ಶಕೀಬ್ ಶತಕದಾಟ: ವಿಂಡೀಸ್ ವಿರುದ್ಧ ಬಾಂಗ್ಲಾ ಹುಲಿಯ ಮೆರೆದಾಟ
Team Udayavani, Jun 18, 2019, 12:57 PM IST
ಟೌಂಟನ್: ಈ ವಿಶ್ವಕಪ್ ಕೂಟದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿರುವ ಆಟಗಾರನೆಂದರೆ ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್. ಈ ಕೂಟದ ಗರಿಷ್ಠ ರನ್ ಗಳಿಸಿರುವ ಆಟಗಾರನಾಗಿರುವ ಶಕೀಬ್ ಸೋಮವಾರದ ಪಂದ್ಯದಲ್ಲಿ ಶತಕ ಬಾರಿಸಿ ವಿಂಡೀಸ್ ವಿರುದ್ಧ ಬಾಂಗ್ಲಾಕ್ಕೆ ನಿರಾಯಾಸ ಗೆಲುವು ತಂದು ಕೊಟ್ಟರು.
ಸೋಮವಾರ ವೆಸ್ಟ್ ಇಂಡೀಸ್ ನೀಡಿದ 322 ರನ್ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ ದೇಶಕ್ಕೆ ಬೆನ್ನೆಲುಬಾಗಿ ನಿಂತವರು ವಿಶ್ವದ ಅಗ್ರ ಕ್ರಮಾಂಕದ ಆಲ್ ರೌಂಡರ್ ಶಕೀಬ್ ಅಲ್ ಹಸನ್. ವನ್ ಡೌನ್ ಆಟಗಾರನಾಗಿ ಬಂದ ಶಕೀಬ್ ಮರಳಿ ಪೆವಿಲಿಯನ್ ಗೆ ಹೋಗಿದ್ದು ತಂಡವನ್ನು ಗೆಲ್ಲಿಸಿದ ನಂತರವೇ. ಕೇವಲ 99 ಎಸೆತ ಎದುರಿಸಿ 124 ರನ್ ಗಳಿಸಿದ ಶಕೀಬ್ ತನ್ನ ಈ ಅಜೇಯ ಇನ್ನಿಂಗ್ಸ್ ನಲ್ಲಿ 16 ಆಕರ್ಷಕ ಬೌಂಡರಿ ಬಾರಿಸಿದರು.
ಶಕೀಬ್ ಅಲ್ ಹಸನ್ ಈ ವಿಶ್ವಕಪ್ ಕೂಟದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರನೆನಿಸಿದರು. ಆಡಿದ ನಾಲ್ಕು ಇನ್ನಿಂಗ್ಸ್ ಗಳಲ್ಲಿ 124ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಶಕೀಬ್ 384 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಎರಡು ಅರ್ಧಶತಕಗಳು ಸೇರಿವೆ.
ಈ ವೇಳೆ ಸತತ ಐದು ಏಕದಿನ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕದ ಗಡಿ ದಾಟಿದ ಶಕೀಬ್ ತನ್ನ ಸಹ ಆಟಗಾರ ತಮೀಮ್ ಇಕ್ಬಾಲ್ ರ ದಾಖಲೆಯನ್ನು ಸರಿದೂಗಿಸಿದರು. ತಮೀಮ್ ಕೂಡಾ ಸತತ ಐದು ಇನ್ನಿಂಗ್ಸ್ ಗಳನ್ನು ಅರ್ಧಶತಕದ ಗಡಿ ದಾಟಿದ್ದರು.
ಶಕೀಬ್ ಬಾರಿಸಿದ 124 ರನ್ ವಿಶ್ವಕಪ್ ನಲ್ಲಿ ಬಾಂಗ್ಲಾ ಆಟಗಾರನೋರ್ವನ ದ್ವಿತೀಯ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಈ ಹಿಂದೆ 2015 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೊಹಮ್ಮದುಲ್ಲಾ ರಿಯಾದ್ 128 ರನ್ ಗಳಿಸಿದ್ದರು.
ನಿನ್ನೆಯ ಆಟದ ವೇಳೆ ಶಕೀಬ್ ಏಕದಿನ ಕ್ರಿಕೆಟ್ ನಲ್ಲಿ 6000 ರನ್ ಗಡಿ ದಾಟಿದ ಬಾಂಗ್ಲಾದ ದ್ವಿತೀಯ ಅಟಗಾರ ಎಂಬ ಗೌರವಕ್ಕೆ ಪಾತ್ರರಾದರು. ತಮೀಮ್ ಇಕ್ಬಾಲ್ ಈ ಸಾಧನೆ ಮಾಡಿದ ಮೊದಲಿಗ. ಇನ್ನು ಬೌಲಿಂಗ್ ನಲ್ಲಿ 254 ವಿಕೆಟ್ ಕಬಳಿಸಿರುವ ಶಕೀಬ್ ಈ ಪಟ್ಟಿಯಲ್ಲೂ ದ್ವಿತೀಯ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ನಾಯಕ ಮುಶ್ರಫೆ ಮುರ್ತಜಾ 266 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.