India-Australia ಎರಡನೇ ಫೈನಲ್; 2023ರಲ್ಲಿ ತೀರಿಸಬೇಕಿದೆ 2003ರ ಸೇಡು
20 ವರ್ಷಗಳ ಬಳಿಕ ಭಾರತಕ್ಕೆ ಮುಯ್ಯಿ ತೀರಿಸುವ ಅವಕಾಶ
Team Udayavani, Nov 18, 2023, 6:10 AM IST
ಅಹ್ಮದಾಬಾದ್: ಎಲ್ಲವೂ ಎಣಿಕೆ ಯಂತೆ ಸಾಗಿದ್ದರೆ ಭಾರತ 2003ರಲ್ಲೇ ಎರಡನೇ ಬಾರಿಗೆ ವಿಶ್ವಕಪ್ ಕಿರೀಟ ಏರಿ ಸಿಕೊಂಡು ಮೆರೆದಾಡಬೇಕಿತ್ತು. ಆದರೆ ನಾಯಕ ಸೌರವ್ ಗಂಗೂಲಿಗೆ ಈ ಅದೃಷ್ಟ ಇರಲಿಲ್ಲ. ಅಂದಿನ ಜೊಹಾನ್ಸ್‌ಬರ್ಗ್ ಫೈನಲ್‌ನಲ್ಲಿ ಪಾಂಟಿಂಗ್ ಸಾರಥ್ಯದ ಆಸ್ಟ್ರೇ ಲಿಯ ಟೀಮ್ ಇಂಡಿಯಾವನ್ನು 125 ರನ್ನುಗಳಿಂದ ಮಣಿಸಿ 3ನೇ ಸಲ ವಿಶ್ವಕಪ್ ಚಾಂಪಿಯನ್ ಆಗಿ ಮೂಡಿಬಂತು.
ಕಾಲಚಕ್ರ ತಿರುಗಿದೆ. ಬರೋಬ್ಬರಿ 20 ವರ್ಷಗಳು ಉರುಳಿವೆ. ಭಾರತ- ಆಸ್ಟ್ರೇಲಿಯ ಮತ್ತೆ ವಿಶ್ವಕಪ್ ಫೈನಲ್‌ನಲ್ಲಿ ಎದುರುಬದುರಾಗಿವೆ. ರವಿವಾರ ವಿಶ್ವದ ಅತೀ ದೊಡ್ಡ ಕ್ರೀಡಾಂಗಣವಾದ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಭಾರತ-ಆಸ್ಟ್ರೇಲಿಯ 13ನೇ ವಿಶ್ವಕಪ್ ಫೈನಲ್‌ನಲ್ಲಿ ಸೆಣಸಲಿವೆ. 2 ದಶಕಗಳ ಹಿಂದಿನ ಆಘಾತಕಾರಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಚಿನ್ನದಂಥ ಅವ ಕಾಶ ಭಾರತಕ್ಕೆ ಎದುರಾಗಿದೆ.
ಸಹಜವಾಗಿಯೇ ಕ್ರೀಡಾ ವಿಶ್ವದ ಗಮ ನವೆಲ್ಲ ಭಾರತದತ್ತ ನೆಟ್ಟಿದೆ. ಮುಂದಿನ ಒಂದೆರಡು ದಿನಗಳ ಕಾಲ ಜಗತ್ತಿನಲ್ಲಿ ವಿಶ್ವಕಪ್ ಫೈನಲ್ ಹೊರತುಪಡಿಸಿದರೆ ಬೇರೇನೂ ಸಂಭವಿಸದು ಎಂಬಂಥ ವಾತಾವರಣ!
