ಯುಗಾದಿ ಗತ್ತು, ಈಗಿನವರಿಗೇನು ಗೊತ್ತು..!
ಪ್ರತಿಯೊಂದು ಪ್ರಾಣಿ-ಪಕ್ಷಿಗಳು ತಮ್ಮೊಳಗಿನ ಶಕ್ತಿಗಳು ಎರಡು ಪಟ್ಟು ಆಯಿತೇನೋ ಎನ್ನುವ ಖುಷಿಯಲ್ಲಿ ಇರುತ್ತವೆ.
Team Udayavani, Apr 2, 2022, 11:02 AM IST
ನಾವು ಅಂದರೆ ಆಧುನಿಕ ದಿನಮಾನದಲ್ಲಿ ಓದಿ “ಶ್ಯಾಣ್ಯಾ” ಎನಿಸಿಕೊಂಡವರು, ಪಾಶ್ಚಾತ್ಯ ರಾಷ್ಟ್ರಗಳ ಹೊಸವರ್ಷವನ್ನು ಜನವರಿ ಒಂದಕ್ಕೆ ಆಚರಿಸಿ ಪಾಶ್ಚಾತ್ಯ ರಾಷ್ಟ್ರಗಳ ಗಿಫ್ಟ್, ಕೇಕ್, ತಂಪು ಪಾನೀಯ ಇನ್ನಿತರ ವಸ್ತುಗಳನ್ನು ಖರೀದಿಸಿ ಅವರ ಹಬ್ಬವನ್ನು ನಾವು ಆಚರಿಸಿ, ಅವರ ವಸ್ತುಗಳನ್ನು ನಾವು ಖರೀದಿಸಿ, ಅವರನ್ನು ಶ್ರೀಮಂತರನ್ನಾಗಿಸಿ ನಾವು ಸಾಲಗಾರರಾಗಿದ್ದೇವೆ.
ಜನವರಿ ಒಂದಕ್ಕೆ ಬರೀ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ. ಅದನ್ನು ನಾವು ಹೊಸವರ್ಷ ಅನ್ನೋದಾದರೆ, ನಮ್ಮ ಒಂದು ಹಬ್ಬವಿದೆ ಆ ದಿನಕ್ಕೆ ಕ್ಯಾಲೆಂಡರ್ ನಲ್ಲಿ ಬದಲಾವಣೆ ಆಗದಿದ್ದರೂ, ಪ್ರಕೃತಿ ತನ್ನೆಲ್ಲ ಹಳೆಯ ಎಲೆಗಳನ್ನು ಉದುರಿಸಿ ಹೊಸತನದಿಂದ ಮೈದಳೆದು ನಿಂತಿರುತ್ತದೆ. ಕೋಗಿಲೆಗಳು ತಮಗೆ ಹೊಸ ಕಂಠ ಬಂದಿತೇನೋ ಎನ್ನುವಂತೆ ಹಾಡುತ್ತಿರುತ್ತವೆ. ಊರೊಳಗಿನ ಮರ್ಕಟಗಳು ತಮ್ಮ ಶಕ್ತಿ ಇಮ್ಮಡಿಯಾಯಿತೇನೋ ಎನ್ನುವಂತೆ ರೆಂಬೆಯಿಂದ ರೆಂಬೆಗೆ ಹಾರುತ್ತಿರುತ್ತವೆ. ಹೀಗೆ ಪ್ರತಿಯೊಂದು ಪ್ರಾಣಿ-ಪಕ್ಷಿಗಳು ತಮ್ಮೊಳಗಿನ ಶಕ್ತಿಗಳು ಎರಡು ಪಟ್ಟು ಆಯಿತೇನೋ ಎನ್ನುವ ಖುಷಿಯಲ್ಲಿ ಇರುತ್ತವೆ.
ಯಾವುದು ಆ ಹಬ್ಬವೆಂದರೆ ಅದುವೇ ಯುಗಾದಿ..!
ಇದರಿಂದ ತಿಳಿಯೋದೇನೆಂದರೆ “ನಮ್ಮ ಸಂಸ್ಕೃತಿಯ ಹೊಸ ವರ್ಷ ಬರೀ ಕ್ಯಾಲೆಂಡರಿಗಾಗಲಿ ಅಥವಾ ಕುಡಿದು ತಿನ್ನಲು ಸೀಮಿತವಾಗಿಲ್ಲ. ಬದಲಿಗೆ ಪ್ರಕೃತಿ ಮತ್ತು ಮನುಷ್ಯನ ಮನಸ್ಸು ಎರಡು ಕೂಡ ಹೊಸತನದಿಂದ ಮೈದಳೆದು ನಿಂತಿರುತ್ತವೆ” ಎನ್ನುವುದು.
