ICC World cup Cricket ; ಮುಂದುವರಿದ ನ್ಯೂಜಿಲ್ಯಾಂಡ್ ಗೆಲುವಿನ ಓಟ
ಮಿಚೆಲ್ ಮಿಂಚಿನ ಬೌಲಿಂಗ್; 59ಕ್ಕೆ 5 ವಿಕೆಟ್ ಸತತ 2 ಗೆಲುವು ದಾಖಲಿಸಿದ ಕಿವೀಸ್
Team Udayavani, Oct 9, 2023, 11:42 PM IST
ಹೈದರಾಬಾದ್: ವಿಶ್ವಕಪ್ ಪಂದ್ಯಾ ವಳಿಯಲ್ಲಿ ನ್ಯೂಜಿಲ್ಯಾಂಡ್ ತಂಡದ ಗೆಲು ವಿನ ಓಟ ಮುಂದುವರಿದಿದೆ. ಹಾಗೆಯೇ ನೆದರ್ಲೆಂಡ್ಸ್ ತಂಡದ ಸೋಲಿನಾಟವೂ. ಸೋಮವಾರ ಹೈದರಾಬಾದ್‌ನಲ್ಲಿ ನಡೆದ ತನ್ನ ದ್ವಿತೀಯ ಪಂದ್ಯದಲ್ಲಿ ಕಿವೀಸ್ ಪಡೆ 99 ರನ್ನುಗಳಿಂದ ಡಚ್ಚರನ್ನು ಕೆಡವಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 7 ವಿಕೆಟಿಗೆ 322 ರನ್ ಗಳಿಸಿ ಸವಾಲೊಡ್ಡಿದರೆ, ನೆದರ್ಲೆಂಡ್ಸ್ 46.3 ಓವರ್‌ಗಳಲ್ಲಿ 223ಕ್ಕೆ ಕುಸಿಯಿತು. ನ್ಯೂಜಿಲ್ಯಾಂಡ್ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ 9 ವಿಕೆಟ್‌ಗಳ ಸೋಲುಣಿಸಿತ್ತು. ನೆದರ್ಲೆಂಡ್ಸ್ 81 ರನ್ನುಗಳಿಂದ ಪಾಕಿಸ್ಥಾನ ವಿರುದ್ಧ ಪರಾಭವಗೊಂಡಿತ್ತು.
5 ವಿಕೆಟ್ ಉರುಳಿಸಿದ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ನೆದರ್ಲೆಂಡ್ಸ್ ಕುಸಿತಕ್ಕೆ ಕಾರಣರಾದರು. ಸ್ಯಾಂಟ್ನರ್ ವಿಶ್ವಕಪ್ ಪಂದ್ಯ ದಲ್ಲಿ 5 ಪ್ಲಸ್ ವಿಕೆಟ್ ಕಿತ್ತ ನ್ಯೂಜಿಲ್ಯಾಂಡ್‌ನ 6ನೇ ಬೌಲರ್. ಹಾಗೆಯೇ ವಿಶ್ವಕಪ್ ಟೂರ್ನಿಯಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ ಕೇವಲ 3ನೇ ಎಡಗೈ ಸ್ಪಿನ್ನರ್. ಯುವರಾಜ್ ಸಿಂಗ್, ಶಕಿಬ್ ಅಲ್ ಹಸನ್ ಉಳಿದಿಬ್ಬರು.
3 ವಿಕೆಟ್ ಕೆಡವಿದ ವೇಗಿ ಮ್ಯಾಟ್ ಹೆನ್ರಿ ನ್ಯೂಜಿಲ್ಯಾಂಡ್‌ನ ಮತ್ತೋರ್ವ ಯಶಸ್ವಿ ಬೌಲರ್. ಕಿವೀಸ್ ಬೌಲಿಂಗ್‌ಗೆ ಸಡ್ಡು ಹೊಡೆದು ನಿಂತ ಏಕೈಕ ಆಟಗಾರನೆಂದರೆ ವನ್‌ಡೌನ್ ಬ್ಯಾಟರ್ ಕಾಲಿನ್ ಆ್ಯಕರ್‌ಮನ್. ಅವರು 73 ಎಸೆತಗಳಿಂದ 69 ಬಾರಿಸಿದರು (5 ಬೌಂಡರಿ). ನಾಯಕ ಸ್ಕಾಟ್ ಎಡ್ವರ್ಡ್ಸ್ (30) ಅನಂತರದ ಗರಿಷ್ಠ ಸ್ಕೋರರ್.
