Yakshagana;ಇನ್ನೂ ನೂರಾರು ಸುಶ್ರಾವ್ಯ ರಾಗಗಳ ಅಳವಡಿಕೆ ಸಾಧ್ಯ: ವಿದ್ವಾನ್‌ ಗಣಪತಿ ಭಟ್‌


Team Udayavani, Oct 6, 2024, 7:30 AM IST

1-weqewewqe

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದ ಮೊಟ್ಟೆಗದ್ದೆಯಲ್ಲಿ 1961 ಎ. 20ರಂದು ವೆಂಕಟ್ರಮಣ ಭಟ್ಟ ಮತ್ತು ಸರಸ್ವತಿ ಭಟ್‌ ದಂಪತಿಯ ಪುತ್ರನಾಗಿ ವಿದ್ವಾನ್‌ ಗಣಪತಿ ಭಟ್‌ ಜನಿಸಿದರು. ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಕವ್ವಾಳೆ ರಾಮಚಂದ್ರ ಭಾಗವತ, ಕಡತೋಕಾ ಮಂಜುನಾಥ ಭಾಗವತ, ನಾರ್ಣಪ್ಪ ಉಪ್ಪೂರ, ನೆಬ್ಬೂರು ನಾರಾಯಣ ಭಾಗವತ, ಜಿ.ಆರ್‌. ಕಾಳಿಂಗ ನಾವಡರ ಹಾಡುಗಾರಿಕೆಗೆ ಆಕರ್ಷಿತರಾಗಿದ್ದರು. 7ನೇ ತರಗತಿ ವರೆಗೆ ಓದಿದ ಬಳಿಕ 5 ವರ್ಷಗಳ ಕಾಲ ಸಂಸ್ಕೃತ ಭಾಷೆ ಮತ್ತು ವೇದ ಮಂತ್ರ ಅಭ್ಯಾಸ ಮಾಡಿದ್ದರು. ಉಡುಪಿ ಸಂಸ್ಕೃತ ಕಾಲೇಜಿ ನಲ್ಲಿ 1979ರಿಂದ 1986ರ ವರೆಗೆ ಸಂಸ್ಕೃತ ಸಾಹಿತ್ಯ ಮತ್ತು ಅಲಂಕಾರಶಾಸ್ತ್ರದಲ್ಲಿ ವಿದ್ವತ್‌ ಪದವಿ ಯನ್ನು ಪಡೆದರು. ಜತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ದಲ್ಲಿ ಸೀನಿಯರ್‌ ವರೆಗೂ ಅಭ್ಯಸಿಸಿದರು.