ಖುಷಿ ಬರೀ ಪ್ರಾಣಿಗಳಿಗೆ ಸೀಮಿತವಾಗಿಲ್ಲ, ಮನುಷ್ಯರಲ್ಲೂ ಕೂಡ ಖುಷಿ ಅಂದು ಬಹಳಷ್ಟು ಕಂಡುಬರುತ್ತಿತ್ತು. ಆಧುನಿಕ ದಿನಮಾನದಲ್ಲಿ ಮಾತ್ರ ಪಾಶ್ಚಾತ್ಯ ಸಂಸ್ಕೃತಿಯ ಆಚರಣೆಗಳ ಬಗ್ಗೆ ಎಲ್ಲಾ ತಿಳಿದಿರುವ ನಾವು ಯುಗಾದಿಯ ಬಗ್ಗೆ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿರುವುದು ದುರಾದೃಷ್ಟಾವೇ ಸರಿ! ನಮ್ಮ ಯುವ ಪೀಳಿಗೆ ಯುಗಾದಿಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ನಮ್ಮ ಸಂಸ್ಕೃತಿ ಮತ್ತು ಹಬ್ಬಗಳಿಗೆ ಉಳಿಗಾಲವಿಲ್ಲ!
ಯುಗಾದಿ ದಿಢೀರನೆ ಆರಂಭವಾಗುವ ಮಧ್ಯರಾತ್ರಿಯ ಹಬ್ಬವಲ್ಲ. ವಾರಕ್ಕೂ ಮುಂಚೆ ಮನೆಯನ್ನೆಲ್ಲ ಸ್ವಚ್ಛಗೊಳಿಸಿ ಧೂಳು ಹೊಡೆದು, ಯುಗಾದಿ ಸಂಖ್ಯೆಯೆಂದು ಸಾವಿರಾರು ರೂಪಾಯಿ ಗಟ್ಟಲೆ ಸಂತೆಯ ಮಾಡಿದ ನಂತರ ಆರಂಭವಾಗುತ್ತದೆ.
ಯುಗಾದಿಯ ದಿವಸ ಕೃಷಿ ಕುಟುಂಬಗಳಲ್ಲಿ ಎಲ್ಲ ದಿನಕ್ಕಿಂತ ಹೆಚ್ಚಿನ ಹೊಸತನ ಇರುತ್ತದೆ. ನಸುಕಿನ ಜಾವ ಮಂಜು ಸರಿಸುತ್ತಾ ಮೇಲೆದ್ದು ಅವ್ವ ಕಾಯಿಸಿದ ಬಿಸಿ ನೀರಿನೊಂದಿಗೆ ಬೇವಿನ ತಪ್ಪಲ ಹಾಕಿಕೊಂಡು ಎಣ್ಣೆ ಸ್ನಾನ ಮನೆ ಮಂದಿಯೆಲ್ಲ ಮಾಡಿ, ನಮ್ಮ ಭಾಗದಲ್ಲಿ ಚಿಕ್ಕ ಮಕ್ಕಳು ಯುಗಾದಿಯ ದಿವಸ ಹೊಸ ಬನಿಯನ್ ಧರಿಸುವುದು ರೂಢಿ, ಹೊಸ ಬನಿಯನ್ ಧರಿಸಿಕೊಂಡು ಊರಿಗೆಲ್ಲ ಹೊಸ ಬನಿಯನ್ ಹಾಕಿಕೊಂಡ ಖುಷಿಯ ಮುಖ ತೋರಿಸುತ್ತಾ ಟೇಲರ್ ಬಸಣ್ಣರ ಅಂಗಡಿಗೆ ಓಡಿಹೋಗಿ “ನನ್ನ ಹೊಲದಿರೋ ಹೊಸ ಅರವಿ ಕೊಡ್ರಿ” ಎಂದು ಕೇಳಿ ಪಡೆದು ಹೊಸ ಬಟ್ಟೆ ಸಿಕ್ಕ ಖುಷಿ ಇನ್ನೂ ಹೆಚ್ಚಾಗಿ ರೊಂಯ್ಯನೇ ಮನೆ ಕಡೆ ಓಡಿಬಂದು ಹೊಸ ಬಟ್ಟೆ ಧರಿಸುವಷ್ಟರಲ್ಲಿ ಅವ್ವ ಶ್ಯಾವಿಗೆಯನ್ನು ಬಸಿದು ಸವಿಯಲು ಸಜ್ಜು ಮಾಡಿರುತ್ತಾಳೆ.