ಆಸ್ಟ್ರೇಲಿಯದ್ದೇ ಮೇಲುಗೈ
ಅನುಮಾನವಿಲ್ಲ, ವಿಶ್ವಕಪ್ ದಾಖಲೆ ಗಳನ್ನು ಅವಲೋಕಿಸಿದರೆ ಅಲ್ಲಿ ಆಸ್ಟ್ರೇಲಿಯದ್ದೇ ಮೇಲುಗೈ ಗೋಚರಿಸು ತ್ತದೆ. ಭಾರತದ ವಿರುದ್ಧವೂ ಒಂದು ಕೈ ಮೇಲೆನಿಸಿದೆ. ಇದು ಆಸ್ಟ್ರೇಲಿಯಕ್ಕೆ 8ನೇ ಫೈನಲ್ ಆದರೆ, ಭಾರತಕ್ಕೆ ಕೇವಲ ನಾಲ್ಕನೆಯದು. ಆಸ್ಟ್ರೇಲಿಯ ದಾಖಲೆ 5 ಸಲ ಚಾಂಪಿಯನ್ ಆಗಿ ಮೂಡಿಬಂದರೆ, ಭಾರತ ಗೆದ್ದದ್ದು ಎರಡು ಸಲ ಮಾತ್ರ.
ಆದರೆ ಪ್ರಸಕ್ತ ಫಾರ್ಮ್ ಅವಲೋಕಿ ಸುವಾಗ ಭಾರತವೇ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಆಡಿದ ಎಲ್ಲ 10 ಪಂದ್ಯಗಳನ್ನು ಗೆದ್ದಿರುವ ಹಿರಿಮೆ ಟೀಮ್ ಇಂಡಿಯಾದ್ದು. ಆಸ್ಟ್ರೇಲಿಯ ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ಹಿಂತಿರುಗಿ ನೋಡಿಲ್ಲ.
ಭಾರತದ ಮೊದಲ ಗೆಲುವು ದಾಖಲಾದದ್ದು ಆಸ್ಟ್ರೇಲಿಯ ವಿರುದ್ಧವೇ ಎಂಬುದನ್ನು ಮರೆಯುವಂತಿಲ್ಲ. ಚೆನ್ನೈ ಪಂದ್ಯದಲ್ಲಿ ರೋಹಿತ್ ಟೀಮ್ 6 ವಿಕೆಟ್‌ಗಳಿಂದ ಆಸೀಸ್‌ಗೆ ಸೋಲುಣಿಸಿತ್ತು. ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿತ್ತು. ಇದೀಗ ಅಂತಿಮ ಪಂದ್ಯ ದಲ್ಲೂ ಎದುರಾಗಿರುವುದು ವಿಶೇಷ.
12 ವರ್ಷಗಳ ಬಳಿಕ ಫೈನಲ್
ಭಾರತ ಈವರೆಗಿನ 2 ವಿಶ್ವಕಪ್‌ಗಳನ್ನು ಗೆದ್ದಿರುವುದು 1983 ಮತ್ತು 2011ರಲ್ಲಿ. ಅಂದರೆ 2ನೇ ಟ್ರೋಫಿಗಾಗಿ ಭಾರತ ಬರೋಬ್ಬರಿ 28 ವರ್ಷ ಕಾಯಬೇಕಾಯಿತು. ನಮ್ಮ ಗೆಲುವಿನ ನಾಯಕರಾಗಿದ್ದವರು “ದಿ ಗ್ರೇಟ್’ ಕಪಿಲ್‌ದೇವ್ ಮತ್ತು “ಕೂಲ್ ಕ್ಯಾಪ್ಟನ್’ ಮಹೇಂದ್ರ ಸಿಂಗ್ ಧೋನಿ.
1983ರ ಬಳಿಕ ಮತ್ತೆ ಭಾರತ ಫೈನಲ್ ಕಂಡದ್ದು 2003ರಲ್ಲಿ. ಅಂದರೆ ಭರ್ತಿ 20 ವರ್ಷಗಳ ಬಳಿಕ. ಇದೀಗ 12 ವರ್ಷಗಳ ತರುವಾಯ ಭಾರತ ಮತ್ತೊಂದು ವರ್ಲ್ಡ್ ಕಪ್ ಫೈನಲ್ ಕಾಣುತ್ತಿದೆ. ಸ್ವಾರಸ್ಯ ವೆಂದರೆ, 2011 ಮತ್ತು 2023ರ ಕೂಟ ಗಳೆರಡೂ ಭಾರತದಲ್ಲೇ ನಡೆದಿರುವುದು.