ಮುನ್ನೂರರಾಚೆ ಬೆಳೆದ ಮೊತ್ತ
ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ಮೂಡ್‌ನಲ್ಲಿದ್ದ ನ್ಯೂಜಿಲ್ಯಾಂಡ್ ದ್ವಿತೀಯ ಪಂದ್ಯದಲ್ಲಿ ತನ್ನ ಮೊತ್ತವನ್ನು ಮುನ್ನೂರರಾಚೆ ಬೆಳೆಸಲು ಯಶಸ್ವಿಯಾಯಿತು. ಅಲ್ಲಿ ಅವಳಿ ಶತಕಗಳಿದ್ದರೆ, ಇಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ಆರಂಭಕಾರ ವಿಲ್ ಯಂಗ್ ಸರ್ವಾಧಿಕ 70, ರಚಿನ್ ರವೀಂದ್ರ 51, ಉಸ್ತುವಾರಿ ನಾಯಕ ಟಾಮ್ ಲ್ಯಾಥಂ 53 ರನ್ ಹೊಡೆದರು.
ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದ ಆರಂಭಕಾರ ಡೇವನ್ ಕಾನ್ವೇ (32), ಡ್ಯಾರಿಲ್ ಮಿಚೆಲ್ (48) ಮತ್ತು ಮಿಚೆಲ್ ಸ್ಯಾಂಟ್ನರ್ (ಅಜೇಯ 36) ಕೂಡ ಉಪಯುಕ್ತ ಕಾಣಿಕೆ ಸಲ್ಲಿಸಿದರು. ಯಂಗ್, ಕಾನ್ವೇ, ರವೀಂದ್ರ ಹೊರತುಪಡಿಸಿ ಉಳಿದವರು ಈ ವಿಶ್ವಕಪ್‌ನಲ್ಲಿ ಮೊದಲ ಸಲ ಬ್ಯಾಟ್ ಹಿಡಿದಿದ್ದರು.
ಇಂಗ್ಲೆಂಡ್ ವಿರುದ್ಧ ಖಾತೆ ತೆರೆಯದೆ ಹೋಗಿದ್ದ ವಿಲ್ ಯಂಗ್ ಅವರಿಗೆ ಇಲ್ಲಿ ಟಾಪ್ ಸ್ಕೋರರ್ ಗೌರವ ಲಭಿಸಿತು. 27ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಯಂಗ್ 80 ಎಸೆತಗಳಿಂದ 70 ರನ್ ಬಾರಿಸಿದರು (7 ಬೌಂಡರಿ, 2 ಸಿಕ್ಸರ್). ಆಂಗ್ಲರೆದುರು ಶತಕ ಬಾರಿಸಿದ್ದ ಡೇವನ್ ಕಾನ್ವೇ ಗಳಿಕೆ 40 ಎಸೆತಗಳಿಂದ 32 ರನ್ (5 ಬೌಂಡರಿ, 1 ಸಿಕ್ಸರ್). ಮೊದಲ ವಿಕೆಟಿಗೆ 12.1 ಓವರ್‌ಗಳಿಂದ 67 ರನ್ ಒಟ್ಟುಗೂಡಿತು. ಯಂಗ್ 27ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡರು.
