UV Fusion: ಬದುಕಿನ ಪರಿಪೂರ್ಣತೆಗೆ ಅಕ್ಷರವೇ ಬೆಳಕು
Team Udayavani, Jan 14, 2025, 5:45 PM IST
ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಜ್ಞಾನದ ಅವಶ್ಯಕತೆ ಇದೆ. ಇದನ್ನು ಗಳಿಸಲು ಓದುವ ಅಕ್ಷರಗಳೇ ಬೆಳಕು ಮತ್ತು ದಾರಿದೀಪ.
ಅನಕ್ಷರತೆ ಮತ್ತು ಅನಾಗರಿಕತೆಯ ಅಂಧಕಾರವನ್ನು ತೊಲಗಿಸುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಪುಸ್ತಕಗಳ ಓದು ವ್ಯಕ್ತಿಯ ಜ್ಞಾನ ಹೆಚ್ಚಿಸುವುದರ ಜತೆಗೆ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ. ಓದಿ ತಿಳಿದುಕೊಂಡಷ್ಟು ಜ್ಞಾನಿಗಳಾಗುತ್ತೇವೆ. ಗತಕಾಲದಲ್ಲಿ ತಿಳಿಯದ ಎಷ್ಟೋ ವಿಷಯಗಳು ಪುಸ್ತಕ ಓದುವುದರಿಂದಲೇ ತಿಳಿಯುತ್ತವೆ. ಹಿಂದೆ ಹೇಗೆ ನಡೆದಿತ್ತು, ಇಂದು ಹೇಗೆ ನಡೆಯುತ್ತಿದೆ ಎಂಬ ಅವಲೋಕನಗಳು ನಮ್ಮ ಕಣ್ಣ ಮುಂದೆ ಬರುತ್ತವೆ.
ಗಳಿಸಿದ ಹಣ ಮತ್ತು ಅಂತಸ್ತನ್ನು ಕಳೆದುಕೊಳ್ಳಬಹುದು ಅಥವಾ ಯಾರಾದರೂ ಕಸಿಯಬಹುದು. ಆದರೆ, ಪುಸ್ತಕ ಓದಿ ಪಡೆದುಕೊಂಡ ಜ್ಞಾನ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಅದು ಕೊನೆಯ ತನಕ ನಮ್ಮ ಜತೆಗಿರುವ ಆಸ್ತಿ. ಓದುವ ಗೀಳು ಒಂಟಿತನವನ್ನು ದೂರ ಮಾಡುತ್ತದೆ. ಅದೆಷ್ಟೋ ಒಂಟಿ ಭಾವಗಳ ಹೃದಯಗಳಿಗೆ ಸ್ಪಂದನೆಯನ್ನು ನೀಡುತ್ತದೆ.
ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಮನಸ್ಸನ್ನು ಪ್ರಫುಲ್ಲವಾಗಿಟ್ಟು ನೆಮ್ಮದಿ ಮತ್ತು ಶಾಂತಿ ಗಳಿಸುವಲ್ಲಿ ಸಹಾಯ ಮಾಡುತ್ತದೆ. ಹಣದ ಹಿಂದೆ ಓಡಿದಷ್ಟು ಓಟ ನಿಲ್ಲದು! ಇನ್ನೂ ಬೇಕು, ಮತ್ತಷ್ಟು ಬೇಕು ಎಂಬ ಆಸೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಅದೇ ಪುಸ್ತಕಗಳ ಹಿಂದೆ ಓಡಿದರೆ ತತ್ವಜ್ಞಾನಿಗಳಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಸ್ವಾಮಿ ವಿವೇಕಾನಂದರೇ ಸಾಕ್ಷಿ!