ಯುಗಾದಿಯ ದಿವಸ ಶ್ಯಾವಿಗೆ ಬೇವು-ಬೆಲ್ಲ ಬೆರಸಿ ಪರಸ್ಪರ ಹಂಚಿಕೊಂಡು ತಿನ್ನುವುದು ನಮ್ಮ ಸಂಪ್ರದಾಯ. ಶ್ಯಾವಿಗೆಯನ್ನು ಬೇವು ಬೆಲ್ಲ ಪರಸ್ಪರ ಹಂಚುವ ಉದ್ದೇಶವೇನೆಂದರೆ ” ಶ್ಯಾವಿಗೆಗಳು ಬದುಕಿನಂತೆ ಈ ಬದುಕಿನಲ್ಲಿ ಬೇವು-ಬೆಲ್ಲ ಅಂದರೆ ಕಷ್ಟ-ಸುಖಗಳನ್ನು ಸೇರಿಸಿ ಮನೆಮಂದಿಗೆಲ್ಲ ಹಂಚುವುದು” ಅಂದರೆ “ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಕೂಡ ಮನೆಯ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು ಎನ್ನುವುದರ ಪ್ರತೀಕ” ಇದನ್ನು ತಿಳಿದು ಆಚರಿಸಿದವರು ಎಂದಿಗೂ ಮನೆಯವರೊಂದಿಗೆ ಜೀವನದಲ್ಲಿ ಜಗಳ ಮಾಡಲಾರರು. ಇಷ್ಟು ವೈಶಿಷ್ಟತೆ ಮಧ್ಯೆ ನಾವು ಜನವರಿ ಒಂದನ್ನು ಆಚರಿಸಲು ಹೊರಟಿರುವುದು ನಮ್ಮ ದುರಾದೃಷ್ಟ!
ಶ್ಯಾವಿಗೆಯಿಂದ ಎಲ್ಲಿಗೂ ಹೊರಟುಬಿಟ್ಟೆ.. ಸರಿ, ಶ್ಯಾವಿಗೆಯನ್ನು ಹಂಚಿ ತಿಂದಾದ ಮೇಲೆ ಮನೆಯಲ್ಲಿನ ಎತ್ತುಗಳ ಸಿಂಗಾರ ಹುರಗೆಜ್ಜಿ, ಹಣಿಪಟ್ಟಿ, ಕೇಸರಿ ರಿಬ್ಬನ್, ಸಾಲ್ಪಟ್ಟಿಗೆಜ್ಜಿ, ಭುಜವಸ್ತ್ರ ಹೀಗೆ ಜಾನಪದೀಯವಾಗಿ ಕೆಲವು ಹೆಸರುಗಳಿರುವ ಅಲಂಕಾರಿಕ ವಸ್ತುಗಳನ್ನು ಬಳಸಿ ಎತ್ತುಗಳನ್ನು ಅಲಂಕಾರ ಮಾಡಿ, ಹರಗುವ ಕುಂಟಿಗೆ ಕ್ಯಾಮಣ್ಣ (ಕೆಂಪನೆಯ ಮಣ್ಣಿನಿಂದ ತಯಾರಿಸಿದ ಬಣ್ಣ) ಬಳೆದು ಮನೆಯ ಯಜಮಾನನಾದವರು ಅಥವಾ ಮನೆಯಲ್ಲಿನ ಕೃಷಿ ಚಟುವಟಿಕೆಗಳ ಉಸ್ತುವಾರಿ ನೋಡಿಕೊಂಡವರು ತಲೆಗೆ ಕೇಸರಿ ಪಟಗ, ಧೋತ್ರ, ಮಲ್ಲಿನ ಅಂಗಿ, ಅಂಗಿಯ ಮ್ಯಾಲೊಂದು ಹಸಿರು ವಸ್ತ್ರ ಹೀಗೆ ಗತ್ತಿನಲ್ಲಿ ರೆಡಿಯಾಗಿ ಎತ್ತುಗಳನ್ನು