Captains’ clash: ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ; ನಾಯಕನಾಗಿ ಯಾರು ಉತ್ತಮರು?
ಕೀರ್ತನ್ ಶೆಟ್ಟಿ ಬೋಳ, Dec 12, 2024, 6:22 PM IST
ಆಧುನಿಕ ಕ್ರಿಕೆಟ್ ನಲ್ಲಿ ಭಾರತ ಕಂಡ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಹೋಲಿಕೆ ಭಾರತೀಯ ಕ್ರಿಕೆಟ್‌ನಲ್ಲಿ ಆಗಾಗ ಚರ್ಚೆಗಳನ್ನು ಹುಟ್ಟು ಹಾಕುತ್ತವೆ. ಈ ಇಬ್ಬರು ನಾಯಕರು ಭಾರತವನ್ನು ನಿರ್ಣಾಯಕ ವಿಜಯಗಳತ್ತ ಕೊಂಡೊಯ್ದಿದ್ದು ಮಾತ್ರವಲ್ಲದೆ ವ್ಯತಿರಿಕ್ತ ನಾಯಕತ್ವದ ಶೈಲಿಗಳನ್ನು ಪರಿಚಯಿಸಿದ್ದಾರೆ. ಇಬ್ಬರಿಗೂ ವ್ಯತಿರಿಕ್ತ ಅಭಿಮಾನಿಗಳಿದ್ದಾರೆ. ಆಕ್ರಮಣಶೀಲತೆಯ ರೂಪವಾಗಿ ಕೊಹ್ಲಿ ಭಾರತ ತಂಡವನ್ನು ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಿಕ್ಕಿನತ್ತ ಕರೆದೊಯ್ದರು. ಆದರೆ ಮಾಸ್ಟರ್ ತಂತ್ರಜ್ಞ ರೋಹಿತ್, ಆಟಕ್ಕೆ ತನ್ನದೇ ಆದ ಸ್ವಾದ ತಂದುಕೊಟ್ಟು ಸಮತೋಲನ ಮತ್ತು ಶಾಂತತೆಯ ಮೇಲೆ ಬೆಳೆದವರು.
ಇದೀಗ ಮತ್ತೆ ವಿರಾಟ್ ಮತ್ತು ರೋಹಿತ್ ಹೋಲಿಕೆ ಚರ್ಚೆ ಆರಂಭವಾಗಿದೆ.
ಡಿಸೆಂಬರ್‌ನಲ್ಲಿ ನಡೆದ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ತಂಡದ 10 ವಿಕೆಟ್‌ಗಳ ಸೋಲಿನ ನಂತರ ರೋಹಿತ್ ಶರ್ಮಾ ತೀವ್ರ ಟೀಕೆ ಎದುರಿಸಿದರು. ಜಸ್ಪ್ರೀತ್ ಬುಮ್ರಾ ಅವರ ಹಂಗಾಮಿ ನಾಯಕತ್ವದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-0 ಮುನ್ನಡೆ ಸಾಧಿಸಿದ್ದ ನಂತರ ಶರ್ಮಾ ಅವರ ನಾಯಕತ್ವದಲ್ಲಿ ಅಡಿಲೇಡ್ ಪಂದ್ಯದಲ್ಲಿ ಸೋಲಾಗಿದೆ. ರೋಹಿತ್ ಅವರ ಪ್ಲಾನ್ ಬಿ ಕೊರತೆ, ಮೈದಾನದಲ್ಲಿ ಅವರ ದೇಹ ಭಾಷೆ (Body Language) ಮತ್ತು ಅಡಿಲೇಡ್ ಓವಲ್‌ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್ ಪಂದ್ಯದಲ್ಲಿ ನಂ. 6 ರಲ್ಲಿ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಟೀಕೆಗೆ ಗುರಿಯಾಗಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ ತವರಿನಲ್ಲಿ ಭಾರತದ ಐತಿಹಾಸಿಕ ಸರಣಿ ಸೋತ ನಂತರ ಅವರ ’12 ವರ್ಷಗಳಿಗೊಮ್ಮೆ ಸೋತರೆ ಪರವಾಗಿಲ್ಲ’ ಎಂಬಂತಹ ಮಾತುಗಳ ಬಳಿಕ ಅವರ ನಾಯಕತ್ವದ ಬಗ್ಗೆ ಅನುಮಾನ ಆರಂಭವಾಗಿದೆ.
