PR Sreejesh; ಓಡಲು ಕಷ್ಟಪಡುತ್ತಿದ್ದ ಹುಡುಗ ಹಾಕಿ ಮೇರು ಪರ್ವತ ಏರಿನಿಂತ ಕಥೆ
ಹಾಕಿ ಕಿಟ್ ಗೆ ಹಣವಿಲ್ಲವೆಂದು ಮನೆಯಲ್ಲಿದ್ದ ದನವನ್ನೇ ಮಾರಿದ್ದರು!
ಕೀರ್ತನ್ ಶೆಟ್ಟಿ ಬೋಳ, Aug 8, 2024, 7:27 PM IST
ಒಂದು ಕಾಲದಲ್ಲಿ ಹಾಕಿ ಕಿಟ್ ತೆಗೆದುಕೊಳ್ಳಲೂ ಹಣವಿಲ್ಲದ ಬಡ ಕೃಷಿ ಕುಟುಂಬದ ಹುಡುಗನೊಬ್ಬ ಕೊನೆಗೊಂದು ದಿನ ಒಲಿಂಪಿಕ್ಸ್ ಪೋಡಿಯಂನಲ್ಲಿ ನಿಲ್ಲುತ್ತಾನೆ ಎಂದರೆ ಅದು ಸಣ್ಣ ಸಾಧನೆ ಏನಲ್ಲ. ಕೇರಳದ ಕೃಷಿ ಕುಟುಂಬದಿಂದ ಬಂದ ಪಿಆರ್ ಶ್ರೀಜೇಶ್ (PR Sreejesh) ಅವರ ಈ ಸಾಧನೆಯ ಪಯಣ ಸಣ್ಣದೇನಲ್ಲ.
ಭಾರತದ ಕಂಡ ಶ್ರೇಷ್ಠ ಹಾಕಿ ಆಟಗಾರರ ಸಾಲಿನಲ್ಲಿ ನಿಲ್ಲುತ್ತಾರೆ ಶ್ರೀಜೇಶ್. 18 ವರ್ಷಗಳ ಕಾಲ ಭಾರತ ತಂಡದಲ್ಲಿ ಆಡಿ, ಈ ತಲೆಮಾರಿನ ಶ್ರೇಷ್ಠ ಗೋಲ್ ಕೀಪರ್ ಎಂಬ ಹಿರಿಮೆ ಪಡೆದ ಭಾರತದ ಮಹಾಗೋಡೆ ಪರತ್ತು ರವೀಂದ್ರನ್ ಶ್ರೀಜೇಶ್ ಇಂದು (ಆ.08) ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದಾರೆ. ಇದರೊಂದಿಗೆ ಗೋಲ್ ಪೋಸ್ಟ್ ಎಂದೆಂದೂ ಭಾರತದ ಹೆಮ್ಮೆಯ ಕ್ರೀಡಾಳುವನ್ನು ಮಿಸ್ ಮಾಡಿಕೊಳ್ಳಲಿದೆ…
ಕಳೆದೊಂದು ಶತಮಾನದಲ್ಲಿ ಭಾರತದ ನೆಲದಿಂದ ಹಲವು ದಿಗ್ಗಜ ಹಾಕಿ ಆಟಗಾರರು ಹುಟ್ಟಿದ್ದಾರೆ. ಧ್ಯಾನ್ ಚಂದ್, ಧನರಾಜ್ ಪಿಳ್ಳೆ, ಬಲ್ಬೀರ್ ಸಿಂಗ್ ಸೀನಿಯರ್, ಶಂಕರ್ ಲಕ್ಷ್ಮಣ್, ಉಧಮ್ ಸಿಂಗ್, ಪೃಥಿಪಾಲ್ ಸಿಂಗ್… ಹೀಗೆ ಹಲವರು ಹಾಕಿಯಲ್ಲಿ ಮೆರೆದಿದ್ದಾರೆ. ಇದೇ ಸಾಲಿಗೆ ಸೇರುತ್ತಾರೆ ಪಿಎಆರ್ ಶ್ರೀಜೇಶ್.