ಹೂಡಿಕೊಂಡು ಹೊಲದ ಭೂ ತಾಯಿ ಪೂಜೆಗೆ ಕಡೆ ಸಾಗುವುದು ಸಂಪ್ರದಾಯ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಮ್ಮ ಸಂಸ್ಕೃತಿಯ ಪ್ರತಿ ಹಬ್ಬಗಳು ಕೂಡ ಮಣ್ಣಿನ ಆರಾಧನೆಯ ಹೊರತಾಗಿಲ್ಲ. ಯುಗಾದಿಯ ದಿನದಂದು ಎಂತಹದೇ ಮುಖ್ಯವಾದ ಕಾರ್ಯ ಇದ್ದರೂ ಕೂಡ ಈ ಪದ್ಧತಿಯನ್ನು ಕೃಷಿ ಕುಟುಂಬದವರು ಮಾಡಿಯೇ ಮಾಡುತ್ತಾರೆ. ಹೊಲಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ರತ್ನಪಕ್ಷಿ ಕಾಣಬೇಕಂತೆ ಇದು ವರ್ಷಪೂರ್ತಿ ಕೃಷಿ ಬದುಕಿನಲ್ಲಿ ಶುಭ ಸಂಕೇತವಂತೆ.
ಹೊಲಕ್ಕೆ ಹೋಗಿ ತಲುಪಿದ ನಂತರ ಭೂತಾಯಿಗೆ ಪೂಜೆಯನ್ನು ಸಲ್ಲಿಸಿ “ಈ ವರ್ಷ ಕಾಲ ಕಾಲಕ್ಕೆ ಮಳೆ-ಬೆಳೆ ನಮಗೆ ಚೆನ್ನಾಗಿ ಕೊಡು ತಾಯೇ. ಸರ್ವೆ ಜನ: ಸುಖಿನೋ ಭವಂತು” ಎಂದು ಲೋಕದ ಸಮಸ್ತ ಜನರನ್ನು ಈ ವರ್ಷ ಸುಖವಾಗಿ ಇರುವಂತೆ ಬೇಡಿಕೊಳ್ಳುವ ಪರಂಪರೆ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ನಮ್ಮ ಭಾರತೀಯ ಹಿಂದೂ ಪರಂಪರೆ ಮಾತ್ರ.
ಪ್ರಾರ್ಥನೆ ಮಾಡಿ ಹೊಲವನ್ನು ಹರಗಿ ಬರುವುದು ಪದ್ಧತಿ. ಆದರೆ ಯುಗಾದಿಯ ದಿನ ಹೊಲವನ್ನು ಬರೀ ಐದು ನಿಮಿಷ ಮಾತ್ರ ಹರಗಲಾಗುತ್ತದೆ. ಯಾಕೆಂದರೆ ಆವತ್ತು ಹರಗುವಾಗ ಒಂದ್ವೇಳೆ ಕುಂಟಿ ಮುರಿಯುವುದು, ಕೊಡ ಮುರಿಯುವುದು, ಎತ್ತುಗಳು ವಲ್ಲೆ ಎಂದು ನಿಲ್ಲುವುದು ಯಾವುದಾದರೂ ಆದರೆ ಅದು ಆ ವರ್ಷದ ಕೃಷಿ ಬದುಕಿಗೆ ಅಪಶಕುನ ಎಂಬ ಅಚಲವಾದ ನಂಬಿಕೆ ಕೃಷಿಕರಲ್ಲಿ ಬಹಳ ಹಿಂದಿನಿಂದಲೂ ಇದೆ ಮತ್ತು ಇದು ಕೆಲವೊಂದು ಬಾರಿ ಸಾಬೀತಾಗಿದೆ ಕೂಡ!