ವಿದ್ವಾನ್‌ ಗಣಪತಿ ಭಟ್‌ ಅವರ ಯಕ್ಷಗಾನ ಪಯಣ ಆರಂಭವಾಗಿದ್ದು, ಉಡುಪಿ ಸಂಸ್ಕೃತ ಕಾಲೇಜಿಗೆ ಸೇರಿದ ಪ್ರಥಮ ವರ್ಷದಲ್ಲಿ. ಅಂದು ಕಾಲೇಜು ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ ನಡೆಸುವ ನಿರ್ಣಯವಾಗಿತ್ತು. ಗಣಪತಿ ಭಟ್ಟರ ಹಾಡುವ ಹವ್ಯಾಸವನ್ನು ತಿಳಿದಿದ್ದ ಎಲ್ಲರೂ ತಂಡದ ಭಾಗವತನಾಗಲು ಒತ್ತಾಯಿಸಿದರು. ನಾಟ್ಯ ತರಬೇತಿಗಾಗಿ ಬಂದಿದ್ದ ಬನ್ನಂಜೆ ಸಂಜೀವ ಸುವರ್ಣರು ತಾಳವನ್ನು ಕಲಿಸಿ ತರಬೇತಿ ನೀಡಿದ್ದರು. ಹೀಗಾಗಿ ಸಂಜೀವ ಸುವರ್ಣರೇ ನನ್ನ ಮೊದಲ ಗುರುಗಳು. ನೀಲಾವರ ರಾಮಕೃಷ್ಣಯ್ಯ ಹಾಗೂ ಮಹಾಬಲ ಕಾರಂತರಲ್ಲಿ 4 ವರ್ಷಗಳ ಕಾಲ ಅಧ್ಯಯನ ಮಾಡಿದ್ದೆ ಎಂದು ಗಣಪತಿ ಭಟ್ಟರು ಕೃತಜ್ಞತೆಯಿಂದ ಹೇಳುತ್ತಾರೆ. ಅನಂತರ ಉಡುಪಿ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡರು. ಮುಂದೆ ನೀಲಾವರ ರಾಮಕೃಷ್ಣಯ್ಯನವರ ಸೂಚನೆಯಂತೆ ಶಿವರಾಮ ಕಾರಂತರು ತಮ್ಮ ತಂಡಕ್ಕೆ ಭಾಗವತರಾಗಿ ಇವರನ್ನು ಆಯ್ಕೆ ಮಾಡಿಕೊಂಡರು. ಈ ತಂಡದ ಪ್ರದರ್ಶನಗಳಲ್ಲಿ ಹಾಡಬೇಕಾದರೆ ವಿಶೇಷ ತರಬೇತಿಯನ್ನು ಹೊಂದುವ ಅನಿವಾರ್ಯತೆಯಿದ್ದು ಶಿವರಾಮ ಕಾರಂತರೇ ಗಣಪತಿ ಭಟ್ಟರಿಗೆ 20ದಿನ ತರಬೇತಿ ನೀಡಿದ್ದರು. ಅನಂತರ ಉಡುಪಿ ಯಕ್ಷಗಾನ ಕೇಂದ್ರದ ಗುರುವಾಗಿ 2 ವರ್ಷಗಳ ಕಾಲ ಕಲಿಕಾಸಕ್ತರಿಗೆ ತರಬೇತಿ ಕೂಡ ನೀಡಿದ್ದರು.

1989-90ರಲ್ಲಿ ಶಿರಸಿ ಶ್ರೀ ಪಂಚಲಿಂಗೇಶ್ವರ ಮೇಳದಲ್ಲಿ ಒಂದು ವರ್ಷ, ಸಾಲಿಗ್ರಾಮ ಮೇಳದಲ್ಲಿ 5 ವರ್ಷಗಳ ವ್ಯವಸಾಯದ ಬಳಿಕ ತಿರುಗಾಟ ನಡೆಸಿದ್ದರು. ಇಡಗುಂಜಿ ಶ್ರೀಮಯ ಕಲಾಕೇಂದ್ರದ ಗುರುವಾಗಿ 6 ವರ್ಷ ಭಾಗವತಿಕೆ ಕಲಿಕಾಸಕ್ತರಿಗೆ ತರಬೇತಿ ನೀಡಿದ್ದರು. ಆದರೆ ಆರೋಗ್ಯದ ಸಮಸ್ಯೆಯಿಂದ ವೃತ್ತಿ ಮೇಳದ ಸೇವೆ ಸ್ಥಗಿತಗೊಳಿಸಿ ಮಂಟಪ ಶ್ರೀ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನಗಳಲ್ಲಿ ಹತ್ತು ವರ್ಷಗಳ ಕಾಲ ಭಾಗವಹಿಸಿದ್ದರು. ಕಾರಂತರ ಯಕ್ಷ ತಂಡದ (ಬ್ಯಾಲೆ ಪ್ರದರ್ಶನ) ಭಾಗವತನಾಗಿ ರಷ್ಯಾ, ದುಬಾೖ, ಅಬುಧಾಬಿಗಳಲ್ಲಿ ಹಾಗೂ ಉಪ್ಪಿನಕುದ್ರು ಕೊಗ್ಗ ಕಾಮತ್‌ ಅವರ ಬೊಂಬೆಯಾಟದ ತಂಡದಲ್ಲಿ ವಿದೇಶದಲ್ಲಿ ಪ್ರದರ್ಶನ ನೀಡಿದ್ದಾರೆ.