ಈ ಬಾರಿಯ ವಿಶ್ವಕಪ್ ಹೀರೋ ಎನಿಸುವ ಎಲ್ಲ ಲಕ್ಷಣ ಹೊಂದಿರುವ ರಚಿನ್ ರವೀಂದ್ರ ತಮ್ಮ ಆಕರ್ಷಕ ಆಟವನ್ನು ಮುಂದುವರಿಸಿದರು. ಇವರದು ಎಸೆತಕ್ಕೊಂದರಂತೆ 51 ರನ್ ಕೊಡುಗೆ (3 ಬೌಂಡರಿ, 1 ಸಿಕ್ಸರ್). ಯಂಗ್-ರವೀಂದ್ರ ದ್ವಿತೀಯ ವಿಕೆಟಿಗೆ 77 ರನ್ ಒಟ್ಟುಗೂಡಿಸಿದರು. ಡ್ಯಾರಿಲ್ ಮಿಚೆಲ್‌ಗೆ ಎರಡೇ ರನ್ನಿನಿಂದ ಅರ್ಧ ಶತಕ ತಪ್ಪಿತು. ಅವರು 47 ಎಸೆತ ಎದುರಿಸಿ 48 ರನ್ ಮಾಡಿದರು (5 ಬೌಂಡರಿ, 2 ಸಿಕ್ಸರ್).
ವಿಲಿಯಮ್ಸನ್ ಗೈರಲ್ಲಿ ತಂಡವನ್ನು ಮುನ್ನಡೆಸಿದ ಟಾಮ್ ಲ್ಯಾಥಂ 46 ಎಸೆತಗಳಿಂದ 53 ರನ್ ಹೊಡೆದು ತಮ್ಮ ರನ್ ಬರಗಾಲವನ್ನು ನೀಗಿಸಿಕೊಂಡರು (6 ಬೌಂಡರಿ, 1 ಸಿಕ್ಸರ್).
ಈ ನಡುವೆ ಗ್ಲೆನ್ ಫಿಲಿಪ್ಸ್ ಮತ್ತು ಮಾರ್ಕ್ ಚಾಪ್‌ಮನ್ ಅಗ್ಗಕ್ಕೆ ಔಟಾದರೂ ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಸಿಡಿದು ನಿಂತರು. ಲ್ಯಾಥಂ-ಸ್ಯಾಂಟ್ನರ್ ಸಾಹಸದಿಂದ ಕೊನೆಯ 6 ಓವರ್‌ಗಳಲ್ಲಿ 78 ರನ್ ಹರಿದು ಬಂತು. ಇದರಲ್ಲಿ 50 ರನ್ ಅಂತಿಮ 3 ಓವರ್‌ಗಳಲ್ಲಿ ಬಂತು.
ನೆದರ್ಲೆಂಡ್ಸ್ ಪರ ಆರ್ಯನ್ ದತ್, ವಾನ್ ಮೀಕರೆನ್ ಮತ್ತು ವಾನ್ ಡರ್ ಮರ್ವ್ ತಲಾ 2 ವಿಕೆಟ್ ಉರುಳಿಸಿದರು.
ಸ್ಕೋರ್ ಪಟ್ಟಿ
ನ್ಯೂಜಿಲ್ಯಾಂಡ್
ಡೇವನ್ ಕಾನ್ವೇ ಸಿ ಲೀಡ್ ಬಿ ಮರ್ವ್ 32
ವಿಲ್ ಯಂಗ್ ಸಿ ಲೀಡ್ ಬಿ ಮೀಕರೆನ್ 70
ರಚಿನ್ ರವೀಂದ್ರ ಸಿ ಎಡ್ವರ್ಡ್ಸ್ ಬಿ ಮರ್ವ್ 51
ಡ್ಯಾರಿಲ್ ಮಿಚೆಲ್ ಬಿ ಮೀಕರೆನ್ 48
ಟಾಮ್ ಲ್ಯಾಥಮ್ ಸ್ಟಂಪ್ಡ್ ಎಡ್ವರ್ಡ್ಸ್ ಬಿ ದತ್ 53
ಗ್ಲೆನ್ ಫಿಲಿಪ್ಸ್ ಸಿ ಎಡ್ವರ್ಡ್ಸ್ ಬಿ ಲೀಡ್ 4
ಮಾರ್ಕ್ ಚಾಪ್‌ಮನ್ ಸಿ ಮರ್ವ್ ಬಿ ದತ್ 5
ಮಿಚೆಲ್ ಸ್ಯಾಂಟ್ನರ್ ಔಟಾಗದೆ 36
ಮ್ಯಾಟ್ ಹೆನ್ರಿ ಔಟಾಗದೆ 10
ಇತರ 13
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 322
ವಿಕೆಟ್ ಪತನ: 1-67, 2-144, 3-185, 4-238, 5-247, 6-254, 7-293.