ಹರಗುವ ಕಾರ್ಯವನ್ನು ಮುಗಿಸಿ ಮತ್ತೆ ಮರಳಿ ಮನೆಕಡೆಗೆ ಎತ್ತುಗಳನ್ನು ಹೂಡಿಕೊಂಡು ಬರುತ್ತಾರೆ. ಮನೆಗೆ ಬಂದ ನಂತರ ಬೇಕಾದರೆ ಮತ್ತೊಮ್ಮೆ ಶಾವ್ಗೆ ಸವಿದು, ಆ ದಿನ ಎಲ್ಲಿಯೂ ಹೊರಗಡೆ ಹೋಗದೆ ಹೆಚ್ಚಾಗಿ ಮನೆಯ ಸುತ್ತಮುತ್ತ ಸ್ವಚ್ಛ ಮಾಡುವುದು ರೂಢಿ. ಯಾಕೆಂದರೆ ಅವತ್ತು ನಾವು ಯಾವುದೇ ತಪ್ಪು ಕೆಲಸಗಳನ್ನು ಮಾಡಿದರೂ ಅದು ವರ್ಷಪೂರ್ತಿ ಮಾಡುತ್ತೇವೆ ಎನ್ನುವ ನಂಬಿಕೆ ಇದೆ.
ಕೆಲವೊಂದು ಸಂಪ್ರದಾಯಗಳಲ್ಲಿ ಯುಗಾದಿಯ ದಿವಸ ಹೊಲಗಳಲ್ಲಾಗಲಿ ಅಥವಾ ಮನೆಯ ಸುತ್ತಮುತ್ತಲಾಗಲಿ ಹೊಸ ಮರಗಳನ್ನು ನೆಟ್ಟು ನೀರುಣಿಸಿ ಮುಂದಿನ ಯುಗಾದಿ ಬರುವಷ್ಟರಲ್ಲಿ ಎಲ್ಲ ಮರಗಳಂತೆ ಅದು ಚಿಗುರುವ ಹಾಗೆ ನೋಡಿಕೊಳ್ಳಬೇಕು ಎಂಬುದು ಪದ್ದತಿ.
ಯುಗಾದಿಯ ದಿನ ಸಂಭ್ರಮದಿಂದ ಇದ್ದರೆ ವರ್ಷಪೂರ್ತಿ ಸಂಭ್ರಮದಿಂದ ಇರುತ್ತೇವೆ ಎಂಬುವ ನಂಬಿಕೆಯ ದೂರದೃಷ್ಟಿಯಿಂದ ಊರಿನಲ್ಲಿ ಸಂಭ್ರಮದ ವಾತಾವರಣ ಇರುವಂತೆ ಹಲವಾರು ಕಾರ್ಯಕ್ರಮಗಳನ್ನು ಒಂದಲ್ಲಾ ಒಂದು ಊರಿನಲ್ಲಿ ಮಾಡಿಯೇ ಇರುತ್ತಾರೆ. ಅದು ಜಾತ್ರೆಯ ರೂಪದಲ್ಲಾಗಲಿ, ಮೆರವಣಿಗೆ ರೂಪದಲ್ಲಾಗಲಿ, ಉತ್ಸವದ ರೂಪದಲ್ಲಾಗಲಿ ಅಥವಾ ಇನ್ಯಾವುದೇ ಧಾರ್ಮಿಕ ರೂಪದಲ್ಲಾಗಲಿ ಇರುವ ಹಾಗೆ ನೋಡಿಕೊಳ್ಳುವುದು ರೂಢಿ.
ಹಾಗೆ ಪ್ರತಿಯೊಂದು ಊರಿನಲ್ಲೂ ಒಂದೊಂದು ರೀತಿಯ ಕಲೆಗಳು ಇರುತ್ತವೆ ಡೊಳ್ಳುಕುಣಿತ, ಜಗ್ಗಲಿಗೆ, ಕುಸ್ತಿ, ಮಲ್ಲಕಂಬ, ಜೋಗತಿ ನೃತ್ಯ ಹೀಗೆ ನಮ್ಮ ಭಾರತೀಯ ಸಾಂಸ್ಕೃತಿಕ ಕ್ರೀಡೆಗಳನ್ನು ಅವತ್ತು ಪ್ರದರ್ಶಿಸಲಾಗುತ್ತದೆ.