ಯಕ್ಷಗಾನದಲ್ಲಿ ಅತೀ ಹೆಚ್ಚು 110 ರಾಗಗಳನ್ನು ಇವರು ಬಳಕೆ ಮಾಡಿ ತೋರಿಸಿದ್ದಾರೆ ಮತ್ತು ಬಡಗುತಟ್ಟಿನ ಭಾಗವತರಲ್ಲೇ ಅತ್ಯಂತ ಹೆಚ್ಚು ರಾಗಗಳ ಮಾಹಿತಿ ಇವರಿಗಿದೆ ಎಂಬುದು ಇವರ ಹೆಗ್ಗಳಿಕೆ. “ಯಕ್ಷಗಾನ ಗಾನಸಂಹಿತೆ’ ಎಂಬ ಗ್ರಂಥವನ್ನೂ ರಚಿಸಿದ್ದು ಇದಕ್ಕೆ ಅಕಾಡೆಮಿ ಪ್ರಶಸ್ತಿ ಸಂದಿದೆ. ಪ್ರಸ್ತುತ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಪತ್ನಿ, ಮಕ್ಕಳೊಂದಿಗೆ ಇವರು ವಾಸವಿದ್ದಾರೆ.

ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ ?
ತಂದೆ ವೆಂಕಟ್ರಮಣ ಭಟ್ಟರು ಪುರೋಹಿತ ವೃತ್ತಿಯ ಜತೆ ತಾಳಮದ್ದಳೆಯ ಹವ್ಯಾಸೀ ಅರ್ಥ ಧಾರಿಯೂ ಆಗಿದ್ದರು. ತಾಯಿಯ ತಂದೆ ರಾಮ ಚಂದ್ರ ಭಟ್ಟರು (ಅಜ್ಜ) ಹವ್ಯಾಸಿ ಭಾಗವತರು. ಅಣ್ಣ ನಾರಾಯಣ ಭಟ್‌ ತಾಳಮದ್ದಳೆ ಹವ್ಯಾಸಿ ಅರ್ಥಧಾರಿ. ಬಾಲ್ಯದಲ್ಲಿ ಸಾಕಷ್ಟು ಯಕ್ಷಗಾನ ಪ್ರದರ್ಶನ ನೋಡುತ್ತಿದ್ದೆ. ಈ ಎಲ್ಲ ಕಾರಣದಿಂದ ಯಕ್ಷಗಾನ ಆಸಕ್ತಿ ಮೂಡಿತು.

ಯಕ್ಷಗಾನಕ್ಕೆ ಇಂತಿಷ್ಟೇ ರಾಗಗಳು ಎನ್ನುವ ಸೀಮಿತತೆ ಇದೆಯೇ?
ಖಂಡಿತಾ ಇಲ್ಲ. ನಾನು ಯಕ್ಷಗಾನದಲ್ಲಿ 110 ರಾಗ ಗಳನ್ನು ಬಳಕೆ ಮಾಡಿ ತೋರಿಸಿದ್ದೇನೆ. ಇದರಲ್ಲಿ ನಾಟಿ, ಮೋಹನ, ತೋಡಿ, ಮುಖಾರಿ, ಬಿಲಹರಿ, ಹುಸೇನಿ, ಮಾರವಿ, ಕಾಂಬೋಜಿ, ಸಾವೇರಿ ಹೀಗೆ 59 ರಾಗಗಳು ಅತ್ಯುತ್ತಮವಾಗಿ ಹೊಂದುತ್ತವೆ. ಮಿಕ್ಕುಳಿದವು ಪ್ರೇಕ್ಷಕ ಸ್ವೀಕರಿಸುವ ಮಟ್ಟಿಗೆ ಹೊಂದಾಣಿಕೆಯಾಗುತ್ತವೆ. ಇನ್ನೂ ಹೊಂದಿಕೆ ಮಾಡಬಹುದಾದ ಹಲವಾರು ರಾಗಗಳಿವೆ.