ಬೌಲಿಂಗ್:
ಆರ್ಯನ್ ದತ್ 10-2-62-2
ರಿಯಾನ್ ಕ್ಲೀನ್ 7-1-41-0
ಪಾಲ್ ವಾನ್ ನೀಕರ್ಕ್ 9-0-59-2
ರೋಲ್ಫ್ ವಾನ್ ಡರ್ ಮರ್ವ್ 9-0-56-2
ಕಾಲಿನ್ ಆ್ಯಕರ್‌ಮನ್ 4-0-28-0
ಬಾಸ್ ಡಿ ಲೀಡ್ 10-0-64-1
ವಿಕ್ರಮ್‌ಜೀತ್ ಸಿಂಗ್ 1-0-9-0
ನೆದರ್ಲೆಂಡ್ಸ್
ವಿಕ್ರಮ್‌ಜೀತ್ ಸಿಂಗ್ ಬಿ ಹೆನ್ರಿ 12
ಮ್ಯಾಕ್ಸ್ ಓಡೌಡ್ ಎಲ್‌ಬಿಡಬ್ಲ್ಯು ಸ್ಯಾಂಟ್ನರ್ 16
ಕಾಲಿನ್ ಆ್ಯಕರ್‌ಮನ್ ಸಿ ಹೆನ್ರಿ ಬಿ ಸ್ಯಾಂಟ್ನರ್ 69
ಬಾಸ್ ಡಿ ಲೀಡ್ ಸಿ ಬೌಲ್ಟ್ ಬಿ ರವೀಂದ್ರ 18
ತೇಜ ನಿಡಮನೂರು ರನೌಟ್ 21
ಸ್ಕಾಟ್ ಎಡ್ವರ್ಡ್ಸ್ ಸಿ ಮತ್ತು ಬಿ ಸ್ಯಾಂಟ್ನರ್ 30
ಸಿಬ್ರಾಂಡ್ ಏಂಜೆಲ್‌ಬ್ರೆಟ್ ಸಿ ಕಾನ್ವೇ ಬಿ ಹೆನ್ರಿ 29
ರಾಲ್ಫ್ ವಾನ್ ಡರ್ ಮರ್ವ್ ಸಿ ಹೆನ್ರಿ ಬಿ ಸ್ಯಾಂಟ್ನರ್ 1
ರಿಯಾನ್ ಕ್ಲೀನ್ ಎಲ್‌ಬಿಡಬ್ಲ್ಯು ಸ್ಯಾಂಟ್ನರ್ 8
ಆರ್ಯನ್ ದತ್ ಬಿ ಹೆನ್ರಿ 11
ಪಾಲ್ ವಾನ್ ಮೀಕರೆನ್ ಔಟಾಗದೆ 4
ಇತರ 4
ಒಟ್ಟು (46.3 ಓವರ್‌ಗಳಲ್ಲಿ ಆಲೌಟ್) 223
ವಿಕೆಟ್ ಪತನ: 1-21, 2-43, 3-67, 4-117, 5-157, 6-175, 7-181, 8-198, 9-218.
ಬೌಲಿಂಗ್:
ಟ್ರೆಂಟ್ ಬೌಲ್ಟ್ 8-0-34-0
ಮ್ಯಾಟ್ ಹೆನ್ರಿ 8.3-0-40-3
ಮಿಚೆಲ್ ಸ್ಯಾಂಟ್ನರ್ 10-0-59-5
ಲಾಕಿ ಫರ್ಗ್ಯುಸನ್ 8-0-32-0
ರಚಿನ್ ರವೀಂದ್ರ 10-0-46-1
ಗ್ಲೆನ್ ಫಿಲಿಪ್ಸ್ 2-0-11-0
ಪಂದ್ಯಶ್ರೇಷ್ಠ: ಮಿಚೆಲ್ ಸ್ಯಾಂಟ್ನರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.