ಯಕ್ಷಗಾನ ಕಾಲಮಿತಿ: ಕಲಾ ರಂಗಕ್ಕೆ ಯಾವ ರೀತಿ ಪರಿಣಾಮ ಬೀರಲಿದೆ?
ಶುರುವಾಗಿದೆ ಪರ-ವಿರೋಧದ ಚರ್ಚೆ
Team Udayavani, Oct 19, 2022, 6:52 PM IST
ಸಾಂದರ್ಭಿಕ ಚಿತ್ರ
ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಹಲವು ಕಾರಣಗಳಿಂದಾಗಿ ಕಾಲಮಿತಿಯಲ್ಲಿ ಪ್ರದರ್ಶನ ಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದು,ಕಲಾಪ್ರೇಮಿಗಳಿಂದ ಸಂಘಟಕರಿಂದ ಮತ್ತು ಕಲಾವಿದರಿಂದ ಹಲವು ಪರ ವಿರೋಧದ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ತೆಂಕು ತಿಟ್ಟು ಮತ್ತು ಬಡಗುತಿಟ್ಟಿನಲ್ಲಿ ಹಲವು ಮೇಳಗಳು ಕಾಲಮಿತಿ ಪ್ರದರ್ಶನಗಳಿಗೆ ಒಗ್ಗಿಕೊಂಡಿದ್ದು, ಯಶಸ್ವೀ ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ. ಒಂದೊಂದು ಮೇಳದ ಲೆಕ್ಕಾಚಾರ ಒಂದೊಂದು ರೀತಿಯಲ್ಲಿ ಇದ್ದರೂ ಕಾಲಮಿತಿಯ ಪ್ರದರ್ಶನ ಕೆಲ ಮೇಳಗಳ ಮೇಲೆ, ಕಲೆಯ ಮೇಲೆ ಒಂದು ರೀತಿಯಲ್ಲಿ ಹೊಡೆತವಾಗುವ ಲಕ್ಷಣಗಳಿವೆ.
ಪ್ರಮುಖವಾಗಿ ಪೂರ್ಣ ಪ್ರಮಾಣದ ಹರಕೆ ಮೇಳಗಳು, ಡೇರೆ ಮೇಳಗಳು ಮತ್ತು ಬಯಲಾಟದ ಮೇಳಗಳ ಲೆಕ್ಕಾಚಾರ ಇಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾಡಬೇಕಾಗುತ್ತದೆ. ಹರಕೆ ಮೇಳಗಳಾದ ಕಟೀಲು ಮೇಳಗಳು (ಪ್ರಸ್ತುತ ಕ್ಷೇತ್ರದ ಆರು ಮೇಳಗಳು) ಮಂದಾರ್ತಿ ಮೇಳಗಳು (ಪ್ರಸ್ತುತ ಐದು ಮೇಳಗಳು) ಸೇರಿ ಹರಕೆ ಆಟಗಳನ್ನು ಮಾಡುವ ಬಡಗುತಿಟ್ಟಿನ ಮಾರಣಕಟ್ಟೆ ಮೇಳಗಳು (ಮೂರು ಮೇಳ) ಕಮಲಶಿಲೆ ಮೇಳ, ಸೌಕೂರು ಮೇಳ, ಮಡಾಮಕ್ಕಿ ಮೇಳ, ನೀಲಾವರ ಮೇಳ, ಗೋಳಿಗರಡಿ ಮೇಳ, ಅಮೃತೇಶ್ವರಿ ಮೇಳ ಕೋಟ, ಹಾಲಾಡಿ ಮೇಳ, ಹಟ್ಟಿಯಂಗಡಿ ಮೇಳ, ಬೊಳಂಬಳ್ಳಿ ಮೇಳ ತೆಂಕು ತಿಟ್ಟಿನ ಹಿರಿಯಡಕ ಮೇಳ, ಸುಂಕದ ಕಟ್ಟೆ ಮೇಳ, ಸಸಿಹಿತ್ಲು ಭಗವತಿ ಮೇಳ, ಬಪ್ಪನಾಡು ಮೇಳ, ಮಂಗಳಾದೇವಿ ಮೇಳ ಪ್ರಮುಖ ತಿರುಗಾಟದಲ್ಲಿರುವ ಬಯಲಾಟ ಮೇಳಗಳು.