ಯಕ್ಷಗಾನ ಹಾಗೂ ಶಾಸ್ತ್ರೀಯ ಸಂಗೀತ ರಾಗಗಳಲ್ಲಿ ವ್ಯತ್ಯಾಸ ಇದೆಯಾ?
ಯಕ್ಷಗಾನದಲ್ಲಿ ಯಕ್ಷಗಾನೀಯ ಶೈಲಿಯನ್ನ ಇಟ್ಟು ಕೊಂಡೇ ಹಾಡಬೇಕು. ಸಂಗೀತದಲ್ಲಿ ಇದ್ದಂತೆ ಹೆಚ್ಚು ರಾಗಗಳ ಸೂಕ್ಷ್ಮ ಸಂಚಾರಗಳನ್ನು ಮಾಡುವುದಕ್ಕೆ ಅವಕಾಶ ಇಲ್ಲ. ಇಲ್ಲಿ ಯಕ್ಷಗಾನ ನೃತ್ಯವನ್ನು ಅನುಸರಿಸ ಲ್ಪಡುತ್ತದೆ. ಉದಾಹರಣೆ ನಾನು ಬಡಗುತಿಟ್ಟಿನ ಹಾಡುಗಾರಿಕೆಗೆ ಪ್ರಪ್ರಥಮವಾಗಿ ದರ್ಬಾರ್‌ ಕಾನಡ, ಬಹುಧಾರೀ, ಕಲ್ಯಾಣ ವಸಂತ, ಬಿಲಹರಿ, ಷಹನಾ, ರೀತಿಗೌಳ, ಕದನ ಕುತೂಹಲ, ಕೇದಾರ, ಭಾಗ್ಯಶ್ರೀ, ನಾಟಿಕುರುಂಜಿ, ಸಿಂಹೇಂದ್ರ ಮಧ್ಯಮ, ಸಾರಂಗ, ಧರ್ಮಾವತಿ, ನೀಲಾಂಬರಿ ಮೊದಲಾದ ರಾಗಗಳನ್ನು ಬಳಕೆ ಮಾಡಿದ್ದೇನೆ. ರಂಜನೀಯ ರಾಗಗಳ ಬಳಕೆ ಯಕ್ಷಗಾನದಲ್ಲಿ ಯಶಸ್ವಿಯಾಗುತ್ತವೆ.

ಭಾಗವತನಿಗೆ ಇರಬೇಕಾದ ಅರ್ಹತೆಗಳು ಯಾವುದು ?
ಭಾಗವತನಿಗೆ ಸ್ವರಮುಖ್ಯ. ಜತೆಗೆ ರಾಗ, ತಾಳ, ಸಾಹಿತ್ಯದ ಕುರಿತು ರಸಾಭಿರುಚಿ, ರಂಗನಡೆ ಮತ್ತು ನಿರಂತರ ಅಧ್ಯಯನಶೀಲತೆ ಮುಖ್ಯವಾಗಿ ಬೇಕಾಗುತ್ತದೆ. ಇದರಲ್ಲಿ ಯಾವುದರ ಕೊರತೆಯಾದರೂ ಪರಿಪೂರ್ಣತೆ ಅಸಾಧ್ಯ.

