Yakshagana ಬಡಗುತಿಟ್ಟು ರಂಗದ ವೈಶಿಷ್ಟ್ಯ ಕೋರೆ ಮುಂಡಾಸಿನ ಕಿರಾತ ವೇಷ
ಪರಂಪರೆಯ ಸೊಬಗು ಮರೆಯಾಗುತ್ತಿರುವುದು ವಿಪರ್ಯಾಸ
ವಿಷ್ಣುದಾಸ್ ಪಾಟೀಲ್, Apr 13, 2023, 10:27 PM IST
ಹಿರಿಯ ಕಲಾವಿದ ಕೃಷ್ಣಮೂರ್ತಿ ಉರಾಳ
ಯಕ್ಷಗಾನ ರಂಗದಲ್ಲಿ ಪ್ರತಿಯೊಂದು ವೇಷವೂ, ಪಾತ್ರವೂ ತನ್ನದೇ ಆದ ಸ್ಥಾನಮಾನ, ವೈಶಿಷ್ಟ್ಯವನ್ನು ಹೊಂದಿದೆ. ವೇಷ ಅಂದರೆ ಸಾಮಾನ್ಯವಾಗಿ ಪರಿಗಣಿಸಿದರೆ ರಂಗದ ಮೇಲೆ ಬರುವ ಬಾಲ ಗೋಪಾಲ, ಸ್ತ್ರೀ ವೇಷಗಳಿಂದ ಹಿಡಿದು ಎಲ್ಲವೂ ವೇಷಗಳೇ, ಆದರೆ ವರ್ಣ ವೈವಿಧ್ಯ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಕೆಲ ವೇಷಭೂಷಣಗಳು ಮಹತ್ವ ಹೊಂದಿದ್ದು ಈಗ ರಂಗದಿಂದ ಮರೆಯಾಗುತ್ತಿರುವುದು ವಿಪರ್ಯಾಸ .
ಯಕ್ಷ ಪರಂಪರೆಯಲ್ಲಿ ತೆಂಕು ತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಪೌರಾಣಿಕ ಪ್ರಸಂಗಗಳ ಪಾತ್ರಗಳು ತನ್ನದೇ ಆದ ಕಲ್ಪನೆ ಮತ್ತು ವಿಶಿಷ್ಟತೆಗಳೊಂದಿಗೆ ಜನಮಾನಸದಲ್ಲಿ ನೆಲೆಯಾಗಿದ್ದವು. ಬಣ್ಣದ ವೇಷಧಾರಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿತ್ತು. ಗೌರವದ ಸ್ಥಾನಮಾನವನ್ನೂ ನೀಡಲಾಗಿತ್ತು.ಅದೇ ರೀತಿ ಕಿರಾತ ವೇಷಗಳಿಗೂ ಬಡಗುತಿಟ್ಟಿನಲ್ಲಿ ವಿಭಿನ್ನತೆ ಮತ್ತು ಪ್ರಾಧಾನ್ಯತೆ ಇತ್ತು.
ಕಾಡು ಜನಾಂಗದ ನಾಯಕ ಕಿರಾತನ ಪಾತ್ರ ಹಿಂದಿನ ವನವಾಸಿ ಜೀವನವನ್ನು ಯಕ್ಷರಂಗದಲ್ಲಿ ಪ್ರತಿನಿಧಿಸುವ ಪಾತ್ರಗಳಾಗಿತ್ತು.ಹಲವು ಪ್ರಸಂಗಗಳಲ್ಲಿ ಕಿರಾತನ ಪಾತ್ರ ಗಮನ ಸೆಳೆಯುವ ಆಕರ್ಷಕ ಪ್ರಧಾನ ಪಾತ್ರದಂತೆ ಕಂಗೊಳಿಸುತ್ತಿತ್ತು. ಈಗ ಆ ಪಾತ್ರ ರಂಗದಿಂದ ನೈಜ ಚಿತ್ರಣ ಕಳೆದುಕೊಂಡು ಮರೆಯಾಗುತ್ತಿದೆ. ಇತರ ಪಾತ್ರಗಳಂತೆ ಆಹಾರ್ಯ,ನಾಟಕೀಯ ವೇಷಭೂಷಣಗಳಿಂದ ಪ್ರತ್ಯೇಕತೆಯನ್ನು ಕಳೆದುಕೊಂಡಿದೆ.
ವೇಷಭೂಷಣ, ರಂಗ ಪ್ರಸ್ತುತಿ ಮತ್ತು ನಾಟ್ಯ ಸೇರಿ ಇತರ ರಂಗ ನಿರ್ವಹಣೆಯಲ್ಲೂ ಕಿರಾತ ಪಾತ್ರಕ್ಕೆ ಮಹತ್ವವಿದೆ. ಪೌರಾಣಿಕ ಪ್ರಸಂಗಗಳಾದ ಇಂದ್ರ ಕೀಲಕ, ಶಶಿಪ್ರಭಾ ಪರಿಣಯ, ಮೀನಾಕ್ಷಿ ಕಲ್ಯಾಣ, ರತ್ನಾವತಿ ಕಲ್ಯಾಣ ಮೊದಲಾದ ಪ್ರಸಂಗಗಳಲ್ಲಿ ಕಿರಾತ ಪಾತ್ರಕ್ಕೆ ಉತ್ತಮ ಅವಕಾಶವಿದೆ.
ಈಗಿನ ಕಲಾವಿದರು ಕೆಲವರು ಪಾತ್ರಕ್ಕೆ ಪರಿಪೂರ್ಣ ನ್ಯಾಯ ಒದಗಿಸಲು ಸಮರ್ಥರಿದ್ದರೂ ಪರಂಪರೆಯ ಆಹಾರ್ಯ ಮತ್ತು ರಂಗ ನಿರ್ವಹಣೆ ತೋರಲು ಮನ ಮಾಡದಿರುವುದು ನೋವಿನ ಸಂಗತಿ.