ಯಕ್ಷರಂಗದಲ್ಲಿ ಹಲವು ಡೇರೆ ಮೇಳಗಳಿದ್ದ ಕಾಲ ದೂರವಾಗಿ ಬಡಗುತಿಟ್ಟಿನಲ್ಲಿ ಮಾತ್ರ ಎರಡು ಪ್ರಮುಖ ಡೇರೆ ಮೇಳಗಳು ಉಳಿದು ಕೊಂಡಿವೆ.ಸಾಲಿಗ್ರಾಮ ಮೇಳ ಮತ್ತು ಪೆರ್ಡೂರು ಮೇಳಗಳು ದಿಗ್ಗಜ ಖ್ಯಾತ ನಾಮ ಕಲಾವಿದರು ಮತ್ತು ಪ್ರತಿಭಾ ಸಂಪನ್ನ ಕಲಾವಿದರೊಂದಿಗೆ ಸಾಮಾಜಿಕ ಕಥೆಗಳ ನೂತನ ಪ್ರಸಂಗಗಳ ಮೇಲೆ ನೀರಿಕ್ಷೆ ಇಟ್ಟು ತಿರುಗಾಟ ನಡೆಸುತ್ತವೆ, ಮೇಳಗಳಿಗೆ ಆರ್ಥಿಕ ಬಲ ನೀಡುವುದೇ ನೂತನ ಪ್ರಸಂಗಗಳ ಜನಪ್ರಿಯತೆ. ಅನಿವಾರ್ಯ ಕಾರಣಗಳು ಮತ್ತು ಸಾಂದರ್ಭಿಕವಾಗಿ ಕಾಲಮಿತಿ ಪ್ರದರ್ಶನಗಳನ್ನು ಈಗಾಗಲೇ ಮೇಳಗಳು ನೀಡುತ್ತಿವೆ. ಆದರೆ ದೊಡ್ಡ ಮೊತ್ತವನ್ನು ತೆತ್ತು ಕೆಲವೇ ಗಂಟೆಗಳ ಕಾಲ ಪ್ರದರ್ಶನ ಮಾಡಿದರೆ ಪ್ರಸಂಗಗಳ ಸಂಖ್ಯೆಯೂ ಕಡಿಮೆಯಾಗುತ್ತದೆ, ಇಲ್ಲದಿದ್ದಲ್ಲಿ ಆಡಿದ ಪ್ರಸಂಗಗಲ್ಲಿ ಪದ್ಯಗಳಿಗೋ ಸನ್ನಿವೇಶಗಳನ್ನು ಕೈಬಿಡಬೇಕಾಗುತ್ತದೆ ಇದು ಒಟ್ಟಂದದಲ್ಲಿ ಪ್ರದರ್ಶನಗಳ ಅಂದವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವಿಮರ್ಶಕರು.
7 ರಿಂದ 12 ಗಂಟೆಯ ವರೆಗೆ ಪ್ರದರ್ಶನಗಳನ್ನು ಇಟ್ಟರೆ ಡೇರೆ ಮೇಳಗಳಿಗೆ ಪ್ರೇಕ್ಷಕರ ಕೊರತೆಯಾಗಬಹುದು, ಸಾಮಾನ್ಯವಾಗಿ ದಿನದ ಎಲ್ಲ ಜಂಜಾಟಗಳನ್ನು ಮರೆತು ಒಂದು ರಾತ್ರಿ ಆಟ ನೋಡಿ ಸಂಭ್ರಮಿಸುವ ಎಂದು ಬರುವ ಪ್ರೇಕ್ಷಕರೇ ಡೇರೆ ಮೇಳಗಳ ಕಲೆಕ್ಷನ್ ಆಟಗಳಿಗೆ ಹೆಚ್ಚು. ಇಂತಹ ಸಂದರ್ಭದಲ್ಲಿ ಕಾಲಮಿತಿ ಆಟಗಳು ಒಂದು ರೀತಿಯಲ್ಲಿ ಪರಿಣಾಮ ಬೀರಬಹುದು ಎನ್ನುತ್ತಾರೆ ಯಕ್ಷಗಾನ ವಿಮರ್ಶಕರು.
ಎಲ್ಲವೂ ಮರೆಯಾಗುವ ಆತಂಕ
ಈಗಾಗಲೇ ಯಕ್ಷಗಾನದ ಒಂದೊಂದೇ ನೈಜತೆ ಕಳೆದುಕೊಂಡು ಹೊಸತನ ಮೇಳೈಸುತ್ತಿದ್ದು, ಕಾಲಮಿತಿ ಅನ್ನುವುದು ಅನೇಕ ಅಂಶಗಳು ಮರೆಯಾಗಲು ಕಾರಣವಾಗಬಹುದು. ಆಟಕ್ಕೆ ಅಬ್ರ ..ಎನ್ನುವ ಹಾಗೆ ಹಿಂದೆಲ್ಲ ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಕಾಲದಲ್ಲಿ ಸಂಜೆ ಪ್ರದರ್ಶನವಾಗುವ ಸ್ಥಳದಲ್ಲಿ ಅಬ್ರ ಹಾಕುವ ಕ್ರಮವಿತ್ತು. ಅಬ್ರ ಅಂದರೆ ಚಂಡೆಯನ್ನು ಬಾರಿಸುವುದು, ಅದು ಬಹುದೂರ ಕೇಳಿ ಪ್ರದರ್ಶನಕ್ಕೆ ಜನ ಸೇರುತ್ತಿದ್ದರು. ಅದರ ಅಗತ್ಯ ಈಗಿನ ಕಾಲದಲ್ಲಿ ಅಗತ್ಯವಿಲ್ಲ ಅನಿಸುತ್ತದೆ. ಬಾಲ ಕಲಾವಿದರಿಗೆ ಪಾಠವಾಗುವ ಕೋಡಂಗಿ ವೇಷಗಳೂ ಈಗ ಮರೆಯಾಗಿದೆ.ಅದಕ್ಕಾಗಿ ಬಾಲ ಕಲಾವಿದರ ಲಭ್ಯತೆಯೂ ಇಲ್ಲ. ಬಲಗೋಪಾಲ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗಗಳೂ ಪೂರ್ಣವಾಗಿ ಮರೆಯಾಗುವ ಆತಂಕವಿದೆ.