ಹೊಸ ಪ್ರಸಂಗದಲ್ಲಿ ಬಳಸಲ್ಪಡುತ್ತಿರುವ ರಾಗಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಹೊಸ ಪ್ರಸಂಗಗಳಲ್ಲಿ ಸಾಕಷ್ಟು ರಾಗಗಳನ್ನು ಬಳಸಲು ಅವಕಾಶವಿದೆ. ಕಾಲ್ಪನಿಕ ಸನ್ನಿವೇಶಗಳು ಬರುವುದರಿಂದ ಕೋಲಾಟ, ಜೋಗಿಪದ ಮುಂತಾದ ಜಾನಪದ ಶೈಲಿಗಳನ್ನು ಬಳಕೆ ಮಾಡಬಹುದು ಹಾಗೂ ರಂಜನೀಯ ರಾಗಗಳನ್ನು ಬಳಸಬಹುದು. ಹಳೆ ಪ್ರಸಂಗಗಳು ಒಂದಷ್ಟು ನಿರ್ದಿಷ್ಟ ರಾಗಗಳಿಗೆ ಸೀಮಿತವಾಗಿರುತ್ತಿದ್ದವು. ಆದರೆ ಹೊಸ ಪ್ರಸಂಗದಲ್ಲಿ ಅಭೇರಿ, ಹಿಂದೋಳ ಮೊದಲಾದ ಹೊಸ-ಹೊಸ ರಾಗಗಳ ಬಳಕೆಗೆ ಅವಕಾಶ ಸಿಕ್ಕಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಹೊಸ ಪ್ರಸಂಗಗಳು ಯಕ್ಷಗಾನಕ್ಕೆ ಸಂಪೂರ್ಣ ಕಂಟಕವಾಗಿದೆ ಎನ್ನಲು ಸಾಧ್ಯವಿಲ್ಲ. ಒಂದಷ್ಟು ಕೊಡುಗೆ ನೀಡಿವೆ.

ಕಾರಂತರ ಜತೆ ಯಕ್ಷಗಾನದಲ್ಲಿ ಏನೆಲ್ಲ ಕಲಿತಿರಿ?
ಕಾರಂತರದ್ದು ಅದ್ಭುತ ವ್ಯಕ್ತಿತ್ವ. ಯಕ್ಷಗಾನಕ್ಕೆ ಸಾಗರದಷ್ಟು ಕೊಡುಗೆ ಅವರಿಂದ ಸಿಕ್ಕಿದೆ. ಮುಖ್ಯವಾಗಿ ಅವರಿಂದ ನಾನು ಪದ್ಯಗಳಲ್ಲಿನ ರಸಾನುಭೂತಿ ಜತೆಗೆ ಕರುಣಾ ರಸದಲ್ಲೇ ಹಲವು ಬಗೆಗಳನ್ನು ಅಭಿವ್ಯಕ್ತಿಗೊಳಿಸುವುದು. ಪದ್ಯಗಳನ್ನು ಒಂದು-ಎರಡು ಬಾರಿಗಿಂತ ಹೆಚ್ಚು ಪುನರಾವರ್ತನೆ ಮಾಡಬಾರದು. ಮುಮ್ಮೇಳ ಮತ್ತು ಭಾಗವತನ ಸಂಬಂಧ ಹೇಗೆ, ನವರಸಗಳನ್ನ ಪಾತ್ರಕ್ಕೆ, ಭಾವಕ್ಕೆ ತಕ್ಕಂತೆ ಹೇಗೆ ಹಾಡಬಹುದು ಎನ್ನುವುದರ ಸಹಿತ ಹತ್ತು ಹಲವು ವಿಚಾರಗಳನ್ನು ಕಲಿತೆ.

ರಾಗಗಳನ್ನು ಬಳಸುವಾಗ ಭಾಗವತರಿಗೆ ಯಾವ ರೀತಿ ಎಚ್ಚರಿಕೆ ಬೇಕು?
ರಾಗಗಳ ಬಳಕೆ ಸಂದರ್ಭ ಭಾಗವತರಿಗೆ ಎಚ್ಚರಿಕೆ ಬೇಕು. ಏಕೆಂದರೆ ಕೆಲವೊಂದು ರಾಗಗಳು ಕೆಲವು ಸನ್ನಿವೇಶ, ಗತಿಗಳಿಗೆ, ಪ್ರಸಂಗಗಳಿಗೆ ಹೊಂದಾಣಿಕೆ ಯಾಗುವುದಿಲ್ಲ. ಹೀಗಾಗಿ ಅಳವಡಿಸುವ ಪೂರ್ವದಲ್ಲಿ ಆ ಬಗ್ಗೆ ತರಬೇತಿ ಪಡೆದು, ಹಿರಿಯರೊಂದಿಗೆ ಚರ್ಚೆ ನಡೆಸಿ ಅಳವಡಿಸಿಕೊಳ್ಳುವುದು ಮುಖ್ಯ.