ಇದೀಗ ರೋಹಿತ್ ನಾಯಕತ್ವದಲ್ಲಿ ಭಾರತ ಸತತ ನಾಲ್ಕು ಪಂದ್ಯಗಳನ್ನು ಸೋತಿದೆ. ಭಾರತವು ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯುವ ಭೀತಿ ಎದುರಿಸುತ್ತಿದೆ. ರೋಹಿತ್ ಅವರ ಟೆಸ್ಟ್ ನಾಯಕತ್ವದ ಮೇಲೆ ಇದೀಗ ತೂಗುಗತ್ತಿ ನೇತಾಡುತ್ತಿದೆ.
ಇಬ್ಬರ ನಡುವಿನ ಅಂತರವೇನು?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ಪಂದ್ಯಗಳ ಸಂಖ್ಯೆಯ ನಡುವೆ ಸಂಪೂರ್ಣ ವ್ಯತ್ಯಾಸವಿದೆ. ಕೊಹ್ಲಿ ಏಳು ವರ್ಷಗಳ ಕಾಲ ಭಾರತೀಯ ಟೆಸ್ಟ್ ತಂಡದ ಚುಕ್ಕಾಣಿ ಹಿಡಿದಿದ್ದರು, ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021 ರ ಫೈನಲ್ ಮತ್ತು ನಂತರದ ದಕ್ಷಿಣ ಆಫ್ರಿಕಾ ಸರಣಿಯ ಸೋಲಿನ ನಂತರ ಪಟ್ಟ ತ್ಯಜಿಸಿದರು.
ಕೊಹ್ಲಿ ಭಾರತಕ್ಕೆ ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ, 40 ಪಂದ್ಯಗಳನ್ನು ಗೆದ್ದು ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ ಮೂಡಿದವರು. ಕೊಹ್ಲಿಯ ಅವಧಿಯು ಅತ್ಯಂತ ಪ್ರಮುಖವಾಗಿದ್ದು, ವಿಶ್ವಾದ್ಯಂತ ತಂಡವು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ.
68 ಪಂದ್ಯಗಳ ಅವಧಿಯಲ್ಲಿ ಕೊಹ್ಲಿ ಕೇವಲ 17 ಟೆಸ್ಟ್‌ಗಳಲ್ಲಿ ಸೋತಿದ್ದಾರೆ. ಆಗಿನ ಮುಖ್ಯ ಕೋಚ್ ರವಿಶಾಸ್ತ್ರಿ 2018 ರಲ್ಲಿ ಭಾರತವು ವಿಶ್ವದ ಅತ್ಯುತ್ತಮ ಟ್ರಾವೆಲಿಂಗ್ ತಂಡ ಎಂದು ಹೇಳಿದ್ದರು. ಅವರ ಕಾಮೆಂಟ್‌ಗಳನ್ನು ಮಾಜಿ ನಾಯಕರಾದ ಸುನಿಲ್ ಗವಾಸ್ಕರ್ ಮತ್ತು ಸೌರವ್ ಗಂಗೂಲಿ ಟೀಕಿಸಿದ್ದರು, ಆದರೆ ಅದಕ್ಕೆ ಉತ್ತರವಾಗಿ ಶಾಸ್ತ್ರಿ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಸತತವಾಗಿ ಒಂದಲ್ಲ ಎರಡು ಬಾರಿ ಗೆದ್ದರು. ಒಟ್ಟಿಗೆ, ಶಾಸ್ತ್ರಿ ಮತ್ತು ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ದಶಕದ ಪ್ರಾಬಲ್ಯವನ್ನು ಸ್ಥಾಪಿಸಿದರು.
ಇದಕ್ಕೆ ಹೋಲಿಸಿದರೆ ರೋಹಿತ್ ಶರ್ಮಾ ಅವರ ಒಟ್ಟಾರೆ ದಾಖಲೆ ಮಸುಕಾಗಿದೆ. ಅವರು 22 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದು, 12 ರಲ್ಲಿ ಗೆದ್ದಿದ್ದಾರೆ ಮತ್ತು ಈಗಾಗಲೇ 8 ರಲ್ಲಿ ಸೋತಿದ್ದಾರೆ.