ಶ್ರೀ ಕ್ಷೇತ್ರ ಮಂದಾರ್ತಿ ಮೇಳಗಳ ಮಳೆಗಾಲದ ಹರಕೆ ಸೇವೆಗಳು ಈಗಾಗಲೇ ಕಾಲಮಿತಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಅಲ್ಲಿ ಪ್ರತಿ ನಿತ್ಯವೂ ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಒಡ್ಡೋಲಗಗಳನ್ನೂ ಪ್ರತಿ ನಿತ್ಯವೂ ಮಾಡುತ್ತಿರುವುದು ಪ್ರಶಂಸನೀಯ.
ಹರಕೆ ಮೇಳಗಳು ಪೂರ್ಣ ರಾತ್ರಿ ಪ್ರದರ್ಶನಗಳನ್ನು ನೀಡಬೇಕು ಎನ್ನುವುದು ಸಂಪ್ರದಾಯವಾದಿ ಪ್ರೇಕ್ಷಕರ ಅಭಿಪ್ರಾಯವಾದರೂ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕಾದ ಅನಿವಾರ್ಯತೆಯನ್ನೂ ತಳ್ಳಿ ಹಾಕುವ ಹಾಗಿಲ್ಲ. ಈಗಾಗಲೇ ಕಾಲಮಿತಿಯ ಆಟಗಳಿಂದ ಯಕ್ಷಗಾನದತ್ತ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಬಹುದು ಎಂದೂ ಸಾಬೀತಾಗಿದೆ. ಎಲ್ಲ ಮೇಳಗಳ ಯಜಮಾನರು, ಬಯಲಾಟದ ಸಂಘಟಕರು ಹಾಗೂ ಕಲಾಭಿ ಮಾನಿಗಳು ಕಾಲಮಿತಿಗೆ ಹೊಂದಿ ಕೊಳ್ಳುವ ಅನಿವಾರ್ಯತೆ ಇದ್ದರೂ ಹಲವು ಯಕ್ಷಾಭಿಮಾನಿಗಳಲ್ಲಿ, ಕಲೆಯನ್ನೇ ನಂಬಿಕೊಂಡು ಸೇವೆ ಮಾಡುತ್ತಿರುವ ಕಲಾವಿದರಲ್ಲಿ ಪೂರ್ಣ ರಾತ್ರಿಯ ಆಟ ಉಳಿಯಬೇಕು ಅನ್ನುವ ಅಭಿಪ್ರಾಯವಿದೆ.
ಒಟ್ಟಾರೆಯಾಗಿ ಕಾಲಮಿತಿ ಪ್ರದರ್ಶನಗಳಿಗೆ ಹಲವು ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ. ಅರ್ಧ ರಾತ್ರಿಯಲ್ಲಿ ಆಟ ಮುಗಿಸಿ ಕಲಾವಿದ ವಾಹನವನ್ನೇರಿ ಮನೆಗೆ ತೆರಳುವುದೂ ಅಪಾಯಕಾರಿ, ಹಲವು ಕಲಾವಿದರು ಅಪಘಾತಕ್ಕೆ ಗುರಿಯಾದ ನಿದರ್ಶನಗಳೂ ಇವೆ.
ಸಾಮಾನ್ಯವಾಗಿ ಐದು ಮೇಳಗಳು, ಎರಡು ಪ್ರತ್ಯೇಕ ಮೇಳಗಳ ಕೂಡಾಟಗಳು ನಡೆದಾಗ ಕಾಲಮಿತಿ ಅನ್ನುವುದು ಅಷ್ಟೊಂದು ಸಮಂಜಸವಲ್ಲ ಅನ್ನುತ್ತಾರೆ ಯಕ್ಷಗಾನ ಸಂಘಟಕರು. ಪೂರ್ಣ ರಾತ್ರಿಯ ಆಟಗಳಿಂದ ಮಾತ್ರ ಪ್ರದರ್ಶನಗಳಿಗೆ ಮತ್ತು ಪ್ರಸಂಗಗಳಿಗೆ ನ್ಯಾಯ ಒದಗಿಸಬಹುದು ಎನ್ನುತ್ತಾರೆ.
ವಿಷ್ಣುದಾಸ್ ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.