ಸಿನೆಮಾ ಹಾಡುಗಳನ್ನು ಯಥಾವತ್ತಾಗಿ ಬಳಸುವ ಬಗ್ಗೆ ನಿಮ್ಮ ಅಭಿಪ್ರಾಯ?
ಖಂಡಿತಾ ಸರಿಯಲ್ಲ. ಯಕ್ಷಗಾನದಲ್ಲೇ ನೂರಾರು ರಾಗಗಳಿವೆ. ಯಕ್ಷಕವಿಗಳು ಬರೆದುಕೊಟ್ಟ ಸಾಹಿತ್ಯಕ್ಕೆ ಶಾಸ್ತ್ರೀಯವಾದ ರಾಗಗಳನ್ನ ಅಳವಡಿಸಿ ಇಂಪಾಗಿ ಕೇಳುವಂತೆ ಮಾಡಲು ಸಾಧ್ಯವಿದೆ. ಆದ್ದರಿಂದ ಸಿನೆಮಾ ಹಾಡುಗಳನ್ನು ನೇರಾ-ನೇರ ಬಳಕೆ ಸರಿಯಲ್ಲ.

ಯಕ್ಷಗಾನದಲ್ಲಿ ಸಂಪ್ರದಾಯಗಳು, ರಾಗಗಳ ಬಳಕೆ ಬಡವಾಗಲು ಕಾರಣವೇನು?
ಪ್ರೇಕ್ಷರಿಗೆ ರಾಗ-ತಾಳ ಹಾಗೂ ಯಕ್ಷಗಾನದ ಮೂಲ ಸತ್ವದ ಬಗ್ಗೆ ಸ್ವಲ್ಪವಾದರೂ ಮಾಹಿತಿ ಬೇಕಾಗುತ್ತದೆ. ಅದರ
ಕೊರತೆಯಾದಾಗ ಇವೆಲ್ಲ ಬಡವಾಗುತ್ತದೆ ಮತ್ತುಯಕ್ಷಗಾನ ಆಯೋಜಿಸುವವರಿಗೆ ಕಲೆಯ ಬಗ್ಗೆ ಮಾಹಿತಿ ಮತ್ತು ಒಂದಷ್ಟು ಪರಿಕಲ್ಪನೆಗಳು ಬೇಕಾಗುತ್ತದೆ.

ಹಳೆಯ ಯಕ್ಷಗಾನ ಪ್ರದರ್ಶನ; ಈಗಿನ ಪ್ರದರ್ಶನ ನೋಡಿದಾಗ ನಿಮಗೆ ಏನನಿಸುತ್ತದೆ?
ಹಳೆಯ ಕಲಾವಿದರಲ್ಲಿ ಅಧ್ಯಯನಶೀಲತೆ ಇತ್ತು. ಒಂದು ಪಾತ್ರವನ್ನು ಮಾಡುವಾಗ ಅಧ್ಯಯನ ಮಾಡುತ್ತಿದ್ದರು. ಇಡೀ ಪ್ರಸಂಗ ತಿಳಿದಿರುತ್ತಿತ್ತು. ಇದರಿಂದಾಗಿ ಕಲಾವಿದ ಬೆಳೆಯುತ್ತಿದ್ದ. ಇಂದಿನ ಕಲಾವಿದರಲ್ಲಿ ಇದರ ಕೊರತೆ ಇದೆ. ಮುಮ್ಮೇಳದಲ್ಲಿ ಯಾವ ಕಲಾವಿದನಿಗೆ ಯಾವ ಪಾತ್ರ ಒಗ್ಗುತ್ತದೆ ಎನ್ನುವುದು ಅರಿತು ಅದೇ ಪಾತ್ರವನ್ನು ಮಾಡುವುದು ಮುಖ್ಯ. ಅಭಿಮಾನಿಗಳು, ಸಂಘಟಕರು ಹೇಳಿದರು ಎನ್ನುವ ಕಾರಣಕ್ಕೆ ಕೃಷ್ಣ ಮಾಡುವ ವೇಷಧಾರಿ ಭಸ್ಮಾಸುರ, ರಾವಣ ಮಾಡುವುದು ಸರಿಯಲ್ಲ. ಅವರವರ ಶಕ್ತಿಯನುಸಾರ ಪಾತ್ರ ಕಲ್ಪನೆ ಅಗತ್ಯ.