ಜ್ಞಾನದ ದೀಪ ಹಚ್ಚಿದಷ್ಟು ಜಗತ್ತು ಬೆಳಗುತ್ತದೆ ಮತ್ತು ಅಜ್ಞಾನ ಅಳಿಯುತ್ತದೆ. ಜ್ಞಾನ ಪಡೆದುಕೊಂಡಷ್ಟು ಮೂಢನಂಬಿಕೆಗಳು ದೂರವಾಗುತ್ತವೆ. ಒಳ್ಳೆಯದು ಯಾವುದು? ಕೆಟ್ಟದು ಯಾವುದು ಎಂದು ಅರ್ಥಮಾಡಿಕೊಳ್ಳುವುದರಲ್ಲಿ ಜ್ಞಾನ ನಮ್ಮ ಜತೆಗಿರುತ್ತದೆ ಮತ್ತು ಅಜ್ಞಾನವನ್ನು ಅಳಿಸಲು ಸಹಾಯ ಮಾಡುತ್ತದೆ. ಜ್ಞಾನ ಭಂಡಾರ ಎಂದರೆ ಪುಸ್ತಕಗಳ ಪ್ರಪಂಚ! ಈ ಪುಸ್ತಕಗಳ ಪ್ರಪಂಚದಿಂದಲೇ ಎಲ್ಲವೂ ಪರಿಚಯವಾಗುವುದು ಮತ್ತು ಬದುಕು ಉತ್ತಮ ದಾರಿಗೆ ಸಾಗುವುದು.
ನಮಗೆ ಜ್ಞಾನವನ್ನು ಕೊಡುವುದೇ ಈ ಪುಸ್ತಕಗಳು. ಇಂದಿನ ದಿನಗಳಲ್ಲಿ ಪುಸ್ತಕಗಳ ಓದುವುದು ಬದುಕನ್ನು ಕಟ್ಟಿಕೊಳ್ಳಲು ಮಾತ್ರ ಬಳಕೆಯಾಗುತ್ತಿದೆ. ಟಾಪ್ ಅಂಕಗಳು ಬೇಕು, ಟಾಪ್ ಆಗಿ ಬದುಕಬೇಕು ಅಂದುಕೊಳ್ಳುತ್ತ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಮಾತ್ರ ಓದಿ ಟಾಪ್ ಅಂಕಗಳನ್ನು ಪಡೆದುಕೊಂಡು ವಿದ್ಯಾವಂತರಾಗಿದ್ದೇವೆ ಎಂದು ಅಂದುಕೊಳ್ಳುತ್ತಾರೆ. ಅನಂತರ ಕೈಯಲ್ಲಿದ್ದ ಪುಸ್ತಕಗಳು ಮೂಲೆಗುಂಪಾಗುತ್ತವೆ. ಇಂದಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಕಾರಣ ಮೊಬೈಲ್ ಗೀಳು. ಇನ್ನಾದರೂ ಅದನ್ನು ಸ್ವಲ್ಪ ಮಟ್ಟಿಗೆ ತಡೆದು, ಪುಸ್ತಕಗಳತ್ತ ಒಲವು ತೋರಿದರೆ ಓದಿನ ಹವ್ಯಾಸವನ್ನು ಉಳಿಸಿ ಬೆಳೆಸಬಹುದು. ಸಾಹಿತ್ಯ ಸಂಪತ್ತು ಎಂದೆಂದಿಗೂ ಮರದಂತೆ ಬೆಳೆದು ಜ್ಞಾನದ ತಂಗಾಳಿ ಪ್ರತಿಯೊಬ್ಬರ ಬಾಳಲ್ಲಿ ಬೀಸಲಿ ಎನ್ನುವುದೇ ಆಶಯ.
ಓದಿದಷ್ಟು ಜ್ಞಾನ ಸಂಪಾದಿಸಿದಂತೆ ಮತ್ತು ಓದಿದಷ್ಟು ಮುಗಿಯದ ಪುಟಗಳು ಉಳಿದುಕೊಂಡಿವೆ ಅನ್ನುವಷ್ಟು ಪುಸ್ತಕದ ಭಂಡಾರದಲ್ಲಿದೆ. ಇನ್ನಾದರೂ ಆ ಭಂಡಾರದಲ್ಲಿರುವ ಪುಸ್ತಕಗಳು ಕೈ ಸೇರಿ ಮತ್ತಷ್ಟು ಜ್ಞಾನ ಅಭಿವೃದ್ಧಿಯಾಗಿ ಜಗತ್ತು ಜ್ಞಾನದಿಂದ ಬೆಳಗಲಿ.
-ವಾಣಿ, ಮೈಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.