2022 ರ ಜನವರಿಯಲ್ಲಿ ಕೊಹ್ಲಿ ಅನಿರೀಕ್ಷಿತ ರಾಜೀನಾಮೆ ನೀಡುವಾಗ ರೋಹಿತ್ ಅವರನ್ನು ಆರಂಭದಲ್ಲಿ ಟೆಸ್ಟ್‌ನಲ್ಲಿ ನಾಯಕತ್ವಕ್ಕೆ ಪರಿಗಣಿಸಿರಲಿಲ್ಲ. ನಂತರ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರೋಹಿತ್‌ಗೆ ಅಧಿಕಾರ ಹಸ್ತಾಂತರಿಸಿದರು. 34 ನೇ ವಯಸ್ಸಿನಲ್ಲಿ ರೋಹಿತ್‌ಗೆ ನಾಯಕತ್ವ ಬಂದಿತ್ತು. ಆದರೆ ಕೊಹ್ಲಿ 26 ನೇ ವಯಸ್ಸಿನಲ್ಲಿ ಈ ಪಾತ್ರವನ್ನು ವಹಿಸಿದ್ದರು.
ಅಂಕಿಅಂಶಗಳ ಪ್ರಕಾರ, ಸೇನಾ ದೇಶಗಳಲ್ಲಿ (SENA- ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ) ಕೊಹ್ಲಿ 24 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ ಏಳನ್ನು ಗೆದ್ದು, 14 ರಲ್ಲಿ ಸೋತಿದ್ದಾರೆ. ಇದಕ್ಕೆ ವಿರುದ್ಧವಾಗಿ, ಶರ್ಮಾ ಸೇನಾ ದೇಶಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ, ಮೂರು ಸೋತಿದ್ದಾರೆ ಮತ್ತು ಕೇವಲ 1 ಗೆದ್ದಿದ್ದಾರೆ. ವಿರಾಟ್ ಹೊರತುಪಡಿಸಿ ಯಾವುದೇ ಭಾರತೀಯ ನಾಯಕ SENA ನಲ್ಲಿ 3 ಕ್ಕಿಂತ ಹೆಚ್ಚು ಟೆಸ್ಟ್ ಗೆಲ್ಲುಲು ಸಾಧ್ಯವಾಗಿಲ್ಲ.
ವಿರಾಟ್ ಕೊಹ್ಲಿ ಅವರು ರೋಹಿತ್ ಗಿಂತ ಹೆಚ್ಚು ಆಕ್ರಮಣಕಾರಿ ನಾಯಕ. ಇವರಿಬ್ಬರ ನಡುವಿನ ದೊಡ್ಡ ಅಂತರವೆಂದರೆ ನಾಯಕನಾಗಿ ಅವರು ಗಳಿಸಿದ್ದ ರನ್ ಗಳು. ಯಾವುದೇ ನಾಯಕ ರನ್ ಗಳಿಸುವ ಮೂಲಕ ಮುಂಚೂಣಿಯಲ್ಲಿದ್ದು ತಂಡವನ್ನು ಮುನ್ನಡೆಸಬೇಕು. ಗ್ರೇಮ್ ಸ್ಮಿತ್, ರಿಕಿ ಪಾಂಟಿಂಗ್ ಇದಕ್ಕೆಲ್ಲಾ ಉದಾಹರಣೆ. ಇದೇ ಸಾಲಿನಲ್ಲಿ ನಿಲ್ಲುವವರು ವಿರಾಟ್ ಕೊಹ್ಲಿ.
ರೋಹಿತ್ ಗೆ ಹೋಲಿಸಿದರೆ ನಾಯಕತ್ವದ ಜವಾಬ್ದಾರಿ ಅಡಿಯಲ್ಲಿ ವಿರಾಟ್ ಉತ್ತಮ ಬ್ಯಾಟರ್ ಆಗಿದ್ದರು. ಕೊಹ್ಲಿ ಟೆಸ್ಟ್ ನಾಯಕನಾಗಿ ಒಟ್ಟು 5,864 ರನ್ ಗಳಿಸಿದ್ದಾರೆ. ಅವರ ವೃತ್ತಿಜೀವನದ ಟೆಸ್ಟ್ ರನ್‌ಗಳ ಅರ್ಧಕ್ಕಿಂತ ಹೆಚ್ಚು ಇದೇ ವೇಳೆ ಗಳಿಸಿದ್ದಾರೆ. ಮತ್ತೊಂದೆಡೆ ಶರ್ಮಾ 22 ಟೆಸ್ಟ್‌ಗಳಲ್ಲಿ 1,232 ರನ್ ಗಳಿಸಿದ್ದಾರೆ. ಸರಾಸರಿಗಳ ವ್ಯತ್ಯಾಸವು ಗಮನಾರ್ಹವಾಗಿದೆ. ಕೊಹ್ಲಿ ಸರಾಸರಿ 54.80, ರೋಹಿತ್ ಸರಾಸರಿ 32.42. ಈ ಅಸಮಾನತೆಯು SENA ದೇಶಗಳಲ್ಲಿಯೂ ಮುಂದುವರಿದಿದೆ., ಅಲ್ಲಿ ಕೊಹ್ಲಿ 24 ಪಂದ್ಯಗಳಲ್ಲಿ 47 ರ ಸರಾಸರಿಯಲ್ಲಿ 2,162 ರನ್ ಗಳಿಸಿದ್ದಾರೆ. ಶರ್ಮಾ 18.14 ರ ಸರಾಸರಿಯಲ್ಲಿ ಕೇವಲ 127 ರನ್ ಗಳಿಸಿದ್ದಾರೆ.