ಈ ನಿಟ್ಟಿನಲ್ಲಿ ನನ್ನ ಊರಿನಲ್ಲಿ ಯುಗಾದಿಯ ದಿನ “ಹರಲಾಪುರ ಹಬ್ಬ” ಎನ್ನುವ ಕಾರ್ಯಕ್ರಮ ಮಾಡಲಾಗುತ್ತದೆ. ಆ ದಿನ ಊರಿನ ವ್ಯಾಪ್ತಿಯ ಸಾಧಕರಿಗೆ, ನಿವೃತ್ತಿ ಹೊಂದಿದ ಸೈನಿಕ, ಶಿಕ್ಷಕ ಹಾಗೂ ಇನ್ನಿತರ ವೃತ್ತಿಗಳಿಗೆ ಕ್ರೀಡಾ ವಿಭಾಗದ ಸಾಂಸ್ಕೃತಿಕ ವಿಭಾಗದ ಹೀಗೆ ಹಲವಾರು ಪ್ರೀತಿಯ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಗುತ್ತದೆ.
ನಿಜವಾಗಿ ಹೇಳುವುದಾದರೆ ಹೊಸ ವರ್ಷ ಎಂದರೆ ಪಬ್ಬುಗಳಲ್ಲಿ ಕುಣಿದು, ಡಿಜೆ ಸೌಂಡಿನ ಮುಂದೆ ಹೆಜ್ಜೆ ಹಾಕಿ, ಕುಡಿದು ತಿಂದು ಗಟಾರದ ಮಗ್ಗುಲಿಗೆ ಬೆಳಿಗ್ಗೆಯ ತನಕ ಬಿದ್ದು, ಹೊರಳಾಡುವುದು, ಇದ್ಯಾವುದು ಕೂಡ ನಮ್ಮ ರಾಷ್ಟ್ರದ ಹಿತಾಸಕ್ತಿಗೆ ಒಳ್ಳೆಯದಲ್ಲ ಹೆಚ್ಚಾಗಿ ಬದುಕಿಗೆ ಶೋಭೆಯಲ್ಲ.ಯುವಕರೆನಿಸಿಕೊಂಡ ನಾವು ನಮ್ಮ ಭಾರತೀಯ ಸಂಪ್ರದಾಯಗಳನ್ನು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಯಥಾವತ್ತಾಗಿ ವರ್ಗಾಯಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅದೆಲ್ಲವನ್ನು ಮರೆತು ಪಾಶ್ಚಾತ್ಯರ ಸಂಸ್ಕೃತಿಯಂತೆ ವರ್ತಿಸುವುದು ಸರಿಯಲ್ಲ.
ದೇಶಿಯ ಕಲೆಗಳ ಸಂರಕ್ಷಣೆ, ಮರಗಿಡಗಳ ರಕ್ಷಣೆ, ಕೃಷಿ ಬದುಕಿಗೆ ಹೊಸ ಹುರುಪು ಗಿಡಮರಗಳ ಹೊಸತನ ಎಲ್ಲಾ ವಿಶಿಷ್ಟತೆ ಹೊಂದಿರುವ ನಮ್ಮ ಯುಗಾದಿ ಹೊಸ ವರ್ಷವಲ್ಲವೇ ಸ್ನೇಹಿತರೆ? ಹಾಗೆ ಇಷ್ಟೆಲ್ಲಾ ಉಪಯೋಗ ಹೊಂದಿರುವ ಹಬ್ಬಗಳು ಯಾವ ಸಂಸ್ಕೃತಿಯಲ್ಲಿ ಕಾಣಸಿಗುತ್ತವೆ ಹೇಳಿ?
ನಾವೆಲ್ಲರೂ ಯುಗಾದಿಯನ್ನು ನಮ್ಮ ಪ್ರದೇಶದ ಸಂಪ್ರದಾಯದಂತೆ ತಿಳಿದು ಅದರೊಳಗಿನ ವೈಜ್ಞಾನಿಕತೆಯನ್ನು ಅರಿತು ಆಚರಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಿ, ಜಗತ್ತಿನ ಪಾಶ್ಚಾತ್ಯ ರಾಷ್ಟ್ರಗಳ ಅನುಕರಣೆ ಮಾಡುವುದನ್ನು ಬಿಟ್ಟು, ಜಗತ್ತೇ ನಮ್ಮ ಸಂಸ್ಕೃತಿಯನ್ನು, ಸಂಪ್ರದಾಯವನ್ನು ಆಚರಿಸುವಂತೆ ನೋಡಿಕೊಳ್ಳುವ ಪಣ ತೋಡೋಣ.
– ಅಮೋಘ ಸಾಂಬಯ್ಯ ಹಿರೇಮಠ
ಸರ್ಕಾರಿ ಪದವಿ ಕಾಲೇಜು ಶಿರಹಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.