ಬಾಲಸುಬ್ರಹ್ಮಣ್ಯಂ ಒಲ್ಲೆ ಎಂದಿದ್ದ ಹಾಡಿಗೆ ದೊರಕಿತು ರಾಷ್ಟ್ರಪ್ರಶಸ್ತಿ!
ಕೆಲ ತಿಂಗಳು ಮನ ವೊಲಿಸಿದ ಬಳಿಕ ಒಪ್ಪಿದ್ದ ಎಸ್ಪಿಬಿ, ಇದನ್ನು ಹಾಡಲು ಸುಮಾರು ಆರು ಗಂಟೆ ತೆಗೆದುಕೊಂಡಿದ್ದರು.
Team Udayavani, Sep 26, 2020, 12:22 PM IST
ಗದಗ: “ಸಿನಿಮಾ ಹಾಡುಗಳನ್ನು ಸುಲಲಿತವಾಗಿ ಹಾಡಬಲ್ಲೆ..ಆದರೆ, ಅಪ್ಪಟ ಶಾಸ್ತ್ರೀಯ ಸಂಗೀತದಲ್ಲಿ ಹಾಡುವುದು ಕಷ್ಟಸಾಧ್ಯ’ ಎಂದು ಹಾಡಲು ಹಿಂದೇಟು ಹಾಕಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಅದೇ ಹಾಡು ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತು! ಬಹುಭಾಷಾ ಗಾಯಕರಾಗಿದ್ದ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕನ್ನಡದ ಸಾವಿರಾರು ಸಿನಿಮಾ ಹಾಡುಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.
ಅಸಂಖ್ಯಾತ ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಆದರೆ ಅವರಿಗೆ ಕನ್ನಡಚಿತ್ರರಂಗದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ
ತಂದುಕೊಟ್ಟ ಸಿನಿಮಾ ಸಂಗೀತ ಸಾಗರ “ಗಾನಯೋಗಿ ಪಂಚಾಕ್ಷರ ಗವಾಯಿ’. ಗದುಗಿನ ವೀರೇಶ್ವರಪುಣ್ಯಾಶ್ರಮದ ಗಾನಯೋಗಿ ಪಂಚಾಕ್ಷರ ಗವಾಯಿಗಳ ಜೀವನಚರಿತ್ರೆ ಆಧಾರಿತ ಚಲನಚಿತ್ರ ಇದು.
ಚಿಂದೋಡಿ ಬಂಗಾರೇಶ್ ನಿರ್ದೇಶನದಲ್ಲಿ 1995ರಲ್ಲಿ ತೆರೆ ಕಂಡಿರುವ ಈ ಚಿತ್ರದಲ್ಲಿ ಹಾನಗಲ್ ಕುಮಾರೇಶ್ವರರ ಪಾತ್ರಕ್ಕೆ ಗಿರೀಶ ಕಾರ್ನಾಡ್, ಪಂಚಾಕ್ಷರ ಗವಾಯಿಗಳ ಪಾತ್ರಕ್ಕೆ ಲೋಕೇಶ್, ಪುಟ್ಟರಾಜ ಗವಾಯಿಗಳ ಪಾತ್ರಕ್ಕೆ ಬಾಲ ನಟನಾಗಿ ವಿಜಯ ರಾಘವೇಂದ್ರ ಬಣ್ಣ ಹಚ್ಚಿದ್ದರು. ಅಂಧರ ಬಾಳಿನ ಆಶಾಕಿರಣ ಪಂ| ಪಂಚಾಕ್ಷರ ಗವಾಯಿಗಳ ಜೀವನ ಸಾರುವ ಈ ಸಿನಿಮಾ ಉತ್ತರಕರ್ನಾಟಕದಲ್ಲಿ ಮನೆ ಮಾತಾಗಿತ್ತು. ಗುರುಭಕ್ತಿ ಹಾಗೂ ಸಂಗೀತ ಪ್ರಧಾನವಾದ ಈ ಚಿತ್ರದ ಹಾಡುಗಳು ಆಗ ಎಲ್ಲೆಡೆ ಅನುರಣಿಸುತ್ತಿದ್ದವು.
ಒಲ್ಲೆ ಎಂದಿದ್ದರು !: ಈ ಚಿತ್ರ ಸಂಗೀತ ಪ್ರಧಾನ. ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಪ್ರದಾಯಗಳೆರಡನ್ನೂ ಮೇಳೈಸಿದ ಅತ್ಯುತ್ತಮ ಚಿತ್ರ ಎಂಬ ಖ್ಯಾತಿ ಪಡೆದಿತ್ತು. ಈ ಚಿತ್ರ ನಿರ್ಮಾಣದ ಸಿದ್ಧತೆಯಲ್ಲಿದ್ದ ನಿರ್ದೇಶಕ ಚಿಂದೋಡಿ ಬಂಗಾರೇಶ್ ಅವರು, ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ 10 ಹಾಡುಗಳನ್ನು ನಿರ್ಮಿಸಲಾಗಿತ್ತು.