ಶರ್ಮಾಗೆ ಇನ್ನೂ ಸಮಯವಿದೆ ಎಂದು ನೀವು ಹೇಳಬಹುದು, ಆದರೆ ವಾಸ್ತವದಲ್ಲಿ ರೋಹಿತ್ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ. ಭಾರತವು ಅವರ ನಾಯಕತ್ವದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡರೆ ಮತ್ತು ಮೂರು ಆವೃತ್ತಿಗಳಲ್ಲಿ ಮೊದಲ ಬಾರಿಗೆ ಡಬ್ಲ್ಯೂಟಿಸಿ ಫೈನಲ್ ಗೆ ಪ್ರವೇಶಿಸಲು ವಿಫಲವಾದರೆ, 37 ವರ್ಷ ವಯಸ್ಸಿನ ರೋಹಿತ್ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಪಕ್ಕಾ!.
ಸೀಮಿತ ಓವರ್ ನಾಯಕತ್ವದಲ್ಲಿ..
ಟಿ20 ವಿಶ್ವಕಪ್ ಗೆದ್ದ ಕಾರಣದಿಂದ ರೋಹಿತ್ ಶರ್ಮಾ ಅವರು ಸೀಮಿತ ಓವರ್ ಕ್ರಿಕೆಟ್ ನಾಯಕತ್ವದಲ್ಲಿ ವಿರಾಟ್ ಗಿಂತ ಅಲ್ಪ ಮುನ್ನಡೆ ಸಾಧಿಸುತ್ತಾರೆ. ಕಪಿಲ್ ದೇವ್, ಎಂ.ಎಸ್.ಧೋನಿ ಬಳಿಕ ವಿಶ್ವಕಪ್ ಗೆದ್ದ ಮೂರನೇ ಭಾರತೀಯ ನಾಯಕ ರೋಹಿತ್ ಶರ್ಮ.
ರೋಹಿತ್ ಶರ್ಮಾ ನಾಯಕನಾಗಿ 48 ಏಕದಿನಗಳಲ್ಲಿ 34 ಗೆಲುವು ಸಾಧಿಸಿದ್ದರೆ, ವಿರಾಟ್ ಕೊಹ್ಲಿ ಅವರು 95 ಪಂದ್ಯಗಳಲ್ಲಿ ಭಾರತವನ್ನು 65 ಗೆಲುವಿಗೆ ಕೊಂಡೊಯ್ದಿದ್ದಾರೆ. ಶೇಕಡವಾರು ಗೆಲುವಿನಲ್ಲಿ ರೋಹಿತ್ ಮುಂದಿದ್ದಾರೆ.
ಟಿ20 ಗಳಲ್ಲಿ, ರೋಹಿತ್ 62 ಪಂದ್ಯಗಳಲ್ಲಿ 4.083 ರ ಸೋಲು-ಗೆಲುವಿನ ಅನುಪಾತದೊಂದಿಗೆ 49 ಗೆಲುವುಗಳನ್ನು ಸಾಧಿಸಿದ್ದಾರೆ. ಕೊಹ್ಲಿ 50 ಪಂದ್ಯಗಳಲ್ಲಿ 1.870 ರ ಅನುಪಾತದೊಂದಿಗೆ 30 ಗೆಲುವು ಸಾಧಿಸಿದ್ದಾರೆ.
*ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್ ಅಲಿ ಆಸ್ತಿ ಎಷ್ಟು?
Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!
Maha Kumbh; ಐಐಟಿ ಬಾಂಬೆಯಲ್ಲಿ ಕಲಿತ ಏರೋಸ್ಪೇಸ್ ಇಂಜಿನಿಯರ್ ಈಗ ಬಾಬಾ!
Tender Coconut: ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ….
Sankranti Special: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಸಿಹಿ ಪೊಂಗಲ್, ಗೆಣಸಿನ ಹೋಳಿಗೆ
MUST WATCH
ಹೊಸ ಸೇರ್ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.