ಶ್ರೀಜೇಶ್ ಜನಿಸಿದ್ದು 1986ರ ಮೇ 8ರಂದು, ಕೇರಳದ ಎರ್ನಾಕುಲಂ ಜಿಲ್ಲೆಯ ಕಿಯಕ್ಕಂಬಲಂ ಎಂಬ ಗ್ರಾಮದಲ್ಲಿ. ಸ್ವಗ್ರಾಮದಲ್ಲಿಯೇ ಶಾಲಾ ಜೀವನ ಕಳೆದ ಶ್ರೀಜೇಶ್ ಬಳಿಕ ಶ್ರೀನಾರಾಯಣ ಕಾಲೇಜಿನಲ್ಲಿ ಪದವಿ ಪಡೆದರು. ಇದೇ ವೇಳೆ ಅವರು ಜಿವಿ ರಾಜಾ ಸ್ಪೋರ್ಟ್ಸ್ ಸ್ಕೂಲ್ ಸೇರಿದ ಶ್ರೀಜೇಶ್ ಅಲ್ಲಿ ಕೆಲವು ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಲಾಂಗ್ ಜಂಪ್ ಮತ್ತು ವಾಲಿಬಾಲ್ ಗಳಲ್ಲಿಯೂ ಆಡಿದ್ದರು ಶ್ರೀಜೇಶ್. ಆದರೆ ಶ್ರೀಜೇಶ್ ಬದುಕು ಬದಲಿಸಿದ್ದು ಅದೇ ಅಕಾಡೆಮಿಯಲ್ಲಿ ಖ್ಯಾತ ಹಾಕಿ ತರಬೇತುದಾರರಾಗಿದ್ದ ಜಯಕುಮಾರ್ ಅವರು.
ಕೇರಳದಲ್ಲಿ ಯಾವುದೇ ಕ್ರೀಡಾತಂಡದಲ್ಲಿದ್ದರೆ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಸಿಗುತ್ತಿತ್ತು. ಇದರ ಆಸೆಗೆ ಶ್ರೀಜೇಶ್ ಹಲವು ಕ್ರೀಡೆಗಳಲ್ಲಿ ಪ್ರಯತ್ನ ಪಟ್ಟರೂ ಯಾವುದೂ ಕೈಹಿಡಿಯದಾಗ ಅವರ ಚಿತ್ತ ಹರಿದಿದ್ದು ಹಾಕಿಯತ್ತ. ಮೊದಲು ಔಟ್ ಫೀಲ್ಡ್ ಆಟಗಾರನಾಗಿ ಆಡಿದ ಶ್ರೀಜೇಶ್ ಗೆ ಪಂದ್ಯದ ಪೂರ್ತಿ ಓಡಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವರ ಗಮನ ಸೆಳೆದಿದ್ದು ಗೋಲ್ ಪೋಸ್ಟ್ ನ ಎದುರು ಹೆಚ್ಚಿನ ಸಮಯ ನಿಂತೇ ಇರುವ, ಹೆಚ್ಚು ಓಡುವ ಅಗತ್ಯವಿಲ್ಲದ ಗೋಲ್ ಕೀಪರ್ ಕಡೆಗೆ. ಹೀಗಾಗಿ ಪರತ್ತು ರವೀಂದ್ರನ್ ಶ್ರೀಜೇಶ್ ಹಾಕಿ ಗೋಲ್ ಕೀಪರ್ ಆದರು, ಮುಂದಿನದು ಇತಿಹಾಸ.
ಶಾಲಾ ತಂಡದಲ್ಲಿ ಆಡುತ್ತಿದ್ದ ಶ್ರೀಜೇಶ್ ಅವರು, ಅಂಡರ್ 14 ಟೂರ್ನಮೆಂಟ್ ಅಡುತ್ತಿದ್ದಾಗ ಆಗಿನ ಜೂನಿಯರ್ ಇಂಡಿಯಾ ಹಾಕಿ ಕೋಚ್ ಹರೇಂದ್ರ ಸಿಂಗ್ ಗುರುತಿಸಿದರು. ಹೀಗೆ 2004ರಲ್ಲಿ ಪಿಆರ್ ಶ್ರೀಜೇಶ್ ಜೂನಿಯರ್ ಇಂಡಿಯಾ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದರು. ಎರಡು ವರ್ಷಗಳ ಬಳಿಕ ಅಂದರೆ 2006ರಲ್ಲಿ ಭಾರತದ ಹಿರಿಯರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ಪಿಆರ್ ಶ್ರೀಜೇಶ್ ಆಟ ಸಾಗುತ್ತಿದೆ.