ಈ ಪೈಕಿ “ನೋಡಲಾಗದೇ’ ಮತ್ತು “ಉಮಂಡುಘಮಂಡು’ ಎಂಬ ಹಾಡುಗಳನ್ನು ಹಾಡುವಂತೆ ಎಸ್ಪಿಬಿ ಅವರಿಗೆ ಕೇಳಿಕೊಂಡಿದ್ದರು. ಆದರೆ ತಾನ್‌ಸೇನ್ ವಿರಚಿತ “ಉಮಂಡು ಘಮಂಡು’ ಹಾಡನ್ನು ಅತ್ಯಂತ ಶಾಸ್ತ್ರೀಯವಾಗಿ ಹಾಡಬೇಕಾಗುತ್ತದೆ. ನನ್ನಿಂದ ಸಾಧ್ಯವಿಲ್ಲ ಎಂದಿದ್ದರು. ಕೆಲ ತಿಂಗಳು ಮನ ವೊಲಿಸಿದ ಬಳಿಕ ಒಪ್ಪಿದ್ದ ಎಸ್ಪಿಬಿ, ಇದನ್ನು ಹಾಡಲು ಸುಮಾರು ಆರು ಗಂಟೆ ತೆಗೆದುಕೊಂಡಿದ್ದರು. ಇದೇ ಹಾಡಿಗೆ ಬಾಲಸುಬ್ರಹ್ಮಣ್ಮಂ ಅವರಿಗೆ ಉತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು ಎಂದುನಿರ್ದೇಶಕ ಬಂಗಾರೇಶ್ ಚಿತ್ರದ 25ನೇ ವಾರ್ಷಿಕೋತ್ಸವದಲ್ಲಿ ಸ್ಮರಿಸಿದ್ದರು.
1995ರಲ್ಲಿತೆರೆಕಂಡ “ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮ ಹಾಗೂ ಪೂಜ್ಯರ ಸಂಗೀತ ಮತ್ತು ಸಾಮಾಜಿಕ ಸೇವೆ ಹೆಚ್ಚು ಪ್ರಚಾರಪಡಿಸಿತ್ತು. ಹೀಗಾಗಿ ಎಸ್ಪಿಬಿ ಅವರ ಅಗಲಿಕೆಯಿಂದ ಪುಣ್ಯಾಶ್ರಮದ ಭಕ್ತರು ಹಾಗೂ ಸಂಗೀತ ಪ್ರಿಯರನ್ನು ಶೋಕದಲ್ಲಿ ಮುಳುಗಿಸಿದೆ.
ವೀರೇಂದ್ರ ನಾಗಲದಿನ್ನಿ
ನಿಮ್ಮ ನಾವು ಮರೆತರೇನು ಸುಖವಿದೆ…
ನಾನು ನಿಜಕ್ಕೂ ಪುಣ್ಯವಂತ. ಎಸ್‌ಪಿಬಿಯಂಥ ದಿಗ್ಗಜ ಗಾಯಕ ನನ್ನ ಚಿತ್ರಗಳಿಗೆ ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕಲಾತ್ಮಕ ಚಿತ್ರದಿಂದ ಆರಂಭವಾದ ನನ್ನ ಹಾಗೂ ಎಸ್ಪಿಬಿಯವರ ಪಯಣ ನಿರಂತರವಾಗಿ ಮುಂದುವರಿಯುತ್ತಲೇ ಬಂತು. ನನ್ನ “ಹಂಸಗೀತೆ’ ಸಿನಿಮಾಕ್ಕೆ ಎಸ್ಪಿಬಿ ಹಾಡಿದ್ದರು. “ದೇವರಕಣ್ಣು’ ಚಿತ್ರದಲ್ಲಿ ಅವರು “ನಿನ್ನ ನೀನು ಮರೆತರೇನು ಸುಖವಿದೆ…’ ಹಾಡನ್ನು ಹಾಡಿದರು. ಅದು ಯಾವ ಮಟ್ಟಿಗೆ ಜನಪ್ರಿಯವಾಯಿತೆಂದರೆ ಬಹುಶಃ ಆ ಹಾಡನ್ನು ಕೇಳದವರೇ ಇಲ್ಲ. ಆ ಚಿತ್ರವೂ ದೊಡ್ಡ ಹಿಟ್ ಆಯಿತು. ನನ್ನ ನಂಬಿಕೆ ಏನೆಂದರೆ ಆ ಚಿತ್ರದ ಹಾಡನ್ನು ಎಷ್ಟು ಜನ ನೋಡಿದ್ರೋ ಅಷ್ಟು ಜನ ಆ ಸಿನಿಮಾವನ್ನು ನೋಡಿಲ್ಲ. ಅಷ್ಟೊಂದು ಜನಪ್ರಿಯವಾಯಿತು.
ಆ ನಂತರ ಅವರು ನನ್ನ “ಬಯಲುದಾರಿ’, “ನಾ ನಿನ್ನ ಬಿಡಲಾರೆ’ ಚಿತ್ರಕ್ಕೂ ಹಾಡಿದರು. ಆ ಚಿತ್ರಗಳ ಹಾಡುಗಳುಕೂಡಾ ಸೂಪರ್ ಡೂಪರ್ ಹಿಟ್ ಆಯಿತು.