ಪ್ರಶಸ್ತಿಗಳ ಹ್ಯಾಟ್ರಿಕ್
ವಿಶ್ವಕಪ್ ಚಾಂಪಿಯನ್ ಓಟದಲ್ಲಿ ಭಾರತಕ್ಕಿಂತ ಆಸ್ಟ್ರೇಲಿಯವೇ ಬಹಳ ಮುಂದಿದೆ. 1987ರಲ್ಲಿ ಮೊದಲ ಸಲ ಅಲನ್ ಬೋರ್ಡರ್ ನಾಯಕತ್ವದಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯ, ಅನಂತರ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತ ಬಂದಿದೆ. 1999, 2003 ಮತ್ತು 2007… ಹೀಗೆ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧನೆಗೈದ ವಿಶ್ವದ ಏಕೈಕ ತಂಡವೆಂಬುದು ಆಸ್ಟ್ರೇಲಿ ಯದ ಹೆಗ್ಗಳಿಕೆ. ಬಳಿಕ 2015ರ ತವರಿನ ಕೂಟದಲ್ಲಿ 5ನೇ ಸಲ ಪಟ್ಟವೇರಿತು.
1975ರ ಚೊಚ್ಚಲ ಪಂದ್ಯಾವಳಿಯಲ್ಲೇ ಫೈನಲ್‌ಗೆ ಲಗ್ಗೆ ಹಾಕಿದ ಹೆಗ್ಗಳಿಕೆ ಆಸ್ಟ್ರೇಲಿಯದ್ದು. ಆದರೆ ಅಲ್ಲಿ ವೆಸ್ಟ್ ಇಂಡೀಸ್‌ಗೆ ಸೋತಿತು. 1987-2015ರ ನಡುವಿನ ಪ್ರಶಸ್ತಿ ಗೆಲುವಿನ ಅವಧಿಯಲ್ಲಿ ಆಸೀಸ್ 1996ರಲ್ಲೂ ಫೈನಲ್ ಪ್ರವೇಶಿ ಸಿತ್ತು. ಆದರೆ ಅಲ್ಲಿ ಶ್ರೀಲಂಕಾಕ್ಕೆ ಶರಣಾ ಯಿತು. ಲಂಕಾದಲ್ಲಿ ಭದ್ರತಾ ಭೀತಿ ಇದೆ ಎಂದು ಲೀಗ್ ಪಂದ್ಯವನ್ನು ಬಿಟ್ಟುಕೊಟ್ಟಿದ್ದ ಆಸ್ಟ್ರೇಲಿಯ, ಕೊನೆಯಲ್ಲಿ ಲಂಕೆಯ ಕೈಯಲ್ಲೇ ಸೋತು ಭಾರೀ ಮುಖಭಂಗ ಅನುಭವಿಸಿದ್ದು ಈಗ ಇತಿಹಾಸ.
ವಿಶ್ವಕಪ್ ಪಂದ್ಯಗಳ ಫಲಿತಾಂಶದ ಲೆಕ್ಕಾಚಾರದಲ್ಲೂ ಭಾರತದ ವಿರುದ್ಧ ಆಸ್ಟ್ರೇ ಲಿಯ ಮೇಲುಗೈ ಸಾಧಿಸಿದೆ. ಈವರೆಗೆ ಆಡಿದ 13 ಪಂದ್ಯಗಳಲ್ಲಿ ಎಂಟನ್ನು ಗೆದ್ದಿದೆ. ಭಾರತ ಜಯಿಸಿದ್ದು 5 ಪಂದ್ಯ ಮಾತ್ರ.