2014ರಲ್ಲಿ ದ.ಕೊರಿಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಶ್ರೀಜೇಶ್ ಸ್ಟಾರ್ ಆಟಗಾರನಾಗಿ ಬಿಟ್ಟರು. ಪಾಕಿಸ್ತಾನ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಎರಡು ಪೆನಾಲ್ಟಿ ಸ್ಟ್ರೋಕ್ ಗಳನ್ನು ತಡೆದ ಶ್ರೀಜೇಶ್ ಭಾರತ ಗೋಲ್ಡ್ ಗೆಲ್ಲಲು ಕಾರಣವಾದರು. ಈ ಪಂದ್ಯದ ಬಳಿಕ ಶ್ರೀಜೇಶ್ ಭಾರತದ ತಂಡದ ಅತ್ಯಂತ ಪ್ರಮುಖ ಆಟಗಾರನಾದರು.
ಟೀಂ ಇಂಡಿಯಾ ನಾಯಕನಾಗಿದ್ದ ಸರ್ದಾರ್ ಸಿಂಗ್ ಅವರು ನಾಯಕತ್ವ ತ್ಯಜಿಸಿದಾಗ ಶ್ರೀಜೇಶ್ ಅವರಿಗೆ ಪಟ್ಟ ಕಟ್ಟಲಾಯಿತು. ಅವರ ನಾಯಕತ್ವದಲ್ಲಿ 2016ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಬೆಳ್ಳಿ ಪದಕ ಗೆದ್ದಿತ್ತು. ಆದರೆ ಮುಂದಿನ ದಿನಗಳಲ್ಲಿ ತಂಡದ ಕಳಪೆ ಆಟದ ಕಾರಣದಿಂದ ಮನ್ ಪ್ರೀತ್ ಸಿಂಗ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು.
ಹಿಂದಿ ಬರುತ್ತಿರಲಿಲ್ಲ..
ಟೀಂ ಇಂಡಿಯಾಗೆ ಆಯ್ಕೆಯಾದ ಆರಂಭದಲ್ಲಿ ಕೇರಳದ ಶ್ರೀಜೇಶ್ ಗೆ ಹಿಂದಿ ಭಾಷೆ ಬರುತ್ತಿರಲಿಲ್ಲ. ಇದು ಭಾರೀ ಸಂಕಷ್ಟ ತಂದೊಡ್ಡಿತ್ತು. “ಜಾತ್ರೆಯಲ್ಲಿ ಕಳೆದುಹೋದ ನಾಯಿಯಂತೆ ಆಗಿತ್ತು ನನ್ನ ಸ್ಥಿತಿ. ನನಗೆ ಹಿಂದಿ ಬರುತ್ತಿರಲಿಲ್ಲ. ನನಗೆ ಇಲ್ಲಿ ಯಾರೂ ಗೆಳೆಯರೂ ಇರಲಿಲ್ಲ. ನನಗೆ ರುಚಿಸುವ ಆಹಾರವೂ ಸಿಗುತ್ತಿರಲಿಲ್ಲ. ಎಲ್ಲಾ ಕೋಚ್ ಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು…” ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಶ್ರೀಜೇಶ್.
ಆದರೆ ಗೋಲ್ ಪೋಸ್ಟ್ ಶ್ರೀಜೇಶ್ ಅವರನ್ನು ಭಾಷಾ ಸಂಕಷ್ಟದಿಂದ ಪಾರು ಮಾಡಿತ್ತು. “ಹಾಕಿಯಲ್ಲಿ ಗೋಲ್ ಕೀಪಿಂಗ್ ಮಾತ್ರ ವೈಯಕ್ತಿಕ ಆಟ. ಇಲ್ಲಿ ನಾನು ಯಾವುದೇ ಆಟಗಾರನೊಂದಿಗೆ ಯಾವುದೇ ಹೊಂದಾಣಿಕೆ ಮಾಡಬೇಕಿಲ್ಲ. ಹೀಗಾಗಿ ನಾನು ಇಲ್ಲಿ ಬದುಕುಳಿದೆ, ಇಲ್ಲದಿದ್ದರೆ ಎಂದೋ ನಾನು ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಗೆ ನಡೆಯಬೇಕಿತ್ತು..” ಎನ್ನುತ್ತಾರೆ ಅವರು.