ಅಲ್ಲಿವರೆಗೂ ನಾನು ಹಾಗೂ ಎಸ್ಪಿಬಿಯವರು ಭೇಟಿಯಾಗಿರಲಿಲ್ಲ. ನನ್ನ ಹಾಗೂ ಎಸ್ಪಿಬಿಯವರ ಭೇಟಿಯಾಗಿದ್ದು ಹೈದರಾಬಾದ್‌ನಲ್ಲಿ. ಅದೊಂದು ದಿನ ನಾನು ಹೈದರಾಬಾದ್‌ಗೆ ಹೋಗಿದ್ದಾಗ ಅದೇ ಹೋಟೆಲ್‌ನಲ್ಲಿ ಎಸ್ಪಿಬಿಯವರು ಇದ್ದರು. ಆಗ ನಮ್ಮಿಬ್ಬರ ಮುಖತಃ ಭೇಟಿಯಾಯಿತು. ಮರು ದಿನ ನನಗೆ ಶೂಟಿಂಗ್ ಇರಲಿಲ್ಲ. ಆಗ ನಾನು ಎಸ್ಪಿಬಿಯವರಲ್ಲಿ, “ಇವತ್ತು ನಾನು ನಿಮ್ಮ ಜೊತೆಬರಬಹುದೇ’ ಎಂದು ಕೇಳಿದೆ. ಎಸ್ಪಿಬಿಯವರು, “ಬನ್ನಿ, ಆದರೆ ನನಗೆ ರೆಕಾರ್ಡಿಂಗ್ ಇದೆ’ ಎಂದರು.
ಪರ್ವಾಗಿಲ್ಲ ಎಂದುಕೊಂಡು ಹೋದೆ. ಅವರು ಎಷ್ಟು ಬಿಝಿಯಾಗಿದ್ದರೆಂದರೆ ಒಂದರ ಹಿಂದೊಂದರಂತೆ ಹಾಡುಗಳನ್ನು ರೆಕಾರ್ಡಿಂಗ್ ಮಾಡುತ್ತಿದ್ದರು.ಊಟ
ಕೂಡಾ ಮಾಡುವಷ್ಟು ಸಮಯ ಅವರಿಗಿರಲಿಲ್ಲ. ಆದರೆ, ಅವರ ಜೊತೆ ಹೋಗಿದ್ದ ನನ್ನ ಊಟದ ಕುರಿತಾಗಿ ವಿಚಾರಿಸುತ್ತಲೇ ಇದ್ದರು. ಆದರೆ, ಅವರು ಸಂಜೆವರೆಗೂ ಊಟ ಮಾಡಲೇ ಇಲ್ಲ. ಅವರೊಬ್ಬ ದೈತ್ಯ ಪ್ರತಿಭೆ. ಅದಕ್ಕಿಂತ ಹೆಚ್ಚಾಗಿ ಅವರಲ್ಲಿನ ವಿನಮ್ರತೆ ಎಂಥವರನ್ನು ತಲೆದೂಗುವಂತೆ ಮಾಡುತ್ತದೆ. ಒಂದು ಹಾಡನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡಬಹುದೋ ಅಷ್ಟು ಚೆನ್ನಾಗಿ ಕಟ್ಟಿಕೊಡುತ್ತಾರೆ. ತಾನು ಯಾವ ಹೀರೋಗೆ ಹಾಡುತ್ತೇನೋ, ಆ ಹೀರೋನಾ ಮ್ಯಾನರಿಸಂ ಅನ್ನು ಅರ್ಥಮಾಡಿಕೊಂಡು ಹಾಡುವ ನಿಜವಾದ ಗಾಯಕ. ತಾನು ಯಾವ ಭಾಷೆಗೆ ಹಾಡುತ್ತೇನೋ, ಆ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದ ಅದ್ಭುತ ವ್ಯಕ್ತಿ. ನನ್ನ ಪ್ರಕಾರ ನಿಜವಾದ ಅಜಾತ ಶತ್ರುವೆಂದರೆ ಅದು ಎಸ್ಪಿಬಿ.
ಅವರನ್ನು ಪ್ರೀತಿಸದ, ಗೌರವಿಸದ ವ್ಯಕ್ತಿಗಳಿಲ್ಲ. ಇಂತಹ ಅದ್ಭುತ ಗಾಯಕ ನನ್ನ ಹಲವು ಸಿನಿಮಾಗಳಿಗೆ ಹಾಡಿದ್ದಾರೆ ಹಾಗೂ ಅವರೊಂದಿಗೆ ಒಳ್ಳೆಯ ಒಡನಾಟವಿಟ್ಟುಕೊಂಡಿದ್ದೆ ಎಂಬುದೇ ನನಗೆ ಪುಳಕ.
ಅನಂತ್‌ನಾಗ್, ಹಿರಿಯ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…
Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?
UV Fusion: ಮಾನವನ ಸ್ವಾರ್ಥ ವಿನಾಶಕ್ಕೆ ಕಾರಣವಾಗುತ್ತಿದೆಯೇ?
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.