2003ರ ಫೈನಲ್ ಆಘಾತ
2003ರ ಫೈನಲ್ ಆಘಾತ ಈಗಲೂ ಭಾರತವನ್ನು ಕಾಡುತ್ತಿದೆ. ಲೀಗ್ ಹಂತ ದಲ್ಲಿ ಆಸ್ಟ್ರೇಲಿಯಕ್ಕೆ 9 ವಿಕೆಟ್‌ಗಳಿಂದ ಸೋತಿದ್ದ ಭಾರತಕ್ಕೆ ಫೈನಲ್‌ನಲ್ಲಿ ಸೇಡು ತೀರಿಸುವ ಅವಕಾಶ ಒದಗಿ ಬಂತು. ಆದರೆ ಇಲ್ಲಿ ನಾಯಕ ಸೌರವ್ ಗಂಗೂಲಿ ದೊಡ್ಡದೊಂದು ಎಡವಟ್ಟು ಮಾಡಿ ದರು. ಟಾಸ್ ಗೆದ್ದೂ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅವರು ಮುನ್ನುಗ್ಗಿ ಬಾರಿಸಲಾರಂಭಿಸಿದರು. “ದಿ ವಾಂಡರರ್ ಸ್ಟೇಡಿಯಂ’ನಲ್ಲಿ ರನ್ ಪ್ರವಾ ಹವೇ ಹರಿಯಿತು. ಆಸೀಸ್ ಪೇರಿಸಿದ ರನ್ 2ಕ್ಕೆ 359. ನಾಯಕ ಪಾಂಟಿಂಗ್ ಅಜೇಯ 140, ಡೆಮೀನ್ ಮಾರ್ಟಿನ್ ಅಜೇಯ 87, ಆ್ಯಡಂ ಗಿಲ್‌ಕ್ರಿಸ್ಟ್ 57 ರನ್ ಬಾರಿಸಿದರು.
ಈ ಮೊತ್ತವನ್ನು ಕಂಡೇ ಭಾರತ ಬೆದ ರಿತು. 5ನೇ ಎಸೆತದಲ್ಲೇ ತೆಂಡುಲ್ಕರ್ ಮೆಕ್ ಗ್ರಾತ್‌ಗೆ ರಿಟರ್ನ್ ಕ್ಯಾಚ್ ನೀಡಿದರು. ಆದರೂ ನಮ್ಮ ರನ್‌ರೇಟ್ ಉತ್ತಮ ಮಟ್ಟದಲ್ಲಿತ್ತು. ವಿಕೆಟ್‌ಗಳು ಮಾತ್ರ ಉದುರತೊಡಗಿ ದವು. ಅಂತಿಮವಾಗಿ 39.2 ಓವರ್‌ಗಳಲ್ಲಿ 234ಕ್ಕೆ ಸರ್ವಪತನ ಕಂಡಿತು. ವೀರೇಂದ್ರ ಸೆಹವಾಗ್ ಬಿರುಸಿನ ಗತಿಯಲ್ಲಿ 82 ರನ್ ಬಾರಿಸಿದ್ದೊಂದೇ ಭಾರತದ ಸರ ದಿಯ ಗಮನಾರ್ಹ ಪ್ರದರ್ಶನವೆನಿಸಿತು. ಅವರು ರನೌಟ್ ಆಗುವ ತನಕ ಭಾರತಕ್ಕೆ ಭರವಸೆ ಇತ್ತು.ಆ 20 ವರ್ಷಗಳ ಹಿಂದಿನ ಸೋಲಿಗೆ ನಮ್ಮವರೀಗ ಸೇಡು ತೀರಿಸಿಕೊಂಡು 3ನೇ ಮುಕುಟವನ್ನು ಧರಿಸಬೇಕಿದೆ. ಕಮಾನ್ ಇಂಡಿಯಾ…
1 ರನ್ ಅಂತರದ 2 ಫಲಿತಾಂಶ!
ಭಾರತ-ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಪಂದ್ಯಗಳು ಯಾವತ್ತೂ ರೋಚಕವಾಗಿರುತ್ತವೆ. ಇದಕ್ಕೆ ಒಂದು ರನ್ ಅಂತರದ ಎರಡು ಫಲಿತಾಂಶಗಳೇ ಸಾಕ್ಷಿ. ಆದರೆ ಈ ಎರಡೂ ಪಂದ್ಯಗಳನ್ನು ಗೆದ್ದದ್ದು ಮಾತ್ರ ಆಸ್ಟ್ರೇಲಿಯ!