ವಿಶೇಷವಾಗಿ ಕೆಂಪು ಕೋರೆ ಮುಂಡಾಸಿನ , ಕಣ್ಣಿನ ಸುತ್ತಲೂ ಕೆಂಪು ಬಣ್ಣ ಎದ್ದು ಕಾಣುವಂತೆ ಮೇಕಪ್, ಮಾವಿನ ಸೊಪ್ಪು ಕಟ್ಟಿಕೊಂಡು ಕಾಡಾ ಡಿಯಂತೆ ಕಾಣಿಸಿಕೊಳ್ಳುವುದು ವಿಶೇಷ. ಪಾತ್ರಕ್ಕೆ ಒಡ್ಡೋಲಗದ ಅವಕಾಶವನ್ನೂ ರಂಗದಲ್ಲಿ ನೀಡಲಾಗಿದೆ. ಪ್ರತ್ಯೇಕತೆಯನ್ನೂ ನೋಡಲು ಭಾಷಾ ಭಿನ್ನತೆಯೂ ಪಾತ್ರಕ್ಕಿದೆ. ಲೆಲೆಲೆಲೆಲೆ…ಎಂದು ಕೂಗುತ್ತಾ ರಂಗ ಪ್ರವೇಶಿಸುವುದು ಕ್ರಮವಿದೆ. ಹಿಂದೆ ಕಿರಾತ ಪ್ರವೇಶದ ವೇಳೆ ಹುಲ್ಲಿನ ರಾಶಿಗೆ ಬೆಂಕಿ ಹಾಕಿ ಸುತ್ತು ಬರುವ ಕ್ರಮವೂ ಇತ್ತು ಎನ್ನುವುದು ಹಿರಿಯ ಪ್ರೇಕ್ಷಕರು ಮತ್ತು ಕಲಾವಿದರ ನೆನಪು.
ಕಿರಾತ ಪಡೆ ಎನ್ನುವ ಹಾಗೆ ಬಾಲ ಕಲಾವಿದರು ಜತೆಯಾಗಿ ರಂಗದಲ್ಲಿ ಬೇಟೆ ಮೊದಲಾದ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಹಾಸ್ಯ ರಸಾಯನವನ್ನೂ ಉಣಬಡಿಸಲು ಅವಕಾಶವಿದೆ.
ಕಿರಾತ ಪಾತ್ರಗಳಿಗೆ ಬಡಗುತಿಟ್ಟಿನಲ್ಲಿ ಹಾರಾಡಿ ಮಹಾಬಲ ಗಾಣಿಗರು ಪರಿಪೂರ್ಣ ನ್ಯಾಯ ಒದಗಿಸಿ ಪ್ರಖ್ಯಾತಿಯನ್ನು ಪಡೆದಿದ್ದರು ಎಂದು ಹಿರಿಯ ಕಲಾವಿದರು ನೆನಪಿಸಿಕೊಳ್ಳುತ್ತಾರೆ. ಪೇತ್ರಿ ಮಾಧವ ನಾಯ್ಕ್ ಸೇರಿ ಇನ್ನೂ ಅನೇಕರು ಕಿರಾತ ಪಾತ್ರಗಳಿಗೆ ಜೀವ ತುಂಬಿದ ಹಿರಿಯ ಕಲಾವಿದರು. ಹಿಂದಿನ ಪರಂಪರೆಯ ಪರಿಪೂರ್ಣ ಮುಖವರ್ಣಿಗೆಯೊಂದಿಗೆ, ಕೋರೆ ಮುಂಡಾಸಿನೊಂದಿಗೆ ಹಿರಿಯ ಕಲಾವಿದ ಕೃಷ್ಣಮೂರ್ತಿ ಉರಾಳ ಅವರು ಪಾತ್ರಕ್ಕೆ ಜೀವ ತುಂಬುವ ಕಲಾವಿದರಲ್ಲಿ ಒಬ್ಬರು.
ವಿಶೇಷವಾಗಿ ಜೋಡಾಟದಲ್ಲಿ ಮೀನಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ಕಿರಾತ ವೇಷವನ್ನು ಜೋಡಿ ಮುಂಡಾಸು ಕಟ್ಟಿ ಪ್ರಸ್ತುತಪಡಿಸುವ ಕ್ರಮವಿದೆ. ಅದು ಪ್ರಸಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಬುಕ್ಕಿಗುಡ್ಡೆ ಮಹಾಬಲ ನಾಯ್ಕ್ ಅವರು ಜೋಡಿ ಮುಂಡಾಸಿನ ಕಿರಾತ ಪಾತ್ರವನ್ನು ಅಮೋಘವಾಗಿ ಪ್ರಸ್ತುತಪಡಿಸುವ ಅನುಭವಿ ಕಲಾವಿದರು.
ಬಡಗು ತಿಟ್ಟು ರಂಗದಿಂದ ಮರೆಯಾಗುತ್ತಿರುವ ಹಲವು ಪಾತ್ರಗಳಲ್ಲಿ ನೈಜ ಚಿತ್ರಣದ ಕಿರಾತ ಪಾತ್ರವೂ ಒಂದು. ಈ ಕುರಿತಾಗಿ ಕಲಾವಿದರು ವಿಶೇಷ ಆಸಕ್ತಿ ವಹಿಸಿ ಪಾತ್ರಗಳ ನೈಜತೆ ಉಳಿಸಿಕೊಳ್ಳಬೇಕಾಗಿರುವುದು ಸದ್ಯದ ಅಗತ್ಯತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?
Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…
Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.