ಇಂದಿನ ಯಕ್ಷಗಾನದಲ್ಲಿ ವ್ಯಕ್ತಿ ನಿಷ್ಠೆ ಪ್ರಧಾನವಾಗುತ್ತಿದೆಯೇ?
ಹೌದು. ಯಕ್ಷಗಾನದಲ್ಲಿ ಎಲ್ಲ ಪಾತ್ರಗಳೂ ಮುಖ್ಯ. ತಾನೊಬ್ಬನೇ ವಿಜೃಂಭಿಸಬೇಕು ಎನ್ನುವ ಮನಃಸ್ಥಿತಿ ಪ್ರೇಕ್ಷಕರಿಗೂ ಕಲಾವಿದರಿಗೂ ಸರಿಯಲ್ಲ. ಯಕ್ಷಗಾನವನ್ನು ನೋಡುವ ನಮ್ಮ ಮನಃಸ್ಥಿತಿ ಬದಲಾಗಬೇಕು.

ಈಗಿನ ಭಾಗವತರಿಗೆ ಏನು ಕಿವಿಮಾತು ಹೇಳ ಬಯಸುತ್ತೀರಿ?
ನಿರಂತರ ಅಧ್ಯಯನಶೀಲತೆ ಬೆಳೆಸಿಕೊಳ್ಳಿ. ರಾಗ ಗಳ ಬಗ್ಗೆ ಅಧ್ಯಯನ ಮಾಡಿ. ಪ್ರೇಕ್ಷಕರು ಚಪ್ಪಾಳೆ ಹೊಡೆಯುತ್ತಾರೆ ಎನ್ನುವ ಕಾರಣಕ್ಕೆ ಯಕ್ಷಗಾನಕ್ಕೆ ಒಗ್ಗಿಕೊಳ್ಳದಿರುವ, ನೇರಾ-ನೇರ ಸಿನೆಮಾ ಅನುಕರಣೆ ಮಾಡುವ ಹಾಡುಗಳನ್ನು ರಂಗಕ್ಕೆ ತರಬೇಡಿ. ಇದುವರೆಗೆ ನೂರಕ್ಕೂ ಹೆಚ್ಚು ರಾಗಗಳು ಬಳಕೆಯಾಗಿವೆ. ಇನ್ನೂ ನೂರಾರು ಉತ್ತಮ ರಾಗಗಳನ್ನು ಯಕ್ಷಗಾನಕ್ಕೆ ಬಳಸಬಹುದಾಗಿದ್ದು ಆ ಬಗ್ಗೆ ಗಮನಹರಿಸಿ.

 ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rrttt

Yakshagana;ಕಲೆ ಬದುಕಿನ ಸಂಪಾದನೆಗಲ್ಲ, ನಮ್ಮ ಸಂತೋಷಕ್ಕೆ:ಸಂಜೀವ ಸುವರ್ಣ

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

1-shab

Yakshagana ಭಾಗವತ ತಾನೊಬ್ಬನೇ ಮೆರೆಯುವುದಲ್ಲ:ನಾರಾಯಣ ಶಬರಾಯ ಜಿ.ಎ.

1-yyyy

Rakshit Shetty Padre; ಸಾರ್ಥಕತೆ ಕಂಡ ಯಕ್ಷ ಸಿದ್ಧಿ ದಶಮಾನೋತ್ಸವ ಸಂಭ್ರಮ

-Bolara-Subbaya-Shetty

YakshaRanga: ಯಕ್ಷಗಾನ ಉಳಿವಿಗೆ ಹೊಸ ಕಲಾವಿದರು ಪಣ ತೊಡಬೇಕು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.