ಇಂಥದೊಂದು ಕೌತುಕಭರಿತ ಪಂದ್ಯ ಮೊದಲ ಸಲ ನಡೆದದ್ದು 1987ರಲ್ಲಿ. ಚೆನ್ನೈಯಲ್ಲಿ ಆಡಲಾದ “ಎ’ ವಿಭಾಗದ ಮುಖಾಮುಖೀ ಇದಾಗಿತ್ತು. ಆಸ್ಟ್ರೇಲಿಯ 6ಕ್ಕೆ 270 ರನ್ ಬಾರಿಸಿದರೆ, ಹಾಲಿ ಚಾಂಪಿಯನ್ ಭಾರತ 49.5 ಓವರ್‌ಗಳಲ್ಲಿ 269ಕ್ಕೆ ಸರ್ವಪತನ ಕಂಡಿತು. ಇದು ಅಂದಿನ ಟೂರ್ನಿಯಲ್ಲಿ ಇತ್ತಂಡಗಳ ಮೊದಲ ಮುಖಾಮುಖೀಯೂ ಆಗಿತ್ತು. ಆಸೀಸ್ ಪರ ಜೆಫ್ ಮಾರ್ಷ್ 110; ಭಾರತದ ಪರ ಕೆ. ಶ್ರೀಕಾಂತ್ 70 ಮತ್ತು ನವಜೋತ್ ಸಿಂಗ್ ಸಿದ್ಧು 73 ರನ್ ಹೊಡೆದರು. ಕೊನೆಯಲ್ಲಿ ಮಣಿಂದರ್ ಸಿಂಗ್ ಅವರನ್ನು ಬೌಲ್ಡ್ ಮಾಡಿದ ಸ್ಟೀವ್ ವೋ ಆಸ್ಟ್ರೇಲಿಯಕ್ಕೆ ಅಚ್ಚರಿಯ ಜಯವನ್ನು ತಂದಿತ್ತರು. ಬಳಿಕ ಫೈನಲ್‌ನಲ್ಲಿ ಇಂಗ್ಲೆಂಡನ್ನು ಇಷ್ಟೇ ರೋಚಕವಾಗಿ ಮಣಿಸಿದ ಆಸ್ಟ್ರೇಲಿಯ (7 ರನ್) ಮೊದಲ ಸಲ ವಿಶ್ವಕಪ್ ಚಾಂಪಿಯನ್ ಆಗಿ ಮೂಡಿಬಂತು.
ಮತ್ತೂಂದು “ಒಂದು ರನ್’ ಫಲಿತಾಂಶ ದಾಖಲಾದದ್ದು 1992ರ ಬ್ರಿಸ್ಬೇನ್ ಪಂದ್ಯದಲ್ಲಿ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 9 ವಿಕೆಟಿಗೆ 237 ರನ್ ಗಳಿಸಿತು. ಮಳೆಯಿಂದಾಗಿ ಭಾರತದ ಟಾರ್ಗೆಟ್ ಬದಲಾಯಿತು. 47 ಓವರ್‌ಗಳಲ್ಲಿ 236 ರನ್ ತೆಗೆಯುವ ಸವಾಲು ಎದುರಾಯಿತು. ನಾಯಕ ಅಜರುದ್ದೀನ್ (93) ಅವರ ದಿಟ್ಟ ಹೋರಾಟದ ಹೊರತಾಗಿಯೂ ಭಾರತ 234ಕ್ಕೆ ಆಲೌಟ್ ಆಯಿತು. ವೆಂಕಟಪತಿ ರಾಜು ರನೌಟ್ ಆಗುವುದರೊಂದಿಗೆ ಟೈ ಅವಕಾಶವೂ ತಪ್ಪಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.