ 19 ವಿಶ್ವಕಪ್ ಗೆ ಭಾರತ ತಂಡಕ್ಕೆ ರೋಹಿತ್ ಶರ್ಮಾ ಆಯ್ಕೆಯಾಗಿದ್ದ. (ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಪಿಯೂಶ್ ಚಾವ್ಲಾ, ಶಹಬಾಜ್ ನದೀಂ ಮುಂತಾದವರು ಆ ತಂಡದಲ್ಲಿದ್ದರು) ನಂತರ ಮುಂಬೈ ರಣಜಿ ತಂಡ, ಇಂಡಿಯಾ ಎ ತಂಡದಲ್ಲಿಆಡಿದ ರೋಹಿತ್, 2007ರಲ್ಲಿ ತನ್ನ 20ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ. ಐರ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ.
ನಂತರ ಕೆಲವೇ ತಿಂಗಳ ನಂತರ ಚೊಚ್ಚಲ ಟಿ20 ವಿಶ್ವಕಪ್ ಗೆ ಭಾರತ ತಂಡಕ್ಕೆ ಆಯ್ಕೆಯಾದ ರೋಹಿತ್ ಶರ್ಮಾ, ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಶರ್ಮಾ, ಸ್ಥಿರ ಪ್ರದರ್ಶನವಿಲ್ಲದೆ, ಸರಿಯಾದ ಅವಕಾಶವಿಲ್ಲದೆ ತಂಡದಲ್ಲಿ ಖಾಯಂ ಸದಸ್ಯನಾಗಲು ಹೆಣಗಾಡಬೇಕಿತ್ತು.
ಆದರೆ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಯಕ ಎಂ.ಎಸ್.ಧೋನಿಯ ಒಂದು ನಿರ್ಧಾರ ರೋಹಿತ್ ರ ಕ್ರಿಕೆಟ್ ಭವಿಷ್ಯವನ್ನೇ ಬದಲಿಸಿತ್ತು. ಶಿಖರ್ ಧವನ್ ಜೊತೆಗೆ ರೋಹಿತ್ ಶರ್ಮಾರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿದ ಧೋನಿ ಚಮತ್ಕಾರವನ್ನೇ ಮಾಡಿಸಿದ್ದರು. ಕೂಟದಲ್ಲಿ ಎರಡು ಅರ್ಧಶತಕ ಸಿಡಿಸಿದ ರೋಹಿತ್ ನಂತರ ತಂಡದ ಖಾಯಂ ಆರಂಭಿಕನಾದರು. ಮುಂದೆ ಎಲ್ಲವೂ ಇತಿಹಾಸ…!
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.