ಹೀಗೆ ಏರಿಳಿತ ಕಂಡ ಹಾಕಿ ಜೀವನದಲ್ಲಿ ಶ್ರೀಜೇಶ್ ಶ್ರೇಷ್ಠ ಸಾಧನೆಗಳನ್ನು ಮಾಡಿದ್ದಾರೆ. ಒಲಿಂಪಿಕ್ ಕಂಚು, ಏಷ್ಯನ್ ಗೇಮ್ಸ್ ಚಿನ್ನ ಮತ್ತು ಕಂಚು, ಕಾಮನ್ ವೆಲ್ತ್ ಗೇಮ್ಸ್ ಬೆಳ್ಳಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಹಲವು ಪದಕ… ಹೀಗೆ ಸಾಗಿದ ಶ್ರೀಜೇಶ್ ಪಯಣದಲ್ಲಿ ಕನಸಾಗಿ ಉಳಿದಿದ್ದು ಒಲಿಂಪಿಕ್ ಚಿನ್ನ ಒಂದೇ.
ಪ್ಯಾರಿಸ್ ಒಲಿಂಪಿಕ್ಸ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ದ ಪೆನಾಲ್ಟಿ ಶೂಟೌಟ್ ನಲ್ಲಿ ತಂಡವನ್ನು ಗೆಲ್ಲಿಸಿದ ಶ್ರೀಜೇಶ್ ಕೊನೆಯಲ್ಲಿ ತನ್ನ ಸ್ಟಿಕ್ ನಲ್ಲಿದ್ದ ಒಂದು ಹೆಸರನ್ನು ಕ್ಯಾಮರಾಗೆ ತೋರಿಸಿ ಸಂಭ್ರಮಿಸಿದರು. ಅದರಲ್ಲಿ ಬರಿದಿದ್ದಿದ್ದು ಅನೀಶ್ಯಾ (Aneeshya) ಎಂದು. ಇದು ಶ್ರೀಜೇಶ್ ಪತ್ನಿಯ ಹೆಸರು. ಕಾಲೇಜು ದಿನಗಳಲ್ಲಿ ಪ್ರೀತಿಯ ಬಲೆಗೆ ಬಿದ್ದಿದ್ದ ಈ ಜೋಡಿ ಕಳೆದ 22 ವರ್ಷಗಳಿಂದ ಜೊತೆಗಿದ್ದಾರೆ. ಅಂದಹಾಗೆ ಅನೀಶ್ಯಾ ಅವರು ಸದ್ಯ ಆಯುರ್ವೇದ ವೈದ್ಯೆ, ಮಾಜಿ ಲಾಂಗ್ ಜಂಪ್ ಪಟು.
ಎಫ್ ಐಎಚ್ ವರ್ಷದ ಆಟಗಾರ, ಅರ್ಜುನ ಪ್ರಶಸ್ತಿ, ವಿಶ್ವ ಗೇಮ್ಸ್ ಅಥ್ಲೀಟ್ ಆಫ್ ದಿ ಇಯರ್ ಪ್ರಶಸ್ತಿ, ಖೇಲ್ ರತ್ನ ಪ್ರಶಸ್ತಿ ವಿಜೇತ ಶ್ರೀಜೇಶ್ ಅವರು ಈಗ ಮತ್ತೊಂದು ಒಲಿಂಪಿಕ್ ಪದಕದೊಂದಿಗೆ ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತರಾಗುತ್ತಿದ್ದಾರೆ.
ಮೊದಲ ಬಾರಿಗೆ ಹಾಕಿ ಆಡಲಾರಂಭಿಸಿದಾಗ ಕಿಟ್ ತೆಗೆದುಕೊಡಲೂ ಶ್ರೀಜೇಶ್ ತಂದೆಯ ಬಳಿಕ ಹಣವಿರಲಿಲ್ಲವಂತೆ. ಮಗನ ಆಸಕ್ತಿ ಕಂಡು ಮನೆಯಲ್ಲಿದ್ದ ಹಸುವೊಂದನ್ನು ಮಾರಿ ಅದರ ಹಣದಲ್ಲಿ ಹಾಕಿ ಕಿಟ್ ಖರೀದಿಸಿದ್ದರು. ಅಂತಹ ದಿನಗಳನ್ನು ಎದುರಿಸಿ ಬಂದ ಶ್ರೀಜೇಶ್ ಇಂದು ಹಲವರಿಂದ ʼಗಾಡ್ ಆಫ್ ಹಾಕಿʼ ಎಂದು ಕರೆದುಕೊಳ್ಳುತ್ತಿದ್ದಾರೆಂದರೆ ಅದು ಸಣ್ಣ ವಿಷಯವೇನಲ್ಲ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.